ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನವೇ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಭರವಸೆಯನ್ನು ನೀಡಿತ್ತು. ಈಗ ಚುನಾವಣೆಯಲ್ಲಿ ಗೆದ್ದು ಗದ್ದುಗೆಯನ್ನು ಪಡೆದ ಬಳಿಕ ಈ ಐದೂ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಲಕ್ಷ್ಮೀ, ಯುವ ನಿಧಿ ಎಂಬ ಐದು ಯೋಜನೆಗಳ ಪೈಕಿ ನಾಲ್ಕು ಯೋಜನೆಗಳು ಪ್ರಮುಖವಾಗಿ ಮಹಿಳೆಯರಿಗೆ ಹಣಕಾಸು ಸಹಾಯ ಮಾಡುವ ಯೋಜನೆಗಳಾಗಿದೆ.
ಯುವ ನಿಧಿ ನಿರುದ್ಯೋಗಿ ಯುವಕರಿಗೆ ಸಹಾಯ ಮಾಡುವ ಯೋಜನೆಯಾಗಿದ್ದರೆ, ಗೃಹಲಕ್ಷ್ಮೀ ಮನೆಯ ಒಡತಿ 2000 ರೂಪಾಯಿ ನೀಡುವ ಯೋಜನೆಯಾಗಿದೆ. ಇನ್ನು ಶಕ್ತಿ ಯೋಜನೆಯ ಪ್ರಯೋಜನವನ್ನು ಈಗಾಗಲೇ ಪಡೆಯುತ್ತಿರುವ ಮಹಿಳೆಯರು ಉಚಿತವಾಗಿ ಬಸ್ ಸಂಚಾರ ಮಾಡಿ ಹಣವನ್ನು ಇತರೆ ಖರ್ಚಿಗೆ ಜೋಪಾನ ಮಾಡುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಲೇಖನದಲ್ಲಿ ನಾವು ಅನ್ನ ಭಾಗ್ಯ ಯೋಜನೆಯಿಂದ ಮಹಿಳೆಗೆ ಮಾತ್ರವಲ್ಲ ಒಂದು ಕುಟುಂಬಕ್ಕೆ ಹೇಗೆ ಸಹಾಯವಾಗುತ್ತದೆ, ನಿಮ್ಮ ಖಾತೆಗೆ ಹಣ ಬಂದಿದೆಯೇ ಎಂದು ಚೆಕ್ ಮಾಡುವುದು ಹೇಗೆ, ಎಂಬ ಮೊದಲಾದ ಮಾಹಿತಿಯನ್ನು ನೀಡಿದ್ದೇವೆ ಮುಂದೆ ಓದಿ....

ಅನ್ನಭಾಗ್ಯ ಯೋಜನೆ ಆರಂಭ
ಐದು ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆ ಹೊಸ ಯೋಜನೆ ಏನಲ್ಲ. ಇದು ಸುಮಾರು ಹತ್ತು ವರ್ಷಗಳ ಹಿಂದೆ ಆರಂಭ ಮಾಡಲಾಗಿರುವ ಯೋಜನೆಯಾಗಿದೆ. ರಾಜ್ಯದಲ್ಲಿ ಜುಲೈ 2013 ರಿಂದ 'ಅನ್ನಭಾಗ್ಯ' ಯೋಜನೆಯನ್ನು ಅಂದಿನ ಸಿಎಂ ಸಿದ್ಧರಾಮಯ್ಯ ಜಾರಿಗೆ ತಂದಿದ್ದಾರೆ. ಈ ಯೋಜನೆ ಜಾರಿಯಾದ ಬಳಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪ್ರತಿ ಬಿಪಿಎಲ್ ಕುಟುಂಬಗಳಿಗೆ ವಿತರಣೆ ಮಾಡಲಾಗುವ ರೇಷನ್ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ.
