ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯತ್ತ ಬಹಳಷ್ಟು ಜನ ಆಕರ್ಷಿತರಾಗುತ್ತಿದ್ದಾರೆ. ದೊಡ್ಡ ಮಾರುಕಟ್ಟೆ ಬಂಡವಾಳದಾರರು ಸಹ ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್‌ಗಳತ್ತ ಗಮನ ಹರಿಸುತ್ತಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿರುವುದು ಸಂತಸದ ಸಂಗತಿಯಾಗಿದೆ. ವಿವಿಧ ಸಂವಹನ ಮಾಧ್ಯಮಗಳಾದ ಟಿವಿ, ಸೋಷಿಯಲ್ ಮೀಡಿಯಾ, ರೇಡಿಯೊ ಅಥವಾ ಇಂಟರನೆಟ್ ಹೀಗೆ ಎಲ್ಲ ರೀತಿಯ ಮಾಧ್ಯಮಗಳ ಸಹಾಯದಿಂದ ಇದರ ಬಗ್ಗೆ ಸಾಕಷ್ಟು ಜ್ಞಾನ ಸಾರ್ವಜನಿಕರಿಗೆ ಲಭಿಸುವಂತಾಗಿದೆ. ಇದರ ಪರಿಣಾಮವಾಗಿಯೇ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯತ್ತ ಬಹಳಷ್ಟು ಜನ ಆಕರ್ಷಿತರಾಗುತ್ತಿದ್ದಾರೆ. ದೊಡ್ಡ ಮಾರುಕಟ್ಟೆ ಬಂಡವಾಳದಾರರು ಸಹ ಇತ್ತೀಚಿನ ದಿನಗಳಲ್ಲಿ ಮ್ಯೂಚುವಲ್ ಫಂಡ್‌ಗಳತ್ತ ಗಮನ ಹರಿಸುತ್ತಿದ್ದಾರೆ.
ಆದಾಗ್ಯೂ ಹಲವಾರು ಹೂಡಿಕೆದಾರರು ಇದರ ಬಗ್ಗೆ ಸಾಕಷ್ಟು ತಿಳಿದುಕೊಂಡು ಚರ್ಚೆ ಮಾಡುತ್ತಾರೆ ವಿನಃ ಇವುಗಳಲ್ಲಿ ಹೂಡಿಕೆ ಮಾಡಲು ಇನ್ನೂ ಹಿಂಜರಿಯುತ್ತಾರೆ. ಹಾಗಾದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಗೆ ಹಿಂಜರಿಯಲು ಕಾರಣಗಳೇನೆಂದು ನೋಡುತ್ತ ಹೊರಟರೆ ಕೆಲ ಅಂಶಗಳು ಪ್ರಮುಖವಾಗಿ ಗೋಚರಿಸುತ್ತವೆ. ಬೆಸ್ಟ್ ಮ್ಯೂಚುವಲ್ ಫಂಡ್‌ಗಳ ಆಯ್ಕೆ ಮಾಡೋದು ಹೇಗೆ?
ಮ್ಯೂಚುವಲ್ ಫಂಡ್ ಹೂಡಿಕೆಗೆ ಹಿಂಜರಿಯಲು ಕಾರಣ
1. ಏಕಗಂಟಿನಲ್ಲಿ ಹೂಡಿಕೆ ಮಾಡಲು ಅಷ್ಟೊಂದು ಸೂಕ್ತವಲ್ಲ.
2. ಯಾವಾಗ ಮಾರ್ಕೆಟ್ ಪ್ರವೇಶಿಸುವುದು ಹಾಗೂ ನಿರ್ಗಮಿಸುವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು.
3. ಹಣವನ್ನು ತೊಡಗಿಸಿ ಲಾಕ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.
4. ಮ್ಯೂಚುವಲ್ ಫಂಡ್ ಹೂಡಿಕೆಯ ಅಪಾಯಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು.
