For Quick Alerts
ALLOW NOTIFICATIONS  
For Daily Alerts

ಚಿನ್ನದ ಮೇಲೆ ಹೂಡಿಕೆ ಮಾಡಲು 5 ಕಾರಣಗಳು

ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಉತ್ತಮ ಪ್ರತಿಫಲ ಪಡೆಯುವುದು ಹೆಚ್ಚಿನ ಜನರ ಗುರಿಯಾಗಿರುತ್ತದೆ. ಆದರೆ ಕೆಲವೊಮ್ಮೆ ತಪ್ಪು ನಿರ್ಧಾರಗಳಿಂದ ಚಿನ್ನದ ಮೇಲಿನ ಹೂಡಿಕೆ ನಿರೀಕ್ಷಿತ ಫಲಿತಾಂಶ ನೀಡದೆಯೂ ಇರಬಹುದು.

By Siddu
|

ಚಿನ್ನದ ಮೇಲೆ ಹಣ ಹೂಡಿಕೆ ಮಾಡಿ ಉತ್ತಮ ಪ್ರತಿಫಲ ಪಡೆಯುವುದು ಹೆಚ್ಚಿನ ಜನರ ಗುರಿಯಾಗಿರುತ್ತದೆ. ಆದರೆ ಕೆಲವೊಮ್ಮೆ ತಪ್ಪು ನಿರ್ಧಾರಗಳಿಂದ ಚಿನ್ನದ ಮೇಲಿನ ಹೂಡಿಕೆ ನಿರೀಕ್ಷಿತ ಫಲಿತಾಂಶ ನೀಡದೆಯೂ ಇರಬಹುದು. ಇದರಿಂದ ಹೂಡಿದ ಬಂಡವಾಳಕ್ಕೆ ಪ್ರತಿಫಲ ಸಿಗದೆ ಅನೇಕ ಬಾರಿ ಗೊಂದಲವುಂಟಾಗುತ್ತದೆ.
ಹಾಗಾದರೆ ಚಿನ್ನದಲ್ಲಿ ಹಣ ಹೂಡುವಾಗ ಗಮನಿಸಬೇಕಾದ ಅಂಶಗಳು ಯಾವುವು? ಯಾವೆಲ್ಲ ಕಾರಣ ಹಾಗೂ ನಿರ್ದಿಷ್ಟ ಗುರಿಗಳನ್ನಿಟ್ಟುಕೊಂಡು ಚಿನ್ನದ ಮೇಲೆ ಹಣ ಹೂಡಿಕೆ ಮಾಡಬೇಕು ಎಂಬ ಕುರಿತು ಪ್ರಮುಖ ಐದು ಅಂಶಗಳನ್ನು ಅರಿತುಕೊಳ್ಳೋಣ.. ಚಿನ್ನಾಭರಣ ಪರಿಶುದ್ದತೆ ಅಳೆಯುವುದು ಹೇಗೆ?

