ವೇತನ ಪಡೆಯುವ ವರ್ಗಕ್ಕೆ ಮತ್ತಷ್ಟು ರಿಲೀಫ್ ನೀಡುವಂತಜ ಬಜೆಟ್ ಅನ್ನು ಬಜೆಟ್ ಸೆಷನ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಬಹುದು ಎಂಬ ನಿರೀಕ್ಷೆಯಿದೆ. ಆದಾಯ ತೆರಿಗೆಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಸಬೇಕು ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ತಜ್ಞರು ಹೀಗೆ ಹೇಳುವುದೇಕೆ?
ಹಳೆಯ ಹಾಗೂ ಹೊಸ ಆದಾಯ ತೆರಿಗೆ ನಿಯಮದ ಪ್ರಕಾರ ಪ್ರಸ್ತುತ ಆದಾಯ ತೆರಿಗೆ ವಿನಾಯಿತಿಯು 2.5 ಲಕ್ಷ ರೂಪಾಯಿ ಆಗಿದೆ. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 87ಎ ಅಡಿಯಲ್ಲಿ ನೀವು 5 ಲಕ್ಷ ರೂಪಾಯಿಯ ವಾರ್ಷಿಕ ಆದಾಯವನ್ನು ಹೊಂದಿದ್ದರೆ, 12,500 ರೂಪಾಯಿ ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗಲಿದೆ. ಅಂದರೆ 5 ಲಕ್ಷ ರೂಪಾಯಿವರೆಗೆ ಆದಾಯವಿರುವವರಿಗೂ ತೆರಿಗೆ ರಿಯಾಯಿತಿಯನ್ನು ಪಡೆಯಬಹುದು.
ಆದರೆ ಪ್ರಸ್ತುತ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಅಧಿಕಗೊಳಿಸಬೇಕು ಎಂದು ತಜ್ಞರುಗಳು ಹೇಳುವುದು ಏಕೆ, ಕಾರಣವೇನು, ತಜ್ಞರು ಬೇರೇನು ಹೇಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಆದಾಯ ತೆರಿಗೆ ವಿನಾಯಿತಿ ಹೆಚ್ಚಿಸಲು ಹೇಳುವುದೇಕೆ?
ತಜ್ಞರುಗಳು ಪ್ರಸ್ತುತ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸಬೇಕು ಎಂದು ಹೇಳಿದ್ದಾರೆ. ಇಟಿ ವೆಲ್ತ್‌ನ ದೀಪಕ್ ಸೂದ್, "ಪ್ರಸ್ತುತ ತೆರಿಗೆ ವಿನಾಯಿತಿ ಮಿತಿಯನ್ನು ಏರಿಸುವ ಬೇಡಿಕೆಯಿದೆ. ಇದರಿಂದಾಗಿ ಮಧ್ಯಮ ವರ್ಗದ ಜನರಿಗೆ ಸಹಾಯವಾಗಲಿದೆ. ಇದು ಆರ್ಥಿಕ ಬೆಳವಣಿಗೆಗೆ ಸಹಾಯವಾಗಲಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಮುಂದಿನ ಬಜೆಟ್‌ನಲ್ಲಿ ಸರ್ಕಾರವು ತೆರಿಗೆ ವಿನಾಯಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸಬಹುದು. ಈಗಾಗಲೇ 5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವಿರುವವರಿಗೆ ವಿನಾಯಿತಿ ಇದೆ. ಈಗ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿದರೆ 5 ಲಕ್ಷ ರೂಪಾಯಿಗಿಂತ ಅಧಿಕ ವಾರ್ಷಿಕ ಆದಾಯವಿರುವವರಿಗೂ ಸಹಾಯವಾಗಲಿದೆ," ಎಂದು ಲುಥುರಾ ಆಂಡ್ ಲುಥುರಾದ ಸುಮಿತ್ ಮಂಗಲ್ ತಿಳಿಸಿದ್ದಾರೆ. ಸುಮಾರು ದಶಕಗಳ ಹಿಂದೆ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಕೂಡಾ ಈ ಸಂದರ್ಭದಲ್ಲೇ ಉಲ್ಲೇಖಿಸಿದ್ದಾರೆ.
ಗರಿಷ್ಠ ಸ್ಲ್ಯಾಬ್ ಎಷ್ಟಿರುತ್ತದೆ?
ಇಟಿ ವೆಲ್ತ್ನ ಅಂಕಿತ್ ಜೈನ್ ಪ್ರಕಾರ, "2014ರ ಬಳಿಕ ಭಾರತದ ಆರ್ಥಕತೆಯು ಏರಿಕೆಯಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ದುಪ್ಪಟ್ಟು ಹೆಚ್ಚಳವಾಗಿದೆ. ತೆರಿಗೆ ಸಂಗ್ರಹವು ಕೂಡಾ ಹೆಚ್ಚಳವಾಗಿದೆ. ಈ ಸಂದರ್ಭದಲ್ಲೇ ಜನರ ಬಳಕೆ ಕೂಡಾ ಅಧಿಕವಾಗಿದೆ. ಆದರೆ ಸರ್ಕಾರವು ಈವರೆಗೆ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವುದೇ ಬದಲಾವಣೆಯನ್ನು ತಂದಿಲ್ಲ. 2014ರಲ್ಲಿ ಕನಿಷ್ಠ ತೆರಿಗೆ ವಿನಾಯಿತಿ 2.5 ಲಕ್ಷ ರೂಪಾಯಿ ಆಗಿದೆ. ಗರಿಷ್ಠ ತೆರಿಗೆ ಸ್ಲ್ಯಾಬ್ 10 ಲಕ್ಷ ರೂಪಾಯಿ ಆಗಿದೆ. ಆದರೆ ಈ ಸ್ಲ್ಯಾಬ್ ಅನ್ನು 20 ಲಕ್ಷ ರೂಪಾಯಿಗೆ ಏರಿಸಬೇಕು ಎಂಬ ಬೇಡಿಕೆಯಿದೆ," ಎಂದು ತಿಳಿಸಿದ್ದಾರೆ.


Click it and Unblock the Notifications