ಎಲ್ಲದಕ್ಕೂ ಪರಿಹಾರ ಸಿಪ್ (Systematic Investment Plan)
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಸಿಪ್ (ವ್ಯವಸ್ಥಿತ ಹೂಡಿಕೆ ಯೋಜನೆ) ಮಾರ್ಗ ಅತ್ಯಂತ ಸೂಕ್ತವಾಗಿದೆ. ಸಿಪ್‌ನ ವಿಶೇಷತೆಗಳು ಹೀಗಿವೆ:
1. ಮಾಸಿಕ ಅತಿ ಕನಿಷ್ಠ ೫೦೦ ರೂಪಾಯಿಗಳೊಂದಿಗೆ ಹೂಡಿಕೆ ಆರಂಭಿಸಬಹುದು.
2. ನಿಯಮಿತವಾಗಿ ಹೂಡಿಕೆ ಮಾಡುವುದರಿಂದ ಮಾರುಕಟ್ಟೆಯ ಸ್ಥಿತಿಗತಿಗಳ ಬಗ್ಗೆ ಚಿಂತೆ ಮಾಡಬೇಕಿಲ್ಲ.
3. ಓಪನ್ ಎಂಡೆಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಬೇಕಾದಾಗ ಹಣ ಹಿಂಪಡೆಯಬಹುದು.
4. ಸಿಪ್ ಎಂಬುದು ಅತ್ಯಂತ ಸುಲಭ ಹಾಗೂ ಸರಳ ಹೂಡಿಕೆ ಯೋಜನೆಯಾಗಿದೆ. ಇದಕ್ಕಾಗಿ ನೀವು ಮಾರುಕಟ್ಟೆಯ ವಿಶೇಷ ಪರಿಣಿತಿ ಹೊಂದಿರಬೇಕಿಲ್ಲ.
ಹೂಡಿಕೆದಾರರಾಗಿ ನೀವು ಸಿಪ್ ಬಗ್ಗೆ ಸಾಕಷ್ಟು ಕೇಳಿರಬಹುದು. ಆದರೆ ಸಿಪ್ ಎಂಬುದು ಒಂದು ನಿರ್ದಿಷ್ಟ ಹೂಡಿಕೆ ಯೋಜನೆಯಾಗಿರದೆ ಇದೊಂದು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ವಿಧಾನವಾಗಿದೆ ಎಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು.
ಸಿಪ್ ಎಂದರೆ ಏನು?
ನಿರ್ದಿಷ್ಟವಾಗಿ ನೋಡುವುದಾದರೆ, ಸಿಪ್ ಮೂಲಕ ನೀವು ನಿಯಮಿತವಾಗಿ (ಮಾಸಿಕ ಅಥವಾ ತ್ರೈಮಾಸಿಕ) ನಿಮ್ಮ ಆಯ್ಕೆಯ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ (ತಿಂಗಳಿಗೆ 500 ರಿಂದ 1000 ರೂಪಾಯಿಗಳಿಂದ ಆರಂಭಿಸಿ) ಮಾಡಲಾರಂಭಿಸುವಿರಿ. ಇದೊಂದು ರೀತಿಯಲ್ಲಿ ಸಂಚಿತ ಠೇವಣಿ ಅಥವಾ ರೆಕರಿಂಗ್ ಡಿಪಾಸಿಟ್ ರೂಪದಲ್ಲಿಯೇ ಕೆಲಸ ಮಾಡುತ್ತದೆ. ಆದರೆ ಸಿಪ್‌ನಲ್ಲಿನ ಪ್ರತಿಫಲಗಳು ಮಾರುಕಟ್ಟೆ ಆಧರಿತವಾಗಿರುತ್ತವೆ ಎಂಬುದೇ ಪ್ರಮುಖ ವ್ಯತ್ಯಾಸವಾಗಿದೆ.
ಬೃಹತ್ ಮೊತ್ತದ ಹೂಡಿಕೆಗಿಂತ ಸಿಪ್ ಹೇಗೆ ವಿಭಿನ್ನ?
