ಮನೆಯಲ್ಲಿ ಮಕ್ಕಳಿಗೆ ಪಂಚತಂತ್ರ ನೀತಿ ಕಥೆಗಳನ್ನು ಹೇಳುತ್ತಿದ್ದರೆ ಅದರಲ್ಲಿನ ನೀತಿ ಪಾಠಗಳು ಅದೆಷ್ಟು ಸಾರ್ವಕಾಲಿಕ ಅಲ್ಲವಾ ಎಂದು ಅಚ್ಚರಿ ಆಗಿರಬಹುದು. ರಾಜಕುಮಾರರಿಗೆ ಲೋಕಜ್ಞಾನದ ಪಾಠ ಮಾಡಲು ಆರಿಸಿಕೊಂಡ ಮಾರ್ಗವೇ ಅಲ್ಲವೆ ಈ ಪಂಚತಂತ್ರದ ಕಥೆಗಳು! ಆದ್ದರಿಂದಲೂ ಕ್ರಿಸ್ತಪೂರ್ವ ಮೂರನೇ ಶತಮಾನದಿಂದಲೂ ಪಂಚತಂತ್ರ ಕಥೆಗಳ ಅಗ್ಗಳಿಕೆ ಹಾಗೇ ಉಳಿದುಕೊಂಡು ಬಂದಿದೆ.
ಅಂಥ ಪಂಚತಂತ್ರದಿಂದ ಆಯ್ದ ಕಥೆಗಳನ್ನು ಮತ್ತೊಮ್ಮೆ ನೆನಪಿಸಿ, ಮ್ಯಾನೇಜ್ ಮೆಂಟ್ ಪಾಠಗಳನ್ನು ಕಲಿತುಕೊಳ್ಳುವ ಪ್ರಯತ್ನದ ಭಾಗ ಇಲ್ಲಿದೆ. ಕಥೆಗಳು ಅಂದರೆ ಬಹಳ ಆಸಕ್ತಿಕರ. ಅದರಲ್ಲೂ ಅಲ್ಲೊಂದು ನೀತಿಯಿದೆ ಅಂದರೆ ಕೇಳಬೇಕಾ? ಇನ್ನು ಏಕೆ ತಡ, ಆ ಕಥೆಗಳೇನು ಎಂಬ ಕಡೆಗೆ ನೋಡೋಣ.
ಬಾಹ್ಯ ರೂಪ, ನಡವಳಿಕೆಯಿಂದ ದೀರ್ಘ ಕಾಲ ವಂಚಿಸಲು ಸಾಧ್ಯವಿಲ್ಲ
ಒಮ್ಮೆ ನರಿಯೊಂದು ಅಚಾನಕ್ ಆಗಿ ನೀಲಿ ಬಣ್ಣದ ಓಕುಳಿಯಲ್ಲಿ ಬಿದ್ದುಹೋಯಿತು. ಆ ನಂತರ ಅದರ ಮೈಯೆಲ್ಲ ನೀಲಿ ನೀಲಿ. ಆ ಸನ್ನಿವೇಶದ ಲಾಭ ಪಡೆಯಲು ನಿರ್ಧರಿಸಿದ ಆ ನರಿ ಕಾಡಿನ ಉಳಿದ ಪ್ರಾಣಿಗಳನ್ನು ವಂಚಿಸಲು ಆರಂಭಿಸಿತು. ಉಳಿದೆಲ್ಲ ಪ್ರಾಣಿಗಳಿಗಿಂತ ತಾನು ವಿಶಿಷ್ಟ, ವಿಭಿನ್ನ ಎಂದು ಹೇಳಿಕೊಳ್ಳಲಾರಂಭಿಸಿತು. ಇದರ ಬಣ್ಣ ನೋಡಿ ಮೋಸ ಹೋದ ಪ್ರಾಣಿಗಳು ಸಹ ವಿಶೇಷ ಉಪಚಾರ ಮಾಡಲು, ಗೌರವ ನೀಡಲು ಆರಂಭಿಸಿದವು. ಒಂದು ದಿನ ಕಾಡಿನಲ್ಲಿ ಜೋರು ಮಳೆ ಬಂದಿತು. ಆ ಮಳೆಗೆ ನರಿಗೆ ಅಂಟಿಕೊಂಡಿದ್ದ ನೀಲಿ ಬಣ್ಣವೆಲ್ಲ ತೊಳೆದು ಹೋಯಿತು. ಆಗ ನರಿಯ ನಿಜ ಬಣ್ಣ ಬಯಲಾಯಿತು. ಇಷ್ಟು ಸಮಯ ತಮ್ಮನ್ನು ಆಟ ಆಡಿಸಿದ ನರಿ ಬಗ್ಗೆ ಸಿಟ್ಟಿಗೆದ್ದ ಉಳಿದ ಪ್ರಾಣಿಗಳು, ಆ ನರಿಯನ್ನು ಕೊಂದು ಹಾಕಿದವು.
