ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಆಯೋಜನೆ ಮಾಡಿದ್ದಾರೆ. ಮುಂಬೈನ ಜಿಯೋ ವಲ್ಡ್ ಸೆಂಟರ್‌ನ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್‌ನಲ್ಲಿ (ಎನ್‌ಎಂಎಸಿಸಿ) ನೀತಾ ಅಂಬಾನಿ ಈ ಮಕ್ಕಳ ಹಬ್ಬವನ್ನು ಆಯೋಜನೆ ಮಾಡಿದ್ದಾರೆ. ಇದು ಸುಮಾರು 11 ದಿನಗಳ ಮಕ್ಕಳ ಹಬ್ಬವಾಗಿದ್ದು, 2 ವರ್ಷದಿಂದ 14 ವರ್ಷದ ಮಕ್ಕಳು ಭಾಗಿಯಾಗಬಹುದು. ಈ ಮಕ್ಕಳ ಹಬ್ಬಕ್ಕೆ 'ಎನ್‌ಎಂಎಸಿಸಿ ಬಚ್‌ಪನ್' ಎಂದು ಹೆಸರಿಡಲಾಗಿದೆ.
'ಎನ್‌ಎಂಎಸಿಸಿ ಬಚ್‌ಪನ್' (ಬಚ್‌ಪನ್ ಹಿಂದಿ ಶಬ್ದವಾಗಿದ್ದು, ಬಾಲ್ಯ ಎಂದಾಗಿದೆ) ಮಕ್ಕಳಿಗಾಗಿ ಆಯೋಜನೆ ಮಾಡಲಾಗುತ್ತಿರುವ ಆಕರ್ಷಕ ಮತ್ತು ವೈವಿಧ್ಯಮಯವಾದ ಒಂದು ಕಾರ್ಯಕ್ರಮವಾಗಿದೆ. ಇಲ್ಲಿ ನಾಟಕ ಪ್ರದರ್ಶನ, ಸಂವಾದಾತ್ಮಕ ಕಾರ್ಯಾಗಾರಗಳು, ಕಲೆ ಮತ್ತು ಕ್ರಾಫ್ಟ್ ಚಟುವಟಿಕೆ, ಇತರೆ ಅನೇಕ ಆಕರ್ಷಕ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಯೋಜನೆ ಮಾಡಲಾಗುತ್ತದೆ ಎಂದು ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಅಥವಾ ಎನ್‌ಎಂಎಸಿಸಿ ಹೇಳಿದೆ.

ಎನ್‌ಎಂಎಸಿಸಿ ಪ್ರಕಾರ ಮುಂದಿನ ಪೀಳಿಗೆಗೆ ಕಲೆ ಮತ್ತು ಸಂಸ್ಕೃತಿಯನ್ನು ತಿಳಿಸುವುದು, ನಮ್ಮ ಸಂಸ್ಕೃತಿಯನ್ನು ಮುನ್ನಡೆಸುವುದು, ರಕ್ಷಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ಇನ್ನು ಎನ್‌ಎಂಎಸಿಸಿ ಬಚ್‌ಪನ್ ಬಾಲ್ಯದ ಕಲಿಕೆ ಮತ್ತು ಕ್ರಿಯೇಟಿವಿಟಿಯನ್ನು ನಾವು ಗುರುತಿಸುತ್ತೇವೆ. ಆಕರ್ಷಕವಾಗಿ ಕಲೆ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ ಎಂದು ಕೂಡಾ ಎನ್‌ಎಂಎಸಿಸಿ ಹೇಳುತ್ತದೆ.
ಈ ಕಾರ್ಯಕ್ರಮವು ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಸುಂದರ ಕ್ಷಣವನ್ನು ಕಳೆಯಲು, ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡುತ್ತದೆ ಎಂದು ಅದು ಹೇಳಿದೆ. "ಎನ್‌ಎಂಎಸಿಸಿ ಬಚ್‌ಪನ್" ಎಂಬುದು ಕಲಿಕೆ ಮತ್ತು ಆನಂದ ಜೊತೆಯಾದ ವೇದಿಕೆಯಾಗಿದೆ ಎಂದು ಉಲ್ಲೇಖ ಮಾಡಿದೆ. ಹಾಗಾದರೆ ಈ ಕಾರ್ಯಕ್ರಮ ಯಾವಾಗ ನಡೆಯುವುದು, ಎಷ್ಟು ಟಿಕೆಟ್ ದರ ಎಂದು ತಿಳಿಯೋಣ ಮುಂದೆ ಓದಿ...