ಏಕಗಂಟಿನಲ್ಲಿ ಹೂಡಿಕೆ ಮಾಡುವಾಗ ನೀವು ಒಮ್ಮೆಲೇ ದೊಡ್ಡ ಮೊತ್ತವನ್ನು ತೊಡಗಿಸಿ ಯೂನಿಟ್‌ಗಳನ್ನು ಕೊಳ್ಳುವಿರಿ. ಉದಾಹರಣೆಗೆ ನೀವು 20 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಲು ಬಯಸಿದಲ್ಲಿ ಅಂದಿನ ಮಾರುಕಟ್ಟೆ ಆಧರಿಸಿದ ಎನ್‌ಎವಿ ದರದಲ್ಲಿ ಅಷ್ಟು ಮೊತ್ತದ ಯೂನಿಟ್‌ಗಳನ್ನು ಖರೀದಿಸುವಿರಿ. ಒಂದು ವೇಳೆ ಆ ನಿರ್ದಿಷ್ಟ ಸಮಯದಲ್ಲಿ ಪ್ರತಿ ಯೂನಿಟ್ ಎನ್‌ಎವಿ ದರ 20 ರೂಪಾಯಿಗಳಾಗಿದ್ದಲ್ಲಿ ನಿಮಗೆ 1000 ಯೂನಿಟ್‌ಗಳು ಸಿಗುತ್ತವೆ.
ಆದರೆ ಸಿಪ್ ಅಥವಾ ಸಿಸ್ಟೆಮ್ಯಾಟಿಕ್ ಇನ್ವೆಸ್ಟಮೆಂಟ್ ಪ್ಲ್ಯಾನ್‌ನಲ್ಲಿ ನೀವು ಒಂದೇ ಬಾರಿಗೆ ಹೂಡಿಕೆ ಮಾಡದೆ ನಿಯಮಿತವಾಗಿ ಚಿಕ್ಕ ಮೊತ್ತಗಳನ್ನು ಪಾವತಿಸುತ್ತ ಹೋಗುವಿರಿ. ಅಂದರೆ ಇದರಲ್ಲಿ ಮಾಸಿಕ ಆಧಾರದಲ್ಲಿ ನೀವು ಯೂನಿಟ್‌ಗಳನ್ನು ಕೊಂಡಂತಾಗುವುದು.
ಮಾರುಕಟ್ಟೆ ಏರಿಕೆಯಲ್ಲಿದ್ದಾಗ ಕಡಿಮೆ ಯೂನಿಟ್ ಹಾಗೂ ಮಾರುಕಟ್ಟೆ ಕೆಳಮಟ್ಟದಲ್ಲಿದ್ದಾಗ ಹೆಚ್ಚು ಯೂನಿಟ್‌ಗಳು ನಿಮಗೆ ಲಭಿಸುತ್ತವೆ. ಹೀಗಾಗಿ ಹೂಡಿಕೆ ಅವಧಿಯ ಕೊನೆಯಲ್ಲಿ ಸಂಚಿತವಾಗಿ ಲೆಕ್ಕ ಹಾಕಿದಲ್ಲಿ ಸಿಪ್ ಮೂಲಕ ಹೂಡಿಕೆ ಮಾಡಿದಾಗ ಏಕಗಂಟಿನ ಹೂಡಿಕೆಗಿಂತ ಹೆಚ್ಚು ಯೂನಿಟ್‌ಗಳು ನಿಮಗೆ ಲಭಿಸುವ ಸಾಧ್ಯತೆಗಳಿರುತ್ತವೆ. ಇದನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿಯಲು ವಿವರಣೆ ನೋಡಿ.
ಒಬ್ಬ ಹೂಡಿಕೆದಾರ ಸಿಪ್ ಮೂಲಕ ಹೂಡಿಕೆ ಮಾಡಿದಾಗ 267 ಯೂನಿಟ್ ಖರೀದಿಸುತ್ತಾನೆ ಎಂದಿಟ್ಟುಕೊಂಡಲ್ಲಿ ಅಷ್ಟೇ ಮೊತ್ತವನ್ನು ಏಕಗಂಟಿನಲ್ಲಿ ಹೂಡಿಕೆ ಮಾಡಿದವನಿಗೆ ಇದಕ್ಕೂ ಕಡಿಮೆ ಯೂನಿಟ್‌ಗಳು ಸಿಗಬಹುದು.
ಸಿಪ್ ಹೂಡಿಕೆ ಆರಂಭಿಸುವುದು ಹೇಗೆ?
