ಇದು ಒಬ್ಬ ಮಗನಿಗೆ ತಂದೆ ಹೇಳಿದ ಐದು ಪಾಠಗಳ ಲೇಖನ. ವ್ಯಾಪಾರ- ಉದ್ಯಮದಲ್ಲಿ ಯಶಸ್ಸು ಸಾಧಿಸಬೇಕು ಅಂದುಕೊಂಡ ಮಗನನ್ನು ಎದುರು ಕೂಡಿಸಿಕೊಂಡು ಹೇಳಿದ್ದೇನಲ್ಲ. ಆದರೆ ಜತೆಗೆ ಸಮಯ ಕಳೆಯುವಾಗ ಅಲ್ಲಿ- ಇಲ್ಲಿ ಸನ್ನಿವೇಶ ಸೃಷ್ಟಿಯಾದಾಗ ಅಪ್ಪ ಹೇಳಿದ ಮಾತುಗಳನ್ನೇ ಮಗನು ನೆನಪಿಟ್ಟುಕೊಂಡು ಎಲ್ಲರ ಜತೆ ಹಂಚಿಕೊಳ್ಳುತ್ತಿದ್ದಾರೆ.
ಈ ರೀತಿ ತಮ್ಮ ಅನುಭವವನ್ನು ಅಪ್ಪಂದಿರು ತಮ್ಮ ಮಕ್ಕಳಿಗೆ ಹೇಳಿಯೇ ಹೇಳಿರುತ್ತಾರೆ. ಕೆಲವರು ಕೇಳಿಸಿಕೊಂಡಿರುತ್ತೀವಿ. ಕೆಲವರು ನೆನಪೂ ಇಟ್ಟುಕೊಂಡಿರುತ್ತೀವಿ. ಹಾಗೆ ನೆನಪಿಟ್ಟುಕೊಂಡ ಮಗನೊಬ್ಬನು ಹಂಚಿಕೊಳ್ಳುತ್ತಿರುವ ಅಪ್ಪ ಹೇಳಿದ ಐದು ಪಾಠಗಳು ಇಲ್ಲಿವೆ. ಬಹಳ ಆಸಕ್ತಿಕರವಾಗಿಯೂ ಇದೆ. ಇನ್ನೇಕೆ ತಡ, ಮುಂದೆ ಓದಿ...
ನಾವೇ ಉದಾಹರಣೆಯಾಗಿ ನಿಲ್ಲಬೇಕು
ಯಾವುದಾದರೂ ಕೆಲಸ ಮಾಡಿಸುವಾಗ ಕೂಗಾಡುತ್ತಾ, ಕಿರುಚಾಡುತ್ತಾ, ಕೆಲವರಂತೂ ಹೊಡೆದು ಮತ್ತೊಬ್ಬರಿಂದ ಕೆಲಸವನ್ನು ತೆಗೆಯುತ್ತಾರೆ. "ಹೀಗೇ ಇರಬೇಕು ನೋಡಿ. ಇಲ್ಲದಿದ್ದರೆ ಇವರ್ಯಾರೂ ಕೆಲಸ ಮಾಡುವುದಿಲ್ಲ" ಅಂತಲೂ ಹೇಳುತ್ತಾರೆ. ಆದರೆ ಅಪ್ಪ ಏನು ಹೇಳುತ್ತಿದ್ದರು ಗೊತ್ತಾ? ಮಗು, ಯಾವುದಾದರೂ ಕೆಲಸವನ್ನು ಮೊದಲು ನಾವೇ ಶುರು ಮಾಡಬೇಕು. ಇನ್ನೊಬ್ಬರಿಂದ ಯಾವ ರೀತಿಯ ಕೆಲಸ, ಎಷ್ಟು ಶ್ರದ್ಧೆ ನಿರೀಕ್ಷಿಸುತ್ತಿದ್ದೇವೆ ಮತ್ತು ಆ ಕೆಲಸ ನಮ್ಮ ಪಾಲಿಗೆ ಅದೆಷ್ಟು ಮುಖ್ಯ ಎಂದು ತಿಳಿಸಿಕೊಡುವುದಕ್ಕೆ ಅದಕ್ಕಿಂತ ಉತ್ತಮ ಮಾರ್ಗ ಇಲ್ಲ. ಹಾಗಂತ ಶುರು ಮಾಡಿ, ಉಳಿದವರು ಸಹ ಅದರಲ್ಲಿ ಪಾಲ್ಗೊಳ್ಳಲು ಆರಂಭವಾದಾಗ ನಾವು ಹಿಂದೆ ಸರಿಯಬಾರದು. ಯಾವುದೇ ಗುರಿ ಅಥವಾ ಕೆಲಸದೊಳಗೆ ಸಾಗುವ ಮೊದಲ ವ್ಯಕ್ತಿ ಮತ್ತು ಅದರಿಂದ ಆಚೆ ಬರುವ ಕೊನೆ ವ್ಯಕ್ತಿ ನಾವೇ ಆಗಿರಬೇಕು ಎನ್ನುತ್ತಾರೆ. ಅದರಲ್ಲೂ ಕಷ್ಟದ ಕೆಲಸ ಎನ್ನುವುದು ಗೊತ್ತಾದರಂತೂ ಅಪ್ಪನೇ ಮೊದಲಿಗೆ ಸಹಾಯಕ್ಕೆ ನಿಲ್ಲುತ್ತಾರೆ.
ಹೇಳಿದ ಸಮಯಕ್ಕೆ ಭೇಟಿ ಆಗಬೇಕು
ಅಪ್ಪ ಅದೊಮ್ಮೆ ತಮ್ಮ ಗ್ರಾಹಕರನ್ನು ಭೇಟಿ ಆಗಲು ಹೋಗಬೇಕಿತ್ತಂತೆ. ಹೇಳಿದ ಸಮಯಕ್ಕಿಂತ ಇಪ್ಪತ್ತು ನಿಮಿಷ ತಡವಾಗಿ ಹೋಗಿದ್ದಾರೆ. ಆದರೂ ಆ ಗ್ರಾಹಕ ಏನೂ ಬೇಸರಿಸಿಕೊಳ್ಳದೆ, ಭೇಟಿ ಯಶಸ್ವಿ ಕೂಡ ಆಯಿತಂತೆ. ಆದರೆ ಅದೇ ದಿನ ಆ ಗ್ರಾಹಕರ ಮಗನ ಪದವಿ ಪ್ರದಾನ ಕಾರ್ಯಕ್ರಮ ಇತ್ತು (ಕಾಲೇಜು ಕಾನ್ವೋಕೇಷನ್). ಅಲ್ಲಿಗೆ ಹೋಗಲು ಅವರಿಗೆ ಆಗಲಿಲ್ಲವಂತೆ. ತನ್ನ ತಂದೆ ಆ ಕಾರ್ಯಕ್ರಮಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಅವರ ಮಗ ವರ್ಷಗಟ್ಟಲೆ ಸಿಟ್ಟಾಗಿದ್ದನಂತೆ. ಇದು ಆ ನಂತರ ಅಪ್ಪನಿಗೆ ಗೊತ್ತಾಗಿತ್ತು. ಈ ಘಟನೆ ಬಗ್ಗೆ ಅವರು ಇಂದಿಗೂ ಬೇಸರ ವ್ಯಕ್ತಪಡಿಸುತ್ತಾರೆ. ಆಗಿನಿಂದ ಯಾರನ್ನೇ ಭೇಟಿ ಆಗಬೇಕಿದ್ದರೂ ಹತ್ತರಿಂದ ಇಪ್ಪತ್ತು ನಿಮಿಷ ಮುಂಚಿತವಾಗಿಯೇ ಅಪ್ಪ ಹೇಳಿದ ಜಾಗದಲ್ಲಿ ಇರುತ್ತಾರೆ.
