ಷೇರುಪೇಟೆಯಲ್ಲಿ ಆರಂಭದಲ್ಲಿ ಮಾತ್ರ ಹೂಡಿಕೆ, ಆ ನಂತರದಲ್ಲಿ ವ್ಯವಹಾರವೇ

ಷೇರುಪೇಟೆಯಲ್ಲಿ ಸೋಮವಾರ ಕಂಡ ಕುಸಿತವು ಒಗ್ಗಟ್ಟಿನಲ್ಲಿ ಬಲವುಂಟು ಎಂಬ ನಾಣ್ನುಡಿಯನ್ನು ನಿಜವೆಂದು ನಿರೂಪಿಸಿದಂತಾಗಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಹೆಗ್ಗುರುತಾದ ಸೆನ್ಸೆಕ್ಸ್ ಕಳೆದ 3 ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಕುಸಿತದ ದಾಖಲೆ ಮಾಡಿದೆ. ಈ ಕಾರಣದಿಂದಾಗಿ ಪೇಟೆಯ ಬಂಡವಾಳ ಮೌಲ್ಯವು 5 ಲಕ್ಷ ಕೋಟಿಯಷ್ಟು ಕರಗಿದೆ ಎಂಬುದು ಎಲ್ಲರ ಅಭಿಪ್ರಾಯ.

ಇದಕ್ಕೂ ಮುಂಚೆ ಹೂಡಿಕೆದಾರರು ತಿಳಿಯಬೇಕಾದದ್ದು ಏನೆಂದರೆ, ಸೆನ್ಸೆಕ್ಸ್ ಅಂದರೆ ಎಲ್ಲ ವಲಯದ 30 ಪ್ರಮುಖ ಬೃಹತ್ ಕಂಪೆನಿಗಳಿದ್ದು, ಅದರಲ್ಲಿ 9 ಕಂಪೆನಿಗಳು ವಿತ್ತೀಯ ವಲಯದ್ದಾಗಿವೆ. ಅವೆಂದರೆ ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್. ಇವುಗಳಿಗೆ ವಿಭಿನ್ನ ವೇಟೇಜ್ ಗಳನ್ನು ನೀಡಲಾಗಿದೆ.

ಇವು ಏರಿಕೆಯಾಗಲಿ, ಇಳಿಕೆಯಾಗಲಿ ಕಂಡಾಗ ಅವುಗಳ ವೇಟೇಜ್ ಆಧರಿಸಿ ಏರಿಳಿತಗಳನ್ನು ನಿರ್ಧರಿಸಲಾಗುವುದು. ವಿತ್ತೀಯ ವಲಯದ ಈ ಕಂಪೆನಿಗಳು ಸೆನ್ಸೆಕ್ಸ್ ನ ಶೇ. 43ರಷ್ಟು ವೇಟೇಜ್ ಹೊಂದಿದ್ದು, ಇವುಗಳು ಸಾಮೂಹಿಕ ಏರಿಕೆ ಕಂಡಾಗ ಭಾರೀ ಏರಿಕೆ, ಸಾಮೂಹಿಕ ಇಳಿಕೆ ಕಂಡಾಗ ಭಾರೀ ಇಳಿಕೆಯನ್ನು ಉಂಟು ಮಾಡುತ್ತವೆ.

