For Quick Alerts
ALLOW NOTIFICATIONS  
For Daily Alerts

ಫಂಡ್ ರೈಸಿಂಗ್ ಎಂಬ ಹೊಸ ಟ್ರೆಂಡ್; ಬ್ಯಾಂಕ್ ಗಳು ಸಹ ಇದರಿಂದ ಹೊರತಲ್ಲ

By ಕೆ.ಜಿ.ಕೃಪಾಲ್
|

ಸಂಪನ್ಮೂಲ ಸಂಗ್ರಹಣೆ (ಫಂಡ್ ರೈಸಿಂಗ್) ಎಂಬುದು ಈಗಿನ ಕಾರ್ಪೊರೇಟ್ ಗಳು ಜಪಿಸುತ್ತಿರುವ ಮಂತ್ರ. ಇದರಿಂದ ಬ್ಯಾಂಕ್ ಗಳು ಸಹ ಹೊರತಲ್ಲ. ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಗಳು ತಮ್ಮ ಅಗತ್ಯದ ಸಾಲವನ್ನು ಬ್ಯಾಂಕ್ ಗಳಿಂದ ಪಡೆಯಲು ಮುಂದಾಗದೆ ಬ್ಯಾಂಕ್ ಗಳಿಂದ ಪಡೆಯುವ ಸಾಲದ ಬಡ್ಡಿ ದರಕ್ಕಿಂತಲೂ ಕಡಿಮೆ ದರದಲ್ಲಿ ಸಾರ್ವಜನಿಕರಿಂದ ನಾನ್ ಕನ್ವರ್ಟಬಲ್ ಡಿಬೆಂಚರ್ ಮೂಲಕ ಸಂಗ್ರಹಿಸುತ್ತಿವೆ.

ವಿಶೇಷವಾಗಿ ಚಿನ್ನದ ಮೇಲೆ ಸಾಲ ನೀಡುವ ಕಂಪೆನಿಗಳು, ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳಾದ ಶ್ರೀರಾಮ್, ಸಿಟಿ ಯೂನಿಯನ್ ಫೈನಾನ್ಸ್, ಮ್ಯಾಗ್ಮಾ ಫಿನ್ ಕಾರ್ಪ್, ಜೆ ಎಂ ಫೈನಾನ್ಶಿಯಲ್ ಪ್ರಾಡಕ್ಟ್ಸ್ , ಎಲ್ ಅಂಡ್ ಟಿ ಫೈನಾನ್ಸ್ ಗಳು ಇತ್ತೀಚೆಗೆ ಸಂಪನ್ಮೂಲ ಸಂಗ್ರಹಣೆ ನಡೆಸಿವೆ.

 

ಸಾರ್ವಜನಿಕ ವಲಯದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಹ ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಮೂವತ್ತೆರಡು ಸಾವಿರ ಕೋಟಿ ನಿಧಿ ಸಂಗ್ರಹಣೆಯ ಗುರಿ ಹೊಂದಿದೆ. ಈಗ ಈ ಸಂಪನ್ಮೂಲ ಸಂಗ್ರಹಣೆಯ ಕಾರ್ಯಕ್ಕೆ ಬ್ಯಾಂಕ್ ಗಳು ಸಹ ಪ್ರಯತ್ನಿಸುತ್ತಿವೆ. ಯೆಸ್ ಬ್ಯಾಂಕ್ ತನ್ನ ಫಲಿತಾಂಶ ಪ್ರಕಟಿಸುತ್ತಿರುವಂತೆಯೇ ಸಾವಿರಾರು ಕೋಟಿ ಹಣವನ್ನು ಸಂಗ್ರಹಣೆ ಯೋಜನೆ ಪ್ರಕಟಿಸಿದೆ.

