ಪ್ರಸ್ತುತ ದೇಶದಲ್ಲಿ ಅಧಿಕವಾಗಿ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಅನ್ನು ಅಧಿಕವಾಗಿ ಬಳಕೆ ಮಾಡಲಾಗುತ್ತದೆ. ಡಿಜಿಟಲೀಕರಣಕ್ಕೆ ಉತ್ತೇಜನ ನೀಡುವ ಭಾಗವಾಗಿ ಸರ್ಕಾರವು ಕೂಡಾ ಯುಪಿಐ ಪಾವತಿಗೆ ಹೆಚ್ಚಿ ಆಧ್ಯತೆಯನ್ನು ನೀಡುತ್ತದೆ. ಆದರೆ ನೀವು ಯುಪಿಐ ಪಾವತಿ ಮಾಡುವ ಸಂದರ್ಭದಲ್ಲಿ ನಿಮ್ಮ ವಹಿವಾಟುಗಳ ಸುರಕ್ಷತೆ ಮತ್ತು ಸುಗಮವಾಗಿ ನಡೆಯಬೇಕಾದರೆ, ನೀವು ಹಲವಾರು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ವಂಚಕರು ಹಣವನ್ನು ಕದಿಯಲು ಹೊಸ ಮಾರ್ಗಗಳನ್ನು ಪಾಲಿಸುತ್ತಿದ್ದಾರೆ. ಇತ್ತೀಚಿನ ಯುಪಿಐ ವಂಚನೆಗಳ ಬಗ್ಗೆ ನೀವು ಎಚ್ಚರವನ್ನು ವಹಿಸುವುದು ಮುಖ್ಯವಾಗುತ್ತದೆ. ಯುಪಿಐ ಎನ್ನುವುದು ಆರ್‌ಬಿಐ ನಿಯಂತ್ರಿತ ಘಟಕವಾದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಅಭಿವೃದ್ಧಿಪಡಿಸಿದ ತ್ವರಿತ ಪಾವತಿ ವ್ಯವಸ್ಥೆಯಾಗಿದೆ. ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ಹಣ ವರ್ಗಾವಣೆ ಮಾಡಲು ಸಹಾಯಕವಾಗಿದೆ. ನೀವು ಯುಪಿಐ ಪಾವತಿ ವೇಳೆ ಈ ತಪ್ಪುಗಳನ್ನು ಎಂದಿಗೂ ಮಾಡಬಾರದು, ಇಲ್ಲಿದೆ ವಿವರ.

ಯುಪಿಐ ಪಾವತಿ ವೇಳೆ ಈ ತಪ್ಪುಗಳನ್ನು ಮಾಡದಿರಿ
ಯುಪಿಐ ಪಿನ್ ಸುರಕ್ಷಿತವಾಗಿರಲಿ: ವಹಿವಾಟುಗಳನ್ನು ನಡೆಸಲು ಯುಪಿಐ ಪಿನ್ ಅತೀ ಮುಖ್ಯವಾಗಿದೆ. ಆದ್ದರಿಂದಾಗಿ ನಿಮ್ಮ ಯುಪಿಐ ಪಿನ್ ಗೌಪ್ಯವಾಗಿರಬೇಕು, ಯಾರೊಂದಿಗೂ ಕೂಡಾ ಹಂಚಿಕೊಳ್ಳಬೇಡಿ. ಜನ್ಮ ದಿನಾಂಕಗಳು ಅಥವಾ ಸಾಮಾನ್ಯ 1,2,3,4 ಸಂಖ್ಯೆಗಳನ್ನು, ಸುಲಭವಾಗಿ ಊಹೆ ಮಾಡಬಹುದಾದ ಸಂಖ್ಯೆಯನ್ನು ನಿಮ್ಮ ಯುಪಿಐ ಪಿನ್ ಆಗಿ ಇಟ್ಟುಕೊಳ್ಳಬೇಡಿ.