ದಿನದ ವ್ಯವಹಾರ ಚುಕ್ತಾ, ಲಾಭದ ನಗದೀಕರಣ

ದಿನದ ವ್ಯವಹಾರ ಚುಕ್ತಾ, ಲಾಭದ ನಗದೀಕರಣ

ಜೂನ್ ತಿಂಗಳ ಮೊದಲ ವಾರ ಅಂದರೆ 7ರಂದು ಸೆನ್ಸೆಕ್ಸ್ 39,615 ಪಾಯಿಂಟುಗಳಲ್ಲಿತ್ತು. ಜುಲೈ 8ರಂದು ಸೆನ್ಸೆಕ್ಸ್ 38,720 ರಲ್ಲಿ ಕೊನೆಗೊಂಡು, ಒಟ್ಟು 895 ಪಾಯಿಂಟುಗಳ ಕುಸಿತವನ್ನು ಕಂಡಿದೆ. ಇನ್ನು ಜೂನ್ 7ರಂದು ರು.153.17 ಲಕ್ಷ ಕೋಟಿಯಷ್ಟಿದ್ದ ಬಂಡವಾಳ ಮೌಲ್ಯ, ಜುಲೈ 8ರಂದು ಕಂಡ ಕುಸಿತದ ಕಾರಣ ರು.147.96 ಲಕ್ಷ ಕೋಟಿಗೆ ಕುಸಿದಿದೆ. ಈ ಒಂದು ತಿಂಗಳ ಸಮಯದಲ್ಲಿ ಕಂಡಂತಹ ಬಂಡವಾಳ ಮೌಲ್ಯವು ರು.5.21 ಲಕ್ಷ ಕೋಟಿಯಾಗಿದ್ದು, ಅದು ಸೋಮವಾರ ಕಂಡಿದ್ದಾಗಿದೆ. ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ, ಸೋಮವಾರ (ಜುಲೈ 8ರಂದು) ಭಾರೀ ಕುಸಿದ ಕಂಪೆನಿ ಎಂದರೆ ಬಜಾಜ್ ಫೈನಾನ್ಸ್. ಈ ಷೇರು ರು.304ರಷ್ಟು ಇಳಿಕೆಯಿಂದ ಕೊನೆಯಾಗಿ ರು.3,414 ರಲ್ಲಿದ್ದರೂ ದಿನದ ಮಧ್ಯಂತರದಲ್ಲಿ ರು.3,730 ರವರೆಗೂ ಕುಸಿದಿತ್ತು ಎಂಬುದು ಗಮನಾರ್ಹ. ಆದರೆ ಮೇ ತಿಂಗಳ ಮಧ್ಯೆ ರು.2,850ರಲ್ಲಿದ್ದ ಈ ಷೇರು ಶುಕ್ರವಾರ, 5ನೇ ಜುಲೈ ವಾರ್ಷಿಕ ಗರಿಷ್ಠ ರು.3,761ರವರೆಗೂ ಏರಿಕೆ ಕಂಡು, ದಾಖಲೆ ನಿರ್ಮಿಸಿ, ನಂತರದ ದಿನ ರು.304ರಷ್ಟು ಕುಸಿದಿದೆ. ಕಳೆದ ಒಂದು ತಿಂಗಳಲ್ಲಿ ಅಂದರೆ ಜೂನ್ 10ರಂದು ಶೇ.21ರಷ್ಟು, 11ರಂದು ಶೇ.22ರಷ್ಟು, 20ರಂದು ಶೇ.30ರಷ್ಟು, 26ರಂದು ಶೇ.31ರಷ್ಟು, 27ರಂದು ಶೇ.24ರಷ್ಟು, ಜುಲೈ 1ರಂದು ಶೇ.21ರಷ್ಟು, 3ರಂದು ಶೇ.28ರಷ್ಟು ವ್ಯವಹಾರವು ವಿಲೇವಾರಿಯಾಗಿ ಉಳಿದ ಭಾಗವು ದೈನಂದಿನ ಚುಕ್ತಾ ವ್ಯವಹಾರವಾಗಿತ್ತು. ಸೋಮವಾರ ನಡೆದ ವಹಿವಾಟಿನ ಶೇ.51 ರಷ್ಟು ವಿಲೇವಾರಿಯ ವ್ಯವಹಾರವಾಗಿರುವುದು ಭಾರೀ ಗಾತ್ರದ ಲಾಭದ ನಗದೀಕರಣ ನಡೆದಿದೆ ಎನ್ನಬಹುದು.

