ಮಾಡಿದ್ದುಣ್ಣೋ ಮಹಾರಾಯ ಎಂಬುದು ನಾಣ್ನುಡಿ. ನಾವು ಮಾಡಿದ ಕೆಲಸಗಳು ಹಲವಾರು ಬಾರಿ ನಮಗೆ ಅರಿವಿಲ್ಲದೆ ಪ್ರಭಾವ ಬೀರುವುದುಂಟು. ಇಂತಹ ಅಗೋಚರವಾದ ಪ್ರಭಾವಕ್ಕೆ ಬಲಿಯಾದವರು ಹೆಚ್ಚಾಗಿ ಅಮಾಯಕ ಸಣ್ಣ ಹೂಡಿಕೆದಾರರು. ಕಾರಣ ಷೇರಿನ ಬೆಲೆಗಳು ಏರಿಕೆಯಲ್ಲಿದ್ದಾಗ ಬರುವ ವೈವಿಧ್ಯಮಯ ವಿಶ್ಲೇಷಣೆಗಳು ಅವರಿಗೆ ಪ್ರೇರಣೆಯಾಗಿರುತ್ತವೆ. ವಿತ್ತೀಯ ಸಂಸ್ಥೆಗಳು ಸಹ ಇದರಿಂದ ಹೊರತಾಗಿಲ್ಲ.
ಹಣ ಗಳಿಸಲೇಬೇಕೆಂಬ ಧನದಾಹಿ ನಿರ್ಧಾರಗಳು ಹೇಗೆ ಕಂಪೆನಿಗಳ ಉಳಿವಿಗೆ ಮಾರಕವಾಗುತ್ತವೆ ಎಂಬುದನ್ನು ಕಂಪೆನಿಗಳು ವಿತರಿಸಿದ್ದ ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ಸ್ ಗಳ ವಿತರಣಾ ನಿಯಮಗಳನ್ನು ಗಮನಿಸಿದಾಗ ಅರಿವಾಗುವುದು. ಜಾಗತೀಕರಣದ ಪ್ರಭಾವದಿಂದ ಕಂಪೆನಿಗಳು ವಿದೇಶಿ ಕರೆನ್ಸಿಯಲ್ಲಿ ಪರಿವರ್ತನಾ ಬಾಂಡ್ ಗಳನ್ನು ವಿತರಿಸಲು ಕಾರ್ಪೊರೇಟ್ ಗಳಿಗೆ ಅನುವು ಮಾಡಿಕೊಡಲಾಯಿತು.
2003ರಿಂದ ಪ್ರಮುಖ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಭಾರತ್ ಫೋರ್ಜ್, ಟಿಸ್ಕೋ, ಐಸಿಐಸಿಐ, ಮಹಿಂದ್ರಾ ಅಂಡ್ ಮಹಿಂದ್ರಾ, ಭಾರತಿ ಏರ್ ಟೆಲ್ ಮುಂತಾದವು ಈ ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ಸ್ ಗಳನ್ನು ವಿತರಿಸಿ, ನಂತರ ನಿಗದಿತ ಸಮಯದಲ್ಲಿ ವಿತರಣಾ ನಿಯಮಗಳಿಗೆ ಅನುಗುಣವಾಗಿ ಪರಿವರ್ತನೆ ಈಡೇರಿಸಿವೆ.
