ಚಾಣಕ್ಯ- ಈ ಹೆಸರು ಕೇಳಿದಾಕ್ಷಣ ಬುದ್ಧಿವಂತಿಕೆಗೆ ಸಂಬಂಧಿಸಿದ್ದೇನನ್ನೋ ಹೇಳಬಹುದು ಎಂದು ಒಳಮನಸ್ಸು ತಿಳಿಸುತ್ತದೆ. ಇಲ್ಲೇನೋ ತಂತ್ರಗಾರಿಕೆ ಬಗ್ಗೆ ಮಾತು ಬಂದಿರಬಹುದು ಎಂಬ ಮತ್ತೊಂದು ಊಹೆಯೂ ಮೂಡಬಹುದು. ಕ್ರಿಸ್ತಪೂರ್ವ 4ನೇ ಶತಮಾನದ ಚಾಣಕ್ಯನು ಹೇಳಿದ ಎಷ್ಟೋ ವಿಚಾರಗಳು ಇಪ್ಪತ್ತೊಂದನೇ ಶತಮಾನದಲ್ಲೂ ಪ್ರಸ್ತುತವಾಗಿವೆ.
ಚಾಣಕ್ಯನ 'ಅರ್ಥಶಾಸ್ತ್ರ' ಗ್ರಂಥದ ಬಗ್ಗೆ ಜಗತ್ತಿನಾದ್ಯಂತ ಮನ್ನಣೆ ಇದೆ. ಆರ್ಥಿಕ ನಿಯಮಗಳನ್ನು ರೂಪಿಸುವ ಬಗ್ಗೆ ಚಾಣಕ್ಯನಿಗೆ ಇದ್ದ ಒಳನೋಟ, ದೂರದೃಷ್ಟಿ ಅದ್ಭುತವಾಗಿದ್ದವು. ಮೌರ್ಯ ಸಾಮ್ರಾಜ್ಯದ ಚಂದ್ರಗುಪ್ತ ಮೌರ್ಯನ ಗುರುವಾಗಿ, ಮಾರ್ಗದರ್ಶಕನಾಗಿ ಚಾಣಕ್ಯ ಇತಿಹಾಸದಲ್ಲೊಂದು ಗಟ್ಟಿ ಸ್ಥಾನ ಪಡೆದಿದ್ದಾನೆ. ಅಂಥ ಮಹಾನ್ ವ್ಯಕ್ತಿ ಶ್ರೀಮಂತಿಕೆ ಬಗ್ಗೆ ಏನು ಹೇಳಿದ್ದಾನೆ ಎಂಬುದನ್ನು ವಿವರಿಸುವ ಲೇಖನ ಇದು.
ಸ್ಪಷ್ಟ ಆಲೋಚನೆ ಮತ್ತು ಲೆಕ್ಕಾಚಾರದ ತೀರ್ಮಾನ
ಸ್ಪಷ್ಟ ಚಿಂತನೆ ಎಂಬುದು ಎಲ್ಲ ಒಳ್ಳೆ ನಿರ್ಧಾರದ ಅಡಿಪಾಯ. ಸ್ಪಷ್ಟ ಆಲೋಚನೆ ಮತ್ತು ಲೆಕ್ಕಾಚಾರದ ತೀರ್ಮಾನ ತೆಗೆದುಕೊಳ್ಳುವುದನ್ನು ಯಾವುದೇ ವ್ಯಕ್ತಿ ರೂಢಿಸಿಕೊಳ್ಳಬೇಕು. ಯಾರಿಗೆ ಸ್ಪಷ್ಟ ಚಿಂತನೆ ಇರುವುದಿಲ್ಲವೋ ಅಂಥವರಿಗೆ ಸನ್ನಿವೇಶ ಅರ್ಥವಾಗುವುದಿಲ್ಲ. ಯಾರಿಗೆ ಸನ್ನಿವೇಶದ ಮೌಲ್ಯಮಾಪನ ಸಾಧ್ಯವಿಲ್ಲವೋ ಅಂಥವರಿಗೆ ಅತ್ಯುತ್ತಮ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ.