ಅಧಿಕೃತ ಯುಪಿಐ ಆಪ್ ಬಳಸಿ: ನೋಂದಾಯಿತ ಬ್ಯಾಂಕ್‌ಗಳು ಅಥವಾ ಅಧಿಕೃತ ಪಾವತಿ ಸೇವಾ ಪೂರೈಕೆದಾರರು ಒದಗಿಸಿದ ಅಧಿಕೃತ ಯುಪಿಐ ಅಪ್ಲಿಕೇಶನ್‌ಗಳನ್ನು ಮಾತ್ರ ಇನ್‌ಸ್ಟಾಲ್ ಮಾಡಿಕೊಂಡು ಬಳಕೆ ಮಾಡಿ. ಅಪ್ಲಿಕೇಶನ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಶನ್ ಅಧಿಕೃತವೇ ಎಂದು ತಿಳಿದುಕೊಳ್ಳಿ.
ಪಾವತಿಸುವವರ ವಿವರಗಳನ್ನು ಪರಿಶೀಲಿಸಿ: ವಹಿವಾಟನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ಪಾವತಿಸುವವರ ಯುಪಿಐ ಐಡಿ ಅಥವಾ ವಿಪಿಎ (ವರ್ಚುವಲ್ ಪಾವತಿ ವಿಳಾಸ) ಅನ್ನು ಎರಡು ಬಾರಿ ಪರಿಶೀಲಿಸಿ. ವಿವರದಲ್ಲಿ ಸ್ವಲ್ಪ ದೋಷವಾದರೂ ಕೂಡಾ ತಪ್ಪು ವ್ಯಕ್ತಿಗೆ ಹಣ ವರ್ಗಾವಣೆಯಾಬಹುದು.
ವಹಿವಾಟಿನ ಮೊತ್ತವನ್ನು ಪರಿಶೀಲಿಸಿ: ವಹಿವಾಟನ್ನು ದೃಢೀಕರಿಸುವ ಮೊದಲು ನೀವು ವರ್ಗಾಯಿಸಲಿರುವ ಮೊತ್ತವನ್ನು ಪರಿಶೀಲಿಸಿ. ಒಂದು ಸೊನ್ನೆ ಅಧಿಕವಾದರೂ ಕೂಡಾ ನಿಮ್ಮ ಖಾತೆಯಿಂದ ಅಧಿಕ ಮೊತ್ತ ವರ್ಗಾವಣೆಯಾಗಲಿದೆ. ನೀವು ಎಷ್ಟು ಮೊತ್ತ ವರ್ಗಾವಣೆ ಮಾಡಲು ಬಯಸಿದ್ದೀರಿ, ಅಷ್ಟೇ ಮೊತ್ತವನ್ನು ನಮೂದಿಸಿದ್ದೀರಾ ನೋಡಿ.
ಫಿಶಿಂಗ್ ಪ್ರಯತ್ನಗಳ ಬಗ್ಗೆ ಎಚ್ಚರದಿಂದಿರಿ: ನಿಮ್ಮ ಬ್ಯಾಂಕ್ ಅಥವಾ ಪಾವತಿ ಸೇವಾ ಪೂರೈಕೆದಾರರಿಂದ ಬಂದ ಸಂದೇಶದಂತೆ ಫಿಶಿಂಗ್ ಸಂದೇಶಗಳು, ಇಮೇಲ್‌ಗಳು ಅಥವಾ ಕರೆಗಳ ಬಗ್ಗೆ ಜಾಗರೂಕರಾಗಿರಿ. ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಯಾರು ಕರೆ ಮಾಡಿ ಒಟಿಪಿ ಮೊದಲಾದ ಮಾಹಿತಿ ಕೇಳಿದರೆ ಅದನ್ನು ನೀಡದಿರಿ.
ನೆಟ್‌ವರ್ಕ್ ಸಂಪರ್ಕವನ್ನು ಪರಿಶೀಲಿಸಿ: ಯುಪಿಐ ವಹಿವಾಟನ್ನು ಪ್ರಾರಂಭ ಮಾಡುವ ಮೊದಲು ನೀವು ಸರಿಯಾದ ಇಂಟರ್‌ನೆಟ್ ಅನ್ನು ಹೊಂದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಸರಿಯಾದ ಇಂಟರ್‌ನೆಟ್ ಇಲ್ಲದಿದ್ದರೆ, ವಹಿವಾಟು ಆಗದಿರಬಹುದು. ಅಥವಾ ನಿಮ್ಮ ಖಾತೆಯಿಂದ ಹಣ ಕಡಿತವಾಗಿ, ವರ್ಗಾವಣೆ ಮಾಡ ಬಯಸಿದ ಖಾತೆಗೆ ಹಣ ವರ್ಗಾವಣೆಯಾಗದೆ ಇರಬಹುದು.
