ಮತ್ತೆ ಹಬ್ಬದ ಸಮಯ ಬಂದಿದೆ. ದೀಪಾವಳಿ ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಹಬ್ಬದ ಸಮಯ ಮಂಗಳಕರ ಎಂದು ನಂಬಲಾಗುತ್ತದೆ. ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಉತ್ತಮ ಎಂಬ ನಂಬಿಕೆಯಿದೆ. ದೀಪಾವಳಿಗೂ ಮುನ್ನ ಚಿನ್ನ ಖರೀದಿಸುವುದಾದರೆ ಕೆಲವು ಅಂಶಗಳನ್ನು ತಿಳಿದಿರಬೇಕಾಗುತ್ತದೆ.
ಚಿನ್ನವನ್ನು ಖರೀದಿಸುವುದು ಕೇವಲ ಆರ್ಥಿಕ ನಿರ್ಧಾರವಲ್ಲ. ಭಾರತೀಯ ಕುಟುಂಬಗಳಿಗೆ ಒಂದು ಭಾವನಾತ್ಮಕ ವಿಚಾರವಾಗಿದೆ. ಸಾಮಾನ್ಯವಾಗಿ, ನಾವು ಚಿನ್ನವನ್ನು ಖರೀದಿಸಲು ನಿರ್ಧರಿಸಿದಾಗ ನಾವು ಪ್ರಮುಖ ವಿಷಯಗಳನ್ನು ಮರೆತುಬಿಡುತ್ತೇವೆ. ನಾವು ನೋಡಬೇಕಾದ ರಿಯಾಯಿತಿ ಅಥವಾ ಆಫರ್‌ಗಳು ಮಾತ್ರವಲ್ಲ, ಅಮೂಲ್ಯವಾದ ಲೋಹವನ್ನು ಖರೀದಿಸುವ ಮೊದಲು ಹಲವಾರು ಅಂಶಗಳನ್ನು ನಾವು ಪರಿಗಣಿಸಬೇಕಾಗುತ್ತದೆ.

ನಾಣ್ಯಗಳು, ಬಾರ್‌ಗಳು ಮತ್ತು ಆಭರಣಗಳು, ಹೀಗೆ ಚಿನ್ನ ವಿವಿಧ ರೂಪಗಳಲ್ಲಿ ಲಭ್ಯವಿದೆ. ಪ್ರತಿಯೊಂದೂ ಅದರ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಚಿನ್ನವನ್ನು ಖರೀದಿಸುವ ಮೊದಲು ಪರಿಗಣಿಸಬೇಕಾದ ಹಲವಾರು ಪ್ರಮುಖ ಅಂಶಗಳಿವೆ. ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ.
ಬಜೆಟ್ ಮತ್ತು ಉದ್ದೇಶ
ನಿಮ್ಮ ಚಿನ್ನ ಖರೀದಿಗೆ ಬಜೆಟ್ ಸೆಟ್ ಮಾಡಿ, ಅದರಂತೆಯೇ ಖರೀದಿ ಮಾಡಿ. ಅತಿಯಾಗಿ ಖರ್ಚು ಮಾಡುವ ನಿರ್ಧಾರದಿಂದ ದೂರ ಉಳಿಯಿರಿ. ಹೂಡಿಕೆಗಾಗಿ, ಆಭರಣವಾಗಿ, ವಿಶೇಷ ಸಂದರ್ಭಕ್ಕಾಗಿ ಅಥವಾ ಉಡುಗೊರೆಯಾಗಿ?, ನೀವು ಚಿನ್ನವನ್ನು ಏಕೆ ಖರೀದಿಸುತ್ತೀರಿ ಎಂಬುದನ್ನು ನಿರ್ಧರಿಸಿ. ನಿಮ್ಮ ಉದ್ದೇಶವು ನೀವು ಖರೀದಿಸಬೇಕಾದ ಚಿನ್ನದ ಪ್ರಕಾರದ ಮೇಲೆ ಪ್ರಭಾವ ಬೀರುತ್ತದೆ.
