ಕುಮಾರ್ ಮಂಗಳಂ ಬಿರ್ಲಾ ಅವರ ನೇತೃತ್ವದ ಆದಿತ್ಯ ಬಿರ್ಲಾ ಗ್ರೂಪ್ ಆಭರಣ ಕ್ಷೇತ್ರದಲ್ಲೂ ಹೂಡಿಕೆ ಮಾಡುವ ಬಗ್ಗೆ ಘೋಷಿಸಿದ್ದು, "ನೋವೆಲ್ ಜುವೆಲ್ಸ್ ಲಿಮಿಟೆಡ್" ನಲ್ಲಿ 5000 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಕಳೆದೆರಡು ವರ್ಷದಲ್ಲಿ, ಬಿರ್ಲಾ ಗ್ರೂಪ್ ಪ್ರಕಟಿಸುತ್ತಿರುವ ಮೂರನೇಯ ಬಿಗ್ ಟಿಕೆಟ್ ಬ್ಯುಸಿನೆಸ್ ಇದಾಗಿದೆ.
ಈಗಾಗಲೇ ಬಿರ್ಲಾ ಗ್ರೂಪ್ ಪೈಂಟ್ ಹಾಗೂ B2B ಇ-ಕಾಮರ್ಸ್ (ಬ್ಯುಸಿನೆಸ್ ಟು ಬ್ಯುಸಿನೆಸ್ ಸೇವೆ ) ವಲಯಗಳಿಗೂ ಪ್ರವೇಶಿಸಿದೆ. ನೋವೆಲ್ ಜುವೆಲ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ಹೊಸ ಉದ್ಯಮ ಪ್ರವೇಶಿಸಿದ್ದು, ಭಾರತದಾದ್ಯಂತ ಬೃಹತ್ ಆಭರಣ ಮಳಿಗೆಯನ್ನು ನಿರ್ಮಿಸುವ ಇರಾದೆ ಹೊಂದಿದೆ.

ಹೈ ಕ್ವಾಲಿಟಿ ಚಿನ್ನಾಭರಣ ಖರೀದಿಸುವ, ಶ್ರೀಮಂತ ಗ್ರಾಹಕರನ್ನು ಇದು ಗುರಿಯಾಗಿಸಿಕೊಂಡಿದೆ. ಈ ಮೂಲಕ ಕಂಪನಿಯು ಟಾಟಾ ಗ್ರೂಪ್‌ನ ತನಿಷ್ಕ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.ಆದಿತ್ಯ ಬಿರ್ಲಾ ಸಮೂಹದ ನಿವ್ವಳ ಮೌಲ್ಯ 60 ಬಿಲಿಯನ್ ಡಾಲರ್ (ರೂ. 4,95,000 ಕೋಟಿ) ಯಾಗಿದೆ.
ಆದಿತ್ಯ ಬಿರ್ಲಾ ಗ್ರೂಪ್ ಗ್ರಾಸಿಮ್, ಹಿಂಡಾಲ್ಕೊ, ಆದಿತ್ಯ ಬಿರ್ಲಾ ಫ್ಯಾಶನ್ ಆಂಡ್ ರಿಟೇಲ್ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೀಗೆ ದೈತ್ಯ ಸಂಸ್ಥೆಗಳನ್ನು ಒಳಗೊಂಡಿದೆ. ಈ ಗ್ರೂಪ್ ನಲ್ಲಿ ಸುಮಾರು 1,40,000 ಉದ್ಯೋಗಿಗಳನ್ನು ಕಾರ್ಯನಿರ್ವಹಿಸುತ್ತಿದ್ದಾರೆ. 47 ಬ್ರಾಂಡ್‌ಗಳು, 27 ಉದ್ಯಮಗಳು, 14 ಕೈಗಾರಿಕೆಗಳನ್ನು ಒಳಗೊಂಡಿರುವ ಆದಿತ್ಯ ಬಿರ್ಲಾ ಗ್ರೂಪ್ ಈಗಲೂ ಕೂಡ ಬಹುದೊಡ್ಡ ಹೊಸ ಮಾದರಿಯ ಉದ್ಯಮ ಸ್ಥಾಪಿಸುವ ಹುಡುಕಾಟದಲ್ಲಿದೆ.
