ವೈಶಾಖ ಮಾಸದಲ್ಲಿ ಮೂರನೇ ದಿನದಂದು ಹಿಂದೂ ಬಾಂಧವರು ಅಕ್ಷಯ ತೃತೀಯವನ್ನು ಆಚರಣೆ ಮಾಡುತ್ತಾರೆ. ಅತೀ ಪವಿತ್ರವಾದ ದಿನಗಳಲ್ಲಿ ಈ ಅಕ್ಷಯ ತೃತೀಯ ಕೂಡಾ ಒಂದಾಗಿದೆ. ಸಾಮಾನ್ಯವಾಗಿ ಅಕ್ಷಯ ತೃತೀಯ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಬರುತ್ತದೆ. ಹಾಗೆಯೇ ಈ ದಿನವನ್ನು ಅತೀ ಶುಭಕರ, ಮಂಗಳಕರ ಎಂದು ನಂಬಲಾಗುತ್ತದೆ. ಈ ದಿನ ಏನೇ ಖರೀದಿ ಮಾಡಿದರೂ ನಮ್ಮಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಅಕ್ಷಯ ತೃತೀಯ ದಿನದಂದು ಸಾಮಾನ್ಯವಾಗಿಯೇ ಜನರು ಚಿನ್ನ, ಬೆಳ್ಳಿ ಮತ್ತು ಅತೀ ಅಮೂಲ್ಯವಾದ ಲೋಹಗಳನ್ನು ಖರೀದಿ ಮಾಡುವುದಕ್ಕೆ ಆದ್ಯತೆ ನೀಡುತ್ತಾರೆ. ಈ ದಿನದಂದು ಮಾಡುವ ಯಾವುದೇ ಹೂಡಿಕೆಯೂ ಕೂಡಾ ನಿಮಲ್ಲಿ ಶ್ರೀಮಂತಿಕೆ ತರುತ್ತದೆ, ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅಕ್ಷಯ ಎಂಬ ಪದವೇ ಇದನ್ನು ಹೇಳುತ್ತದೆ. ಅಕ್ಷಯ ಎಂದರೆ ಎಂದಿಗೂ ಮುಗಿಯದ ಎಂದರ್ಥವಾಗಿದೆ. ಹಾಗಾದರೆ ಈ ಬಾರಿ ನೀವು ಅಕ್ಷಯ ತೃತೀಯ ದಿನ ಏನು ಖರೀದಿ ಮಾಡಬಹುದು ಎಂದು ತಿಳಿಯೋಣ ಮುಂದೆ ಓದಿ...

ಚಿನ್ನ ಖರೀದಿ ಎಂದಿಗೂ ಉತ್ತಮ
ಜನರು ಹೆಚ್ಚಾಗಿ ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿ ಮಾಡುತ್ತಾರೆ. ಅಕ್ಷಯ ತೃತೀಯ ಎಂದ ಕೂಡಲೇ ನಮ್ಮ ತಲೆಯಲ್ಲಿ ಬರುವುದೇ ಚಿನ್ನ. ಈ ದಿನದಂದು ಚಿನ್ನವನ್ನು ಖರೀದಿಸಿದರೆ ಸಂಪತ್ತು ಮತ್ತು ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ. ಹಾಗೆಯೇ ಈ ದಿನ ಚಿನ್ನ ಖರೀದಿ ಮಾಡಿದರೆ ಅದರ ಮೌಲ್ಯ ವೃದ್ಧಿಯಾಗುತ್ತದೆ, ಕಡಿಮೆಯಾಗುವುದಿಲ್ಲ ಎಂಬ ನಂಬಿಕೆಯೂ ಇದೆ. ನೀವು ಜ್ಯುವೆಲ್ಲರಿ (ಆಭರಣ), ನಾಣ್ಯ, ಬಾರ್‌ಗಳ ರೂಪದಲ್ಲಿ ಚಿನ್ನ ಖರೀದಿಸಬಹುದು.
ಬೆಳ್ಳಿ ಖರೀದಿಯೂ ಮಾಡಬಹುದು
ಸಾಮಾನ್ಯವಾಗಿ ನಾವು ಅಕ್ಷಯ ತೃತೀಯ ಎಂದರೆ ಚಿನ್ನ ಖರೀದಿ ಮಾಡುವುದು ಎಂದುಕೊಳ್ಳುತ್ತೇವೆ. ಆದರೆ ಅಕ್ಷಯ ತೃತೀಯ ದಿನ ಮಾಡಿದ ಹೂಡಿಕೆ, ಖರೀದಿ ಎಲ್ಲವೂ ಅದೃಷ್ಟ ತರಲಿದೆ ಎಂಬ ಮಾತಿದೆ. ನೀವು ಅಕ್ಷಯ ತೃತೀಯ ದಿನ ಬೆಳ್ಳಿಯನ್ನು ಕೂಡಾ ಖರೀದಿಸಬಹುದು. ಸಾಮಾನ್ಯವಾಗಿ ಅಕ್ಷಯ ತೃತೀಯ ದಿನ ಬೆಳ್ಳಿಯ ನಾಣ್ಯ ಮತ್ತು ಜ್ಯುವೆಲ್ಲರಿಯನ್ನು ಖರೀದಿ ಮಾಡಲಾಗುತ್ತದೆ. ಇನ್ನು ಚಿನ್ನಕ್ಕಿಂತ ಬೆಳ್ಳಿಯು ಕಡಿಮೆ ದರದಲ್ಲಿ ಲಭ್ಯವಾಗುತ್ತದೆ. ಆದರೆ ಇದು ಕೂಡಾ ಅಮೂಲ್ಯ ಲೋಹವಾಗಿದೆ.
