ವೃತ್ತಿಯಲ್ಲಿ ನಾನು ಸ್ಟಾಕ್ ಬ್ರೋಕರ್. ದಶಕಗಳ ಅನುಭವದ ಕಾರಣಕ್ಕೆ ಅವರಾಗಿಯೇ ಕೇಳಿದರೆ ಸಲಹೆ- ಸೂಚನೆಗಳನ್ನು ನೀಡುತ್ತೇನೆ. ಎಚ್ಚರಿಸುತ್ತೇನೆ. ಹಾಗಲ್ಲ ಹೀಗೆ ಎಂದು ತಿಳಿವಳಿಕೆ ಹೇಳಲು ಪ್ರಯತ್ನಿಸುತ್ತೇನೆ. ಇತ್ತೀಚೆಗೆ ನನಗೆ ಬರುವ ಫೋನ್ ಕಾಲ್ ಗಳು, ಫೇಸ್ ಬುಕ್ ವಿಚಾರಣೆಗಳು ಹೆಚ್ಚಾಗಿವೆ. ನಾಳೆ ಮಾರ್ಕೆಟ್ ಏನಾಗಬಹುದು? ಎಷ್ಟು ಸಾವಿರ ಅಥವಾ ನೂರು ಪಾಯಿಂಟ್ ಬೀಳಬಹುದು ಅಥವಾ ಏಳಬಹುದು ಎಂಬುದೇ ಬಹುತೇಕರ ಪ್ರಶ್ನೆಯಾಗಿರುತ್ತದೆ.
ನನ್ನಲ್ಲಿ ವಿಚಾರಿಸುವ ಪ್ರತಿಯೊಬ್ಬರಿಗೂ ಉತ್ತರ ಹೇಳುವುದಕ್ಕೆ ನಾನು ಪ್ರಯತ್ನಿಸುತ್ತೇನೆ. ಆದರೆ ಇಂದಿನ ಲೇಖನ ತುಂಬಾ ವಿಶಿಷ್ಟ ಮತ್ತು ಸಾರ್ವಕಾಲಿಕ. ಷೇರುಪೇಟೆಯಲ್ಲಿ ಇದುವರೆಗೂ ಹೂಡಿಕೆ ಮಾಡಿದವರಲ್ಲಿ ಕೆಲವರಿಗೆ ಛಡಿ ಏಟಾದರೆ, ಕೆಲವರಿಗೆ ಚಾವಟಿ ಏಟು, ಮತ್ತೆ ಕೆಲವರಿಗೆ ದೊಣ್ಣೆ ಏಟು, ಹೀಗೆ ಅವರವರ ಚಟುವಟಿಕೆಯ ಗಾತ್ರಕ್ಕೆ ಅನುಗುಣವಾಗಿ ಏಟುಗಳನ್ನು ತಿಂದಿರುತ್ತಾರೆ.
ಕೇವಲ ಒಂದೇ ತಿಂಗಳಲ್ಲಿ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸೆನ್ಸೆಕ್ಸ್ ಸುಮಾರು ಹನ್ನೆರಡು ಸಾವಿರ ಪಾಯಿಂಟುಗಳಷ್ಟು ಹಾನಿಗೊಳಗಾಗಿದೆ. ಅಲ್ಲದೆ ಹಿಂದಿನ ತಿಂಗಳು (ಫೆಬ್ರವರಿ) 20ರಂದು ರು. 158.50 ಲಕ್ಷ ಕೋಟಿಯಷ್ಟಿದ್ದ ಪೇಟೆಯ ಬಂಡವಾಳ ಮೌಲ್ಯವು ಬುಧವಾರದ ಕೊನೆಗೆ ರು. 113.53 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ ಸುಮಾರು ರು. 45 ಲಕ್ಷ ಕೋಟಿಯಷ್ಟು ಬಂಡವಾಳ ಮೌಲ್ಯವು ನಶಿಸಿ ಹೋಗಿದೆ.