ಕಂಪೆನಿಗಳ ಪ್ರವರ್ತಕರಿಗೆ ಹೆಚ್ಚಾಯಿತು ಹಣ ಗಳಿಸುವ ಅಮಲು
2005ರಲ್ಲಿ ಸೆನ್ಸೆಕ್ಸ್ ಸುಮಾರು 6,500 ಪಾಯಿಂಟುಗಳಲ್ಲಿದ್ದು, 2007ರಲ್ಲಿ 20 ಸಾವಿರದ ಗಡಿ ದಾಟಿತು. ಈ ಬೃಹತ್ ಮುನ್ನಡೆಯಿಂದ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಕಂಪೆನಿಗಳು ತಮ್ಮ ಷೇರುಗಳ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಕೊಂಡವು. ಇದರ 'ಮತ್ತು' ಕಂಪೆನಿಗಳ ಪ್ರವರ್ತಕರಿಗೆ ಹಣ ಗಳಿಸಬೇಕಾದ ಅಮಲು ಹೆಚ್ಚಾಗಿ, ಫಾರಿನ್ ಕರೆನ್ಸಿ ಕನ್ವರ್ಟಬಲ್ ಬಾಂಡ್ ವಿತರಣೆಗೆ ಮುಂದಾದವು. ಇವುಗಳ ಧನದಾಹ ಹೇಗಿತ್ತೆಂದರೆ ಕಂಪೆನಿಗಳ ಅಂದಿನ ಷೇರಿನ ಬೆಲೆಗೂ, ಮುಂದೆ ಎಫ್ ಸಿಸಿಬಿ ಗಳನ್ನು ಷೇರುಗಳಾಗಿ ಪರಿವರ್ತಿಸಬೇಕಾದ ದರಕ್ಕೂ ಅಜಗಜಾಂತರ ಇತ್ತು. ಉದಾಹರಣೆಗೆ ಜಯಪ್ರಕಾಶ್ ಇಂಡಸ್ಟ್ರೀಸ್ ಕಂಪೆನಿಯ ಎಫ್ ಸಿಸಿಬಿಗಳು ಪ್ರತಿ ಷೇರಿಗೆ ರು.165 ರಂತೆ 2012 ಪರಿವರ್ತಿಸುವ ಬೆಲೆ ನಿಗದಿಪಡಿಸಿತ್ತು. ಆದರೆ ಆ ಸಮಯಕ್ಕೆ ಷೇರಿನ ಬೆಲೆ ರು.82ಕ್ಕೆ ಕುಸಿದಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2008ರಲ್ಲಿ ಈ ಷೇರಿನ ಬೆಲೆ ರು.300ರ ಸಮೀಪವಿತ್ತು. ಆದರೆ ನಂತರದ ವರ್ಷಗಳಲ್ಲಿ ಪೇಟೆಯ ಕರಡಿಯಾಟಕ್ಕೆ ಈ ಷೇರಿನ ಬೆಲೆ ಈಗ ರು.3ರ ಸಮೀಪಕ್ಕೆ ಕುಸಿದಿದೆ.
ನೆಲ ಕಚ್ಚಿದವು ಕಂಪೆನಿಗಳ ಷೇರು ಬೆಲೆ
ಕಂಪ್ಯೂಟರ್ ಫ್ಲಾಪಿಗಳನ್ನು ತಯಾರಿಸುವ ಅಂದಿನ ಅಗ್ರಮಾನ್ಯ ಕಂಪೆನಿ ಮೋಸರ್ ಬೇರ್ (ಇಂಡಿಯಾ) ಷೇರಿನ ಬೆಲೆ 2007ರಲ್ಲಿ ರು.330ರ ಸಮೀಪವಿದ್ದು, ಕಂಪೆನಿ ಎಫ್ ಸಿಸಿಬಿಗಳು 2012ರಲ್ಲಿ ಪ್ರತಿ ಷೇರಿಗೆ ರು.408ರಂತೆ ಪರಿವರ್ತಿತವಾಗುವಂತೆ ವಿತರಿಸಲಾಯಿತು. ಆದರೆ ಕ್ರಮೇಣ ತಾಂತ್ರಿಕತೆ ಬದಲಾಗಿ ಫ್ಲಾಪಿಗಳ ಬದಲಾಗಿ ಸಿಡಿಗಳು ಬಂದವು. ಹಾಗೂ ಪೇಟೆಯಲ್ಲಿ ಉಂಟಾದ ಮಂಥನದ ಕಾರಣ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಷೇರುಗಳು ಭಾರಿ ಕುಸಿತಕ್ಕೊಳಗಾದವು. 