ನೀತಿ ಪಾಠ: ಬಾಹ್ಯ ರೂಪ, ನಡವಳಿಕೆಯಿಂದ ಯಾರನ್ನಾದರೂ ಕೆಲ ಸಮಯ ಮಾತ್ರ ವಂಚಿಸಲು ಸಾಧ್ಯ. ಅದು ದೀರ್ಘ ಕಾಲ ಸಾಗುವುದಿಲ್ಲ. ಆದ್ದರಿಂದ ಯಾವಾಗಲೂ ನಮ್ಮಂತೆಯೇ ನಾವಿರಬೇಕು.
ನಮ್ಮ ಮೇಲೆ ನಂಬಿಕೆ ಕಳೆದುಕೊಳ್ಳಬಾರದು
ಒಬ್ಬ ವ್ಯಕ್ತಿಗೆ ಆಡೊಂದನ್ನು ಪುಕ್ಕಟೆ ಕೊಟ್ಟಿದ್ದರು. ಅದರ ಜತೆಗೆ ಆ ವ್ಯಕ್ತಿ ತನ್ನೂರಿಗೆ ಹೊರಟ. ಆತನನ್ನು ಹೇಗಾದರೂ ವಂಚಿಸಬೇಕು ಎಂದು ಮೂವರು ಖದೀಮರ ಗುಂಪು ನಿಶ್ಚಯ ಮಾಡಿಕೊಂಡಿತು. ಹೀಗೆ ದಾರಿಯಲ್ಲಿ ಸಾಗುವಾಗ ಮೊದಲನೇ ವ್ಯಕ್ತಿ ಕಾಣಿಸಿಕೊಂಡ. ಏನು ಕತ್ತೆ ತೆಗೆದುಕೊಂಡು ಹೋಗುತ್ತಿದ್ದೀಯಾ, ಎಷ್ಟಿದರ ಬೆಲೆ ಎಂದು ಕೇಳಿದ. ಆಡು ಇರುವುದನ್ನು ಕತ್ತೆ ಅಂತ ಯಾಕೆ ಹೇಳ್ತಿದ್ದಾರೆ ಎಂದು ಅನುಮಾನ ಆಯಿತು. ಇನ್ನೊಂದು ಸ್ವಲ್ಪ ಮುಂದೆ ಹೋದ. ಆಗ ಮತ್ತೊಬ್ಬ ವ್ಯಕ್ತಿ ಎದುರಾದ. ಸತ್ತ ಕರು ಹೀಗೆ ತೆಗೆದುಕೊಂಡು ಹೋಗಬಾರದು ಎಂದ. ಅನುಮಾನ ಮತ್ತೂ ಬಲವಾಯಿತು. ಮೂರನೇ ವ್ಯಕ್ತಿ ಎದುರಾಗಿ, ನಿಮ್ಮೂರಿನಲ್ಲಿ ನಾಯಿ ಇಲ್ಲವಾ? ಇದೇ ಬೇಕಾಯಿತಾ ಎಂದು ಕೇಳಿದ. ಅಲ್ಲಿಗೆ ಆಡು ತೆಗೆದುಕೊಂಡು ಹೋಗುತ್ತಿದ್ದವನಿಗೆ ಇದು ಭೂತ ಇರಬೇಕು ಅನ್ನಿಸಿ, ದಾರಿಯಲ್ಲೇ ಬಿಟ್ಟು ಮನೆಗೆ ಹೊರಟ. ಆ ಮೂವರು ವಂಚಕರು ಒಟ್ಟಾಗಿ, ಆ ಆಡನ್ನು ಕೊಂದು ತಿಂದರು.