ಎನ್‌ಎಂಎಸಿಸಿ ಬಚ್‌ಪನ್: ದಿನಾಂಕ, ಚಟುವಟಿಕೆಗಳು
ಎನ್‌ಎಂಎಸಿಸಿ ಬಚ್‌ಪನ್ ಸುಮಾರು 11 ದಿನಗಳ ಸಮಾರಂಭವಾಗಿದ್ದು, ಜುಲೈ 20 ರಂದು ಆರಂಭವಾಗಲಿದೆ. ವಿಜ್ಞಾನ ಪ್ರದರ್ಶನಗಳು, ಡ್ಯಾನ್ಸ್ ಸರ್ಕಸ್ ಕಾರ್ಯಕ್ರಮಗಳು, ಸ್ಥಳೀಯ ರಂಗಚಟುವಟಿಕೆಗಳ ಪರಿಚಯ, ನೃತ್ಯ ಕಾರ್ಯಕ್ರಮಗಳು, ಕಲಾ ಕಾರ್ಯಕ್ರಮಗಳು, ತಂತ್ರಜ್ಞಾನ ಸಂಬಂಧಿತ ಕಾರ್ಯಕ್ರಮಗಳು, ಮೊದಲಾದವುಗಳನ್ನು ಎನ್‌ಎಂಎಸಿಸಿ ಬಚ್‌ಪನ್‌ನಲ್ಲಿ ಆಯೋಜನೆ ಮಾಡಲಾಗುತ್ತದೆ.
ಎನ್‌ಎಂಎಸಿಸಿ ಬಚ್‌ಪನ್: ಟಿಕೆಟ್ ದರ, ಬುಕ್ಕಿಂಗ್
ಎನ್‌ಎಂಎಸಿಸಿ ಬಚ್‌ಪನ್ ಕಾರ್ಯಕ್ರಮದಲ್ಲಿ ಭಾಗಿಯಾಗಲು nmacc.com ಮತ್ತು bookmyshow.com ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಟಿಕೆಟ್ ದರವು 250 ರೂಪಾಯಿಯಿಂದ ಆರಂಭವಾಗುತ್ತದೆ.
ನೀತಾ ಅಂಬಾನಿ ಏನು ಹೇಳುತ್ತಾರೆ?
"11 ದಿನಗಳ ಕಾಲ ನಡೆಯುವ ಮಕ್ಕಳ ಹಬ್ಬವಾದ ಎನ್‌ಎಂಎಸಿಸಿ ಬಚ್‌ಪನ್ ಅನ್ನು ಘೋಷಿಸಲು ನಾನು ಸಂತೋಷ ಪಡುತ್ತೇನೆ. ವಿಭಿನ್ನವಾದ ಕಾರ್ಯಕ್ರಮಗಳು, ಕಾರ್ಯಾಗಾರಗಳು ಇದರಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಸಣ್ಣ ವಯಸ್ಸಿನವರ ಹೃದಯ ಮತ್ತು ಮನಸ್ಸನ್ನು ಸಂತೋಷ ಮತ್ತು ಸ್ಫೂರ್ತಿಯಿಂದ ಬೆಳಗಿಸುತ್ತದೆ ಎಂಬ ನಂಬಿಕೆಯನ್ನು ನಾವು ಹೊಂದಿದ್ದೇವೆ," ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.
"ಮನರಂಜನೆ ಎಂದರೆ ಒಂದು ಕಲಿಕೆ ಎಂಬ ವಾತಾವರಣವನ್ನು ಈ ಮಕ್ಕಳ ಹಬ್ಬದಲ್ಲಿ ಸೃಷ್ಟಿ ಮಾಡಲಾಗುತ್ತದೆ. ಕಲೆ ಮತ್ತು ಸಂಸ್ಕೃತಿಯನ್ನು ಅತ್ಯಾಕರ್ಷಕ ಮತ್ತು ಎಲ್ಲ ಮಕ್ಕಳ ಜೀವನದ ಒಂದು ಭಾಗವನ್ನಾಗಿಸುವ ನಮ್ಮ ಒಂದು ಪ್ರಯತ್ನ ಇದಾಗಿದೆ. ನಾನು ಎಲ್ಲ ಮಕ್ಕಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ," ಎಂದು ನೀತಾ ಅಂಬಾನಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.


Click it and Unblock the Notifications