ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಆರ್ಥಿಕ ವ್ಯವಹಾರಗಳು ವ್ಯವಸ್ಥಿತವಾಗಿ ಹಾಗೂ ಹೆಚ್ಚಿನ ಸುರಕ್ಷತೆಯಿಂದ ನಡೆಯುವುದಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆರ್‌ಬಿಐ ಗ್ರಾಹಕರಿಗೆ ಕೆವೈಸಿ ಮಾಹಿತಿಯನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುವಂತೆ ಸೂಚಿಸಿದೆ.
ಒಂದುವೇಳೆ ಗ್ರಾಹಕರು ಅಗತ್ಯ ಮತ್ತು ಸರಿಯಾದ ದಾಖಲಾತಿಗಳನ್ನು ಒದಗಿಸಿ, ವಿಳಾಸವನ್ನು ಬದಲಾಯಿಸಿಕೊಳ್ಳಬೇಕಿದ್ದರೆ ಆನ್‌ಲೈನ್ ಮೂಲಕವೂ ಕೆವೈಸಿ ಅಪ್‌ಡೇಟ್ ಮಾಡಿಕೊಳ್ಳುವ ಅವಕಾಶವನ್ನು ಆರ್‌ಬಿಐ ಸುಲಭಗೊಳಿಸಿದೆ. ಹೀಗಿರುವಾಗ, ಜನರು ಬ್ಯಾಂಕ್‌ಗಳಿಗೆ ಭೇಟಿ ನೀಡುವ ಬದಲು ಬಹಳ ಸುಲಭವಾಗಿ ಆನ್‌ಲೈನ್‌ನಡಿಯೇ ಕೆವೈಸಿ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದಾಗಿದೆ.

ಕೆವೈಸಿ (ನೋ ಯುವರ್ ಕಸ್ಟಮರ್) ಅಂದರೇನು?
ಕೆವೈಸಿ ಎನ್ನುವುದು ಒಂದು ಬಾರಿಗೆ ಮಾಡುವ ಪ್ರಕ್ರಿಯೆಯಾಗಿದ್ದು, ಗ್ರಾಹಕರ ಗುರುತಿನ ಬಗ್ಗೆ ನಿಖರ ಮಾಹಿತಿಯನ್ನುಸಂಗ್ರಹಿಸುವ ಮೂಲಕ ಬ್ಯಾಂಕ್‌ಗಳು ಅವರಲ್ಲಿ ವಿಶ್ವಾಸಾರ್ಹತೆಯನ್ನು ದೃಢೀಕರಿಸುತ್ತದೆ. ಸಾಮಾನ್ಯವಾಗಿ ಗ್ರಾಹಕರು ಬ್ಯಾಂಕ್ ಖಾತೆಗಳನ್ನು ತೆರೆಯುವಾಗ ಅಥವಾ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡುವಾಗ ಕಡ್ಡಾಯವಾಗಿ ಕೆವೈಸಿ ಪ್ರಕ್ರಿಯೆಗಳಿಗೆ ಒಳಗಾಗಬೇಕು.
ಆನ್‌ಲೈನ್‌ನಲ್ಲಿ ಪೇಟಿಎಂ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹೇಗೆ?
ನಿಮ್ಮ ಖಾತೆಗಳಿಗೆ ಸಂಬಂಧಿಸಿದಂತೆ ಕೆವೈಸಿ ವಿವರಗಳನ್ನು ನವೀಕರಿಸಲು ನಿಮ್ಮ ಬ್ಯಾಂಕ್ ನಿಮಗೆ ಇಮೇಲ್ ಕಳುಹಿಸಿದರೆ ಅದನ್ನು ಗಮನಾರ್ಹವಾಗಿ ತೆಗೆದುಕೊಂಡು ಸಮಯಕ್ಕೆ ಸರಿಯಾಗಿ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಕ್ಕೆ ಪ್ರಯತ್ನಿಸಬೇಕು.
ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ಕಾನೂನುಬಾಹಿರ ಉದ್ದೇಶಗಳಿಗೆ ಇದನ್ನು ಮಾಡುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಆರ್‌ಬಿಐ ಮಾರ್ಗಸೂಚಿಯಂತೆ, ತಮ್ಮ ಗ್ರಾಹಕರಿಂದ ಮರು ಕೆವೈಸಿ ಪ್ರಕ್ರಿಯೆಯನ್ನು ಮಾಡಿಸಬೇಕು.