ಐತಿಹಾಸಿಕ ಕುಸಿತ ಕಂಡ ಸೆನ್ಸೆಕ್ಸ್
ಇಂತಹ ಭಾರೀ ಹಾನಿಯು ಚರಿತ್ರೆಯಲ್ಲಿ ಎಲ್ಲೂ ಕಂಡುಬರುವುದಿಲ್ಲ. ಅದಕ್ಕೆ ಕಾರಣ ಏನೆಂದರೆ, 20 ಜನವರಿ 2020ರಲ್ಲಿ 42,273 ಪಾಯಿಂಟ್ ಗಳ ಸಾರ್ವಕಾಲಿಕ ಗರಿಷ್ಠದಲ್ಲಿದ್ದ ಸೆನ್ಸೆಕ್ಸ್ ಫೆಬ್ರವರಿ 20ರಂದು 41,170 ಪಾಯಿಂಟುಗಳಲ್ಲಿತ್ತು. ಆದರೆ ನಂತರದ ದಿನಗಳಲ್ಲಿ ಕುಸಿಯುತ್ತಾ ಬಂದು, ಬುಧವಾರಕ್ಕೆ 28,613 ಪಾಯಿಂಟುಗಳಿಗೆ ದಿನದ ಮಧ್ಯಂತರದಲ್ಲಿ ಕುಸಿದು, 28,869ರಲ್ಲಿ ಕೊನೆಗೊಂಡಿದೆ. ಮಾರ್ಕೆಟ್ ಕ್ಯಾಪಿಟಲೈಸೇಶನ್ (ಮಾರುಕಟ್ಟೆ ಬಂಡವಾಳ) ಇಷ್ಟು ಬೃಹತ್ ಪ್ರಮಾಣದಲ್ಲಿ ಕರಗಿರುವುದರ ಹಿಂದೆ ಕೊರೊನಾ ಪ್ರಭಾವ ಕೂಡ ಇದೆ. ಏಕೆಂದರೆ ಇದರದೇ ಪ್ರಭಾವಕ್ಕೆ ವಿಶ್ವ ವ್ಯಾಪಿಯಾಗಿ ನಾನಾ ದೇಶಗಳ ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗುತ್ತಿದೆ. ಅಂತರ ರಾಷ್ಟ್ರೀಯ ವಿತ್ತೀಯ ಪೇಟೆಗಳಲ್ಲಿನ ಭಾರಿ ಕುಸಿತವು ನಮ್ಮ ದೇಶದ ಮೇಲೂ ಪ್ರಭಾವ ಬೀರಿದೆ. ಈ ಮಧ್ಯೆ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಭಾರಿ ಕುಸಿತ ಕಂಡಿರುವುದು ನಮ್ಮ ದೇಶಕ್ಕೆ ಲಾಭಕರ ಎನಿಸಿದರೂ ಯೆಸ್ ಬ್ಯಾಂಕ್ ಹಗರಣ, ಡಿಎಚ್ ಎಫ್ ಎಲ್ ಗೊಂದಲಕ್ಕೆ ಹಾಗೂ ಇತರೆ ಸಹಕಾರಿ ಬ್ಯಾಂಕ್ ಗಳು ಸೃಷ್ಟಿಸಿದ ಅಹಿತಕರ ವಾತಾವರಣಕ್ಕೆ ಕಚ್ಚಾ ತೈಲ ಬೆಲೆ ಕುಸಿತದ ಲಾಭ ಕೈಗೆಟುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ಆಳದ ಅರಿವಿಲ್ಲದೆ ಜಾರಿದ ನವರತ್ನ, ಮಹಾರತ್ನ
ಈ ಅಗಾಧ ಪ್ರಮಾಣದ ಕುಸಿತದ ಮಧ್ಯೆ ಬುಧವಾರ (18.3.2020) ಪೇಟೆಯು ಪ್ರದರ್ಶಿಸಿದ ಅಲ್ಪಕಾಲೀನ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಚಟುವಟಿಕೆ ಎಲ್ಲರ ಗಮನ ಸೆಳೆಯುವಂತಿತ್ತು. ಪೇಟೆ ಕುಸಿದಿದೆ, ಹೂಡಿಕೆಗೆ ಯೋಗ್ಯವಲ್ಲ ಎಂದು ಚಿಂತಾಕ್ರಾಂತರಾಗದೆ, ಧೈರ್ಯದಿಂದ, ಆಶಾ ಭಾವನೆಯಿಂದ ಅಲ್ಪಮಟ್ಟಿನ ಹೂಡಿಕೆಯಿಂದಲೂ ತ್ವರಿತ ಲಾಭ ಗಳಿಸಬಹುದು ಎಂಬುದನ್ನು ಪೇಟೆ ಪ್ರದರ್ಶಿಸಿದೆ. ಘಟಾನುಘಟಿ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಟೈಟಾನ್, ಲಾರ್ಸನ್ ಅಂಡ್ ಟೊಬ್ರೋ, ಇನ್ಫೋಸಿಸ್, ಎಸ್ ಬಿಐ, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಏಷಿಯನ್ ಪೇಂಟ್ಸ್ ನಂತಹ ಕಂಪೆನಿಗಳು ಆಳದ ಅರಿವಿಲ್ಲದೆ ಜಾರಿದವು. ನವರತ್ನ, ಮಹಾರತ್ನ ಎಂಬ ಭೇದವಿಲ್ಲದೆ ಸಾಮೂಹಿಕವಾಗಿ ಜಾರಿದವು. ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ಕೆಲವು ಕಂಪೆನಿಗಳು ಪ್ರದರ್ಶಿಸಿದ ರಭಸದ ಚಾಲನೆ ಇಂತಿದೆ.