ಪ್ಯೂರಿಟಿ ಚೆಕ್ ಮಾಡಿಕೊಳ್ಳಿ
ಚಿನ್ನವನ್ನು ಕ್ಯಾರಟ್‌ಗಳಲ್ಲಿ (ಕೆ) ಅಳೆಯಲಾಗುತ್ತದೆ. 24 ಕೆ ಶುದ್ಧ ಚಿನ್ನವಾಗಿರುತ್ತದೆ. ಆಭರಣಗಳನ್ನು ಸಾಮಾನ್ಯವಾಗಿ 22K ಅಥವಾ 18K ನಂತಹ ಕಡಿಮೆ ಕ್ಯಾರೆಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ನೀವು ಖರೀದಿಸುವ ಚಿನ್ನದ ಶುದ್ಧತೆ ತಿಳಿಯುವುದು ಅತೀ ಮುಖ್ಯವಾಗುತ್ತದೆ.
"ಚಿನ್ನವನ್ನು ಖರೀದಿಸುವಾಗ, ಚಿನ್ನದ ಶುದ್ಧತೆಯನ್ನು ಕೇಳಿ ತಿಳಿದುಕೊಳ್ಳಿ. ಬಿಐಎಸ್ ಹಾಲ್‌ಮಾರ್ಕ್ ಅನ್ನು ಪರಿಶೀಲಿಸಿ. ಬಿಐಎಸ್ ಹಾಲ್‌ಮಾರ್ಕ್ ಸರ್ಕಾರಿ ಪ್ರಮಾಣೀಕರಣವಾಗಿದ್ದು, ಚಿನ್ನವು ನಿಗದಿತ ಶುದ್ಧತೆಯ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸುತ್ತದೆ," ಎಂದು ಬ್ಯಾಂಕ್‌ಬಜಾರ್ ಡಾಟ್ ಕಾಮ್ ಸಿಇಒ ಅಧಿಲ್ ಶೆಟ್ಟಿ ಹೇಳುತ್ತಾರೆ.
ಹಾಲ್‌ಮಾರ್ಕಿಂಗ್
ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಹಾಲ್‌ಮಾರ್ಕ್ ಮಾಡಿದ ಆಭರಣಗಳನ್ನು ಮಾತ್ರ ಖರೀದಿ ಮಾಡಿ. ಈ ಪ್ರಮಾಣೀಕರಣವು ಚಿನ್ನದ ಶುದ್ಧತೆ ಮತ್ತು ದೃಢೀಕರಣವನ್ನು ಖಚಿತಪಡಿಸುತ್ತದೆ. ಗುಣಮಟ್ಟದ ಭರವಸೆಗೆ ಇದು ಮುಖ್ಯವಾಗಿದೆ.
ಮಾರುಕಟ್ಟೆ ದರ
ಚಿನ್ನದ ಪ್ರಸ್ತುತ ಮಾರುಕಟ್ಟೆ ಬೆಲೆಯ ಬಗ್ಗೆ ತಿಳಿದಿರುವುದು ಅತೀ ಮುಖ್ಯ. ಇದನ್ನು ಸಾಮಾನ್ಯವಾಗಿ "ಚಿನ್ನದ ದರ" ಎಂದು ಕರೆಯಲಾಗುತ್ತದೆ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಕರೆನ್ಸಿ ವಿನಿಮಯ ದರಗಳಿಂದಾಗಿ ಚಿನ್ನದ ಬೆಲೆಗಳು ಪ್ರತಿದಿನ ಏರಿಳಿತಗೊಳ್ಳುತ್ತವೆ. ಬೆಲೆಗಳು ನೀವು ಖರೀದಿಸಲು ಅನುಕೂಲಕರ ಮಟ್ಟಕ್ಕೆ ತಲುಪಿದಾಗ ಖರೀದಿಸಿ.