ಸಮಯಕ್ಕೆ ತಕ್ಕಂತೆ ಕೆವೈಸಿಯನ್ನು ಕಡ್ಡಾಯವಾಗಿ ನವೀಕರಿಸಲಾಗುತ್ತದೆ. 2002ರ ಮನಿ-ಲಾಂಡರಿಂಗ್ ಕಾಯ್ದೆ(ಪಿಎಂಎಲ್‌ಎ) ಹಾಗೂ 2005ರ ಮನಿ ಲಾಂಡರಿಂಗ್ ತಡೆಗಟ್ಟುವಿಕೆ(ದಾಖಲೆಗಳ ನಿರ್ವಹಣೆ) ನಿಯಮಗಳ ವ್ಯಾಪ್ತಿಗೆ ಇದು ಒಳಪಟ್ಟಿರುತ್ತದೆ.
ಆರ್‌ಬಿಐ ನಿಯಮಾವಳಿಗಳ ಪ್ರಕಾರ, ಕೆವೈಸಿ ಅಪ್‌ಡೇಟ್ ಮಾಹಿತಿ ಅಗತ್ಯವಿದೆ ಎಂಬುದನ್ನು ಬ್ಯಾಂಕ್‌ಗಳು ಗ್ರಾಹಕರ ಗಮನಕ್ಕೆ ತರಬೇಕು. ಖಾತೆದಾರರು ತಮ್ಮ ಪ್ಯಾನ್ ಸಂಖ್ಯೆ ಅಥವಾ ಅದಕ್ಕೆ ಪೂರಕವಾಗುವ ಇ-ಡಾಕ್ಯುಮೆಂಟ್ ಅಥವಾ ಫಾರಂ 60 ಅನ್ನು ಒದಗಿಸುವ ಮೂಲಕ ತಮ್ಮ ಡೇಟಾವನ್ನು ತಿದ್ದುಪಡಿ ಮಾಡಿಕೊಳ್ಳಬಹುದು.
ಸರಿಯಾದ ದಾಖಲಾತಿಗಳನ್ನು ಒದಗಿಸದಿದ್ದರೆ ನಿಮ್ಮ ಖಾತೆಗಳನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇಡಲಾಗುತ್ತದೆ. ಬ್ಯಾಂಕ್‌ನಿಂದ ಸೂಚನೆ ಬಂದ 30 ದಿನದೊಳಗೆ ನೀವು ಅಗತ್ಯ ಮಾಹಿತಿ ಅಥವಾ ದಾಖಲೆಗಳನ್ನು ಭರ್ತಿ ಮಾಡಿ ನೀಡಬೇಕು.
ಈ ನಡುವೆ ಆರ್‌ಬಿಐ ಮಾರ್ಗಸೂಚನೆಯಂತೆ ಬ್ಯಾಂಕ್‌ಗಳು ಈ ಗಡುವನ್ನು ನಿರ್ದಿಷ್ಟ ಪ್ರಕರಣವೆಂದು ಪರಿಗಣಿಸಿ ಅದಕ್ಕೆ ಅನುಗುಣವಾಗಿ ಅಂದರೆ ಗಾಯಾಳು, ಅನಾರೋಗ್ಯ ಅಥವಾ ವಯಸ್ಸಾದ ಸಮಸ್ಯೆ ಮುಂತಾದ ಕಾರಣಳಿಗೆ ವಿನಾಯಿತಿಯನ್ನು ನೀಡಬಹುದಾಗಿದೆ.
ಒಂದುವೇಳೆ ಖಾತೆಯು ಸ್ಥಗಿತಗೊಂಡರೆ ಎಲ್ಲ ರೀತಿಯ ವ್ಯವಹಾರಗಳನ್ನು ತಡೆ ಹಿಡಿಯಲಾಗುತ್ತದೆ. ಹೀಗಾಗಿ, ಖಾತೆಗಳನ್ನು ಮರು ಚಾಲನೆಗೊಳಿಸುವುದಕ್ಕೆ ಮತ್ತೆ ಕೆವೈಸಿ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.


Click it and Unblock the Notifications