ಮಾನವ ಸಂಪನ್ಮೂಲ ನಿರ್ವಾಹಕಿಯಾದ ನಾನು ನನ್ನ ಕಛೇರಿಯ ಎಲ್ಲ ಉದ್ಯೋಗಿಗಳ ಕೆಲಸದಲ್ಲಿನ ಸಮಸ್ಯೆ/ಬಿನ್ನಹಗಳಿಗೆ ಸ್ಪಂದಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದ್ಯೋಗಿಗಳ ಒಂದು ಸಾಮಾನ್ಯ ಬೇಡಿಕೆಯೆಂದರೆ ಮನೆಯಿಂದ ಕೆಲಸ ಮಾಡುವ ಆಯ್ಕೆ ನೀಡಿ ಎಂಬುದು.
ನನಗೆ ಪ್ರಯಾಣ ಕಷ್ಟ ಎಂದೋ, ಆರೋಗ್ಯದ ಸಮಸ್ಯೆ ಎಂದೋ, ಮನೆಯಲ್ಲಿ ಒಂದು ಹಬ್ಬ/ಕಾರ್ಯ ಎಂದೋ, ಸರ್ಕಾರಿ ಕಚೇರಿಯಲ್ಲಿ ಈ ದಿನ ಕೆಲಸ ಇದೆ ಎಂದೋ, ಬಂದ್/ಘರ್ಷಣೆ ಎಂದೋ ಸಾಕಷ್ಟು genuine ಕಾರಣಗಳಿಗೆ ಈ ಬೇಡಿಕೆ ಹೊತ್ತು ಬರುತ್ತಾರೆ. ಸಾಕಷ್ಟು ಉದ್ಯೋಗಾರ್ಥಿಗಳು ಸಂದರ್ಶನಕ್ಕೆ ಬಂದಾಗ ನನಗೆ ಕೇಳುವ ಪ್ರಶ್ನೆಗಳಲ್ಲಿ ನಿಮ್ಮ ಸಂಸ್ಥೆಯಲ್ಲಿ ಮನೆಯಿಂದ ಕೆಲಸ ಮಾಡುವ ಆಯ್ಕೆ ಇರುವುದೇ ಎಂಬುದು ಒಂದು ಪ್ರಮುಖ ಪ್ರಶ್ನೆಯೂ ಹೌದು.
ತಂತ್ರಜ್ಞಾನದ ಅನೇಕ ಉಪಯೋಗಗಳಲ್ಲಿ ಇದೂ ಒಂದು. ಸಾಕಷ್ಟು ಸಂಸ್ಥೆಗಳಲ್ಲಿ ಈ ವ್ಯವಸ್ಥೆಗೆ ಸಕಾರಾತ್ಮಕ ಪ್ರೋತ್ಸಾಹ ಇದೆ. ನಮ್ಮ ಸಂಸ್ಥೆಯೂ ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಈ ಸೌಲಭ್ಯ ನೀಡಿದ್ದೂ ಇದೆ. ಅದರಿಂದ ನಷ್ಟವೂ ಕಂಡಿದ್ದೇವೆ, ಲಾಭವೂ ಕಂಡಿದ್ದೇವೆ. ಯಾಹೂ ಜಾಲತಾಣದ ಮುಖ್ಯಸ್ಥೆ ಅವರ ಸಂಸ್ಥೆಯಲ್ಲಿ ಇನ್ನು ಮುಂದೆ ಈ ಸೌಲಭ್ಯ ನೀಡುವುದಿಲ್ಲ ಎಂದ ಮೇಲೆ ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಯಲ್ಲಿ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.
work from home ಬಗ್ಗೆ ಪಾಸಿಟಿವ್ ಅಂಶಗಳು ಏನಿದೆ ಮುಂದೆ ಚಿತ್ರ ಸರಣಿಯಲ್ಲಿ ನೋಡಿ ಮುಂದಿನ ಲೇಖನದಲ್ಲಿ ಋಣಾತ್ಮಕ ಅಂಶಗಳನ್ನು ನೀಡಲಾಗಿದೆ . ಅದನ್ನು ಇಲ್ಲಿ ಓದಿ
ವಾಹನ ದಟ್ಟಣೆ (traffic) ಕಡಿಮೆ
ವಾಹನ ದಟ್ಟಣೆ (traffic) ಕಡಿಮೆ-ಪರಿಸರಕ್ಕೆ ಪೂರಕ-ಪ್ರಯಾಣದ ಖರ್ಚು ಉಳಿತಾಯ: ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯಿದ್ದರೆ ವಾಹನ ದಟ್ಟಣೆ ಕಡಿಮೆಯಾಗುತ್ತದೆ.
