ಏನೋ ಹಣದ ಅಗತ್ಯ ಬಂತು, ಎಲ್ಲೂ ತಕ್ಷಣಕ್ಕೆ ಕೈ ಸಾಲ ಸಿಗಲಿಲ್ಲ ಅಂದಾಕ್ಷಣ ನೆನಪಿಗೆ ಬರೋದು ಮನೆಯಲ್ಲಿರುವ ಚಿನ್ನ. ಆದರೆ ಆ ಚಿನ್ನ ಖರೀದಿಯ ಬಿಲ್ ನಿಮ್ಮ ಬಳಿ ಇಲ್ಲದಿದ್ದಲ್ಲಿ ಪರಿಸ್ಥಿತಿ ಬೇರೆಯಾಗುತ್ತದೆ. ಆದರೂ ಆಪತ್ಕಾಲಕ್ಕೆ ಆಗಲಿ ಅಂತಲೇ ಅಲ್ಲವೆ ಚಿನ್ನವನ್ನು ಖರೀದಿ ಮಾಡೋದು? ಒಂದು ವೇಳೆ ಅಂಥದ್ದೊಂದು ತುರ್ತು ಅಗತ್ಯ ನಿಮಗಿದ್ದಲ್ಲಿ, ನೀವು ಬಳಸದಂಥ ಚಿನ್ನವನ್ನು ಮಾರಾಟ ಮಾಡುವುದಕ್ಕೆ ಇದು ಸೂಕ್ತ ಸಮಯ. ಅದಕ್ಕೆ ಉತ್ತಮ ಬೆಲೆ ಕೂಡ ದೊರೆಯುತ್ತದೆ.
ಅದರಲ್ಲೂ ವಾಹನ ಖರೀದಿ ಅಥವಾ ಮದುವೆಯಂಥ ಅಗತ್ಯ ಇದ್ದಲ್ಲಿ ನಿಮ್ಮ ಬಳಿ ಇರುವ ಚಿನ್ನವನ್ನು ಮಾರಿ, ಹಣವನ್ನು ಸಂಗ್ರಹಿಸಬಹುದು. ಕಳೆದ ಒಂದು ವರ್ಷದಲ್ಲಿ ಏರಿಕೆ ಆಗಿರುವ ರೀತಿಯನ್ನು ನೋಡಿದಲ್ಲಿ ಚಿನ್ನಕ್ಕೆ ಉತ್ತಮ ಬೆಲೆಯೇ ಸಿಗುತ್ತಿದೆ. ಭಾರತದಲ್ಲಿ ನಿಮ್ಮ ಬಳಿಯಿರುವ ಚಿನ್ನವನ್ನು ಮಾರಾಟ ಮಾಡುವುದಕ್ಕೆ ಹಲವಾರು ಸ್ಥಳಗಳಿವೆ.
ಬಿಲ್ ಕಳೆದುಕೊಂಡಿದ್ದಲ್ಲಿ ಮುಂದೇನು?
ಆದರೆ, ಚಿನ್ನದ ಆಭರಣ, ನಾಣ್ಯ ಅಥವಾ ಗಟ್ಟಿಯನ್ನು ಖರೀದಿ ಮಾಡಿದ್ದರ ಬಿಲ್ ಕಳೆದುಕೊಂಡಿದ್ದಲ್ಲಿ ನಿಮ್ಮ ಬಳಿ ಇರುವ ಚಿನ್ನವನ್ನು ಉಡುಗೊರೆ ಅಥವಾ ಪಿತ್ರಾರ್ಜಿಯ ಆಸ್ತಿ ಎಂದು ಪರಿಗಣಿಸುವ ಸಾಧ್ಯತೆ ಇದೆ. ಬಹುತೇಕ ಜ್ಯುವೆಲರ್ಸ್ ಮಾಲೀಕರು ನಿಮ್ಮ ಬಳಿ ಇರುವ ಚಿನ್ನಕ್ಕೆ ಬಿಲ್ ನೀಡುವಂತೆ ಕೇಳುತ್ತಾರೆ. ಸುಖಾ ಸುಮ್ಮನೆ ಸಮಸ್ಯೆ ಮೈ ಮೇಲೆ ಎಳೆದುಕೊಳ್ಳುವುದು ಯಾಕೆ ಎಂಬ ಮುಂಜಾಗ್ರತೆ ಅದು. ಅದರಲ್ಲೂ ಚಿನ್ನದ ಶುದ್ಧತೆ ಮತ್ತಿತರ ವಿಚಾರದಲ್ಲೂ ಸ್ಪಷ್ಟತೆ ದೊರೆಯುತ್ತದೆ. ಇನ್ನು ಮಾರಾಟ ಮಾಡಲು ತೆರಳಿದವರ ದೃಷ್ಟಿಯಿಂದ ಹೇಳಬೇಕು ಅಂದರೆ, ಚಿನ್ನಕ್ಕೆ ಸರಿಯಾದ ಬೆಲೆಯನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ.