ಷೇರು ಪೇಟೆಯಲ್ಲಿ ಮಾರಾಟದ ಒತ್ತಡ

ಷೇರು ಪೇಟೆಯಲ್ಲಿ ಮಾರಾಟದ ಒತ್ತಡ

ಅದೇ ರೀತಿ ಎಚ್ ಡಿಎಫ್ ಸಿ ಷೇರಿನ ಬೆಲೆ ಮೇ ತಿಂಗಳ ಮಧ್ಯೆ ರು.1,940ರ ಸಮೀಪದಿಂದ ಜೂನ್ 5ರಂದು ಶುಕ್ರವಾರ ರು.2,300ರ ವಾರ್ಷಿಕ ಗರಿಷ್ಠ ದಾಖಲಿಸಿದೆ. ಸೋಮವಾರದಂದು ರು.2,244ರ ವರೆಗೂ ಇಳಿಕೆ ಕಂಡು, ರು.2,261ರಲ್ಲಿ ಕೊನೆಗೊಂಡಿದೆ. ಗುರುವಾರ 3ರಂದು ರು.2,502ರ ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿದ ಎಚ್ ಡಿಎಫ್ ಸಿ ಬ್ಯಾಂಕ್ ಸೋಮವಾರ ರು.2,397ರ ಸಮೀಪಕ್ಕೆ ಕುಸಿದು, ಸ್ವಲ್ಪ ಚೇತರಿಕೆ ಕಂಡಿತು. ಸೋಜಿಗವೆಂದರೆ ಈ ಷೇರು ಶೇ. 79ರಷ್ಟು ವಹಿವಾಟು ವಿಲೇವಾರಿಯಾಗಿದ್ದು, ಉಳಿದದ್ದು ಮಾತ್ರ ದೈನಂದಿನ ಚುಕ್ತಾ ವ್ಯವಹಾರವಾಗಿರುವುದು, ಲಾಭದ ನಗದೀಕರಣದ ಒತ್ತಡವನ್ನು ಬಿಂಬಿಸುತ್ತದೆ. ಈ ಮಾರಾಟದ ಭರಾಟೆಯಲ್ಲಿ ಆಟೋ ವಲಯದ ಕಂಪೆನಿಗಳಾದ ಹೀರೊ ಮೋಟೊಕಾರ್ಪ್, ಮಾರುತಿ ಸುಜುಕಿ ವಾರ್ಷಿಕ ಕನಿಷ್ಠದ ಮಟ್ಟಕ್ಕೆ ಕುಸಿದರೆ, ಈ ಕಂಪೆನಿಗಳೊಂದಿಗೆ ಮಹಿಂದ್ರಾ ಅಂಡ್ ಮಹಿಂದ್ರಾ, ಇನ್ಫೋಸಿಸ್ ನಂತಹ ಕಂಪೆನಿಗಳಲ್ಲಿ ವಿಲೇವಾರಿಯಾದ ಷೇರುಗಳ ಸಂಖ್ಯೆ ಮಾತ್ರ ಕ್ಷೀಣವಾಗಿತ್ತು. ಲಾರ್ಸನ್ ಅಂಡ್ ಟೊಬ್ರೋ, ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಗಳು ಕ್ರಮವಾಗಿ ರು.67 ಮತ್ತು ರು.34 ರಷ್ಟು ಕುಸಿತದೊಂದಿಗೆ ಸೆನ್ಸೆಕ್ಸ್ ಕುಸಿತಕ್ಕೆ ತಮ್ಮ ಕೊಡುಗೆ ನೀಡಿವೆ. ಈ ಎಲ್ಲಾ ಬೆಳವಣಿಗೆಗಳೊಂದಿಗೆ ಜಾಗತಿಕ ಪೇಟೆಗಳು ಸಹ ಇಳಿಕೆಯಲ್ಲಿರುವ ಕಾರಣ ನಮ್ಮ ಪೇಟೆಗಳಲ್ಲಿಯೂ ಮಾರಾಟದ ಒತ್ತಡ ಉಂಟಾಗಿ ಸೂಚ್ಯಂಕಗಳ ಕುಸಿತಕ್ಕೆ ಪೂರಕ ಅಂಶವಾಗಿದೆ.