2012ರಲ್ಲಿ ಈ ಕಂಪೆನಿಯ ಷೇರಿನ ಬೆಲೆ 18ಕ್ಕೆ ಕುಸಿದಿದ್ದು, ಕಂಪೆನಿಯನ್ನು ಕಂಗಾಲಾಗಿಸಿತು. ಸದ್ಯಕ್ಕೆ ಹೇಳುವುದಾದರೆ, ಈ ಕಂಪೆನಿಯ ಷೇರು ಹಿಂದಿನ ವರ್ಷದಿಂದ ಅಮಾನತಿನಲ್ಲಿದೆ. ಜಿಟಿಎಲ್ ಇನ್ ಫ್ರಾಸ್ಟ್ರಕ್ಚರ್ ಕಂಪೆನಿ ವಿತರಿಸಿದ ಎಫ್ ಸಿಸಿಬಿ ಗಳು 2012ರಲ್ಲಿ ಪ್ರತಿ ಷೇರಿಗೆ ರು.53ರಂತೆ ಪರಿವರ್ತಿತವಾಗುವ ಹಾಗೆ ವಿತರಿಸಲಾಗಿತ್ತು. 2008ರಲ್ಲಿ ಸೆನ್ಸೆಕ್ಸ್ ಅಂದಿನ ಸಾರ್ವಕಾಲಿಕ ಗರಿಷ್ಠ 21 ಸಾವಿರ ಪಾಯಿಂಟುಗಳನ್ನು ತಲುಪಿದ ಸಂದರ್ಭದಲ್ಲಿ ಈ ಷೇರು ರು.101ರಲ್ಲಿತ್ತು. ಆದರೆ 2012ರಲ್ಲಿ ಷೇರಿನ ಬೆಲೆ ರು.11ಕ್ಕೆ ಕುಸಿದಿತ್ತು. ಸದ್ಯ ಈ ಕಂಪೆನಿ ಷೇರು ರು.0.75 ರಲ್ಲಿದೆ.
ಎಷ್ಟೊಂಡು ಕಂಪೆನಿಗಳು ಹೀಗಾದವು
3ಐ ಇನ್ಫೋಟೆಕ್ ಕಂಪೆನಿ ಸಾಫ್ಟ್ ವೇರ್ ಸಂಬಂಧಿತ ಚಟುವಟಿಕೆಯಲ್ಲಿದ್ದು, 2007ರಲ್ಲಿ ರು.160ರ ಸಮೀಪ ಷೇರಿನ ಬೆಲೆ ಇತ್ತು. ಈ ಕಂಪೆನಿ ವಿತರಿಸಿದ ಎಫ್ ಸಿಸಿಬಿಗಳು 2012ರಲ್ಲಿ ಪ್ರತಿ ಷೇರಿಗೆ ರು.166ರಲ್ಲಿ ಪರಿವರ್ತಿತ ಆಗುವಂತಹ ನಿಯಮವಿದ್ದು, ಆ ವೇಳೆಗೆ ಷೇರಿನ ಬೆಲೆ ರು.16ರ ಸಮೀಪಕ್ಕೆ ಕುಸಿದಿತ್ತು. ಸದ್ಯ ಈ ಷೇರಿನ ಬೆಲೆ ರು.3.25ರ ಸಮೀಪವಿದೆ. ಫಾರ್ಮಾ ವಲಯದ ಆರ್ಕಿಡ್ ಕೆಮಿಕಲ್ಸ್ ಕಂಪೆನಿಯ ಷೇರಿನ ಬೆಲೆ 2006ರ ಮಧ್ಯಂತರದಲ್ಲಿ ರು.390ರ ಸಮೀಪವಿತ್ತು. ಈ ಕಂಪೆನಿ ವಿತರಿಸಿದ ಎಫ್ ಸಿಸಿಬಿಗಳು 2012ರಲ್ಲಿ ಪ್ರತಿ ಷೇರಿಗೆ ರು.348ರಂತೆ ಪರಿವರ್ತಿತವಾಗಬೇಕಿತ್ತು, ಆದರೆ ಆ ಸಮಯಕ್ಕೆ ಷೇರಿನ ಬೆಲೆ ರು.180ಕ್ಕೆ ಕುಸಿದಿತ್ತು. ಈಗ ಈ ಷೇರಿನ ಬೆಲೆ ರು.4.65ರ ಸಮೀಪವಿದೆ. ಅಬಾನ್ ಆಫ್ ಶೋರ್ ಷೇರಿನ ಬೆಲೆ 2008ರ ಜನವರಿಯಲ್ಲಿ ರು.5,400ರ ಸಮೀಪದಲ್ಲಿತ್ತು. ಈ ಕಂಪೆನಿ ವಿತರಿಸಿದ ಎಫ್ ಸಿಸಿಬಿ ಗಳು 2012ರಲ್ಲಿ ಪ್ರತಿ ಷೇರಿಗೆ ರು.2,789ರಲ್ಲಿ ಷೇರಾಗಿ ಪರಿವರ್ತಿತವಾಗುವ ನಿಯಮವಿತ್ತು. ಆದರೆ ಆ ವೇಳೆಗಾಗಲೇ ಷೇರಿನ ಬೆಲೆ ರು.813ರ ಸಮೀಪಕ್ಕೆ ಕುಸಿದಿತ್ತು. ಈಗ ಈ ಷೇರಿನ ಬೆಲೆ ರು.35ರ ಸಮೀಪವಿದೆ.