ಬೈಕ್/ಕಾರ್ ಓಡಿಸುವ ಕಿರಿಕಿರಿ, ಲೇಟ್ಆಗಿ ಕಛೇರಿ ತಲುಪುವ ಟೆನ್ಶನ್, ಅದಕ್ಕೆ ಹೇಳಬೇಕಾದ ಸಬೂಬುಗಳ ಚಿಂತೆ, ಹೊಗೆ ಉಸಿರಾಡಬೇಕಾದ ಬಾಧೆ, ಟ್ರಾಫಿಕ್ ದಂಡ ಕಟ್ಟುವುದು, ಅಪಘಾತದ ಭಯ, ಗಗನಮುಖಿ ಪೆಟ್ರೋಲ್ ಖರ್ಚಿನ ಉಳಿತಾಯ, ವಾಹನ ನಿರ್ವಹಣೆಯ ಖರ್ಚಿನ ಉಳಿತಾಯ-ಇಂಥ ಉಪಯೋಗಗಳಿವೆ.
ಗರ್ಭಿಣಿ-ಬಾಣಂತಿ-ವಿಕಲಾಂಗರಿಗೆ ವರ
ಮಹಿಳೆಯರಿಗೆ ತಾಯ್ತನ ಜೀವನದ ಪರಿಪೂರ್ಣತೆಯ ಘಟ್ಟ. ಮನೆಯವರ ಜೊತೆ ಆ ಎಲ್ಲ ಸಮಯ ಕಳೆಯುವಂತಿದ್ದರೆ ಆ ಸಂತೋಷಕ್ಕೆ ಒಂದು ಮೆರುಗು. ಎಷ್ಟೋ ಮಹಿಳಾ ಉದ್ಯೋಗಿಗಳು ಈ ಕಾರಣಕ್ಕಾಗಿ ಕೆಲಸ ಬಿಡುವುದೂ ಉಂಟು.
ವಿಕಲಾಂಗರಿಗಂತೂ ಪ್ರಯಾಣ ಎನ್ನುವುದು ಒಂದು ಶಾಪವೇ ಹೌದು. ಸ್ವಂತ ವಾಹನ ಇಲ್ಲದಿದ್ದರಂತೂ ಅವರ ಪಾಡು ಹೇಳಲಾರದ ಗಾಥೆ. ಒಂದು ಅಮೂಲ್ಯ ಮಾನವ ಸಂಪನ್ಮೂಲ ಪ್ರಯಾಣ ಮಾಡಲಾರದ ವಿಕಲಾಂಗ ಎಂಬ ಕಾರಣಕ್ಕೆ ಉಪಯೋಗಕ್ಕೆ ಸಿಗುತ್ತಿಲ್ಲ ಎಂಬುದು ಸತ್ಯ. ಈ ಸಂಪನ್ಮೂಲದ ಪೂರ್ಣ ಬಳಕೆ ಇದರಿಂದ ಸಾಧ್ಯ.
ಕುಟುಂಬಸ್ಥರ ಕಾಳಜಿಗೆ ಸಹಕಾರಿ
ನಗರದ ವಿಭಜಿತ ಕುಟುಂಬಗಳು ಗಂಡ, ಹೆಂಡತಿ, ಒಂದು ಮಗು ಹಾಗು ಇದ್ದರೆ ಒಬ್ಬರು ಅಥವಾ ಇಬ್ಬರು ಹಿರಿಯರು-ಇಷ್ಟೇ ಮಂದಿ ಇರುವುದೇ ಸಾಮಾನ್ಯ.
ಇವರಲ್ಲಿ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವಾಗ ಯಾರಿಗಾದರೂ ಅನಾರೋಗ್ಯವಿದ್ದಾಗ ಅವರ ಕಾಳಜಿ ವಹಿಸಲು ಆಗುವ ತೊಂದರೆ ಅನುಭವಿಸಿದರಿಗೇ ತಿಳಿದಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮನೆಯಿಂದ ಕೆಲಸ ಮಾಡುವಂತಿದ್ದರೆ ಬಹಳವೇ ಅನುಕೂಲ.
ಮುಂದೆ ಓದಬೇಕೆನ್ನುವವರಿಗೆ ಸಮಯ
ಸಾಕಷ್ಟು ಮಂದಿ ಉದ್ಯೋಗ ಮಾಡುತ್ತಲೇ ಹೆಚ್ಹಿನ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಅಂತಹವರಿಗೆ ಕೆಲಸದ ಜೊತೆ ಓದು ಮುಂದುವರೆಸಲು ಸಹಾಯವಾಗುತ್ತದೆ.