ಒಎನ್ ಜಿಸಿ
ಈ ಕಂಪೆನಿಯು ಪ್ರತಿ ಷೇರಿಗೆ ರು. 5ರ ಮಧ್ಯಂತರ ಲಾಭಾಂಶವನ್ನು ಪ್ರಕಟಿಸಿದ್ದು, ಶುಕ್ರವಾರದವರೆಗೂ ಚಟುವಟಿಕೆ ಕಂ ಡಿವಿಡೆಂಡ್ ಆಗಿದೆ. ಬುಧವಾರ ಮದ್ಯಾಹ್ನ ರು. 57/58 ರ ಸಮೀಪವಿದ್ದು 3 ಗಂಟೆಯ ಸಮಯದಲ್ಲಿ ಈ ಕಂಪೆನಿಗೆ ನವ ಚೇತನ ಮೂಡಿ ರು. 87ರವರೆಗೂ ಏರಿಕೆ ಕಂಡಿತು. ಅಲ್ಲಿಂದ ರು. 60ಕ್ಕೆ ಇಳಿಯಿತು. ಅಂದರೆ ಕೇವಲ ಅರ್ಧ ಗಂಟೆಯಲ್ಲಿ ಸುಮಾರು ರು. 30ರಷ್ಟು ಏರಿಕೆ ಕಂಡು, ಅಲ್ಲಿಂದ ರು. -25ರಷ್ಟು ಇಳಿಕೆಗೊಳಪಟ್ಟಿರುವುದು, ಅಲ್ಪಕಾಲೀನ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಚಟುವಟಿಕೆಯಾಗಿದೆ.
ಆಯಿಲ್ ಇಂಡಿಯಾ
ಈ ಕಂಪೆನಿಯು ಹಿಂದಿನ ತಿಂಗಳು ಪ್ರತಿ ಷೇರಿಗೆ ರು. 9ರಂತೆ ಮಧ್ಯಂತರ ಲಾಭಾಂಶ ವಿತರಿಸಿದೆ. ಬುಧವಾರ ಮಧ್ಯಾಹ್ನ 3 ಗಂಟೆಯವರೆಗೂ ರು. 68ರ ಸಮೀಪವಿದ್ದ ಷೇರಿನ ಬೆಲೆ ರು. 98ರ ಸಮೀಪಕ್ಕೆ ಜಿಗಿದು. ನಂತರ ರು. 81ಕ್ಕೆ ಕುಸಿದು, ರು.83 ಸಮೀಪ ಕೊನೆಗೊಂಡಿತು. ಸುಮಾರು ರು. 30ರಷ್ಟು ಏರಿಕೆ ಕಂಡು, ಅಲ್ಲಿಂದ ರು. 17ರಷ್ಟು ಇಳಿಕೆ ಆಗಿರುವುದು ರಭಸದ ಚಟುವಟಿಕೆಯಾಗಿದೆ.