ನಶಿಸಿತು ಹೂಡಿಕೆದಾರರ ಸಂಪತ್ತು
ರಿಲಯನ್ಸ್ ಕಮ್ಯುನಿಕೇಷನ್ಸ್ ಷೇರಿನ ಬೆಲೆ 2008ರ ಆರಂಭದಲ್ಲಿ ಅಂದರೆ ಸೆನ್ಸೆಕ್ಸ್ ಅಂದಿನ ಸಾರ್ವಕಾಲಿಕ ಗರಿಷ್ಠ 21 ಸಾವಿರದ ಗಡಿಯಲ್ಲಿದ್ದಾಗ ರು.830ರ ಸಮೀಪವಿತ್ತು. ಈ ಕಂಪೆನಿ ವಿತರಿಸಿದ ಎಫ್ ಸಿಸಿಬಿಗಳು 2012ರಲ್ಲಿ ಪ್ರತಿ ಷೇರಿಗೆ ರು.661ರಂತೆ ಪರಿವರ್ತಿತವಾಗುವ ನಿಯಮವಿತ್ತು. ಆದರೆ 2012ರಲ್ಲಿ ಷೇರಿನ ಬೆಲೆ ರು.90ರ ಸಮೀಪದಲ್ಲಿತ್ತು. ಈಗ ಈ ಷೇರಿನ ಬೆಲೆ ರು.1ರ ಸಮೀಪವಿದೆ. ಇದೇ ರೀತಿ ಸುಜುಲಾನ್, ಸ್ಟರ್ಲಿಂಗ್ ಬಯೋಟೆಕ್, ಟುಲಿಪ್ ಟೆಲಿ, ಪ್ರೈಮ್ ಫೋಕಸ್, ಫಸ್ಟ್ ಸೋರ್ಸ್, ರೋಲ್ಟ ಇಂಡಿಯಾ, ಮಸ್ಕಾನ್ ಗ್ಲೋಬಲ್, ಎಜುಕಾಂಪ್ ಸಲ್ಯೂಷನ್ಸ್, ಸುಭೆಕ್ಸ್, ಹೋಟೆಲ್ ಲೀಲಾ ವೆಂಚರ್ಸ್, ಸಿಂಟೆಕ್ಸ್, ಭಾರತಿ ಶಿಪ್ ಯಾರ್ಡ್ , ಬಜಾಜ್ ಹಿಂದೂಸ್ತಾನ್, ಎಚ್ ಸಿಸಿ, ಪೂಂಜ್ ಲಾಯ್ಡ್, ವಿಡಿಯೋಕಾನ್ ಇಂಡಸ್ಟ್ರೀಸ್ ಮುಂತಾದವುಗಳು ಸಹ ವಿತರಿಸಿದ ಎಫ್ ಸಿಸಿಬಿ ಗಳು ಷೇರಾಗಿ ಪರಿವರ್ತನೆಗೊಳ್ಳುವ ಬೆಲೆ ಅತಿ ಹೆಚ್ಚಾಗಿತ್ತು. ಹೀಗೆ ಅಂದಿನ ಅನೇಕ ಖ್ಯಾತನಾಮ ಕಂಪೆನಿಗಳು ಅಪಾಯಕ್ಕೆ ತುತ್ತಾಗಿ ಹೂಡಿಕೆದಾರರ ಸಂಪತ್ತು ನಶಿಸುವಂತೆ ಮಾಡಿವೆ. ಇದರ ಪ್ರಭಾವದಿಂದ ಆಗಿರುವ ತೊಂದರೆಗಳಿಂದ ಇಂದಿಗೂ ಅನೇಕ ಕಂಪೆನಿಗಳಿಗೆ ಹೊರಬರುವುದು ಸಾಧ್ಯವಾಗಿಲ್ಲ.