ಪ್ರತಿಷ್ಠಿತ ಮಳಿಗೆಗಳಿಗೆ ತೆರಳಿದರೆ ವಿನಿಮಯ ಮಾತ್ರ ಸಾಧ್ಯ
ಒಂದು ವೇಳೆ ನಿಮ್ಮ ಬಳಿ ಚಿನ್ನ ಖರೀದಿಯ ಬಿಲ್ ಇಲ್ಲ ಎಂದಾದಲ್ಲಿ ಪ್ರತಿಷ್ಠಿತ ಆಭರಣ ಮಳಿಗೆಗಳಲ್ಲಿ ನಿಮ್ಮ ಬಳಿ ಇರುವ ಚಿನ್ನವನ್ನು ಬೇರೆ ಚಿನ್ನದೊಂದಿಗೆ ವಿನಿಮಯ ಮಾತ್ರ ಮಾಡಿಕೊಳ್ಳಲು ಸಾಧ್ಯ. ಈ ಆಭರಣ ಮಳಿಗೆಗಳು ನಿಮ್ಮೆದುರೇ ಆಭರಣಗಳನ್ನು ಕರಗಿಸುತ್ತವೆ. ತೂಕ ಹಾಗೂ ಶುದ್ಧತೆಯನ್ನು ಪರಿಶೀಲಿಸುತ್ತವೆ. ಆದರೆ, ನೆನಪಿರಲಿ. ಕರಗಿಸುವುದಕ್ಕೆ ತಗುಲುವ ಶುಲ್ಕ ಸೇರಿದಂತೆ ಮತ್ತಿತರ ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ. ಒಂದು ವೇಳೆ ನೀವು ಚಿನ್ನವನ್ನು ಮತ್ತೊಂದು ಚಿನ್ನಕ್ಕೆ ಬದಲಾಯಿಸಿಕೊಳ್ಳುತ್ತಿದ್ದೀರಿ ಎಂದಾದಲ್ಲಿ, ಎಲ್ಲಿ ಖರೀದಿ ಮಾಡಿದ್ದರೋ ಅದೇ ಮಳಿಗೆಯಲ್ಲಿ ವಿನಿಮಯ ಮಾಡಿಕೊಳ್ಳುವುದು ಉತ್ತಮ.
ಬ್ಯಾಂಕರ್ ನೋಂದಣಿ ಮಾಡಿಸಿಕೊಂಡಿದ್ದರೆ ಖಾತ್ರಿ ಮಾಡಿಕೊಳ್ಳಿ
ಒಂದು ವೇಳೆ ಚಿನ್ನದ ನಾಣ್ಯ ಅಥವಾ ಗಟ್ಟಿಯನ್ನು ಬ್ಯಾಂಕ್ ಗಳಿಂದ ಖರೀದಿ ಮಾಡಿದ್ದೀರಿ ಎಂದಾದಲ್ಲಿ ಅವರಿಗೇ ವಾಪಸ್ ನೀಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಲ್ಲಿ ಖರೀದಿ ವ್ಯವಹಾರ ಮಾಡಲ್ಲ. ಆದರೆ ಚಿನ್ನವನ್ನು ಖರೀದಿ ಮಾಡುವ ಕೆಲವು ಕಂಪೆನಿಗಳಿವೆ. ನಿಮ್ಮದೊಂದು ಅಧಿಕೃತ ಐಡಿ ಪ್ರೂಫ್ (ಗುರುತು ದೃಢೀಕರಣ ಪತ್ರ) ಪಡೆದು, ನಗದು ನೀಡುತ್ತವೆ. ತೀರಾ ಹಣದ ಅಗತ್ಯ ಇದೆ ಎಂದಾಗ ಪಾನ್ ಶಾಪ್ ಗಳು (ಗಿರವಿ ಅಂಗಡಿಯವರು) ಆದ್ಯತೆಯಾಗಿ ಕಂಡುಬರುತ್ತಾರೆ. ಆದರೆ ನಿಮ್ಮಿಂದ ಚಿನ್ನ ಖರೀದಿ ಮಾಡುತ್ತಿರುವ ಬ್ಯಾಂಕರ್ ನೋಂದಣಿ ಮಾಡಿಸಿದ್ದಾರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಕೆಲವರು ಹಾಗೇ ಸುಮ್ಮನೆ ಮಳಿಗೆ ತೆರೆದಿರುತ್ತಾರೆ. ಆರಕ್ಕೆ ಮೂರರಂತೆ ಬೆಲೆ ನೀಡುತ್ತಾರೆ.