ವಜ್ರ ಮತ್ತು ಇತರೆ ಪ್ರಮುಖ ಲೋಹಗಳು
ಅಕ್ಷಯ ತೃತೀಯ ದಿನ ಬೆಲೆಬಾಳುವ ವಜ್ರ ಹಾಗೂ ಇತರೆ ಲೋಹಗಳನ್ನು, ಸ್ಟೋನ್‌ಗಳನ್ನು ಕೂಡಾ ಖರೀದಿ ಮಾಡಲಾಗುತ್ತದೆ. ನೀಲಮಣಿಗಳು, ಪಚ್ಚೆಗಳು ಮತ್ತು ಮಾಣಿಕ್ಯಗಳನ್ನು ಅಕ್ಷಯ ತೃತೀಯ ದಿನ ಖರೀದಿ ಮಾಡಬಹುದಾಗಿದೆ. ಈ ಮಣಿಗಳನ್ನು ಖರೀದಿ ಮಾಡಿದರೂ ಕೂಡಾ ಸಂಪತ್ತು, ಅದೃಷ್ಟ ಲಭ್ಯವಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ವಜ್ರದ ಖರೀದಿಯನ್ನು ಒಂದು ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ. ಈ ದಿನ ವಜ್ರ ಖರೀದಿ ಮಾಡಿದರೆ ಸಂಪತ್ತು ಬೆಳೆಯಲಿದೆ ಎಂಬ ನಂಬಿಕೆಯಿದೆ.
ರಿಯಲ್ ಎಸ್ಟೇಟ್ ಹೂಡಿಕೆ
ನೀವು ಅಕ್ಷಯ ತೃತೀಯ ದಿನ ಯಾವುದೇ ಸಂಪತ್ತನ್ನು ಖರೀದಿ ಮಾಡಿದರೂ ಅದು ನಿಮಗೆ ಲಾಭವನ್ನು ತರಲಿದೆ, ಸಂಪತ್ತು ವೃದ್ದಿಯಾಗಲಿದೆ ಎಂಬ ನಂಬಿಕೆ. ಅದರಂತೆ ನೀವು ಚಿನ್ನ, ಬೆಳ್ಳಿ ಬದಲಾಗಿ ಆಸ್ತಿಯನ್ನು ಖರೀದಿ ಮಾಡಬಹುದು. ಈ ದಿನ ಮನೆಯನ್ನು ಖರೀದಿ ಮಾಡಿದರೆ, ಅಥವಾ ರಿಯಲ್ ಎಸ್ಟೇಟ್ ಖರೀದಿಯಿಂದ ಅದೃಷ್ಟ, ಯಶಸ್ವಿ ಲಭ್ಯವಾಗಲಿದೆ ಎಂಬ ನಂಬಿಕೆಯಿದೆ. ಆದರೆ ರಿಯಲ್ ಎಸ್ಟೇಟ್ ಹೂಡಿಕೆ ವೇಳೆ ಎಂದಿಗೂ ಆ ಸ್ಥಳದ ಬಗ್ಗೆ ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ.
ಇತರೆಡೆ ಮಾಡುವ ಹೂಡಿಕೆಗಳು
ನೀವು ಅಕ್ಷಯ ತೃತೀಯ ದಿನ ಚಿನ್ನ, ಬೆಳ್ಳಿ, ವಜ್ರ, ಮುತ್ತು, ಹವಳ ಖರೀದಿ ಮಾಡುವ ಬದಲಾಗಿ ನೀವು ಹೂಡಿಕೆಯನ್ನು ಮಾಡಬಹುದು. ಸ್ಟಾಕ್ ಮಾರುಕಟ್ಟೆ, ಮ್ಯೂಚುವಲ್ ಫಂಡ್, ಇತರೆ ಹಣಕಾಸು ಯೋಜನೆಗಳಿಗೆ ನೀವು ಅಕ್ಷಯ ತೃತೀಯ ದಿನ ಹೂಡಿಕೆ ಮಾಡಬಹುದಾಗಿದೆ. ಈ ದಿನ ಮಾಡುವ ಯಾವುದೇ ಹೂಡಿಕೆಯು ನಿಮಗೆ ಉತ್ತಮ ರಿಟರ್ನ್ ಅನ್ನು ನೀಡಲಿದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಹೂಡಿಕೆ ಮಾಡುವ ಮುನ್ನ ತಜ್ಞರ ಅಭಿಪ್ರಾಯ ಪಡೆಯುವುದು ಮುಖ್ಯವಾಗುತ್ತದೆ.


Click it and Unblock the Notifications