ಎಸ್ ಐಪಿ ಮಾದರಿ ಹೂಡಿಕೆ ಚಟುವಟಿಕೆ

ಎಸ್ ಐಪಿ ಮಾದರಿ ಹೂಡಿಕೆ ಚಟುವಟಿಕೆ

ಸಾಮಾನ್ಯವಾಗಿ ಷೇರುಪೇಟೆ ಉತ್ತುಂಗದಲ್ಲಿರುವಾಗ ಹೂಡಿಕೆದಾರರು ಖರೀದಿಗೆ ಮುಂದಾಗುವುದು, ಇಳಿಕೆಯಲ್ಲಿರುವಾಗ ಗಾಬರಿಯಾಗಿ ಇರುವ ಷೇರುಗಳನ್ನು ಮಾರಾಟ ಮಾಡುವ ಚಕ್ರವ್ಯೂಹದ ವಹಿವಾಟಿನಿಂದ ಹೊರಬಂದು, ಪೇಟೆಯು ಹೆಚ್ಚು ಕುಸಿತದಲ್ಲಿರುವಾಗ ಪ್ರತಿ ಕುಸಿತದಲ್ಲಿ ಹಂತ ಹಂತವಾಗಿ ಉತ್ತಮವಾದ ಕಂಪೆನಿಗಳನ್ನು ಶೇಖರಿಸುವ ಎಸ್ ಐಪಿ ಮಾದರಿಯ ಚಟುವಟಿಕೆಯಿಂದ ದೀರ್ಘ ಕಾಲದಲ್ಲಿ ಒಂದು ಉತ್ಕೃಷ್ಟವಾದ ಹೂಡಿಕೆ ಗುಚ್ಛವನ್ನು ನಿರ್ಮಿಸಿಕೊಳ್ಳಲು ಉತ್ತಮ ಅವಕಾಶವಾಗಿರುತ್ತದೆ. ಈ ವರ್ಷದ ಜನವರಿಯಲ್ಲಿ ರು.442ರ ಸಮೀಪವಿದ್ದ ಟಾಟಾ ಸ್ಟೀಲ್ ಷೇರಿನ ಬೆಲೆ ರು.545ರ ಸಮೀಪಕ್ಕೆ ಜಿಗಿತ ಕಂಡು, ಸೋಮವಾರದಂದು ರು.465ರ ಸಮೀಪಕ್ಕೆ ಕುಸಿದಿದೆ. ಈ ಕಂಪೆನಿಯು ಪ್ರತಿ ಷೇರಿಗೆ ರು.13ರಂತೆ ಲಾಭಾಂಶ ವಿತರಿಸಲು ಹಿಂದಿನ ವಾರ ನಿಗದಿತ ದಿನವಾಗಿತ್ತು. ಅದರಂತೆ ಲಾರ್ಸನ್ ಅಂಡ್ ಟೊಬ್ರೋ ಷೇರಿನ ಬೆಲೆ ಈ ವಾರದಲ್ಲಿ ರು.1,591ರ ಗರಿಷ್ಠದಿಂದ ಸೋಮವಾರ 5ರಂದು ರು.1,465 ರವರೆಗೂ ಕುಸಿದು, ರು.1,490ಕ್ಕೆ ಚೇತರಿಸಿಕೊಂಡಿದೆ. ಕೇಂದ್ರದ ಬಜೆಟ್ ನಲ್ಲಿ ರು.70 ಸಾವಿರ ಕೋಟಿಯಷ್ಟು ಸಾರ್ವಜನಿಕ ಬ್ಯಾಂಕ್ ಗಳಿಗೆ ಬಂಡವಾಳ ಒದಗಿಸುವ ಪ್ರಸ್ತಾಪವಿದ್ದರೂ ಇಂದು ಬ್ಯಾಂಕಿಂಗ್ ಕಂಪೆನಿಗಳಾದ ಕೆನರಾ ಬ್ಯಾಂಕ್, ಎಸ್ ಬಿಐ, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ನಂತಹವು ಭಾರಿ ಕುಸಿತ ಕಂಡಿರುವುದು ಸೋಜಿಗವೆನಿಸಿದರೂ ಇತ್ತೀಚಿನ ದಿನಗಳಲ್ಲಿ, ಬಜೆಟ್ ಪೂರ್ವದಲ್ಲಿ ಭಾರೀ ಏರಿಕೆಯನ್ನು ಪ್ರದರ್ಶಿಸಿರುವುದು ಗಮನಿಸಬೇಕಾದ ಅಂಶ.