ಹಂತ 1: ಎಲ್ಲದಕ್ಕೂ ಮೊದಲು ನಿಮ್ಮ ಕೆವೈಸಿ ಮಾಡಿಸಿಕೊಳ್ಳಿ
ಸಿಪ್‌ನಲ್ಲಿ ಹೂಡಿಕೆ ಆರಂಭಿಸುವ ಮುನ್ನ ನೀವು ಕೆವೈಸಿ ಅರ್ಹತೆ ಪಡೆದುಕೊಂಡಿರಬೇಕು. ಇದಕ್ಕಾಗಿ ಕೆವೈಸಿ ಫಾರ್ಮ ತುಂಬಿ ಅದರೊಂದಿಗೆ ನಿಮ್ಮ ವಿಳಾಸ ಪುರಾವೆ, ಗುರುತಿನ ಪುರಾವೆ ಹಾಗೂ ಒಂದು ಪಾಸಪೋರ್ಟ್ ಸೈಜಿನ ಫೋಟೊ ನೀಡಬೇಕು. ಇದು ಕೇವಲ ಒಂದು ಬಾರಿ ಮಾಡುವ ಪ್ರಕ್ರಿಯೆಯಾಗಿದೆ. ಇದನ್ನು ಆನ್ಲೈನ್ ಮೂಲಕ ಇ-ಕೆವೈಸಿ ಪೋರ್ಟಲ್‌ನಲ್ಲಿಯೇ ಮಾಡಬಹುದು.
ಹಂತ 2: ಸೂಕ್ತವಾದ ಫಂಡ್ ಆಯ್ದುಕೊಳ್ಳಿ
ಅಸೆಟ್ ಮ್ಯಾನೇಜಮೆಂಟ್ ಕಂಪನಿಗಳು ಅಥವಾ ಮಧ್ಯವರ್ತಿ ಕಂಪನಿಗಳ ಮೂಲಕ ನೀವು ನೇರವಾಗಿ ಸಿಪ್‌ನಲ್ಲಿ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಯಾವ ಫಂಡ್ ಆಯ್ದುಕೊಳ್ಳಬೇಕು ಎಂಬುದನ್ನು ಮಾತ್ರ ಜಾಣತನದಿಂದ ನಿರ್ಧರಿಸಬೇಕಾಗುತ್ತದೆ. ಹೂಡಿಕೆಯ ಸಲಹಾ ಕಂಪನಿಗಳ ಸಹಾಯ ಪಡೆದಲ್ಲಿ ಈ ಕೆಲಸ ಸುಲಭವಾಗುವುದು. ಇಕ್ವಿಟಿ, ಡೆಬ್ಟ್ ಅಥವಾ ಇನ್ನಾವುದೇ ಫಂಡ್‌ನಲ್ಲಿ ಹೂಡಿಕೆ ಮಾಡುವ ಬಗ್ಗೆ ಅವರು ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಮಾರುಕಟ್ಟೆಯಲ್ಲಿರುವ ಎಲ್ಲ ರೀತಿಯ ಫಂಡ್‌ಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ ನಂತರ ಅದರ ಪ್ರತಿಫಲಗಳನ್ನು ಆಧರಿಸಿ ನಿಮಗೆ ಹೊಂದುವ ಫಂಡ್ ಅನ್ನು ಅವರು ಸಲಹೆ ನೀಡಬಲ್ಲರು. ನಿಮ್ಮ ಹೂಡಿಕೆಯ ಮೊತ್ತ ಹಾಗೂ ಎಷ್ಟು ಅವಧಿಯವರೆಗೆ ನೀವು ಹೂಡಿಕೆ ಮಾಡಲು ಬಯಸುವಿರಿ ಹಾಗೂ ನಿಮ್ಮ ರಿಸ್ಕ್ ಅಂಶಗಳನ್ನು ಅವರು ಈ ಸಂದರ್ಭದಲ್ಲಿ ಗಣನೆಗೆ ತೆಗೆದುಕೊಳ್ಳುವರು. ಅಂದರೆ ಅವರು ನಿಮಗಾಗಿ ಹೋಂವರ್ಕ್ ಮಾಡುವರು. ಅವರೇ ನಿಮ್ಮ ಕೆವೈಸಿ ಮಾಡಿಸಿ, ಫಾರ್ಮ ತುಂಬಿಸಿ ಹೂಡಿಕೆಯನ್ನು ಸುಲಭಗೊಳಿಸುತ್ತಾರೆ.