ಮೇಕಿಂಗ್ ಚಾರ್ಜಸ್
ಯಾವುದೇ ಆಭರಣ ತಯಾರಕರು ಸಾಮಾನ್ಯವಾಗಿ ಆಭರಣಗಳನ್ನು ತಯಾರಿಸಲು ಶುಲ್ಕವನ್ನು ವಿಧಿಸುತ್ತಾರೆ. ಇದನ್ನೇ ಮೇಕಿಂಗ್ ಚಾರ್ಜಸ್ ಎಂದು ಕರೆಯಲಾಗುತ್ತದೆ. ಈ ಚಾರ್ಜಸ್ ಒಬ್ಬ ಆಭರಣ ವ್ಯಾಪಾರಿಯಿಂದ ಇನ್ನೋರ್ವ ವ್ಯಾಪಾರೊಗೆ ಬದಲಾವಣೆಯಾಗುತ್ತದೆ. ಖರೀದಿ ಮಾಡುವ ಮೊದಲು ಮೇಕಿಂಗ್ ಶುಲ್ಕಗಳನ್ನು ಹೋಲಿಕೆ ಮಾಡಿ. ಎಲ್ಲಿ ಕಡಿಮೆ ಇದೆ ಎಂದು ನೋಡಿ.
"ಮೇಕಿಂಗ್ ಚಾರ್ಜ್‌ಗಳು ಚಿನ್ನದ ಆಭರಣಗಳ ತಯಾರಿಕೆಗೆ ಸಂಬಂಧಿಸಿದ ವೆಚ್ಚವಾಗಿದೆ. ವಿನ್ಯಾಸ ಮತ್ತು ಆಭರಣದ ರೀತಿಯನ್ನು ಅವಲಂಬಿಸಿ ಮೇಕಿಂಗ್ ಶುಲ್ಕಗಳು ಬದಲಾಗಬಹುದು. ಖರೀದಿ ಮಾಡುವ ಮೊದಲು ಮೇಕಿಂಗ್ ಶುಲ್ಕವನ್ನು ನೋಡುವುದು ಅತೀ ಮುಖ್ಯವಾಗುತ್ತದೆ," ಎಂದು ಅಧಿಲ್ ಶೆಟ್ಟಿ ತಿಳಿಸಿದ್ದಾರೆ.
ತೂಕ ಮತ್ತು ಮಾಪನ
ನೀವು ಖರೀದಿಸುತ್ತಿರುವ ಚಿನ್ನದ ತೂಕ ಮತ್ತು ಅಳತೆ ಸರಿಯಾಗಿದೆಯೇ ಎಂದು ಪರಿಶೀಲಿಸುವುದು ಅತೀ ಮುಖ್ಯವಾಗುತ್ತದೆ. ಆಭರಣಗಳನ್ನು ಸಾಮಾನ್ಯವಾಗಿ ತೂಕದ ಮೂಲಕ ಮಾರಾಟ ಮಾಡಲಾಗುತ್ತದೆ. ಆದ್ದರಿಂದಾಗಿ ವಿಶ್ವಾಸಾರ್ಹ ಆಭರಣ ವ್ಯಾಪಾರಿಯ ಬಳಿ ಮಾತ್ರ ಖರೀದಿಸಿ.
ಮಾರಾಟಗಾರರ ಪರಿಶೀಲನೆ
ಪ್ರತಿಷ್ಠಿತ ಮತ್ತು ಹೆಸರುವಾಸಿಯಾದ ಜ್ಯುವೆಲ್ಲರಿ ಮಳಿಗೆಗಳಲ್ಲಿ ಮಾತ್ರ ಖರೀದಿ ಮಾಡಿ. ಸ್ನೇಹಿತರು ಮತ್ತು ಕುಟುಂಬ ಶಿಫಾರಸು ಕೇಳಿ, ಆನ್‌ಲೈನ್‌ನಲ್ಲಿ ರಿವೀವ್ ಓದಿಕೊಳ್ಳಿ. ನಕಲಿ ಆಭರಣದ ಮೋಸಕ್ಕೆ ಬೀಳಬಾರದಾದರೆ ನೀವು ವಿಶ್ವಾಸಾರ್ಹ ಮಳಿಗೆಯಿಂದ ಖರೀದಿ ಮಾಡುವುದು ಅತ್ಯಗತ್ಯ.