ಎಲ್ಲಿ ಉತ್ತಮ ದರ ಸಿಗುತ್ತದೆ ವಿಚಾರಿಸಿಕೊಳ್ಳಿ
ಚಿನ್ನದ ಮಾರಾಟಕ್ಕೆ ಮುಂದಾಗುವ ಮುನ್ನ ಎಲ್ಲಿ ಉತ್ತಮ ದರ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಆ ಬಗ್ಗೆ ಚೆನ್ನಾಗಿ ಗೊತ್ತಾಗಿರಬೇಕು. ಒಂದು ವೇಳೆ ಗೊತ್ತಿಲ್ಲ ಎಂದಾದಲ್ಲಿ ಪ್ರತಿಷ್ಠಿತ ರೀಟೇಲ್ ಮಳಿಗೆಗೆ ಕರೆ ಮಾಡಿ, ಸದ್ಯಕ್ಕೆ ಮಾರುಕಟ್ಟೆ ದರ ಎಷ್ಟಿದೆ ಎಂಬ ಬಗ್ಗೆ ವಿಚಾರಿಸಿ. ಹೀಗೆ ಒಂದಕ್ಕಿಂತ ಹೆಚ್ಚು ಕಡೆ ವಿಚಾರಣೆ ಮಾಡಿದಲ್ಲಿ ಉತ್ತಮ ಮೌಲ್ಯ ಯಾವುದು ಎಂದು ಗೊತ್ತಾಗುತ್ತದೆ.
ಹಾಲ್ ಮಾರ್ಕ್ ಇಲ್ಲದಿದ್ದಲ್ಲಿ ಏನು ಮಾಡಬೇಕು?
ನಿಮ್ಮ ಬಳಿ ಇರುವ ಚಿನ್ನದ ಆಭರಣ, ನಾಣ್ಯ ಅಥವಾ ಗಟ್ಟಿ ಮೇಲೆ ಹಾಲ್ ಮಾರ್ಕ್ ಇದೆಯಾ ಎಂಬುದನ್ನು ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳಿ. 22 ಕ್ಯಾರಟ್ ಅಂದರೆ 916 ಗುರುತು, 91.6 ಪರ್ಸೆಂಟ್ ಶುದ್ಧತೆ ಇರುತ್ತದೆ. ಒಂದು ವೇಳೆ ನಿಮ್ಮ ಬಳಿ ಇರುವ ಆಭರಣದಲ್ಲಿ ಹಾಲ್ ಮಾರ್ಕ್ ಇಲ್ಲ ಎಂದಾದಲ್ಲಿ ನೇರವಾಗಿ ಖರೀದಿದಾರರ ಹತ್ತಿರ ಹೋಗಬೇಡಿ. ಬದಲಿಗೆ ನೋಂದಾಯಿತ ಹಾಲ್ ಮಾರ್ಕ್ ಸೆಂಟರ್ ನಿಮಗೆ ಹತ್ತಿರದಲ್ಲಿ ಎಲ್ಲಿದೆ ಎಂದು ತಿಳಿದುಕೊಳ್ಳಿ. ಅಲ್ಲಿ ನಿಮ್ಮ ಆಭರಣಕ್ಕೆ ಪ್ರಮಾಣಪತ್ರ ಪಡೆದುಕೊಂಡು, ನಂತರ ಮಾರಾಟಕ್ಕೆ ಮುಂದಾಗಿ.


Click it and Unblock the Notifications