ಆದಿತ್ಯ ಬಿರ್ಲಾ ವೆಂಚರ್ಸ್, ಇತ್ತೀಚೆಗೆ ಬೆಳ್ಳಿ-ಆಭರಣಗಳ ಸ್ಟಾರ್ಟ್ಅಪ್ GIVA ನಲ್ಲಿ ಹೂಡಿಕೆ ಮಾಡಿದ್ದಾರೆ. ಆರ್ಯಮಾನ್ ವಿಕ್ರಮ್ ಬಿರ್ಲಾ ಈ ಕಂಪನಿಯ ಸ್ಥಾಪಕರಾಗಿದ್ದಾರೆ. ಹಾಗಿದ್ರೆ ಆರ್ಯಮಾನ್ ವಿಕ್ರಮ್ ಬಿರ್ಲಾ ಯಾರು?
ಆರ್ಯಮಾನ್ ಬಿರ್ಲಾ
ಆರ್ಯಮಾನ್ ಬಿರ್ಲಾ ಅವರು ಕುಮಾರ್ ಮಂಗಳಂ ಬಿರ್ಲಾ ಅವರ ಮಗ. 25 ವರ್ಷದ ಆರ್ಯಮಾನ್ ಕ್ರಿಕೆಟಿಗರು ಆಗಿದ್ದಾರೆ. 2017-2018 ರ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶದಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದ್ದರು. 2018 ರ ಐಪಿಎಲ್ ಹರಾಜಿನಲ್ಲಿ ಅವರನ್ನು ರಾಜಸ್ಥಾನ್ ರಾಯಲ್ಸ್ ಖರೀದಿಸಿತು.
ಅವರು ಈ ಪಂದ್ಯದಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದ್ದರು.ESPN Cricinfo ಪ್ರಕಾರ, ಅವರು ಒಟ್ಟಾರೆ 9 ಪಂದ್ಯಗಳನ್ನು ಆಡಿದ್ದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 414 ರನ್ ಗಳಿಸಿದ್ದು, ಇದರಲ್ಲಿ ಶತಕ ಮತ್ತು ಅರ್ಧ ಶತಕವೂ ಸೇರಿದೆ. ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನಾಲ್ಕು ಪಂದ್ಯಗಳಲ್ಲಿ 36 ರನ್ ಗಳಿಸಿದ್ದರು.
ಅಂಡರ್-23 ಸಿಕೆ ನಾಯ್ಡು ಟ್ರೋಫಿ 2017-18 ರಲ್ಲಿ, ಅವರು ಆರು ಪಂದ್ಯಗಳಲ್ಲಿ 795 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು. ಅಲ್ಲದೆ 10 ವಿಕೆಟ್‌ಗಳನ್ನು ಪಡೆದಿದ್ದರು. ನಂತರ ಅವರು ಆರೋಗ್ಯ ಸಮಸ್ಯೆಗಳ ಕಾರಣ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದುಕೊಂಡರು.ಆರ್ಯಮನ್ ಅವರಿಗೆ ಉದ್ಯಮಶೀಲತೆ (ಎಂಟರ್ಪ್ರೆನರ್ಷಿಪ್) ಮತ್ತು ವೆಂಚರ್ ಕ್ಯಾಪಿಟಲ್ ಹೂಡಿಕೆ ಸೇರಿದಂತೆ ಹಲವು ಅನುಭವ ಹೊಂದಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.
ಬಿರ್ಲಾ ಗ್ರೂಪ್ ನ್ಯೂ-ಏಜ್ ಬ್ಯುಸಿನೆಸ್ ಕಡೆ(ಹೊಸ ಮಾದರಿ ಉದ್ಯಮದ ಕಡೆ) ಎಂಟ್ರಿ ಕೊಡುವಂತೆ ಆರ್ಯಮನ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದಲ್ಲದೆ ಆದಿತ್ಯ ಬಿರ್ಲಾ ವೆಂಚರ್ಸ್ ಎಂಬ ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಟಿಎಂಆರ್‌ಡಬ್ಲ್ಯು ಘಟಕದ ಮೂಲಕ ಡಿ2ಸಿ ಬ್ರಾಂಡ್ ಪ್ಲಾಟ್‌ಫಾರ್ಮ್ ರಚನೆಗೂ ಬಿರ್ಲಾ ಗ್ರೂಪ್ ಗೆ ಆರ್ಯಮನ್ ಸಹಾಯ ಮಾಡಿದ್ದಾರೆ. ಒಟ್ಟಾರೆ ಆರ್ಯಮಾನ್ ದೇಶದ ಅತ್ಯಂತ ಭರವಸೆಯ ಉದ್ಯಮಿಗಳಲ್ಲಿ ಒಬ್ಬರಾಗಿ ರೂಪುಗೊಳ್ಳುತ್ತಿದ್ದಾರೆ.


Click it and Unblock the Notifications