ದೀರ್ಘಾವಧಿ ಹೂಡಿಕೆ ಎಂಬುದು ಯಾವುದೂ ಇಲ್ಲ

ದೀರ್ಘಾವಧಿ ಹೂಡಿಕೆ ಎಂಬುದು ಯಾವುದೂ ಇಲ್ಲ

ಪೆಟ್ರೋಲ್ ಮತ್ತು ಡೀಸೆಲ್ ಗಳ ಮೇಲೆ ರು.1 ರಷ್ಟು ಸುಂಕ ಹೆಚ್ಚಿಸಿದ ಕಾರಣ ತೈಲ ಮಾರಾಟ ಕಂಪೆನಿಗಳು ಹೆಚ್ಚಿನ ಒತ್ತಡಕ್ಕೊಳಗಾಗಿವೆ. ಐಒಸಿ, ಎಚ್ ಪಿಸಿಎಲ್, ಬಿಪಿಸಿಎಲ್ ಗಳು ಮಾರಾಟದ ಭರಾಟೆಯಿಂದ ಕುಸಿದವು. ಇನ್ನು ಬಂಡವಾಳ ಹಿಂತೆಗೆತದ ಮಿತಿಯನ್ನು 1.05 ಲಕ್ಷ ಕೋಟಿಗೆ ಏರಿಸಿದ್ದು, ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕೆ ಸರಕಾರ ಮುಂದಾಗುವುದು. ಆ ಸಂದರ್ಭದಲ್ಲಿ ಸಾರ್ವಜನಿಕ ವಲಯದ ಕಂಪೆನಿಗಳು ಚುರುಕಾದ ಏರಿಕೆಯನ್ನು ಪ್ರದರ್ಶಿಸುವ ಸಾಧ್ಯತೆ ಇರುತ್ತದೆ. ಸೋಮವಾರದಂದು ಆರಂಭದಲ್ಲಿ ಬಯೋಕಾನ್ ಕಂಪೆನಿಯು ಮೇಲೆ ಅಮೆರಿಕಾದ ಎಫ್ ಡಿಎ 12 ಅಬ್ಸರ್ವೇಶನ್ ಮಾಡಿದೆ ಎಂಬ ಸುದ್ದಿಯ ಕಾರಣ ಕುಸಿತದಿಂದ ಆರಂಭವಾಗಿ ಅಂತ್ಯದಲ್ಲಿ ಸ್ವಲ್ಪ ಏರಿಕೆ ಕಂಡುಕೊಂಡಿತು. ಈಕ್ವಿಟಿ ಷೇರುಗಳಲ್ಲಿ ಎಸ್ ಐಪಿ ಮೂಲಕ ಹೂಡಿಕೆ ಗುಚ್ಛ ನಿರ್ಮಿಸಿಕೊಳ್ಳಲು ಪೇಟೆಯು ಕುಸಿತದಲ್ಲಿದ್ದಾಗ ಉತ್ತಮವಾಗಿರುತ್ತದೆ. ಆದರೆ ಅಲ್ಪಕಾಲೀನದಲ್ಲಿ ದೊರೆಯುವ ಅವಕಾಶಗಳನ್ನು ಕೈಗೆಟುಕಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಉದಾಹರಣೆಗೆ ಇತ್ತೀಚೆಗಷ್ಟೇ ರು.98 ಸಾವಿರ ಕೋಟಿ ಹಣದ ದುರುಪಯೋಗವನ್ನು ಮಾಡಲಾಗಿದೆ ಎಂಬ ಆರೋಪದಿಂದ ಜೂನ್ 19ರಂದು ರು.487ರ ವರೆಗೂ ಕುಸಿದಿದ್ದ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕೇವಲ ಕೆಲವೇ ದಿನಗಳಲ್ಲಿ ರು.745ರವರೆಗೂ ಏರಿಕೆ ಕಂಡು, ನಂತರ ಸ್ವಲ್ಪ ಇಳಿಕೆ ಕಂಡಿತು. ಈ ತಿಂಗಳ 1ರಂದು ಟೈಟಾನ್ ಇಂಡಸ್ಟ್ರೀಸ್ ರು.1,340 ರವರೆಗೂ ಏರಿಕೆ ಕಂಡು, ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಿ, 9ರಂದು ರು.1,116 ರವರೆಗೂ ಕುಸಿದಿರುವುದು ಷೇರುಪೇಟೆಯಲ್ಲಿ ಆರಂಭದಲ್ಲಿ ಹೂಡಿಕೆಯಾಗಿ ಪ್ರವೇಶಿಸಿದರೂ ನಂತರದಲ್ಲಿ ದೊರೆಯುವ ಲಾಭದ ಗಾತ್ರದಿಂದ ವ್ಯವಹಾರವನ್ನಾಗಿಸಿಕೊಂಡಲ್ಲಿ ಮಾತ್ರ ಬಂಡವಾಳ ಸ್ವಲ್ಪ ಮಟ್ಟಿನ ಸುರಕ್ಷತೆ ಕಾಣಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+