ನೀತಿ ಪಾಠ: ಯಾರು ಏನನ್ನೇ ಹೇಳಿದರೂ ಕುರುಡಾಗಿ ನಂಬಬಾರದು ಮತ್ತು ನಮ್ಮ ಮೇಲೆ ನಂಬಿಕೆ ಕಳೆದುಕೊಳ್ಳಬಾರದು.
ಎಂಥ ಕೆಟ್ಟ ಸ್ಥಿತಿಯಲ್ಲೇ ಇದ್ದರೂ ಹೆದರಬಾರದು
ಒಮ್ಮೆ ಮೊಸಳೆಯೊಂದು ಕೋತಿ ಜತೆಗೆ ಬಹಳ ಕಾಲದಿಂದ ಸ್ನೇಹ ಬೆಳೆಸಿತು. ಅದೊಂದು ದಿನ ತನ್ನ ಮೇಲೆ ಕೂರುವಂತೆಯೂ ಹಾಗೂ ಅದಕ್ಕೆ ನದಿಯಲ್ಲಿ ಸುತ್ತು ಹಾಕಿಸುವುದಾಗಿಯೂ ಆಹ್ವಾನಿಸಿತು. ಸರಿ, ಗೆಳೆತನದಲ್ಲಿ ಅದರ ಮಾತನ್ನು ಕೇಳಿ, ಮೊಸಳೆ ಬೆನ್ನಿನ ಮೇಲೆ ಕೋತಿ ಕೂತಿತು. ನದಿ ಮಧ್ಯ ಭಾಗಕ್ಕೆ ಬರುತ್ತಲೂ ಕೋತಿಯನ್ನು ಕೊಂದು, ಅದರ ಹೃದಯವನ್ನು ತಿನ್ನಬೇಕು ಎಂಬ ಆಸೆಯನ್ನು ಮೊಸಳೆ ಹೇಳಿಕೊಂಡಿತು. ನದಿಯ ಮಧ್ಯ ಭಾಗದಲ್ಲಿ ಕೋತಿ ಇತ್ತು. ಅದಕ್ಕೆ ಈಜು ಬಾರದು. ಆದರೆ ಸ್ವಲ್ಪ ಹೆದರಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಮೊಸಳೆ ಕೊಲ್ಲದೆ ಬಿಡುವುದಿಲ್ಲ. ಆಗ ಏನೂ ಆಗದಂತೆ ನಟಿಸಿದ ಕೋತಿ, ಅಯ್ಯೋ ಮುಂಚೆಯೇ ಹೇಳಬೇಕಲ್ಲವಾ? ನನ್ನ ಹೃದಯ ನದಿಯ ದಡದ ಬಳಿಯ ಮರದ ಮೇಲಿಟ್ಟು ಬಂದಿದ್ದೇನೆ. ಆ ಕಡೆ ಹೋಗು, ಅದನ್ನು ತಂದು ಬಿಡುತ್ತೇನೆ ಎಂದು ಮೊಸಳೆಯನ್ನು ನಂಬಿಸಿತು. ಆ ಮಾತನ್ನು ನಂಬಿದ ಮೊಸಳೆ ದಡದತ್ತ ಹೋಯಿತು. ಛಂಗನೆ ಹಾರಿ ಕೋತಿ ಕೂಡ ತಪ್ಪಿಸಿಕೊಂಡಿತು.