ದಾನದಲ್ಲಿ ವ್ಯಾಪಾರ ಹಾಗೂ ವ್ಯಾಪಾರವನ್ನು ದಾನದಂತೆ ಮಾಡಬಾರದು
ದಾನ ಮಾಡುವಾಗ ವ್ಯಾಪಾರ- ವ್ಯವಹಾರದ ಚಿಂತನೆ ಮಾಡಬಾರದು. ಅದೇ ರೀತಿ ವ್ಯಾಪಾರದಲ್ಲಿ ದಾನ- ಧರ್ಮ ನೋಡಬಾರದು. ಇಲ್ಲಿ ಗೊತ್ತಾಗಬೇಕಾದ ವಿಚಾರ ಏನೆಂದರೆ, ಯಾವುದೇ ಲಾಭಕ್ಕೋಸ್ಕರ ದಾನ- ಧರ್ಮ ಕಾರ್ಯಗಳನ್ನು ಮಾಡಬಾರದು. ಅದೇ ರೀತಿ ಒಂದು ವ್ಯಾಪಾರವನ್ನು ಧರ್ಮ ಕಾರ್ಯದ ರೀತಿ ಮಾಡಬಾರದು.
ಸಂಪತ್ತಿನ ಮೇಲೆ ನಿಗಾ ಇರಲಿ
ಎಷ್ಟೇ ಸಂಪತ್ತು ಇರಬಹುದು, ಆ ಬಗ್ಗೆ ನಿಗಾ ಇರದಿದ್ದರೆ, ಆ ಕಡೆಗೆ ಸರಿಯಾದ ಗಮನ ನೀಡದಿದ್ದರೆ ಕ್ರಮೇಣ ಕರಗುತ್ತಾ ಬರುತ್ತದೆ. ಒಂದು ದಿನ್ನ ಎಲ್ಲವೂ ಬರಿದಾಗುತ್ತದೆ.
ಯಾವುದು ಸರಿಯಾದ ಹಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು
ದೊಡ್ಡ ಮಟ್ಟದ ಹಣ ಮಾಡಬೇಕು ಅಂದುಕೊಳ್ಳುವವರು ಮೊದಲಿಗೆ ಯಾವುದು ಸರಿಯಾದ ಹಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಬ್ಬ ವ್ಯಕ್ತಿ ಅಡ್ಡ ದಾರಿಗಳಿಂದ ಬಹಳ ಬೇಗ ಸಿರಿವಂತ ಆಗಬಹುದು. ಆದರೆ ಸಂಪತ್ತು ಸಂಗ್ರಹಿಸುವ ದಾರಿಯಲ್ಲಿ ನೈತಿಕತೆ ಬಹಳ ಮುಖ್ಯ. ಅನೈತಿಕ ಹಾಗೂ ಕಾನೂನು ಬಾಹಿರ ಮಾರ್ಗದಲ್ಲಿ ಗಳಿಸಿದ ಸಂಪತ್ತು ದೀರ್ಘ ಕಾಲ ಇರುವುದಿಲ್ಲ.
ತಮ್ಮ ಸ್ವಭಾವ, ಸಾಮರ್ಥ್ಯವನ್ನು ಗುರುತಿಸುತ್ತಾರೆ
ಎಲ್ಲರಿಗೂ ಎಲ್ಲ ಕ್ಷೇತ್ರದಲ್ಲಿ ಹಣ ಮಾಡುವುದು ಸಾಧ್ಯವಿಲ್ಲ. ಚತುರರು ತಮಗೆ ಸೂಕ್ತವಾದ ಕ್ಷೇತ್ರವನ್ನು ಆರಿಸಿಕೊಳ್ಳುತ್ತಾರೆ. ತಮ್ಮ ಸ್ವಭಾವ ಏನು ಎಂಬುದನ್ನು ಮೊದಲಿಗೆ ಗುರುತಿಸುತ್ತಾರೆ. ಆ ನಂತರ ಅದಕ್ಕೆ ಹೊಂದುವಂಥ ಕ್ಷೇತ್ರವನ್ನು ಆರಿಸಿಕೊಂಡು ಮುಂದುವರಿಯುತ್ತಾರೆ. ಆಗ ಸಂಪತ್ತು ಸಹಜವಾಗಿ ಸಂಗ್ರಹವಾಗುತ್ತದೆ.