ಹಣದುಬ್ಬರದಿಂದ ರಕ್ಷಣೆ

ಹಣದುಬ್ಬರದಿಂದ ರಕ್ಷಣೆ

ಹಣದುಬ್ಬರ ಹೆಚ್ಚಾದಂತೆಲ್ಲ ರೂಪಾಯಿಯ ಮೌಲ್ಯ ಕಡಿಮೆಯಾಗುತ್ತ ಹೋಗುವುದನ್ನು ನಾವೆಲ್ಲ ತಿಳಿದಿದ್ದೇವೆ. ಚಿನ್ನಕ್ಕೆ ಹೋಲಿಸಿದರೆ ದೀರ್ಘಾವಧಿಯಲ್ಲಿ ಜಗತ್ತಿನ ಬಹುತೇಕ ಎಲ್ಲ ಕರೆನ್ಸಿಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಲೇ ಬಂದಿವೆ. ಹೀಗಾಗಿಯೇ ಹಣದುಬ್ಬರದ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆಗಾಗಿ ಚಿನ್ನದ ರೂಪದಲ್ಲಿ ಹಣ ಇಟ್ಟುಕೊಳ್ಳಲು ಜನ ಬಯಸುತ್ತಾರೆ. ಯಾವುದೇ ಸಂದರ್ಭದಲ್ಲಿ ಹಣದುಬ್ಬರ ಎರಡಂಕಿ ದಾಟಿ ಹಾಗೆಯೇ ದೀರ್ಘಾವಧಿ ಮುಂದುವರಿದಾಗ ಚಿನ್ನದ ಮೇಲಿನ ಹೂಡಿಕೆ ಹಣದುಬ್ಬರದಿಂದುಂಟಾಗುವ ನಷ್ಟವನ್ನು ಸರಿದೂಗಿಸುವ ಕವಚವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಹಣದುಬ್ಬರದ ಪರಿಣಾಮ ಎದುರಿಸಲು ಚಿನ್ನದ ಮೇಲೆ ಹೂಡಿಕೆ ಮಾಡುವುದು ಸೂಕ್ತವಾಗಿದೆ.

ನಂಬಿಕಾರ್ಹ ಸಂಪತ್ತು

ನಂಬಿಕಾರ್ಹ ಸಂಪತ್ತು

ಚಿನ್ನ ಎಂಬುದು ಯಾವಾಗಲೂ ಒಂದು ನಂಬಿಕಾರ್ಹ ಸಂಪತ್ತಾಗಿದ್ದು, ಹೂಡಿಕೆದಾರರಿಗೆ ಸುರಕ್ಷತೆಯ ಭರವಸೆ ನೀಡುತ್ತದೆ. ಮತ್ತೊಂದು ವಿಶ್ವಾಸಾರ್ಹ ಹೂಡಿಕೆಯ ವಿಧಾನ ರಿಯಲ್ ಎಸ್ಟೇಟ್ ಆಗಿದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ರಿಯಲ್ ಎಸ್ಟೇಟ್‌ಗಿಂತ ಅತಿ ಸುಲಭ ಹಾಗೂ ಸರಳವಾಗಿರುವುದರಿಂದ ಇದು ಬಹುತೇಕ ಎಲ್ಲರಿಗೂ ಹೊಂದುವ ವಿಧಾನವಾಗಿದೆ. ಇನ್ನು ಡಿಜಿಟಲ್ ರೂಪದಲ್ಲಿ ಇಟ್ಟ ಹಣ ಹ್ಯಾಕ್ ಆಗಬಹುದು ಅಥವಾ ನಮಗೆ ಗೊತ್ತಿಲ್ಲದೆ ದುರ್ಬಳಕೆಗೀಡಾಗಬಹುದು. ಹೀಗಾಗಿ ಚಿನ್ನ ಕೊಳ್ಳುವುದು ಯಾವಾಗಲೂ ಸುರಕ್ಷಿತವೆನಿಸುತ್ತದೆ. ಆದರೂ ಚಿನ್ನದ ಮೇಲಿನ ಹೂಡಿಕೆಗೆ ಅದರದೇ ಆದ ರಿಸ್ಕ್‌ಗಳು ಸಹ ಇರುವುದನ್ನು ಗಮನಿಸುವುದು ಒಳಿತು.