2013ಕ್ಕೂ ಮೊದಲು ಬಿಪಿಎಲ್ ಕುಟುಂಬದ ಒಬ್ಬ ಸದಸ್ಯನಿಗೆ ಕನಿಷ್ಟ 4 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಟ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿಯನ್ನು ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ಅನ್ನಭಾಗ್ಯ ಯೋಜನೆ ಅಡಿಯಲ್ಲಿ 2015ರಿಂದ ಅರ್ಹ ಬಿಪಿಎಲ್ ಏಕ ಸದಸ್ಯ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರ ಧಾನ್ಯವನ್ನು ಪ್ರತಿ ಕೆಜಿಗೆ ಒಂದು ರೂಪಾಯಿಯಂತೆ ಹಂಚಿಕೆಯನ್ನು ಮಾಡಲಾಗುತ್ತಿತ್ತು.
ಆದರೆ ಅದಾದ ಬಳಿಕ ಸರ್ಕಾರ ಬದಲಾದಂತೆ, ಅಕ್ಕಿ ವಿತರಣೆಯನ್ನು ಪ್ರತಿ ವ್ಯಕ್ತಿಗೆ ಐದು ಕೆಜಿಗೆ ಇಳಿಕೆ ಮಾಡಲಾಗಿದೆ. ಈಗ ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಹತ್ತು ಕೆಜಿ ಅಕ್ಕಿ ಒದಗಿಸುವ ಭರವಸೆಯನ್ನು ನೀಡಿತ್ತು. ಆದರೆ ಅಕ್ಕಿ ಕೊರತೆಯ ನಡುವೆ ಈಗ ಅಂತಿಮವಾಗಿ ಸರ್ಕಾರವು ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಪ್ರತಿ ಕೆಜಿ ಅಕ್ಕಿಗೆ 34 ರೂ. ಗಳಂತೆ ಐದು ಕೆಜಿ ಅಕ್ಕಿದೆ ಒಟ್ಟು 170 ರೂಪಾಯಿಗಳನ್ನು ಖಾತೆಗೆ ವರ್ಗಾಯಿಸುತ್ತದೆ.
ಈ ಯೋಜನೆಯಿಂದ ಏನು ಪ್ರಯೋಜನ?
ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿರುವ ಅಧಿಕೃತ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟಾಗಿ 1,52,23,050 ರೇಷನ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಈ ಪೈಕಿ 10,89,887 ಅಂತ್ಯೋದಯ ಕಾರ್ಡ್‌ಗಳು ಆಗಿದ್ದು, 1,17,23,409 ಬಿಪಿಎಲ್ ಕಾರ್ಡ್ ಆಗಿದೆ. 24,09,754 ಎಪಿಎಲ್ ಕಾರ್ಡ್‌ಗಳಾಗಿದೆ. ಈ ಪೈಕಿ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಬಡ, ಮಧ್ಯಮ ವರ್ಗದ ಕುಟುಂಬಕ್ಕೆ ಈ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ.
ಪ್ರಸ್ತುತ ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಕರ್ನಾಟಕ ರಾಜ್ಯ ಹೊರತಾಗಿಲ್ಲ. ಹಣದುಬ್ಬರದ ನಡುವೆ ಬಹುತೇಕ ಎಲ್ಲ ಆಹಾರ ಪದಾರ್ಥಗಳ, ಅಗತ್ಯ ವಸ್ತುಗಳ ದರವು ಏರಿಕೆಯಾಗಿದೆ. ನಾವು ಅಗತ್ಯವಾಗಿ ಬಳಕೆ ಮಾಡುವ ಅಕ್ಕಿ, ಗೋಧಿ, ತೊಗರಿಬೇಳೆ, ಸಕ್ಕರೆ, ಹಾಲು, ಚಹಾ ಪುಡಿ (ಪ್ಯಾಕ್ ಮಾಡದ್ದು), ಉಪ್ಪು (ಪ್ಯಾಕ್ ಮಾಡಿದ್ದು), ಆಲೂಗಡ್ಡೆ, ಈರುಳ್ಳಿ, ಟೊಮೆಟೊದ ದರವನ್ನು ನೋಡಿದಾಗ, ಈ ಹತ್ತು ಅಗತ್ಯ ವಸ್ತುಗಳ ಪೈಕಿ 9ರ ಬೆಲೆಯು ಗಗನಕ್ಕೆ ಏರಿದೆ.