ಹಂತ 3: ಮಾಸಿಕ ಹೂಡಿಕೆಯ ಮೊತ್ತ ನಿರ್ಧರಿಸಿ
ನೀವು ಎಷ್ಟು ಮೊತ್ತವನ್ನು ಹೂಡಿಕೆ ಮಾಡಲು ಬಯಸುವಿರಿ ಎಂಬುದನ್ನು ಫಾರ್ಮನಲ್ಲಿ ನಮೂದಿಸಬೇಕಾಗುತ್ತದೆ. ಒಂದು ವೇಳೆ ನಿರ್ದಿಷ್ಟ ಮೊತ್ತದ ಪ್ರತಿಫಲ ಪಡೆಯಲು ನೀವು ಬಯಸುತ್ತಿದ್ದಲ್ಲಿ ಅದಕ್ಕಾಗಿ ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಆನ್ಲೈನ್ ಕ್ಯಾಲ್ಕುಲೇಟರ್ ಮೂಲಕ ಲೆಕ್ಕ ಹಾಕಬಹುದು. ಈ ಸಂದರ್ಭದಲ್ಲಿ ಸಹ ಹೂಡಿಕೆ ಸಲಹಾ ಕಂಪನಿಗಳು ನಿಮಗೆ ಸಹಾಯ ಮಾಡಬಲ್ಲವು. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?
ಹಂತ 4: ಹೂಡಿಕೆಯ ದಿನಾಂಕ ನಿರ್ಧರಿಸಿ
ನೀವು ಮಾಸಿಕವಾಗಿ ಹೂಡಿಕೆ ಮಾಡಲು ಬಯಸುವಿರೋ ಅಥವಾ ತ್ರೈಮಾಸಿಕವಾಗಿ ಹೂಡಿಕೆ ಮಾಡಲು ಬಯಸುವಿರೋ ಎಂಬುದನ್ನು ಮೊದಲು ನಿರ್ಧರಿಸಿ. ನಂತರ ಯಾವ ತಾರೀಕಿನಂದು ಹೂಡಿಕೆ ಮಾಡಲು ಸಾಧ್ಯ ಎಂಬುದನ್ನು ನಿರ್ಧರಿಸಿ. ಈ ರೀತಿ ಆಯ್ಕೆ ಮಾಡುವ ಹೂಡಿಕೆ ತಾರೀಕನ್ನು ನಂತರ ಬದಲಾಯಿಸಲು ಸಾಧ್ಯವಿಲ್ಲವಾದ್ದರಿಂದ ಯೋಚಿಸಿ ನಿರ್ಧರಿಸಿ. ಈ ರೀತಿಯ ಹೂಡಿಕೆಯನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಆಟೊ ಡೆಬಿಟ್ ಮಾಡಬಹುದು ಅಥವಾ ಪೋಸ್ಟ್ ಡೇಟೆಡ್ ಚೆಕ್ ನೀಡಬಹುದು.
ಹಂತ 5: ನಿಮ್ಮ ಫಾರ್ಮ ತುಂಬಿ ಸಲ್ಲಿಸಿ
ಫಾರ್ಮನಲ್ಲಿ ಎಲ್ಲ ವಿವರಗಳನ್ನು ತುಂಬಿದ ನಂತರ ಅದನ್ನು ಎಎಂಸಿ ಕಂಪನಿಗೆ ನೀಡಿ. ಒಂದು ವೇಳೆ ನೀವು ಹೂಡಿಕೆ ಸಲಹಾಗಾರ ಕಂಪನಿಯ ಮೂಲಕ ಇದೆಲ್ಲವನ್ನು ಮಾಡಿದರೆ ನಿಮ್ಮ ಕೆಲಸ ಮತ್ತೂ ಸುಲಭವಾಗುವುದು. ಕಂಪನಿಯವರೇ ನಿಮ್ಮ ಪರವಾಗಿ ಫಾರ್ಮ ತುಂಬಿ ಸಲ್ಲಿಸುವರು. ನಂತರ ನಿಮ್ಮ ಹೂಡಿಕೆ ಮೊತ್ತ, ದಿನಾಂಕ ಮುಂತಾದ ಎಲ್ಲ ವಿವರಗಳನ್ನು ಎಎಂಸಿ ಕಂಪನಿಯವರು ನಿಯಮಿತವಾಗಿ ನಿಮಗೆ ಇಮೇಲ್ ಮೂಲಕ ತಿಳಿಸುತ್ತಾರೆ.


Click it and Unblock the Notifications