ಹೂಡಿಕೆಯಲ್ಲಿನ ನಷ್ಟ ಸರಿದೂಗಿಸಲು

ಹೂಡಿಕೆಯಲ್ಲಿನ ನಷ್ಟ ಸರಿದೂಗಿಸಲು

ಇತರ ಸಂಪತ್ತುಗಳಿಗೆ ಹೋಲಿಸಿದರೆ ಚಿನ್ನದ ಮೇಲಾಗುವ ಆರ್ಥಿಕ ಬದಲಾವಣೆಗಳ ಪ್ರತಿಕೂಲ ಪರಿಣಾಮ ತುಂಬಾ ಕಡಿಮೆ ಇದೆ. ಹೀಗಾಗಿ ಬೇರೆ ವಿಧಾನಗಳಲ್ಲಿ ಹಣ ಹೂಡುವ ಸಂದರ್ಭದಲ್ಲಿ ಒಂದಂಶ ಚಿನ್ನದ ಮೇಲೆಯೂ ಹಣ ಹೂಡುವುದು ಉತ್ತಮ. ಆದರೂ ಒಂದು ಸಿದ್ಧಾಂತದ ಪ್ರಕಾರ ಪ್ರಮುಖ ಆಸ್ತಿಗಳ ಮೌಲ್ಯದಲ್ಲಿ ಆಗುವ ಬದಲಾವಣೆಗಳು ಚಿನ್ನದ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು.
ಕೆಲ ಆರ್ಥಿಕ ತಜ್ಞರ ಪ್ರಕಾರ, ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಸಂಭವಿಸಿದಾಗ ಚಿನ್ನ ಹಾಗೂ ಷೇರುಗಳ ಮೌಲ್ಯ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಚಲಿಸುವ ಸಾಧ್ಯತೆ ಇರುತ್ತದೆ. ಮಾರುಕಟ್ಟೆಯಲ್ಲಿ ಉಂಟಾಗುವ ಸ್ಥೂಲ ಹಾಗೂ ಸೂಕ್ಷ್ಮ ಆರ್ಥಿಕ ಏರುಪೇರುಗಳ ನಷ್ಟದಿಂದ ಚಿನ್ನವು ರಕ್ಷಣೆ ನೀಡುವ ಸಾಧನವಾಗುತ್ತದೆ. ಯಾವುದೇ ಸಂದರ್ಭದಲ್ಲಿ ಶೇರು ಮಾರುಕಟ್ಟೆಯಲ್ಲಿ ನಷ್ಟ ಸಂಭವಿಸಿದರೆ, ಆಗ ಚಿನ್ನದ ಮೇಲಿನ ಹೂಡಿಕೆ ಆ ನಷ್ಟವನ್ನು ಸರಿದೂಗಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸುಲಭ ನಗದೀಕರಣ

ಸುಲಭ ನಗದೀಕರಣ

ಕೆಲ ತುರ್ತು ಸಂದರ್ಭಗಳಲ್ಲಿ ಅವಶ್ಯಕತೆ ಬಿದ್ದಾಗ ಚಿನ್ನದ ಮೇಲಿನ ಹೂಡಿಕೆಯನ್ನು ತಕ್ಷಣ ನಗದೀಕರಿಸಿಕೊಳ್ಳಬಹುದು. ಆದರೆ ರಿಯಲ್ ಎಸ್ಟೇಟ್‌ನಲ್ಲಿನ ಹೂಡಿಕೆಯನ್ನು ನಗದೀಕರಿಸಿಕೊಳ್ಳುವುದು ಸುಲಭವಲ್ಲ. ಕೆಲ ಚಿನ್ನದ ಬಾಂಡ್‌ಗಳನ್ನು ಬಿಟ್ಟರೆ ಚಿನ್ನದ ಹೂಡಿಕೆಗೆ ಯಾವುದೇ ಲಾಕ್ ಇನ್ ಅವಧಿ ಇರುವುದಿಲ್ಲ. ಹೀಗಾಗಿ ಬೇಕಾದಾಗ ಚಿನ್ನವನ್ನು ನಗದಾಗಿ ಪರಿವರ್ತಿಸಿಕೊಳ್ಳಬಹುದು. ಆಯಾ ಕಾಲಕ್ಕೆ ಜಾರಿಯಲ್ಲಿರುವ ಕರೆನ್ಸಿ ಮೌಲ್ಯ, ಚಿನ್ನದ ಬೆಲೆ ಹಾಗೂ ನಮ್ಮ ಬಳಿ ಇರುವ ಚಿನ್ನದ ಶುದ್ಧತೆಯನ್ನು ಆಧರಿಸಿ ಅದರ ಮೌಲ್ಯ ನಿರ್ಧರಿಸಲ್ಪಡುತ್ತದೆ ಎಂಬುದು ತಿಳಿದಿರಲಿ.
ಚಿನ್ನದ ಬಾಂಡ್ ಇದ್ದರೆ, ಬಾಂಡ್ ಮುಕ್ತಾಯ ದಿನದ ಚಿನ್ನದ ಬೆಲೆಯನುಸಾರ ನಗದು ಮರಳಿ ಸಿಗುತ್ತದೆ. ಇನ್ನು ಅವಶ್ಯಕತೆ ಬಿದ್ದರೆ ಇದರ ಮೇಲೆ ಸಾಲವನ್ನು ಸಹ ಪಡೆಯಬಹುದು.