ಸಾಮರ್ಥ್ಯದಿಂದ ಇಂದಿಗೂ ವಿಜೃಂಭಿಸುತ್ತಿರುವ ಕಂಪೆನಿಗಳಿವು
ಅದೇ ಸಂದರ್ಭದಲ್ಲಿ ಟಾಟಾ ಸ್ಟೀಲ್, ಟಾಟಾ ಮೋಟಾರ್, ಗ್ಲೆನ್ ಮಾರ್ಕ್ ಫಾರ್ಮಾ, ರಾಜೇಶ್ ಎಕ್ಸ್ ಪೋರ್ಟ್ಸ್, ಯು ಫ್ಲೆಕ್ಸ್ ನಂತಹ ಕಂಪೆನಿಗಳು ತಮ್ಮ ಸಾಮರ್ಥ್ಯದಿಂದ ಇಂದಿಗೂ ವಿಜೃಂಭಿಸುತ್ತಿವೆ. ಜಾಗತಿಕ ಮಟ್ಟದಲ್ಲಾಗುವ ಅನೇಕ ಬದಲಾವಣೆಗಳು ಹೆಚ್ಚು ಪ್ರಭಾವಿ ಆಗಿರುವುದರಿಂದ ಕಂಪೆನಿಗಳು ತಮ್ಮ ಸ್ವ ಸಾಮರ್ಥ್ಯದಿಂದ ವರ್ಚಸ್ಸನ್ನು ಬೆಳೆಸಿಕೊಂಡಿದ್ದು, ಸಾಧನೆಯಾಧಾರಿತ ಆಗಿದ್ದಲ್ಲಿ ಮಾತ್ರ ದೀರ್ಘಕಾಲೀನ ಹೂಡಿಕೆಯಲ್ಲಿ ಸಕಾರಾತ್ಮಕ ಫಲಿತಾಂಶ ನೀಡಬಲ್ಲುದು. ಅದೇ ಕೇವಲ ಅಲಂಕಾರಿಕ ನಡೆಗಳಿಂದ ಷೇರಿನ ಬೆಲೆ ಹೆಚ್ಚಾಗಿದ್ದಲ್ಲಿ ಅವು ಅಲ್ಪಕಾಲೀನವಾಗಿರುತ್ತವೆ ಮತ್ತು ಹೂಡಿಕೆದಾರರ ಬಂಡವಾಳವನ್ನು ಅಗೋಚರವಾದ ರೀತಿಯಲ್ಲಿ ನಶಿಸುವಂತೆ ಮಾಡುತ್ತವೆ. ಮಧ್ಯಮ ಮತ್ತು ಕೆಳಮಧ್ಯಮ ಕಂಪೆನಿಗಳ ವ್ಯಾಮೋಹದಿಂದ ಹೊರಬಂದು, ಕೇವಲ ಸಾಧನೆಯಾಧಾರಿತ, ಮೌಲ್ಯಾಧಾರಿತ ಕಂಪೆನಿಗಳತ್ತ ಗಮನಹರಿಸುವುದು ಸದಾ ಒಳಿತು. ಈಗ ಬ್ಯಾಂಕ್ ಬಡ್ಡಿ ದರಗಳು ಕ್ಷೀಣವಾಗುತ್ತಿರುವುದರಿಂದ ನಿವೃತ್ತರಿಗೂ ಹಿರಿಯ ನಾಗರಿಕರಿಗೂ ಸಮಾಜದ ಎಲ್ಲ ವರ್ಗದವರಿಗೂ ತೊಂದರೆಯಾಗಿದೆ. ಆದರೆ ಹೆಚ್ಚಿನ ಕಾರ್ಪೊರೇಟ್ ಗಳು ತಮ್ಮ ವಿವಿಧ ಯೋಜನೆಗಳಿಗೆ ಅಗತ್ಯವಾದ ಸಂಪನ್ಮೂಲವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿವೆ.