ಈ ನಡುವೆ ಸರ್ಕಾರ ನೀಡುವ ಈ ಅಕ್ಕಿಯು ನಮ್ಮ ದಿನನಿತ್ಯದ ಬಳಕೆಗೆ ಸಹಾಯವಾಗಲಿದೆ. ಈ ಅಕ್ಕಿಯಿಂದ ತಿಂಡಿ, ಅನ್ನ ಮಾಡಿಕೊಂಡು ಅಕ್ಕಿಯ ಹಣ ಉಳಿಸಿ ಮಕ್ಕಳ ಶಿಕ್ಷಣ, ಇತರೆ ಆಹಾರ ಪದಾರ್ಥಗಳನ್ನು ಖರೀದಿ ಮಾಡುವವರು ಇದ್ದಾರೆ. ಇನ್ನು ಸರ್ಕಾರ ಪ್ರತಿ ಕೆಜಿ ಅಕ್ಕಿಗೆ 34 ರೂ. ಗಳಂತೆ ಐದು ಕೆಜಿ ಅಕ್ಕಿದೆ ಒಟ್ಟು 170 ರೂಪಾಯಿಗಳನ್ನು ನೀಡುವುದರಿಂದ ಈ ಬೆಲೆ ಏರಿಕೆಯ ನಡುವೆ ಅಗತ್ಯ ಆಹಾರ ಖರೀದಿ ಮಾಡಲು ಬಡ ಕುಟುಂಬಕ್ಕೆ ಸಹಾಯವಾಗಲಿದೆ.
ದುಡ್ಡು ಅಕೌಂಟ್‌ಗೆ ಬಂದಿದೆಯಾ ಚೆಕ್ ಮಾಡಿ
'ಅನ್ನಭಾಗ್ಯ' ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಲು ಅವಕಾಶವಿದೆ. ಫೋಸ್ಟ್‌ಮನ್‌ಗೆ ಅಗತ್ಯ ದಾಖಲೆ ಒದಗಿಸಿ ಮನೆ ಬಾಗಿಲಿನಲ್ಲೇ ಸೇವೆ ಪಡೆಯಬಹುದಾಗಿದೆ. ಈ ಸೇವೆಗಾಗಿ ಅಂಚೆ ಇಲಾಖೆ 'ಡಿ ಕ್ಯೂಬ್ ' ಆ್ಯಪ್ ಪರಿಚಯಿಸಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ 500 ರೂ. ಪಾವತಿಸಿ ಕೂಡಲೇ ಖಾತೆ ಮಾಡಿಸಿಕೊಳ್ಳಬಹುದಾಗಿದೆ. ಸರ್ಕಾರದ ಯೋಜನೆಗಳ ನೇರನಗದು ವರ್ಗವಣೆಗಾಗಿ ಅಂಚೆ ಎಸ್.ಬಿ. ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಹಂತ 1: ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಆಗಿ
ಹಂತ 2: ಇ- ಸರ್ವಿಸ್ ಪೋರ್ಟಲ್‌ನಲ್ಲಿ ಡಿಬಿಟಿ ಎಂದು ಕಾಣಲಿದೆ, ಅದರ ಮೇಲೆ ಕ್ಲಿಕ್ ಮಾಡಿ
ಹಂತ 3: ಸ್ಟೇಟಸ್ ಆಫ್ ಡಿಬಿಟಿ ಅನ್ನು ಆಯ್ಕೆ ಮಾಡಿ
ಹಂತ 4: ನಂತರದ ಪುಟದಲ್ಲಿ ರೇಷನ್ ಕಾರ್ಡ್ ಸಂಖ್ಯೆ (ಆರ್‌ಸಿ ನಂಬರ್) ಭರ್ತಿ ಮಾಡಿ.
ಹಂತ 5: ಮುಂದುವರೆಯಿರಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 6: ಮುಂದಿನ ಪುಟದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆಯೇ, ಕ್ರೆಡಿಟ್ ಆಗಿಲ್ಲವೇ ಎಂಬ ಮಾಹಿತಿ ಲಭ್ಯವಾಗಲಿದೆ.


Click it and Unblock the Notifications