ರಾಜಕೀಯ ಸ್ಥಿತ್ಯಂತರದ ಪರಿಣಾಮ ಎದುರಿಸಲು

ರಾಜಕೀಯ ಸ್ಥಿತ್ಯಂತರದ ಪರಿಣಾಮ ಎದುರಿಸಲು

ಜಾಗತಿಕವಾಗಿ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ ತಲೆದೋರಿದಾಗ ಸಾಮಾನ್ಯವಾಗಿ ಚಿನ್ನದ ಮೌಲ್ಯ ಹೆಚ್ಚಾಗುತ್ತದೆ. ಇತ್ತೀಚೆಗೆ ಕೋರಿಯಾ ದೇಶದ ಅಣ್ವಸ್ತ್ರ ಪ್ರಹಸನದ ಸಂದರ್ಭದಲ್ಲಿ ಚಿನ್ನದ ಮೌಲ್ಯ ಹೆಚ್ಚಾಗಿದ್ದನ್ನು ನೋಡಬಹುದು.
ಎಂಜೆಲ್ ಬ್ರೋಕಿಂಗ್‌ನ ಇತರ ಸಂಪತ್ತು ಹಾಗೂ ಕರೆನ್ಸಿ ವಿಭಾಗದ ಮುಖ್ಯ ವಿಶ್ಲೇಷಕ ಪ್ರಥಮೇಶ ಮಲ್ಯ ಹೀಗೆ ಹೇಳುತ್ತಾರೆ-
ಜಾಗತಿಕ ರಾಜಕೀಯ ಬಿಕ್ಕಟ್ಟಿನ ಮಧ್ಯದಲ್ಲಿಯೂ ೨೦೧೮ ರಲ್ಲಿ ಚಿನ್ನದ ಮಾರುಕಟ್ಟೆ ಮೌಲ್ಯ ೧೩೦೦ ರಿಂದ ೧೩೬೦ ಡಾಲರ್‌ಗಳಾಗಿತ್ತು. ಈಗ ಬಿಕ್ಕಟ್ಟು ಸಾಕಷ್ಟು ಶಮನವಾಗಿರುವ ಸಂದರ್ಭದಲ್ಲಿಯೂ ಚಿನ್ನಕ್ಕೆ ೧೩೦೦ ಡಾಲರ್ ಮಟ್ಟದಲ್ಲಿ ಬೆಂಬಲದ ನಿರೀಕ್ಷೆ ಇದೆ. ಪ್ರಸ್ತುತ ಸ್ಥಳೀಯ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ೩೧ ಸಾವಿರ ರೂಪಾಯಿ ಮೌಲ್ಯ ನಿರೀಕ್ಷಿಸಬಹುದು. ಯುದ್ಧ ಅಥವಾ ಇನ್ನಾವುದೇ ರೀತಿಯ ಸ್ಥಿತ್ಯಂತರದ ಸಮಯದಲ್ಲಿ ಹಣದ ಬದಲಾಗಿ ಸುರಕ್ಷಿತ ಹೂಡಿಕೆಯಾಗಿ ಎಲ್ಲರೂ ಚಿನ್ನದ ಮೊರೆ ಹೋಗುವುದರಿಂದ ಇದರ ಮೌಲ್ಯ ಸಹಜವಾಗಿಯೇ ಹೆಚ್ಚಾಗುತ್ತದೆ.

English summary

Gold Investment: 5 Reasons to invest in gold

There are various reasons why people invest in gold to meet their financial goals.
Story first published: Friday, July 6, 2018, 13:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X