ಬಿಲ್ಲಿಂಗ್ ಮತ್ತು ರಸೀದಿಗಳು
ನಿಮ್ಮ ಚಿನ್ನವನ್ನು ಮಾರಾಟ ಮಾಡಲು ಅಥವಾ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಲು ನೀವು ನಿರ್ಧರಿಸಿದಾಗ ಬಿಲ್‌ಗಳು ಬಹಳ ಮುಖ್ಯವಾಗುತ್ತದೆ. ಚಿನ್ನವನ್ನು ಖರೀದಿಸುವಾಗ ಯಾವಾಗಲೂ ವಿವರವಾದ ರಸೀದಿಯನ್ನು ಕೇಳಿ ಪಡೆಯಿರಿ. ಇದು ಶುದ್ಧತೆ, ತೂಕ, ಮೇಕಿಂಗ್ ಶುಲ್ಕಗಳು ಮತ್ತು ಒಟ್ಟು ವೆಚ್ಚವನ್ನು ಒಳಗೊಂಡಿರಬೇಕು.
ಸಂಗ್ರಹಣೆ ಮತ್ತು ಸುರಕ್ಷತೆ
ನಿಮ್ಮ ಚಿನ್ನವನ್ನು ನೀವು ಹೇಗೆ ಸುರಕ್ಷಿತವಾಗಿ ಸಂಗ್ರಹಿಸುತ್ತೀರಿ ಎಂಬುವುದು ಅತೀ ಮುಖ್ಯವಾಗುತ್ತದೆ. ವಿಶೇಷವಾಗಿ ಅಧಿಕ ಮೊತ್ತದ ಖರೀದಿ ಮಾಡುವುದಾದರೆ ಸುರಕ್ಷಿತ ಲಾಕರ್ ಅಥವಾ ಬ್ಯಾಂಕಿನ ಸೇಫ್ ಡಿಪಾಸಿಟ್‌ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು.
ಮರುಮಾರಾಟ ಮೌಲ್ಯ
ಭವಿಷ್ಯದಲ್ಲಿ ನಿಮ್ಮ ಚಿನ್ನವನ್ನು ಮಾರಾಟ ಮಾಡಲು ನೀವು ಬಯಸಬಹುದು ಎಂಬುದನ್ನು ನೆನಪಿನಲ್ಲಿಡಿ. ಮರುಮಾರಾಟದ ಮೌಲ್ಯವನ್ನು ಅರ್ಥಮಾಡಿಕೊಳ್ಳಿ. ಆಭರಣ ವ್ಯಾಪಾರಿಗೆ ಮಾರಾಟ ಮಾಡುವಾಗ ನೀವು ಸಂಪೂರ್ಣ ಮಾರುಕಟ್ಟೆ ಬೆಲೆಯನ್ನು ಪಡೆದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
ಗುಣಮಟ್ಟ ಮತ್ತು ವಿನ್ಯಾಸ, ತೆರಿಗೆ ಪರಿಣಾಮಗಳು
ನೀವು ಚಿನ್ನದ ಆಭರಣಗಳನ್ನು ಖರೀದಿಸುತ್ತಿದ್ದರೆ, ವಿನ್ಯಾಸ ಮತ್ತು ಕರಕುಶಲತೆಗೆ ಗಮನ ಕೊಡಿ. ನೀವು ಇಷ್ಟಪಡುವ ಮತ್ತು ಆರಾಮದಾಯಕವಾಗಿ ಧರಿಸುವ ವಿನ್ಯಾಸವನ್ನು ಆರಿಸಿ. ಹಾಗೆಯೇ ಚಿನ್ನವನ್ನು ಖರೀದಿಸುವಾಗ ಅನ್ವಯವಾಗುವ ಯಾವುದೇ ತೆರಿಗೆಗಳ ಬಗ್ಗೆ ತಿಳಿದಿರಲಿ. ಭಾರತದಲ್ಲಿ, ಚಿನ್ನದ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇದೆ.


Click it and Unblock the Notifications