ಕಛೇರಿ ಸ್ಥಳದ ಉಳಿತಾಯ: 10 X10ಕೋಣೆಗೆ ಬಾಡಿಗೆ ನೀಡುವುದೇ ಈಗ ಕಷ್ಟ, ಇನ್ನು ಒಂದು ವಿಶಾಲ ಕಛೇರಿಗೆ ಬಾಡಿಗೆ ಖರ್ಚು ಉಳಿಯುವಂತಾದರೆ? ಮನೆಯಿಂದ ಒಂದಷ್ಟು ಉದ್ಯೋಗಿಗಳು ಕೆಲಸ ಮಾಡುವಂತಾದರೆ, ಕಛೇರಿಯ ಬಾಡಿಗೆಯೂ ಉಳಿಯುತ್ತದೆ, ವಿದ್ಯುತ್, ನೀರು, ಶುಚಿಗೊಳಿಸುವ ಖರ್ಚುಗಳೂ ಉಳಿಯುತ್ತವೆ.
ಉದ್ಯೋಗಿ ಸಂಪನ್ಮೂಲ
ನಾವೆಲ್ಲಾ ಒಂದು ಅಗ್ಗವಾದ ಮತ್ತು ದಕ್ಷ ಸಂಪನ್ಮೂಲವೊಂದನ್ನು ಕಡೆಗಣಿಸಿದ್ದೇವೆ. ಅದೆಂದರೆ ಅರ್ಧ-ದಿನ-ಕೆಲಸಗಾರರು ಅಥವಾ ಬಿಡುವಿನ ವೇಳೆ ಕೆಲಸ ಮಾಡುವ ಮಂದಿ. ಈ part time workforce ನ್ನು ನಾವು ಸಮರ್ಥವಾಗಿ ಉಪಯೋಗಿಸಿಕೊಳ್ಳಬೇಕಾದಲ್ಲಿ ಅವರ ಅನುಕೂಲಕರ ಸ್ಥಳದಿಂದ ಕೆಲಸ ಮಾಡುವ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ.
ಇಬ್ಬರು ಒಟ್ಟಿಗೆ ಕೆಲಸ ಮಾಡುವಾಗ ಅವರ ಮಧ್ಯೆ ಭಿನ್ನಾಭಿಪ್ರಾಯ ಸಹಜ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುವುದು ನನಗಂತೂ ಒಂದು ದೈನಿಕ ಧಾರವಾಹಿ. ಅದೇ ಆ ಇಬ್ಬರೂ ಮನೆಯಿಂದ ಕೆಲಸ ಮಾಡುವಂತಾದರೆ ಅವರ ಮಧ್ಯೆ ತಿಕ್ಕಾಟ ಬಹಳ ಕಡಿಮೆ. ಸಾಕಷ್ಟು colleague attrition ನ್ನು ಇದರಿಂದ ಕಡಿಮೆ ಮಾಡಬಹುದು.
ಬಂದ್/ನಿರ್ಬಂಧ ದಿನವೂ ಕೆಲಸ
ನಮ್ಮ ದೇಶದಲ್ಲಿ ವರ್ಷಕ್ಕೆ ನಾಲ್ಕು ಬಾರಿಯಾದರೂ ಬಂದ್ ಇದ್ದೇ ಇರುತ್ತದೆ, ಕೆಲವು ರಾಜ್ಯಗಳಲ್ಲಂತೂ ವಾರಕ್ಕೊಮ್ಮೆ ಬಂದ್/ನಿರ್ಬಂಧ. ಆ ಎಲ್ಲ ಸಂದರ್ಭಗಳಲ್ಲಿಯೂ ಸಂಸ್ಥೆಗಳು ಕೆಲಸ ನಿಲ್ಲಿಸಿ ನಷ್ಟ ತಂದುಕೊಳ್ಳಬೇಕಾಗುತ್ತದೆ. ಅದರ ಬದಲು ಸಂಸ್ಥೆಯ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿದರೆ ಆಗುವ ನಷ್ಟ ತಪ್ಪಿಸಬಹುದು.
ಇಷ್ಟೆಲ್ಲಾ ಲಾಭಗಳಿದ್ದಾಗ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವೇ ಉತ್ತಮ ಎನಿಸಬಹುದು. ಆದರೆ, ಕೆಲವೊಂದು ಋಣಾತ್ಮಕ(-ve) ಅಂಶಗಳೂ ಇವೆ. ಅದನ್ನು ಇಲ್ಲಿ ಓದಿ


Click it and Unblock the Notifications