ಗುರು, ಮಾರ್ಗದರ್ಶಕರು ಅತ್ಯಗತ್ಯ
ನಿಮಗೆ ಶ್ರೀಮಂತರಾಗುವ ಎಲ್ಲ ಸಾಮರ್ಥ್ಯ ಇರಬಹುದು. ಆದರೆ ವಾಸ್ತವದಲ್ಲಿ ಗುರು ಮತ್ತು ಮಾರ್ಗದರ್ಶಕ ಇಲ್ಲದಿದ್ದಲ್ಲಿ ಶ್ರೀಮಂತರಾಗಲು ಸಾಧ್ಯವಿಲ್ಲ.
ಸರ್ಕಾರದ ನಿಯಮಗಳ ಬಗ್ಗೆ ಗಮನ ಇರಲಿ
ವ್ಯಾಪಾರವನ್ನು ವಿಸ್ತರಣೆ ಮಾಡಬೇಕು, ಆ ಮೂಲಕ ಶ್ರೀಮಂತರಾಗಬೇಕು ಅಂತಿದ್ದಲ್ಲಿ ನೀವು ಇರುವ ಸ್ಥಳದ ಬಗ್ಗೆ ಯೋಚಿಸಿ. ನೀವಿರುವ ಪ್ರದೇಶ, ನಗರ, ಮಾಡುತ್ತಿರುವ ವ್ಯವಹಾರ, ವಾಸವಿರುವ ದೇಶ ಇವುಗಳ ಮೇಲೆ ಸರ್ಕಾರದ ನಿಯಮಗಳಿಂದ ಆಗುವ ಪರಿಣಾಮ ಏನೇನು ಎಂದು ಗಮನಿಸಿ. ನಿಮ್ಮನ್ನು ನೇರವಾಗಿ ಮುಟ್ಟುವಂಥ ಅಡ್ಡ ಪರಿಣಾಮಗಳು ಏನೂ ಸರ್ಕಾರದ ನಿಯಮಗಳಿಂದ ಆಗದಿರಬಹುದು. ಬೇರೆ ವಿಚಾರಗಳ ಮೇಲೆ ಅವುಗಳ ಪ್ರಭಾವ ಆಗುತ್ತದೆ. ಆ ಮೂಲಕ ಅದು ನಿಮ್ಮ ವ್ಯಾಪಾರಕ್ಕೆ ಹೊಡೆತ ಕೊಡುತ್ತದೆ.
ಸ್ಥಿತಪ್ರಜ್ಞತೆ, ತಾಳ್ಮೆ ಇರಲಿ
ಶ್ರೀಮಂತರಾಗಬೇಕು ಅಂದುಕೊಳ್ಳುವ ವ್ಯಕ್ತಿ ಬಹಳ ಮುಖ್ಯವಾಗಿ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳಬೇಕು. ಇದು ಬಹಳ ಮುಖ್ಯವಾದ ಗುಣ. ಇದು ಪುಟ್ಟ ಹಣತೆಯನ್ನು ಹಚ್ಚಿಟ್ಟಂತೆ. ಸ್ಥಿರವಾಗಿ, ತಾಳ್ಮೆಯಿಂದ ಮತ್ತು ಕಿಡಿಯು ಅಲುಗಾಡದಂತೆ ಇರಬೇಕು.