ಕೊಚಿನ್ ಶಿಪ್ ಯಾರ್ಡ್
ಈ ಕಂಪೆನಿ ಷೇರಿನ ಬೆಲೆ ಮಧ್ಯಾಹ್ಮ 3 ಗಂಟೆಯವರೆಗೂ ರು. 235ರ ಸಮೀಪದಲ್ಲಿದ್ದು, ಅಲ್ಲಿಂದ ರು. 280ರ ವರೆಗೂ ಏರಿಕೆ ಕಂಡು, ಅಲ್ಲಿಂದ ಮತ್ತೆ ರು. 220ರ ಸಮೀಪಕ್ಕೆ ಕುಸಿದು, ರು. 262ರಲ್ಲಿ ಕೊನೆಗೊಂಡಿದೆ. ಸುಮಾರು ರು.45 ರಷ್ಟು ಏರಿಕೆ ಕಂಡು, ಅಲ್ಲಿಂದ ರು. 60ರಷ್ಟು ಇಳಿಕೆ ಕಂಡು, ಮತ್ತೆ ಚುರುಕಾಗಿ ರು. 42ರಷ್ಟು ಚೇತರಿಕೆ ಕಂಡಿದೆ. ಇದೇ ರೀತಿ ಎನ್ ಎಂಡಿ ಸಿ, ರೈಟ್ಸ್, ಎನ್ ಟಿಪಿಸಿ, ಪೆಟ್ರೋನೆಟ್, ಪವರ್ ಗ್ರಿಡ್ ಕಾರ್ಪೊರೇಷನ್ ಸಹ ಭಾರಿ ಏರಿಳಿತ ಪ್ರದರ್ಶಿಸಿವೆ.
ಇಂಡಸ್ ಇಂಡ್ ಬ್ಯಾಂಕ್
ಈ ಕಂಪೆನಿಯು ಸೆನ್ಸೆಕ್ಸ್ ನ 30 ಕಂಪೆನಿಗಳಲ್ಲಿ ಒಂದು. ಒಂದು ತಿಂಗಳಿನಿಂದ ಈ ಷೇರು ರು. 1200ರಿಂದ ರು. 382ರವರೆಗೂ ಕುಸಿದಿದೆ. ಬುಧವಾರ ಈ ಷೇರು ದಿನದ ಆರಂಭದಲ್ಲಿ ರು. 604ರಲ್ಲಿದ್ದು ನಂತರ ರು. 638ರವರೆಗೂ ಏರಿಕೆ ಕಂಡಿತು. ದಿನದ ಮಧ್ಯಂತರದಲ್ಲಿ ರು. 382ಕ್ಕೆ ಕುಸಿದು, ರು. 480ರ ವರೆಗೂ ಜಿಗಿತ ಕಂಡಿತು. ಮತ್ತೆ ರು. 435ಕ್ಕೆ ಇಳಿದು, ರು. 460ರ ಸಮೀಪ ಕೊನೆಗೊಂಡಿದೆ. ಇಂತಹ ರಭಸದ ಏರಿಳಿತ ಪ್ರದರ್ಶಿತವಾದರೂ ಅಲ್ಪಕಾಲೀನ ವಹಿವಾಟುದಾರರಿಗೆ (ಶಾರ್ಟ್ ಟರ್ಮ್ ಇನ್ವೆಸ್ಟರ್ಸ್) ಲಾಭಕ್ಕೆ ದಾರಿ ಮಾಡಿಕೊಟ್ಟಿದೆ. ಈಗ ಹೇಳಿ, ನಿಮಿಷ- ಕ್ಷಣಗಳಲ್ಲಿ ಭಾರಿ ಬದಲಾವಣೆ ಕಾಣುತ್ತಿರುವ ಷೇರು ಬೆಲೆಗಳ ಮಧ್ಯೆ ಒಂದಿಡೀ ದಿನ ಏನಾಗಬಹುದು ಎಂದು ಹೇಳಲು ಸಾಧ್ಯವಾ? ಈಗಲೂ ಕೆಲವರು ಟಿಪ್ಸ್ ಗಳನ್ನು ನಂಬಿಕೊಂಡು ತಮ್ಮ ಶ್ರಮದ ದುಡ್ಡನ್ನು ಜೂಜಿನ ರೀತಿಯಲ್ಲಿ ತೊಡಗಿಸುತ್ತಿದ್ದಾರೆ. ಕ್ಷಮಿಸಿ, ಷೇರು ಮಾರುಕಟ್ಟೆ ಜೂಜಲ್ಲ. ಇಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿನ ತಾಳ್ಮೆಯೂ ಬೇಕು, ಪಾದರಸದ ವೇಗವೂ ಬೇಕು. ಅವೆರಡೂ ಯಾವಾಗ ಅಗತ್ಯ ಎಂಬುದು ತಿಳಿದುಕೊಂಡಿರಬೇಕು.


Click it and Unblock the Notifications