ಅದರಂತೆಯೇ ಆಕ್ಸಿಸ್ ಬ್ಯಾಂಕ್ ಸಹ ಮೂವತ್ತೈದು ಸಾವಿರ ಕೋಟಿ ಸಂಗ್ರಹಣೆಯ ಯೋಜನೆಯನ್ನು ತೇಲಿ ಬಿಟ್ಟಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಸಹ ಮೂರು ಸಾವಿರ ಕೋಟಿ ಹಣವನ್ನು ಸಂಗ್ರಹಿಸುವ ಗುರಿ ಹೊಂದಿದೆ. ಇನ್ನು ಸ್ಟಾರ್ಟ್ ಅಪ್ ಕಂಪೆನಿಗಳಂತೂ ಬಹಳಷ್ಟು ಸಂಗ್ರಹಣೆಗೆ ಮುಂದಾಗಿವೆ. ಎಲ್ಲಾ ವಲಯದ ಕಂಪೆನಿಗಳು ಸಹ ಸಂಪನ್ಮೂಲ ಸಂಗ್ರಹಣೆಗೆ ಆದ್ಯತೆ ನೀಡಿದಂತೆ ಕಾಣುತ್ತಿದೆ.

ಸರಕಾರಿ ಯೋಜನೆಗಳಿಗೆ ಬ್ಯಾಂಕ್ ಗಳು ಸೀಮಿತವಾಗಬಹುದು

ಸರಕಾರಿ ಯೋಜನೆಗಳಿಗೆ ಬ್ಯಾಂಕ್ ಗಳು ಸೀಮಿತವಾಗಬಹುದು

ಸಾರ್ವಜನಿಕವಾಗಿ ಸಂಪನ್ಮೂಲ ಸಂಗ್ರಹಣಾ ಕಾರ್ಯ ಸಾಗುತ್ತಿರುವ ವೇಗ, ಗಾತ್ರವನ್ನು ಕಂಡಾಗ ಮುಂದಿನ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ಉದ್ಯಮಗಳಿಂದ ಸಾಲದ ಬೇಡಿಕೆ ಕಡಿಮೆಯಾಗಿ, ಅವು ಕೇವಲ ಸರಕಾರಿ ವಲಯದ ಯೋಜನೆಗಳಿಗೆ, ವೈಯಕ್ತಿಕ ಸಾಲಗಳು, ಗೃಹ ಸಾಲಗಳು ಮುಂತಾದ ರಿಟೇಲ್ ಸಾಲಗಳಿಗೆ ಮಾತ್ರ ಸೀಮಿತವಾಗುವುದೇ ಎಂಬ ಅನುಮಾನ ಮೂಡಿಸುತ್ತದೆ. ಇದರೊಂದಿಗೆ ಮತ್ತೊಂದು ಆತಂಕಕಾರಿ ಅಂಶವೆಂದರೆ, ಪೇಟೆಯಲ್ಲಿ ಕಾರ್ಪೊರೇಟ್ ಗಳು ತೇಲಿ ಬಿಡುತ್ತಿರುವ ಈ ಬಾಂಡ್ ಗಳ ಯೋಜನೆಗಳು ಸೆಕ್ಯೂರ್ಡ್ ಎಂಬ ತಲೆಬರಹದೊಡನೆ, ಆಕರ್ಷಕ ಬಡ್ಡಿದರದೊಡನೆ ಬರುವುದರಿಂದ ಜನಸಾಮಾನ್ಯರು ಅದಕ್ಕೆ ಮರುಳಾಗುವುದು ಸಹಜ. ಇಲ್ಲಿ ಹೂಡಿಕೆದಾರರು ಗಮನದಲ್ಲಿಡಬೇಕಾದ ಅಂಶವೆಂದರೆ ಸೆಕ್ಯೂರ್ಡ್ ಎಂಬುದು ಕಂಪೆನಿಗೆ ಮಾತ್ರ ಸೀಮಿತವಾಗಿದ್ದು, ಕಂಪೆನಿಯು ಆರ್ಥಿಕ ತೊಂದರೆಗೆ ಒಳಗಾದರೆ ಆ ಸಂದರ್ಭದಲ್ಲಿ ಸೆಕ್ಯೂರ್ಡ್ ಎಂಬುದು ಬ್ಯಾಂಕ್ ನ ಸ್ವತ್ತಿಗೆ ಮಾತ್ರ ಸೀಮಿತವಾಗಿದ್ದು, ಅದು ಸಾಲದೇ ಹೋದರೆ ಹೂಡಿಕೆ ಹಣ ಆಪತ್ತಿಗೆ ಸಿಕ್ಕಿದಂತೆಯೇ ಸರಿ. ಆದ್ದರಿಂದ ಹೂಡುವ ಮೊದಲು ಕಂಪೆನಿಯ ಅರ್ಹತೆ, ಘನತೆ ಮುಂತಾದವುಗಳ ಬಗ್ಗೆ ಅರಿತು ನಿರ್ಧರಿಸಬೇಕು.