ನೀತಿ ಪಾಠ: ಎಂಥ ಕೆಟ್ಟ ಸ್ಥಿತಿಯಲ್ಲೇ ಇದ್ದರೂ ಭಯ ಪಡದಿದ್ದರೆ ಸಮಸ್ಯೆಗೆ ಪರಿಹಾರ ಸಿಕ್ಕೇ ಸಿಗುತ್ತದೆ.
ಬುದ್ಧಿಶಕ್ತಿಯಿಂದ ಎಂಥವರನ್ನಾದರೂ ಮಣಿಸಬಹುದು
ಕಾಡೊಂದರಲ್ಲಿ ಸಿಂಹವೊಂದು ಸರತಿ ಪ್ರಕಾರ ಪ್ರಾಣಿಗಳನ್ನು ಆಹಾರವಾಗಿ ಕೊಲ್ಲುತ್ತಿರುತ್ತದೆ. ಅದೊಮ್ಮೆ ಮೊಲದ ಸರದಿ ಬರುತ್ತದೆ. ಅಂದು ಸಿಂಹದ ಬಳಿ ತಡವಾಗಿ ಆ ಮೊಲ ಬರುತ್ತದೆ. ಸಿಟ್ಟಿಗೆದ್ದ ಸಿಂಹ, ತಡವಾಗಿ ಬಂದದ್ದೇಕೆ ಎಂದು ಆರ್ಭಟಿಸುತ್ತದೆ. ಈ ಪುಟಾಣಿ ಮೊಲ, ಬರುವ ದಾರಿಯಲ್ಲಿ ಮತ್ತೊಂದು ಸಿಂಹ ಎದುರಿಗೆ ಸಿಕ್ಕಿ, ನಿನ್ನ ಬಗ್ಗೆ ಬಯ್ದಿತು. ನನ್ನನ್ನು ಕೊಲ್ಲುವುದಾಗಿ ಹೇಳಿತು. ಅದರಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ತಡವಾಯಿತು ಎನ್ನುತ್ತದೆ. ಮೊದಲೇ ಹಸಿದಿದ್ದ ಸಿಂಹಕ್ಕೆ, ಅದೇ ಕಾಡಿನಲ್ಲಿ ತನಗೆ ಪ್ರತಿಸ್ಪರ್ಧಿ ಇರುವುದೇ ಎಂದು ಸಿಟ್ಟು ಬರುತ್ತದೆ. ಅದೆಲ್ಲಿ ಇರುವುದೋ ಆ ಪ್ರಾಣಿ, ನನ್ನನ್ನು ಕರೆದುಕೊಂಡು ಹೋಗು ಎನ್ನುತ್ತದೆ ಸಿಂಹ. ಬಾವಿಯೊಂದರ ಬಳಿ ಆ ಸಿಂಹವನ್ನು ಕರೆದುಕೊಂಡು ಬಂದ ಮೊಲ, ತನ್ನ ಉಪಾಯದ ಆಲೋಚನೆಯಿಂದ ಅಷ್ಟು ದೊಡ್ಡ ಪ್ರಾಣಿಯು ಬಾವಿಗೆ ಹಾರಿ ಸಾಯುವಂತೆ ಮಾಡುತ್ತದೆ.
ನೀತಿ ಪಾಠ: ಶತ್ರು ಅಥವಾ ವಿರೋಧಿ ಗಾತ್ರದಿಂದ, ಶಕ್ತಿಯಿಂದ ಎಷ್ಟು ಅಗಾಧ ಎಂಬುದು ಮುಖ್ಯವಲ್ಲ. ಬುದ್ಧಿಶಕ್ತಿಯಿಂದ ಎಂಥವರನ್ನಾದರೂ ಮಣಿಸಬಹುದು.


Click it and Unblock the Notifications