ಕಷ್ಟದ ಸನ್ನಿವೇಶದಲ್ಲಿ ಭಾವನಾತ್ಮಕ ನಿರ್ಧಾರ ಕೈಗೊಳ್ಳಬಾರದು
ಏನೋ ಒಂದು ಕಷ್ಟ ಬಂದ ತಕ್ಷಣ ಜತೆಜತೆಗೆ ಸಿಟ್ಟು ಬರುತ್ತದೆ. ಎದುರಿನವರ ಮಾತು ಕೇಳಿಸಿಕೊಳ್ಳುವಷ್ಟು ತಾಳ್ಮೆ ಸಹ ಇರುವುದಿಲ್ಲ. ಇಂಥದ್ದೇ ಒಂದು ಸನ್ನಿವೇಶದಲ್ಲಿ ಅಪ್ಪ ಹೇಳಿದ ಮಾತು ಯಾವಾಗಲೂ ನೆನಪಿರುತ್ತದೆ. ಕಷ್ಟ ಎದುರಿಗಿದೆ ಅಂದಾಗ ಅದರೊಳಗೆ ನಿಂತು ಆಲೋಚನೆ ಮಾಡಬೇಡ. ಆಗ ಸುತ್ತಲೂ ಗೋಡೆಗಳೇ ಕಾಣಿಸುತ್ತವೆ. ಅದರ ಬದಲಿಗೆ ಆ ಸಮಸ್ಯೆಯಿಂದ ಹೊರಬಂದು ಒಮ್ಮೆ ಯೋಚಿಸು. ಆಗ ಆ ಗೋಡೆಯ ಮಧ್ಯೆ ಇರುವ ಕಿಟಕಿ, ಬಾಗಿಲುಗಳು ಕಾಣಿಸುತ್ತವೆ. ಆ ಸಮಸ್ಯೆಯಿಂದ ಹೊರಬರುವ ದಾರಿ ಗೋಚರಿಸುತ್ತದೆ. ಇಂಥ ಕಷ್ಟದ ಸನ್ನಿವೇಶದಲ್ಲಿ ತಾಳ್ಮೆಯಿಂದ ಇರುವುದನ್ನು ಕಲಿಯಬೇಕು. ನಮ್ಮ ಸಿಟ್ಟನ್ನು ಇಷ್ಟಪಟ್ಟವರ ಮೇಲೆ ತೋರಿಸಿದರೆ ಸಂಬಂಧವೂ ಹಾಳಾಗುತ್ತದೆ. ಆದ್ದರಿಂದ ಕಷ್ಟದ ಸನ್ನಿವೇಶದಲ್ಲಿ ಭಾವನಾತ್ಮಕವಾಗಿ ನಿರ್ಧಾರ ಕೈಗೊಳ್ಳಬಾರದು ಎನ್ನುತ್ತಾರೆ ಅಪ್ಪ.
ಒಳ್ಳೆ ವಿಚಾರಗಳನ್ನೇ ಮಾತನಾಡು
ನಿಮ್ಮ ಜತೆ ಕೆಲಸ ಮಾಡುವವರೊಂದಿಗೆ ಏನು ಮಾತನಾಡುತ್ತೀರಿ? ಅಪ್ಪ ತಮ್ಮ ಮಧ್ಯಾಹ್ನದ ಊಟವನ್ನು ಸಹೋದ್ಯೋಗಿಗಳ ಜತೆಗೆ ಮಾಡುತ್ತಿದ್ದರು. ಆ ಸಮಯದಲ್ಲಿ ಯಾವ ಕಾರಣಕ್ಕೂ ಕೆಲಸದ ಬಗ್ಗೆ ಮಾತನಾಡುತ್ತಿರಲಿಲ್ಲ. ತುಂಬ ತಮಾಷೆ ಅನ್ನೋ ಹಾಗೆ ಹವಾಮಾನ, ತಮ್ಮ ಕಾಲೇಜು ದಿನಗಳು, ರಾಜಕಾರಣ, ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಇಂಥದ್ದರ ಬಗ್ಗೆ ಮಾತನಾಡುತ್ತಿದ್ದರು. ಹೀಗೆ ಮಾಡುತ್ತಿದ್ದುದರಿಂದ ಒಂದು ಕುಟುಂಬ ಅನ್ನೋ ರೀತಿಯ ವಾತಾವರಣ ಇರುತ್ತಿತ್ತು. ಕೆಲಸದ ಅವಧಿಯ ನಂತರ ಕೂಡ ಕಚೇರಿಯಲ್ಲಿ ಇದ್ದು, ಗಂಟೆಗಟ್ಟಲೆ ಕೆಲಸ ಮಾಡಬೇಕಿದ್ದರೂ ಯಾವ ಬೇಜಾರಿಲ್ಲದೆ ಖುಷಿಖುಷಿಯಾಗಿ ಎಲ್ಲರೂ ಇರುತ್ತಿದ್ದರು. ಆ ಕಾರಣಕ್ಕೆ ಒಳ್ಳೆ ಸಂಗತಿ, ವಿಚಾರಗಳನ್ನೇ ಮಾತನಾಡಬೇಕು ಎನ್ನುತ್ತಿರುತ್ತಾರೆ ಅಪ್ಪ.