ಮೂರು ಲಕ್ಷ ಕೋಟಿಯನ್ನು ಹಿಂತಿರುಗಿಸಬೇಕು
 

ಮೂರು ಲಕ್ಷ ಕೋಟಿಯನ್ನು ಹಿಂತಿರುಗಿಸಬೇಕು

ಕೇವಲ ಅಲಂಕಾರಿಕ ಶಬ್ದಗಳಿಗೆ ಮಾರು ಹೋಗದಂತೆ ಎಚ್ಚರ ವಹಿಸುವುದು ಅತಿ ಮುಖ್ಯ. ಕಂಪೆನಿಗಳು ವಿಶೇಷವಾಗಿ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳು ಅತಿಯಾದ ಸಾಲಗಳನ್ನು ವಿವಿಧ ರೂಪದಲ್ಲಿ ಪಡೆದುಕೊಂಡಿವೆ. ಅದರಲ್ಲಿ ಮುಂದಿನ ದಿನಗಳಲ್ಲಿ ಈ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳು ಮುಂದಿನ ಮೂರು ತಿಂಗಳಲ್ಲಿ ಸುಮಾರು ಮೂರು ಲಕ್ಷ ಕೋಟಿ ಹಣವನ್ನು ಮ್ಯುಚುಯಲ್ ಫಂಡ್ ಗಳಿಂದ ಪಡೆದಿರುವ ಸಾಲದ ಹಣವನ್ನು ಹಿಂದಿರುಗಿಸಬೇಕಾಗಿದೆ. ಇದರಲ್ಲಿ ಸುಮಾರು ಎಪ್ಪತ್ತೈದು ಸಾವಿರ ಕೋಟಿಯಷ್ಟು ಡೆಟ್ ಫಂಡ್ ಗಳಿಂದ ಪಡೆದುಕೊಂಡಿದೆ. ಈ ಮಧ್ಯೆ ಕೆಲವು ಸದೃಢ ಕಂಪೆನಿಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಅಧಿಕ ಆದಾಯ ಪಡೆಯಬಹುದೆಂಬ ಉದ್ದೇಶದಿಂದ ಕಾರ್ಪೊರೇಟ್ ಡಿಪಾಜಿಟ್ ಗಳ ಮೂಲಕ ಬೇರೆ ಕಂಪೆನಿಗಳಿಗೆ ನೀಡಿದ್ದು, ಆ ಕಂಪೆನಿಗಳು ಆಪತ್ತಿಗೆ ಸಿಲುಕಿಕೊಂಡಾಗ ಈ ಕಾರ್ಪೊರೇಟ್ ಡಿಪಾಜಿಟ್ ಗಳು ಸಹ ಅಪಾಯಕ್ಕೊಳಗಾಗುತ್ತವೆ. ಹೀಗೆ ತನ್ನ ತಪ್ಪಿಲ್ಲದಿದ್ದರೂ ಹೊರಗಿನ ಕಾರಣಕ್ಕೆ ಹಣ ಕಳೆದುಕೊಳ್ಳುವ ಸಾಧ್ಯತೆಗಳು ಇವೆ.