ವಹಿವಾಟು ದಾಖಲೆಗಳನ್ನು ಇರಿಸಿ: ವಹಿವಾಟು ಐಡಿಗಳು, ದಿನಾಂಕಗಳು ಮತ್ತು ಮೊತ್ತಗಳು ಸೇರಿದಂತೆ ಯುಪಿಐ ವಹಿವಾಟಿನ ವಿವರಗಳ ದಾಖಲೆಗಳನ್ನು ಹೊಂದಿರಿ. ಯಾವುದೇ ವ್ಯತ್ಯಾಸಗಳು ಅಥವಾ ವಿವಾದಗಳ ಸಂದರ್ಭದಲ್ಲಿ ಇದು ಸಾಕ್ಷ್ಯವಾಗುತ್ತದೆ.
ನಿಮ್ಮ ಯುಪಿಐ ಆಪ್ ಅಪ್‌ಡೇಟ್ ಮಾಡಿ: ನಿಮ್ಮ ಯುಪಿಐ ಅಪ್ಲಿಕೇಷನ್ ಅನ್ನು ಸಮಯಕ್ಕೆ ಅನುಗುಣವಾಗಿ ಅಪ್‌ಡೇಟ್ ಮಾಡಿ. ನವೀಕರಣಗಳು ಎಂದಿಗೂ ಭದ್ರತೆಗೆ ಉತ್ತಮವಾಗಿದೆ. ಹೆಚ್ಚು ಸುರಕ್ಷಿತ ಮತ್ತು ವಿಶ್ವಾಸಾರ್ಹ ಪಾವತಿಯನ್ನು ಮಾಡಲು ಇದು ಸಹಾಯಕವಾಗಿದೆ.
ಬ್ಯಾಂಕ್ ಹೇಳಿಕೆಗಳನ್ನು ಮೇಲ್ವಿಚಾರಣೆ ಮಾಡಿ: ಯಾವುದೇ ಅನಧಿಕೃತ ವಹಿವಾಟುಗಳನ್ನು ಗುರುತಿಸಲು ನಿಮ್ಮ ಬ್ಯಾಂಕ್ ಹೇಳಿಕೆಗಳು ಅಥವಾ ವಹಿವಾಟಿನ ಹಿಸ್ಟರಿಯನ್ನು ನಿಯಮಿತವಾಗಿ ಪರಿಶೀಲನೆ ಮಾಡಿ. ನೀವು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ಗಮನಿಸಿದರೆ, ತಕ್ಷಣವೇ ಅದನ್ನು ನಿಮ್ಮ ಬ್ಯಾಂಕ್ ಅಥವಾ ಪಾವತಿ ಸೇವಾ ಪೂರೈಕೆದಾರರಿಗೆ ತಿಳಿಸಿ.
ಅಪ್ಲಿಕೇಶನ್ ಲಾಕ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಸಕ್ರಿಯಗೊಳಿಸಿ: ನಿಮ್ಮ ಮೊಬೈಲ್‌ನಲ್ಲಿ ಲಭ್ಯವಿದ್ದರೆ, ನಿಮ್ಮ ಯುಪಿಐ ಅಪ್ಲಿಕೇಶನ್‌ಗಾಗಿ ಅಪ್ಲಿಕೇಶನ್ ಲಾಕ್, ಫಿಂಗರ್‌ಪ್ರಿಂಟ್ ಅಥವಾ ಫೇಸ್ ಅಥೆಂಟಿಫಿಕೇಷನ್‌ನಂತಹ ಹೆಚ್ಚುವರಿ ಭದ್ರತಾ ಫೀಚರ್ ಅನ್ನು ಸಕ್ರಿಯಗೊಳಿಸಿ.


Click it and Unblock the Notifications