ಕುಟುಂಬಕ್ಕೂ ಸಮಯ ಮೀಸಲಿಡಬೇಕು
ಪರ್ಸನಲ್ ಲೈಫ್ ಹಾಗೂ ಬಿಜಿನೆಸ್ ಎರಡನ್ನೂ ಸರಿಯಾಗಿ ಬ್ಯಾಲೆನ್ಸ್ ಮಾಡದಿದ್ದಲ್ಲಿ ನೀವು ಖಾಲಿ ಖಾಲಿ. ಅದಕ್ಕೆ ಅವರೊಂದು ಉದಾಹರಣೆ ಕೂಡ ಕೊಡುತ್ತಾರೆ: ತುಂಬ ಬಿಜಿಯಾಗಿದ್ದ ಉದ್ಯಮಿಯೊಬ್ಬ ದೇಶ- ವಿದೇಶ ಅಂತ ಸುತ್ತುತ್ತಲೇ ಇದ್ದನಂತೆ. ವಿಪರೀತ ಹಣ, ಹೆಸರು, ದಿನ ಬೆಳಗೆದ್ದರೆ ಮೀಡಿಯಾಗಳಲ್ಲಿ ಅವನ ಹೆಸರು. ಹೀಗೆ ವಾರಗಟ್ಟಲೆ, ತಿಂಗಳುಗಟ್ಟಲೆ ಮನೆಯ ಸೇರುತ್ತಿರಲಿಲ್ಲವಂತೆ. ಒಮ್ಮೆ ಮನೆಗೆ ಬಂದ. ತಾನು ಬಹಳ ಪ್ರೀತಿಯಿಂದ ಬೆಳೆಸಿದ್ದ ನಾಯಿ ನೋಡಿ ಬೊಗಳಲು ಶುರು ಮಾಡಿತಂತೆ. ತನ್ನ ಒಡೆಯನನ್ನೇ ಗುರುತು ಹಿಡಿಯಲಿಲ್ಲ. ಆಗ ಅವನಿಗೆ ಅನಿಸಿತಂತೆ: ನನ್ನ ಹೆಂಡತಿ, ಮಕ್ಕಳು ಸಹ ಅದೆಷ್ಟು ತನ್ನನ್ನು ಮಿಸ್ ಮಾಡಿಕೊಳ್ಳುತ್ತಿರಬಹುದು? ಆಗಿನಿಂದ ತನ್ನ ಕೆಲಸದ ಒತ್ತಡ ಎಷ್ಟೇ ಇದ್ದರೂ ಕುಟುಂಬಕ್ಕೆ ಅಂತ ಸಮಯ ಮೀಸಲಿಡಲು ಶುರು ಮಾಡಿದನಂತೆ. ಇದು ನಿಜವಾದ ಯಶಸ್ಸು ಎನ್ನುತ್ತಾರೆ ಅಪ್ಪ.
ಈಗ ನೀವು ಹೇಳಿ, ಅಪ್ಪ ಹೇಳಿದ ಮಾತುಗಳು ಎಷ್ಟು ಅಮೂಲ್ಯ ಅಲ್ಲವೇ?


Click it and Unblock the Notifications