ಐಪಿಒಗಳನ್ನು ತೇಲಿ ಬಿಡುವ ಯೋಚನೆಯಲ್ಲಿವೆ
ಈ ಅನ್ವೇಷಣೆಯಲ್ಲಿ ಬ್ಯಾಂಕ್ ಬಡ್ಡಿ ದರ ಕಡಿತವು ಒಂದು ರೀತಿಯ ವರದಾನವಾಗಿದೆ. ಅವು ಶೇ.9 ರಿಂದ 10 ರವರೆಗೂ ಸೆಕ್ಯೂರ್ಡ್ ಎನ್ ಸಿಡಿಗಳನ್ನು ತೇಲಿ ಬಿಟ್ಟು ಬ್ಯಾಂಕ್ ಗಳಿಂದ ಪಡೆವ ಸಾಲದ ಬಡ್ಡಿಗಿಂತ ಕಡಿಮೆ ಬೆಲೆಯಲ್ಲಿ ಸಾಲವನ್ನು ದೊರಕಿಸಿಕೊಳ್ಳುತ್ತಿವೆ. ಸೆಕ್ಯೂರ್ಡ್ ಅನ್ನುವುದು ಮೋಹಕ ಪದ. ಇದು ಕಂಪೆನಿಯ ಸ್ವಾಸ್ಥ್ಯವನ್ನು ಅವಲಂಬಿಸಿರುತ್ತದೆ. ಕಂಪೆನಿ ಆಪತ್ತಿನಲ್ಲಿ ಸಿಕ್ಕಿಕೊಂಡಲ್ಲಿ ಸೆಕ್ಯೂರ್ಡ್ ಅನ್ನುವ ಪದಕ್ಕೆ ಅರ್ಥವಿಲ್ಲ ಎಂಬುದನ್ನು ಠೇವಣಿದಾರರು ಸದಾ ನೆನಪಿನಲ್ಲಿಡಬೇಕು. ಕೇಂದ್ರದಲ್ಲಿ ಹೊಸ ಸರಕಾರ ಬಂದ ನಂತರದಲ್ಲಿ ಈಗ ಹೆಚ್ಚಿನ ಕಂಪೆನಿಗಳು ತಮ್ಮ ಐಪಿಒಗಳನ್ನು ತೇಲಿಬಿಡುವ ಯೋಚನೆಯಲ್ಲಿವೆ. ಈ ಸಂದರ್ಭದಲ್ಲಿ ಐಪಿಒ ವ್ಯಾಮೋಹದಿಂದ ಹೊರಬಂದು, ಕಂಪೆನಿಗಳು ವಿತರಿಸುವ ಬೆಲೆಗಳನ್ನು ಅರ್ಹತೆಯ ಆಧಾರದ ಮೇಲೆ ತೂಗಿ ತಮ್ಮ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. 2018ರಲ್ಲಿ ಬಂದಂತಹ ಹಿಂದೂಸ್ತಾನ್ ಏರೋನಾಟಿಕ್ಸ್, ಐಸಿಐಸಿಐ ಸೆಕ್ಯುರಿಟೀಸ್, ಇರ್ಕಾನ್ ಇಂಟರ್ ನ್ಯಾಷನಲ್, ಆಸ್ಟರ್ ಡಿಎಂ ಹೆಲ್ತ್ ಕೇರ್, ಭಾರತ್ ಡೈನಾಮಿಕ್ಸ್ ನಂತಹ ಬ್ರಾಂಡೆಡ್ ಕಂಪೆನಿಗಳು ಸಹ ವಿತರಣೆ ಬೆಲೆಗಿಂತ ಕಡಿಮೆ ದರದಲ್ಲಿ ವಹಿವಾಟಾಗುತ್ತಿವೆ ಎಂಬುದನ್ನು ನೆನಪಿನಲ್ಲಿಟ್ಟಿರಬೇಕು.


Click it and Unblock the Notifications