ಭಾರತದಲ್ಲಿ ಅತಿ ಹೆಚ್ಚಾಗಿ ಬಳಕೆ ಮಾಡುವ ಯುಪಿಐ (UPI) ಪಾವತಿ ವ್ಯವಸ್ಥೆಯು ಶೀಘ್ರದಲ್ಲೇ ಒಂದು ಮಹತ್ವದ ಬದಲಾವಣೆಯನ್ನು ಜಾರಿಗೆ ಬರಲಿದೆ.
ಹೌದು, ನೀವು ಯುಪಿಐ ಅಪ್ಲಿಕೇಶನ್‌ಗಳಾದ ಫೋನ್ ಪೇ (PhonePe), ಗೂಗಲ್ ಪೇ (Google Pay), ಪೇಟಿಎಂ (Paytm) ಮತ್ತು ಇತರ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಪೂರ್ವ ಅನುಮೋದಿತ ಸಾಲಗಳು ಮತ್ತು ಕ್ರೆಡಿಟ್ ಲೈನ್‌ಗಳನ್ನು ನೇರವಾಗಿ ಬಳಕೆಯನ್ನು ಮಾಡಿಕೊಳ್ಳಬಹುದು. ಈ ಬದಲಾವಣೆ ಆಗಸ್ಟ್ 31ರಿಂದ ಜಾರಿಗೆ ಬರುತ್ತದೆ.

ನೀವು ಹಣವನ್ನು ಕಳುಹಿಸಲು, ಅಂಗಡಿಗಳಲ್ಲಿ ಖರೀದಿ ಮಾಡಲು ಅಥವಾ ಹಣವನ್ನು ಹಿಂಪಡೆಯಲು ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನು ಬಳಸುವ ಬದಲು, ನಿಮ್ಮ ಪೂರ್ವ ಅನುಮೋದನೆ ಪಡೆದ ಸಾಲ ಅಥವಾ ಓವರ್‌ಡ್ರಾಫ್ಟ್ ಖಾತೆಯನ್ನು ಬಳಕೆಯನ್ನು ಮಾಡಿಕೊಳ್ಳಬಹುದು. ಈ ಸೌಲಭ್ಯವು ಇದುವರೆಗೆ ಕೇವಲ ವ್ಯಾಪಾರಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಹೊಸ ಬದಲಾವಣೆಯು ಗ್ರಾಹಕರು ಕ್ರೆಡಿಟ್ ಅನ್ನು ತಕ್ಷಣವೇ ಪಡೆದುಕೊಳ್ಳಬಹುದು.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (NPCI) ಹೊಸ ನಿಯಮಗಳ ಪ್ರಕಾರ, ಈ ಮೊದಲು ಯುಪಿಐನಲ್ಲಿ ನಿಮ್ಮ ಸ್ವಂತ ಹಣವನ್ನು ಮಾತ್ರ ಬಳಕೆ ಮಾಡಲು ಸಾಧ್ಯವಿತ್ತು. ಆದರೆ ಈಗ ಕೆಲವು ಷರತ್ತುಗಳೊಂದಿಗೆ ಪೂರ್ವ ಅನುಮೋದಿತ ಸಾಲದ ಹಣವನ್ನು ಸಹ ಬಳಸಬಹುದು.
ಉದಾಹರಣೆಗೆ, ನೀವು ಒಂದು ಸ್ಥಿರ ಠೇವಣಿ (FD) ಮೇಲೆ ಸಾಲ ಪಡೆದಿದ್ದರೆ, ಯುಪಿಐ ಬಳಸಿ ವೈದ್ಯಕೀಯ ಬಿಲ್ ಅನ್ನು ನೇರವಾಗಿ ಪಾವತಿಸಬಹುದು. ಸಣ್ಣ ವ್ಯವಹಾರವನ್ನು ನಡೆಸುತ್ತಿದ್ದರೆ ಮತ್ತು ವ್ಯಾಪಾರ ಓವರ್‌ಡ್ರಾಫ್ಟ್ ಹೊಂದಿದ್ದರೆ, ನಿಮ್ಮ ಕ್ರೆಡಿಟ್ ಲೈನ್‌ನಿಂದ ಯುಪಿಐ ಮೂಲಕ ಪೂರೈಕೆದಾರರಿಗೆ ಅಥವಾ ಉದ್ಯೋಗಿಗಳಿಗೆ ಹಣವನ್ನು ಪಾವತಿಸಬಹುದು. ಒಂದು ವೇಳೆ ಶಿಕ್ಷಣಕ್ಕಾಗಿ ವೈಯಕ್ತಿಕ ಸಾಲವನ್ನು ಅನುಮೋದನೆಗೊಂಡಿದ್ದರೆ, ಯುಪಿಐ ಅನ್ನು ಬಳಸಿ ನೇರವಾಗಿ ಬೋಧನಾ ಶುಲ್ಕವನ್ನು ಪಾವತಿಸಬಹುದು. ಆದರೆ ಇಲ್ಲಿ ಒಂದು ಮುಖ್ಯವಾದ ಅಂಶವೆಂದರೆ, ಸಾಲವನ್ನು ಯಾವ ಉದ್ದೇಶಕ್ಕಾಗಿ ಅನುಮೋದಿಸಲಾಗಿದೆಯೋ ಅದೇ ಉದ್ದೇಶಕ್ಕೆ ಮಾತ್ರ ನೀವು ಬಳಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ.
ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿ ನಾಳಿಗೆ ಪೂರ್ವ ಅನುಮೋದಿತ ಶಿಕ್ಷಣ ಸಾಲವಿದ್ದರೆ, ಅವಳು ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲದೇ ತನ್ನ ಸಾಲದ ಖಾತೆಗೆ ಲಿಂಕ್ ಮಾಡಲಾದ ಫೋನ್ ಪೆ (PhonePe) ಬಳಸಿ ಕೋಚಿಂಗ್ ತರಗತಿಗಳ ಶುಲ್ಕವನ್ನು ಆಗಸ್ಟ್ 31ರಿಂದ ಯುಪಿಐ ಬಳಕೆ ಮಾಡಿಕೊಂಡು ನೇರವಾಗಿ ಕಟ್ಟಬಹುದು.
ಈ ಹಿಂದೆ ಯುಪಿಐನಲ್ಲಿ ರುಪೇ ಕ್ರೆಡಿಟ್ ಕಾರ್ಡ್ (RuPay credit card) ಮತ್ತು ಓವರ್‌ಡ್ರಾಫ್ಟ್ ಖಾತೆಗಳನ್ನು ಮಾತ್ರ ಬಳಸಬಹುದಿತ್ತು. ಆದರೆ ಆಗಸ್ಟ್ 31 ರಿಂದ ಸ್ಥಿರ ಠೇವಣಿಗಳ (FD ಗಳು) ವಿರುದ್ಧ ಕ್ರೆಡಿಟ್, ಬಾಂಡ್‌ಗಳು ಅಥವಾ ಷೇರುಗಳ ಮೇಲಿನ ಸಾಲ, ಆಸ್ತಿ ಆಧಾರಿತ ಸಾಲ, ಚಿನ್ನದ ಸಾಲಗಳು, ವೈಯಕ್ತಿಕ ಸಾಲಗಳು, ವ್ಯಾಪಾರ ಸಾಲಗಳು, ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಸಾಲಗಳು ಸೇರಿದಂತೆ ವಿವಿಧ ರೀತಿಯ ಸಾಲಗಳನ್ನು ಬಳಸಬಹುದು. ಇದರಿಂದ ವ್ಯಕ್ತಿಗಳಿಗೆ ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಹೆಚ್ಚಿನ ಅನುಕೂಲವಾಗಲಿದೆ.
ನಿಯಮಗಳು
- ನೀವು ಈ ಸೌಲಭ್ಯವನ್ನು ಸಾಲವನ್ನು ಪಡೆಯುವ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು.
- ನಿಮ್ಮ ಕ್ರೆಡಿಟ್ ಲೈನ್ ಅನ್ನು ಲಿಂಕ್ ಮಾಡುವ ಮೊದಲು ಆಯಾ ಬ್ಯಾಂಕಿನ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ.
- ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (P2M) ಗರಿಷ್ಠ 1 ಲಕ್ಷ ರೂಪಾಯಿ ವಹಿವಾಟುವನ್ನು ಮಾತ್ರ ನಡೆಸಬಹುದು
- ನಗದು ಹಿಂಪಡೆಯುವಿಕೆ ಮಿತಿ ದಿನಕ್ಕೆ 10,000 ರೂಪಾಯಿ ಆಗಿರುತ್ತದೆ.
- ವ್ಯಕ್ತಿಯಿಂದ ವ್ಯಕ್ತಿಗೆ ದಿನಕ್ಕೆ ಗರಿಷ್ಠ 20 ಬಾರಿ ಹಣವನ್ನು ವರ್ಗಾವಣೆ ಮಾಡಬಹುದು.
- ನಿಮ್ಮ ಬ್ಯಾಂಕ್ ಎನ್‌ಪಿಸಿಐ (NPCI) ಗಿಂತ ಹೆಚ್ಚಿನ ನಿಯಮಗಳನ್ನು ಹೊಂದಿದ್ದರೆ, ದೊಡ್ಡ ಮೊತ್ತದ ಪಾವತಿಗಳನ್ನು ಮಾಡುವ ಮೊದಲು ಬ್ಯಾಂಕಿನೊಂದಿಗೆ ಪರಿಶೀಲಿಸುವುದು ಉತ್ತಮ.
ಕ್ರಿಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಪಡೆಯಲು ಸಾಧ್ಯವಾಗದ ಸಣ್ಣ ಪಟ್ಟಣಗಳು, ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಈ ಕ್ರಮವು ಬಹಳಷ್ಟು ಸಹಕಾರಿಯಾಗಲಿದೆ. ಇದಕ್ಕಾಗಿ ಯಾವುದೇ ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲ. ಕೇವಲ ಪೂರ್ವ ಅನುಮೋದಿತ ಸಾಲ ಮತ್ತು ಯುಪಿಐ ಅಪ್ಲಿಕೇಶನ್ ಇದ್ದರೆ ಸಾಕು.


Click it and Unblock the Notifications