ಯೋಜನೆ ಪೂರ್ಣ ಸಿದ್ಧವಿರಲಿ
ಸಂಪತ್ತು ಸೃಷ್ಟಿಗೆ ನೀವೊಂದು ಮಾರ್ಗ ಕಂಡುಕೊಂಡಿದ್ದಲ್ಲಿ ಅದಕ್ಕೆ ಅಗತ್ಯ ಇರುವ ಪೂರ್ಣ ರಣತಂತ್ರವನ್ನು ಆಲೋಚಿಸಿ. ಒಂದು ಮನೆ ಕಟ್ಟುವ ಮುನ್ನ ಹೇಗೆ ಸಂಪೂರ್ಣ ನಕ್ಷೆ ಇರುತ್ತದೋ ಹಾಗೆ. ಯಾವುದೇ ಕಾರ್ಯ ಚಟುವಟಿಕೆಗೆ ಇಳಿಯುವ ಮುನ್ನ ಅದರ ನಕ್ಷೆ ನಿಮ್ಮ ಬಳಿ ಇರಲಿ.
ಸಂಪತ್ತಿನ ನಿರ್ವಹಣೆ ಕಲಿಯಿರಿ
ಶ್ರೀಮಂತರು ಮತ್ತೂ ಶ್ರೀಮಂತರಾಗುತ್ತಾರೆ. ಆದರೆ ನಿಮ್ಮ ಸಂಪತ್ತಿನ ಬಗ್ಗೆ ಕಾಳಜಿ ವಹಿಸದಿದ್ದರೆ ಕೈ ಜಾರಿ ಹೋಗುತ್ತದೆ. ಆದ್ದರಿಂದ ಸಂಪತ್ತಿನ ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ. ಆ ಮೂಲಕ ಅದು ಕರಗದೆ ಬೆಳೆಯುತ್ತಾ ಸಾಗುತ್ತದೆ.
ಲೆಕ್ಕ ಪರಿಶೀಲಿಸುತ್ತಲೇ ಇರಬೇಕು
ಯಾವುದೇ ವ್ಯಕ್ತಿ ನಿತ್ಯವೂ ತನ್ನ ಲೆಕ್ಕಗಳನ್ನು ಪ್ರತಿ ನಿತ್ಯ, ಪ್ರತಿ ವಾರ, ಪ್ರತಿ ಹದಿನೈದು ದಿನಕ್ಕೊಮ್ಮೆ, ತಿಂಗಳಿಗೊಮ್ಮೆ, ನಾಲ್ಕು ತಿಂಗಳಿಗೊಮ್ಮೆ ಹಾಗೂ ವರ್ಷಕ್ಕೊಮ್ಮೆ ಪರಿಶೀಲನೆ ಮಾಡುತ್ತಲೇ ಇರಬೇಕು.
ಪಾಲುದಾರಿಕೆಯಲ್ಲಿದೆ ಯಶಸ್ಸಿನ ಮಾರ್ಗ
ಒಬ್ಬ ವ್ಯಕ್ತಿಗೇ ಯಶಸ್ಸು ಪಡೆಯುವ ಎಲ್ಲ ಗುಣಗಳೂ ಇರುವುದಿಲ್ಲ. ಆದ್ದರಿಂದ ಯಶಸ್ಸು ಪಡೆಯುವುದಕ್ಕೆ ಅತ್ಯುತ್ತಮ ಪಾಲುದಾರರು ಅಗತ್ಯ. ಪಾಲುದಾರಿಕೆ ಅಂದರೆ ಒಬ್ಬರಿಗೆ ಮತ್ತೊಬ್ಬರು ಸಹಾಯವಾಗುವುದು. ಪಾಲುದಾರರಾದವರು ಒಬ್ಬರು ಮತ್ತೊಬ್ಬರ ದೌರ್ಬಲ್ಯವನ್ನು ಸರಿಪಡಿಸಬೇಕು, ಸಾಮರ್ಥ್ಯವನ್ನು ಬಲಪಡಿಸಬೇಕು.


Click it and Unblock the Notifications