ಬೆಂಗಳೂರು, ಡಿಸೆಂಬರ್ 26: ಫೆಬ್ರವರಿ 28 ರೊಳಗೆ ಶೇಕಡ 60 ರಷ್ಟು ಕನ್ನಡ ಭಾಷೆ ಬಳಸಿರುವ ನಾಮಫಲಕಗಳನ್ನು ಅಳವಡಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ನಗರದ ಅಂಗಡಿ ಮಾಲೀಕರಿಗೆ ಆದೇಶ ನೀಡಿದೆ.
ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಹಾಕದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

"ನಗರದಲ್ಲಿ 1,400 ಕಿ.ಮೀ ಉದ್ದದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, ಈ ರಸ್ತೆಗಳಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಲಾಗುವುದು.ಸರ್ವೆ ನಂತರ ಶೇ.60ರಷ್ಟು ಕನ್ನಡ ಬಳಸದ ಅಂಗಡಿಗಳಿಗೆ ನೋಟಿಸ್ ನೀಡಲಾಗುವುದು. ನೋಟಿಸ್ ನೀಡಿದ ನಂತರ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಕೋರಿ ಆಯಾ ವಲಯ ಆಯುಕ್ತರಿಗೆ ಸಲ್ಲಿಸಲು ಫೆಬ್ರವರಿ 28 ರವರೆಗೆ ಕಾಲಾವಕಾಶ ನೀಡಲಾಗುವುದು ಎಂದು ತುಷಾರ್ ಗಿರಿನಾಥ್ ಹೇಳಿದರು.
ರಾಜ್ಯದಲ್ಲಿ ಕನ್ನಡ ಭಾಷಾ ಬಳಕೆಯನ್ನು ಒತ್ತಾಯಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್‌ವಿ) ಯೊಂದಿಗೆ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಫೆಬ್ರವರಿ 28ರೊಳಗೆ ಕನ್ನಡ ನಾಮಫಲಕ ಅಳವಡಿಸದ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಸದ ಅಂಗಡಿ ಮುಂಗಟ್ಟುಗಳನ್ನು ಕಾನೂನು ಪ್ರಕಾರ ಅಮಾನತುಗೊಳಿಸಲಾಗುವುದು ಮತ್ತು ನಂತರ ಅವರ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಶಾಪಿಂಗ್ ಮಾಲ್‌ಗಳಲ್ಲಿರುವ ಅಂಗಡಿಗಳು ತಮ್ಮ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಂತೆ ಅವರು ಸೂಚನೆ ನೀಡಿದರು.
ನಗರದಲ್ಲಿ ಬರುವ ದೊಡ್ಡ ಮಾಲ್‌ಗಳನ್ನು ಕೂಡಲೇ ಸಂಪರ್ಕಿಸಿ 15-20 ದಿನದೊಳಗೆ ಎಲ್ಲಾ ಮಾಲ್‌ಗಳಲ್ಲಿರುವ ನಾಮಫಲಕಗಳಲ್ಲಿ ಕನ್ನಡ ಭಾಷೆ ಅಳವಡಿಸಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು. ಇದೇ ವೇಳೆ ಕ.ರ.ವೇ ಬೆಂಬಲಿಗರೊಬ್ಬರು ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ಅಂಗಡಿಕಾರರಿಗೆ ಬೆದರಿಕೆ ಹಾಕಿರುವ ವಿಡಿಯೋ ಹರಿದಾಡಲಾರಂಭಿಸಿದೆ.
ಈ ವಿಡಿಯೋದಲ್ಲಿ ಕ.ರ.ವೇ ಬೆಂಬಲಿಗರೊಬ್ಬರು, "ಇದು ಕರ್ನಾಟಕ. ಕನ್ನಡಿಗರು ಈ ರಾಜ್ಯದ ಹೆಮ್ಮೆ. ನೀವು ಹೋಗಿ ನಿಮ್ಮ ರಾಜ್ಯದಲ್ಲಿ ನಿಮ್ಮ ಅಭಿಮಾನವನ್ನು ತೋರಿಸಿ. ಮಾರವಾಡಿಗಳೇ ಮುಂದಿನ ಬಾರಿ ನಿಮಗೆ ಕನ್ನಡ ಗೊತ್ತಿಲ್ಲ ಎಂದು ಹೇಳಿದರೆ ನಾವು ಸುಮ್ಮನಿರಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡವನ್ನು ವ್ಯಾಪಕವಾಗಿ ಬಳಸಬೇಕೆಂದು ಒತ್ತಾಯಿಸಿದ್ದಾರೆ. ಈ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರು ಕನ್ನಡ ಮಾತನಾಡುವುದನ್ನು ಕಲಿಯಬೇಕು. ನಾವೆಲ್ಲರೂ ಕನ್ನಡಿಗರು, ಕರ್ನಾಟಕ ಏಕೀಕರಣದ ನಂತರ ವಿವಿಧ ಭಾಷೆ ಮಾತನಾಡುವ ಜನರು ಈ ಕನ್ನಡ ನಾಡಲ್ಲಿ ನೆಲೆಸಿದ್ದಾರೆ. ಈ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಮಾತನಾಡಲು ಕಲಿಯಬೇಕು ಎಂದು ಅಕ್ಟೋಬರ್‌ನಲ್ಲಿ ಸಿಎಂ ಹೇಳಿಕೆ ನೀಡಿದ್ದರು.


Click it and Unblock the Notifications