ಟ್ರಕ್ ಚಾಲಕರು ಮುಷ್ಕರವನ್ನು ನಡೆಸುತ್ತಿದ್ದು ಇದು ಕರ್ನಾಟಕ ರಾಜ್ಯ ಮಾತ್ರವಲ್ಲದೆ ನೆರೆಯ ಕೆಲವು ರಾಜ್ಯಗಳ ಮೇಲೆಯೂ ಪ್ರಭಾವ ಬೀರಿದೆ. ಕರ್ನಾಟಕ ಮತ್ತು ನೆರೆಯ ರಾಜ್ಯಗಳಲ್ಲಿ ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆಯ ಮೇಲೆ ಪರಿಣಾಮ ಉಂಟಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳಿಗೆ ಕಠಿಣ ಶಿಕ್ಷೆಯ ವಿರುದ್ಧ ಟ್ರಕ್ ಚಾಲಕರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದಾಗಿ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದರೆ ಸಾಮಾನ್ಯ ಜನರು ಮಾತ್ರ ಖುಷಿ ಪಡುವಂತಾಗಿದೆ.

ಸಂಕಷ್ಟದಲ್ಲಿ ರೈತರು
ರಾಜ್ಯದಲ್ಲಿ ಬರಗಾಲದವಿದ್ದರೂ ತರಕಾರಿಯನ್ನು ಹೇಗೋ ಕಾಪಾಡಿಕೊಂಡು ಬೆಳೆದಿದ್ದ ರೈತರು ಇದೀಗ ಲಾರಿ ಮುಷ್ಕರದಿಂದಾಗಿ ಕಂಗಲಾಗಿದ್ದಾರೆ. ಮುಷ್ಕರದಿಂದಾಗಿ ಲಾಭದಾಯಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಷ್ಕರದಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್, ಹಣ್ಣುಗಳು ಮತ್ತು ಇತರ ಉತ್ಪನ್ನಗಳಂತಹ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗಿದೆ.
ತರಕಾರಿ ಬೆಲೆ ಎಷ್ಟಿದೆ?
ತಾಜಾ ತರಕಾರಿಗಳ ಬೆಲೆ ಕುಸಿದಿರುವುದರಿಂದ ರೈತರಿಗೂ ಮುಷ್ಕರದ ಬಿಸಿ ತಟ್ಟಿದೆ. ಬೀನ್ಸ್ ಬೆಲೆ 50 ರಿಂದ 45 ರೂಪಾಯಿಗೆ ಇಳಿದಿದ್ದರೆ, ಕ್ಯಾರೆಟ್ ಬೆಲೆ ಕೆಜಿಗೆ 35 ರಿಂದ 25 ರೂಪಾಯಿಗೆ ಇಳಿದಿದೆ. ಮೂಲಂಗಿ, ಟೊಮೇಟೊ, ಹಾಗಲಕಾಯಿ, ಸೋರೆಕಾಯಿ, ಎಲೆಕೋಸು, ಹೂಕೋಸು ಸೇರಿದಂತೆ ಇತರೆ ತಳಿಗಳು ಕೆಜಿಗೆ 22 ರೂಪಾಯಿಗೆ ಇಳಿಕೆಯಾಗಿದೆ.
ರಿಟೇಲ್ ಮಾರುಕಟ್ಟೆಯಲ್ಲಿ ಒಂದೇ ದರವಿದ್ದರೂ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಬೆಲೆ ಇಳಿಕೆಯಾಗಿದೆ. ದಕ್ಷಿಣದ ಎಲ್ಲ ರಾಜ್ಯಗಳಲ್ಲಿ ಲಾರಿ ಮುಷ್ಕರದಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿಗಳ ಖರೀದಿದಾರರು ಇಲ್ಲದೆ ರಾಶಿ ರಾಶಿ ಬಿದ್ದಿದೆ.
ಕೇರಳದಲ್ಲಿ ಬೆಲೆ ಹೆಚ್ಚಳ
ಮೈಸೂರು ಮತ್ತು ಚಾಮರಾಜನಗರ ಮಾರುಕಟ್ಟೆಗಳು ನೆರೆಯ ರಾಜ್ಯಗಳ ಮೇಲೆ ಅವಲಂಬಿತವಾಗಿದೆ. ಕೇರಳವು ದಿನಕ್ಕೆ 130 ರಿಂದ 150 ಟ್ರಕ್‌ಗಳು ತರಕಾರಿಗಳನ್ನು ಖರೀದಿಸುತ್ತವೆ. ಆದರೆ ವೋಲ್‌ಸೇಲ್ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 8 ರಿಂದ 12 ರೂಪಾಯಿಗೆ ಏರಿಕೆಯಾಗಿದೆ. ಮುಷ್ಕರದ ತೀವ್ರತೆ ರೈತ ಸಮುದಾಯ ಚಿಂತೆಗೆ ಒಳಗಾಗುವಂತೆ ಮಾಡಿದೆ. ಬೇಡಿಕೆ ಮತ್ತು ಪೂರೈಕೆ ಸಾಧ್ಯವಾಗದ ಕಾರಣ ಕೇರಳದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಖೋದಂಡರಾಮ್ ಮಾತನಾಡಿ, "ಮಿನಿ ಟ್ರಕ್‌ಗಳನ್ನು ಹೊರತುಪಡಿಸಿ 6 ಸಾವಿರಕ್ಕೂ ಹೆಚ್ಚು ಟ್ರಕ್‌ಗಳು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿವೆ. ಈ ಕಾನೂನು ಚಾಲಕರ ಹೊಟ್ಟೆಗೆ ಒಡೆಯುವಂತದ್ದು. ಸರ್ಕಾರವು ನಿಬಂಧನೆಗಳನ್ನು ಮರುಪರಿಶೀಲಿಸಬೇಕೆಂದು," ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಟ್ರಕ್ ಸಂಚಾರ ನಡೆಯದ ಕಾರಣ ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗಲಿದೆ ಎಂದಿದ್ದಾರೆ.


Click it and Unblock the Notifications