ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವ ನಿಟ್ಟಿನಲ್ಲಿ ದಾಖಲೆಗಳನ್ನು ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದೆ. ಅದರಲ್ಲೂ ಮುಖ್ಯವಾಗಿ ಯುಐಡಿಎಐ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡುವ ನಿಟ್ಟಿನಲ್ಲಿ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಹಂಚಿಕೊಳ್ಳಬೇಡಿ ಎಂದು ತಿಳಿಸಿದೆ.
ಜನರು ಆಧಾರ್ ಕಾರ್ಡ್ ಅನ್ನು ಮಾಡಿಸಿಕೊಂಡು ಸುಮಾರು ಹತ್ತು ವರ್ಷಗಳಾಗಿದ್ದರೆ, ನೀವು ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವಂತೆ ಈ ಹಿಂದೆ ಯುಐಡಿಎಐ ಹೇಳಿದೆ. ಆದರೆ ಈ ರೀತಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಲು ದಾಖಲೆಗಳನ್ನು ಹಂಚಿಕೊಳ್ಳುವಂತೆ ನಾವು ಎಂದಿಗೂ ಕೇಳುವುದಿಲ್ಲ. ಹೀಗೆ ದಾಖಲೆ ಹಂಚಿಕೊಳ್ಳಲು ಹೇಳಿದರೆ, ಅದು ಮೋಸದ ಜಾಲವಾಗಿರುವ ಸಾಧ್ಯತೆಯಿದೆ ಎಂದು ಪ್ರಾಧಿಕಾರ ಹೇಳಿದೆ.

ಪ್ರಮುಖ ದಾಖಲೆ ಹಂಚಿಕೊಳ್ಳಲು ಎಂದಿಗೂ ಹೇಳದು ಯುಐಡಿಎಐ
"ಯುಐಡಿಎಐ ನಿಮ್ಮ ಆಧಾರ್ ಅನ್ನು ಇಮೇಲ್ ಅಥವಾ ವಾಟ್ಸಾಪ್ ಮೂಲಕ ಅಪ್‌ಡೇಟ್ ಮಾಡಲು ನಿಮ್ಮ ಗುರುತಿನ ಪುರಾವೆ (ಪಿಒಐ) ಅಥವಾ ವಿಳಾದ ಪುರಾವೆ (ಪಿಒಎ) ದಾಖಲೆಗಳನ್ನು ಹಂಚಿಕೊಳ್ಳುವಂತೆ ನಿಮ್ಮ ಬಳಿ ಎಂದಿಗೂ ಕೂಡಾ ಹೇಳುವುದಿಲ್ಲ. ನೀವು ಮೈ ಆಧಾರ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಬಹುದು ಅಥವಾ ನಿಮ್ಮ ಸಮೀಪದ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ," ಎಂದು ಯುಐಡಿಎಐ ಹೇಳಿದೆ.
ಕಳೆದ ವರ್ಷದ ಆರಂಭದಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಜನರು ತಮ್ಮ ಆಧಾರ್ ಕಾರ್ಡ್‌ಗಳ ಫೋಟೊಕಾಪಿಗಳನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳದಂತೆ ಸಲಹೆ ನೀಡಿತ್ತು.
ನೀವು ಆಧಾರ್ ಕಾರ್ಡ್ ದಾಖಲೆಗಳನ್ನು ಹಂಚಿಕೊಂಡರೆ ಅದರ ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬದಲಾಗಿ ಜನರು ಮಾಸ್ಕ್‌ಡ್ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡಬಹುದು. ಇದು ನಿಮ್ಮ ಆಧಾರ್ ಕಾರ್ಡ್‌ನ ಕೊನೆಯ ನಾಲ್ಕು ಅಂಕೆಗಳನ್ನು ಮಾತ್ರ ಪ್ರದರ್ಶಿಸುತ್ತದೆ ಎಂದು ಯುಐಡಿಎಐ ಹೇಳಿದೆ.
ಎಲ್ಲ ಕಡೆಯಲ್ಲಿ ಆಧಾರ್ ಕಾರ್ಡ್ ಬಳಸುವಾಗ ಎಚ್ಚರ
"ಆಧಾರ್ ಕಾರ್ಡ್ ಅನ್ನು ನಿಮ್ಮ ಗುರುತನ್ನು ಸಾಬೀತುಪಡಿಸಲು ಮತ್ತು ವಹಿವಾಟು ಮಾಡಲು ಎಲ್ಲೆಂದರಲ್ಲಿ ಬಳಕೆ ಮಾಡಬೇಡಿ. ಮುಖ್ಯವಾಗಿ ಟ್ವಿಟ್ಟರ್, ಫೇಸ್‌ಬುಕ್ ಇತ್ಯಾದಿ ಸಾರ್ವಜನಿಕ ವೇದಿಕೆಗಳಲ್ಲಿ ಆಧಾರ್ ಮಾಹಿತಿಯನ್ನು ಹಾಕಬೇಡಿ. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ನೀಡುವ ಸಂದರ್ಭದಲ್ಲಿಯೂ ನೀವು ಎಚ್ಚರವಾಗಿರಬೇಕಾಗುತ್ತದೆ," ಎಂದು ಯುಐಡಿಎಐ ವೆಬ್‌ಸೈಟ್‌ನಲ್ಲಿ ಹೇಳಿದೆ.
"ಜನರು ಸರಕುಗಳನ್ನು ಖರೀದಿಸುವಾಗ, ಶಾಲಾ ಶುಲ್ಕ, ನೀರು, ವಿದ್ಯುತ್, ದೂರವಾಣಿ ಮತ್ತು ಇತರ ಯುಟಿಲಿಟಿ ಬಿಲ್‌ಗಳನ್ನು ಪಾವತಿಸುವಾಗ ತಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಅಥವಾ ಚೆಕ್ (ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ) ಮೊದಲಾದವುಗಳನ್ನು ನೀಡುತ್ತೇವೆ. ಹಾಗೆಯೇ ನಾವು ಆತಂಕವಿಲ್ಲದೆ ಅಗತ್ಯವಿರುವಾಗ ನಮ್ಮ ಆಧಾರ್ ಕಾರ್ಡ್ ಅನ್ನು ಬಳಸಬಹುದು. ಆದರೆ ಇತರೆ ಐಡಿ ಕಾರ್ಡ್‌ಗಳಂತೆ ಅಗತ್ಯಕ್ಕಿಂತ ಅಧಿಕವಿರಬಾರದು, ಅಗತ್ಯಕ್ಕಿಂತ ಕಡಿಮೆ ಇರಬಾರದು," ಎಂದು ರಕ್ಷಣಾ ನೋಟಿಸ್‌ನಲ್ಲಿ ಯುಐಡಿಎಐ ತಿಳಿಸಿದೆ.


Click it and Unblock the Notifications