ಮುಖ ಬೆಲೆಗಿಂತ ಕಡಿಮೆ ಬೆಲೆಗೆ ವಹಿವಾಟು

ಮುಖ ಬೆಲೆಗಿಂತ ಕಡಿಮೆ ಬೆಲೆಗೆ ವಹಿವಾಟು

ಸೆಕ್ಯೂರ್ಡ್ ಎಂಬುದು ಎಷ್ಟರ ಮಟ್ಟಿಗೆ ಸೆಕ್ಯೂರ್ಡ್ ಎಂಬುದಕ್ಕೆ ಬಾಂಡ್/ ಎನ್ ಸಿಡಿ ಪೇಟೆಯಲ್ಲಿ ಅವುಗಳ ಬೆಲೆ ಹೇಗಿರುತ್ತದೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ನ ರೂ.1,000 ಮುಖಬೆಲೆಯ ಬಾಂಡ್ ಗಳು ಒಂದೊಂದು ಸಿರೀಸ್ ಒಂದೊಂದು ರೀತಿಯ ಬೆಲೆಯನ್ನು ಪ್ರದರ್ಶಿಸುತ್ತಿದ್ದರೂ ಹೆಚ್ಚಿನವು ಮುಖಬೆಲೆಗಿಂತ ಕಡಿಮೆ ಬೆಲೆಗೆ ವಹಿವಾಟಾಗುತ್ತಿವೆ. ದಿವಾನ್ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆ ಸತತವಾಗಿ ಕುಸಿತ ಕಂಡಾಗ 8.65% ಬಡ್ಡಿದರದ ಬಾಂಡ್ ಗಳು ರೂ.611ರವರೆಗೂ ಕುಸಿದಿತ್ತು. 8.93% ಬಡ್ಡಿ ನೀಡುವ ದಿವಾನ್ ಹೌಸಿಂಗ್ ಫೈನಾನ್ಸ್ ಎನ್ ಸಿಡಿಗಳು ಫೆಬ್ರವರಿಯಲ್ಲಿ ರೂ.546 ರವರೆಗೂ ಇಳಿಕೆ ಕಂಡಿದ್ದರೆ, ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಇದರ ಬೆಲೆ ರೂ.481 ರವರೆಗೂ ಕುಸಿದಿತ್ತು. ಅಂದರೆ ಸುಮಾರು ಅರ್ಧದಷ್ಟು ಹೂಡಿಕೆ ಕರಗಿತ್ತು. ಇದೆ ರೀತಿ ಕೆಲವು ಶ್ರೇಯ್ ಇನ್ಫ್ರಾ, ಇಂಡಿಯಾ ಬುಲ್ ಕ್ರೆಡಿಟ್, ಎಡೆಲ್ವಿಸ್ ರಿಟೇಲ್ ಫೈನಾನ್ಸ್, ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್, ಐಎಫ್ ಸಿಐ ನಂತಹ ಕಂಪೆನಿಗಳ ಎನ್ ಸಿಡಿಗಳು ಮುಖಬೆಲೆಗಿಂತ ಕಡಿಮೆಬೆಲೆಗೆ ವಹಿವಾಗಿ ಹೂಡಿಕೆ ಹಣವು ಕರಗುವುದನ್ನು ಕಣ್ಣಿಗೆ ಗೋಚರವಾಗುತ್ತದೆ. ಸೆಕ್ಯೂರ್ಡ್ ಎಂಬುದು ಯಾವುದೇ ರೀತಿಯ ಗ್ಯಾರಂಟಿ ಒದಗಿಸುವುದಿಲ್ಲ.

