ದೈನಂದಿನ ಜೀವನಕ್ಕೆ ಅಗತ್ಯ ಎನಿಸಿರುವ ಟೊಮೆಟೋ ಬೆಲೆ ಕಮ್ಮಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಕೆಜಿಯೊಂದಕ್ಕೆ ದಾಖಲೆಯ 150 ರೂಪಾಯಿಗೆ ಟೊಮೆಟೋ ಬೆಲೆ ಬಂದು ನಿಂತಿದೆ. ಆದರೂ, ಅಲ್ಲಲ್ಲಿ ಇದರ ಲಾಭ ರೈತರಿಗೆ ಸಿಗುತ್ತಿಲ್ಲ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಟೊಮೆಟೋ ಬೆಲೆ ಕೋಲಾರದ ಮಾರುಕಟ್ಟೆಯನ್ನು ಅವಲಂಬಿತವಾಗಿದೆ. ದೇಶದಲ್ಲಿ ಅತಿ ಹೆಚ್ಚು ಟೊಮೆಟೋ ಬೆಳೆಯುವ ಕೋಲಾರ ಜಿಲ್ಲೆಯೇ ಈ ದಿಢೀರ್ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕೋಲಾರ ಮಾರುಕಟ್ಟೆಯಲ್ಲಿ ಟೊಮೆಟೋ ಆವಕ ಕಡಿಮೆಯಾಗಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊಪ್ಪಳ ಜಿಲ್ಲೆಯ ರೈತರು ಟೊಮೆಟೋ ಬೆಲೆಯ ನಾಗಾಲೋಟದಿಂದ ಹರ್ಷಚಿತ್ತರಾಗಿದ್ದಾರೆ. ಜಾಕ್ಪಾಟ್ ಬೆಲೆಯೊಂದಿಗೆ ಖುಷಿಖುಷಿಯಿಂದ ಮನೆಗೆ ರೈತರು ತೆರಳುತ್ತಿದ್ದಾರೆ. ಜಿಲ್ಲೆಯ ಕನಕಗಿರಿ ಸಗಟು ಮಾರುಕಟ್ಟೆಯಲ್ಲಿ ಪ್ರತೀ ಬಾಕ್ಸ್ 2750-2900 (20 ಕೆಜಿ) ಮಾರಾಟವಾಗಿದೆ.
ಟೊಮೆಟೋಗೆ ಉತ್ತಮ ಬೆಲೆ ಇದ್ದರೂ ರೈತರು ಬೆಳೆ ನಷ್ಟದ ಭೀತಿಯನ್ನು ಎದುರಿಸುತ್ತಿದ್ದಾರೆ. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ, ಬೆಂಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರ ಕೋಲಾರ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿವೆ.
ಕೋಲಾರ ಜಿಲ್ಲೆಯ ಟೊಮಾಟೋ ಬೆಳೆಯಲ್ಲಿ ಬಿಳಿ ನೊಣ ಹಾಗೂ ಎಲೆ ಮುಟುರು ರೋಗದ ತೀವ್ರತೆಯು ಹೆಚ್ಚಾಗುತ್ತಿದೆ. ದೇಶದ ಅತಿದೊಡ್ಡ ಟೊಮಾಟೋ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದಾದ ಕೋಲಾರದಲ್ಲಿನ ಆವಕದಲ್ಲಿ ಭಾರೀ ಇಳಿಕೆಯಾಗಿದೆ.
2023ರ ಜೂನ್‌ನಲ್ಲಿ ಇಲ್ಲಿನ ಎಪಿಎಂಸಿಗೆ ಕೇವಲ 3.2 ಲಕ್ಷ ಕ್ವಿಂಟಾಲ್ ಟೊಮೆಟೋ ಬಂದಿದೆ. 2022ರ ಜೂನ್‌ನಲ್ಲಿ 5.45 ಲಕ್ಷ ಕ್ವಿಂಟಾಲ್ ಟೊಮೆಟೋ ಮಾರುಕಟ್ಟೆಗೆ ಬಂದಿತ್ತು. 2021ರ ಜೂನ್‌ನಲ್ಲಿ ಇದು 9.37 ಲಕ್ಷ ಕ್ವಿಂಟಾಲ್ ತಲುಪಿತ್ತು. ಹೀಗಾಗಿ ಬೆಲೆ ಏರಿಕೆಗೆ ಇದು ಕೂಡಾ ಒಂದು ಕಾರಣ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರವು ಈ ಬೆಲೆ ಏರಿಕೆಯು ತಾತ್ಕಾಲಿಕವಾಗಿದೆ. ಈ ಮಾನ್ಸೂನ್‌ನಿಂದ ಆದ ನಷ್ಟದಿಂದಾಗಿ ಸ್ಥಿತಿ ಹೀಗಾಗಿದೆ. ಶೀಘ್ರವೇ ದರ ಇಳಿಕೆಯಾಗಲಿದೆ ಎಂದು ಭರವಸೆಯನ್ನು ನೀಡಿದ್ದರೂ ಬೆಲೆಯಲ್ಲಿ ಇಳಿಕೆಯಾಗುತ್ತಿಲ್ಲ.


Click it and Unblock the Notifications