ಆಕರ್ಷಕ ಬಡ್ಡಿ ದರಗಳು

ಆಕರ್ಷಕ ಬಡ್ಡಿ ದರಗಳು

ಬ್ಯಾಂಕ್ ಗಳು ಸಹ ತಮ್ಮ ಬೇಸಲ್ 3 ನಾರ್ಮ್ಸ್ ಅಗತ್ಯಕ್ಕಾಗಿ ಆಕರ್ಷಕ ಬಡ್ಡಿ ದರಗಳಲ್ಲಿ ಎನ್ ಸಿಡಿಗಳನ್ನು ವಿತರಿಸಿವೆ. ಅವುಗಳಲ್ಲಿ ಹೆಚ್ಚಿನವು ಸ್ವಲ್ಪ ಪ್ರೀಮಿಯಂನಲ್ಲಿ ಲಭ್ಯವಿರುತ್ತವೆ. ಅವುಗಳೆಂದರೆ ಕರ್ನಾಟಕ ಬ್ಯಾಂಕ್ ಶೇ.12ರಂತೆ, ಕರೂರ್ ವೈಶ್ಯ ಬ್ಯಾಂಕ್ ಶೇ.11.95ರಂತೆ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶೇ.11.7ರಂತೆ, ಎಸ್ ಬಿಐ ಶೇ.9.37 ಬಡ್ಡಿ ದರ ಹೊಂದಿರುವಂತೆ ಇತರೆ ಬ್ಯಾಂಕ್ ಗಳಾದ ಯೆಸ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಗಳು ಸಹ ವಿವಿಧ ಬಡ್ಡಿ ದರಗಳಲ್ಲಿ ಎನ್ ಸಿಡಿಗಳು ವಿತರಿಸಿದ್ದು, ಕೆಲವು ಆಫ್ ಮಾರ್ಕೆಟ್ ನಲ್ಲಿ ಖರೀದಿಸಬಹುದಾಗಿದೆ. ಕೆಲವೊಮ್ಮೆ ಬಾಂಡ್ ಗಳು ವಿತರಣೆಯ ಸಂದರ್ಭದಲ್ಲಿ, ವಿತರಣಾ ಪತ್ರದಲ್ಲಿ ಈ ಬಾಂಡ್ ಗಳು ವಹಿವಾಟಿಗೆ ಎಕ್ಸ್ ಚೇಂಜ್ ನಲ್ಲಿ ನೊಂದಾಯಿಸಿಕೊಳ್ಳುತ್ತವೆ ಎಂಬುದು ಸಹ ಯಾವುದೇ ಗ್ಯಾರಂಟಿ ಒದಗಿಸುವುದಿಲ್ಲ. ಕಾರಣ ಏನೆಂದರೆ,

ಕೊಳ್ಳುವವರು ಅತಿಯಾದ ಕಡಿಮೆ ಬೆಲೆಗೆ ಮತ್ತು ಮಾರಾಟ ಮಾಡುವವರು ಅತಿ ಹೆಚ್ಚಿನ ಬೆಲೆಗೆ ಟ್ರೇಡಿಂಗ್ ಸ್ಕ್ರೀನ್ ನಲ್ಲಿ ನೊಂದಾಯಿಸಿಕೊಂಡಿರುತ್ತಾರೆ. ಇದು ಟ್ರೇಡ್ ಆಗಿ ಪರಿವರ್ತಿತವಾಗುವುದು ಅತಿ ವಿರಳವಾಗಿರುತ್ತದೆ. ಒಟ್ಟಿನಲ್ಲಿ ನಮ್ಮ ಹಣವನ್ನು ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾದಲ್ಲಿ ವಿವಿಧ ಆಯಾಮಗಳಲ್ಲಿ ಆ ಯೋಜನೆಗಳನ್ನು ಪರಿಶೀಲಿಸಿ ನಂತರ ನಿರ್ಧರಿಸಬೇಕು. ಇಂದಿನ ಪರಿಸ್ಥಿತಿ ನಾಳೆಗೆ ಮುಂದುವರಿಯುತ್ತದೆ ಎನ್ನುವ ದಿನಗಳಲ್ಲ, ಸಾಂದರ್ಭಿಕ ಬದಲಾವಣೆಗಳು ಹೆಚ್ಚು ಪ್ರಭಾವಿಯಾಗಿರುತ್ತದೆ. ಅವಶ್ಯವಿದ್ದಲ್ಲಿ ತಜ್ಞರ ಸಲಹೆಯನ್ನು ಪಡೆಯಿರಿ.

English summary

Fund raising new trend; there is no exemption to banks

Corporate houses recently not going for banks for loans. Instead of that raising funds by various methods. Here is the interesting details about recent trend fund raising, which is explained by K.G.Krupal.
Company Search
COVID-19
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more