ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ರಾಕೆಟ್ ಶುಕ್ರವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಶ್ರೀಹರಿಕೋಟಾ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಉಡಾವಣೆಗೊಂಡಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಮೂರನೇ ಬಾರಿಗೆ ಚಂದ್ರಯಾನ-3 ಅನ್ನು ಉಡಾವಣೆ ಮಾಡಿದೆ. ಸುಮಾರು 40 ದಿನಗಳ ಬಳಿಕ ಅಂದರೆ ಆಗಸ್ಟ್ 23 ರಂದು ಇದು ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ಸಾಧ್ಯತೆಯಿದೆ.
ಈ ಹಿಂದೆ ಚಂದ್ರಯಾನಕ್ಕೆ ಮಾಡಲಾದ ಖರ್ಚಿಗೂ ಕಡಿಮೆ ಖರ್ಚನ್ನು ಇಸ್ರೋ ಈ ಯೋಜನೆಗೆ ಮಾಡಿದೆ. ಆದರೆ ಸಂಪನ್ಮೂಲಗಳು ಮತ್ತು ಪೂರೈಕೆಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯನ್ನು ಮಾಡದೆ ಈ ಕಾರ್ಯಚರಣೆಯನ್ನು ಮಾಡಲಾಗಿದೆ. ಯಶಸ್ವಿ ಮಂಗಳಯಾನದಿಂದ ಹಿಡಿದು, ಸೂರ್ಯ ಮಿಷನ್ ಗಗನ್‌ಯಾನದವರೆಗೆ ಇಸ್ರೋ ಕೊಡುಗೆ ಅಭೂತಪೂರ್ವಾಗಿದೆ. ಇನ್ನು ಮುಂಬರುವ ದಿನಗಳಲ್ಲಿಯೂ ಬಾಹ್ಯಾಕಾಶ ಯೋಜನೆಗಳನ್ನು ಯೋಜಿಸುತ್ತಿರುವುದರಿಂದ, ಈಗಿನ ಖರ್ಚು ವೆಚ್ಚಗಳು, ಫಂಡಿಂಗ್‌ಗಳು ಪ್ರಮುಖವಾಗಿದೆ.

ಬಜೆಟ್ ಹಂಚಿಕೆ ಹೇಗಿದೆ?
ಈ ಹಣಕಾಸು ವರ್ಷದಲ್ಲಿ ನಾವು ನೋಡಿದಾಗ ಬಾಹ್ಯಾಕಾಶ ಇಂಡಸ್ಟ್ರಿಯು ಕಳೆದ ಹಣಕಾಸು ವರ್ಷದಲ್ಲಿ ಪಡೆದ ಫಂಡಿಂಗ್‌ಗಿಂತ ಕಡಿಮೆ ಫಂಡಿಂಗ್ ಅನ್ನು ಪಡೆದಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಬಾಹ್ಯಾಕಾಶ ಇಲಾಖೆಯ ಫಂಡಿಂಗ್ ಹೆಚ್ಚಳವಾಗುತ್ತಾ ಸಾಗಿತ್ತು. ಬಾಹ್ಯಾಕಾಶ ಇಲಾಖೆಗೆ ಹಣಕಾಸು ವರ್ಷ 2023-24ರಲ್ಲಿ 12,543 ಕೋಟಿ ರೂಪಾಯಿ, ಹಣಕಾಸು ವರ್ಷ 2022-23ರಲ್ಲಿ 13,700 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.
ಇನ್ನು ಹಣಕಾಸು ವರ್ಷ 2021-22ರಲ್ಲಿ (ಕಳೆದ ಐದು ವರ್ಷಗಳ ಅವಧಿಯಲ್ಲೇ ಅಧಿಕ ಹಂಚಿಕೆ) 13,950 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಹಣಕಾಸು ವರ್ಷ 2020-21ರಲ್ಲಿ ಬಾಹ್ಯಾಕಾಶ ಇಲಾಖೆಗೆ 13,480 ಕೋಟಿ ರೂಪಾಯಿ ಮತ್ತು ಹಣಕಾಸು ವರ್ಷ 2019-20ರಲ್ಲಿ 12,470 ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ.
ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದಿರುವ ಮಂಗಳ ಮಿಷನ್, ಚಂದ್ರ ಮಿಷನ್‌ಗಳನ್ನು ನೋಡಿದಾಗ, ಇಸ್ರೋ ಈ ಬಜೆಟ್ ಹಂಚಿಕೆಯನ್ನು ಎಷ್ಟು ಸರಿಯಾದ ರೀತಿಯಲ್ಲಿ ವಿನಿಯೋಗ ಮಾಡಿದೆ ಎಂಬುವುದನ್ನು ತಿಳಿಸುತ್ತದೆ. ಭಾರತದ ಮೊದಲ ಮಿಷನ್ ಮಂಗಳಯಾನ ಯೋಜನೆಯು ನವೆಂಬರ್ 5, 2023ರಲ್ಲಿ ಉಡಾವಣೆಯಾಗಿದ್ದು, ಇದು ಸುಮಾರು 450 ಕೋಟಿ ರೂಪಾಯಿ ವೆಚ್ಚದ ಮಿಷನ್ ಆಗಿದೆ. ಅಷ್ಟು ಮಾತ್ರವಲ್ಲದೆ ವಿಶ್ವದ ಅತೀ ಅಗ್ಗ ಮಂಗಳ ಮಿಷನ್ ಇದಾಗಿದೆ!.
ಇತರೆ ಚಂದ್ರಯಾನಕ್ಕಿಂತ ಎಷ್ಟು ಕಡಿಮೆ ವೆಚ್ಚ?
ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿ MkIII-M1 ಜುಲೈ 22, 2019 ರಂದು ಚಂದ್ರಯಾನ-2 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆರ್ಬಿಟರ್, ಲ್ಯಾಂಡರ್, ರೋವರ್, ನ್ಯಾವಿಗೇಷನ್ ಮತ್ತು ಗ್ರೌಂಡ್ ಸಪೋರ್ಟ್ ನೆಟ್‌ವರ್ಕ್‌ಗಾಗಿ 603 ಕೋಟಿ ರೂಪಾಯಿ ಮತ್ತು ಮತ್ತು 375 ಕೋಟಿ ರೂಪಾಯಿಯ ಸ್ವದೇಶಿ ಕ್ರಯೋಜೆನಿಕ್ ಎಂಜಿನ್ ಸೇರಿದಂತೆ 978 ಕೋಟಿ ರೂಪಾಯಿ ವೆಚ್ಚದ ರಾಕೆಟ್ ಉಡಾವಣೆ ಇದಾಗಿದೆ. ಚಂದ್ರಯಾನ-3 ಮಿಷನ್‌ಗೆ ಅಂದಾಜು 600 ಕೋಟಿ ರೂಪಾಯಿ ಖರ್ಚಾಗಿದೆ. ಆದರೆ ಇದರ ಅಂತಿಮ ಬಜೆಟ್ 615 ಕೋಟಿ ರೂಪಾಯಿ ಆಗಿದೆ.
ಚಂದ್ರನ ಅಂಗಳಕ್ಕೆ ಇಳಿಯುವ ವಿಶ್ವದ ನಾಲ್ಕನೇ ದೇಶ ಭಾರತವಾಗಿದೆ. ಈ ಹಿಂದೆ ಯುಎಸ್, ರಷ್ಯಾ ಮತ್ತು ಚೀನಾ ಚಂದ್ರನ ಅಂಗಳಕ್ಕೆ ಇಳಿದಿದೆ. ಆದರೆ ಉಳಿದ ಮೂರು ದೇಶಗಳಿಗೆ ಹೋಲಿಕೆ ಮಾಡಿದಾಗ ಅತೀ ಕಡಿಮೆ ಬಜೆಟ್‌ನಲ್ಲಿ ಈ ಮಿಷನ್ ಅನ್ನು ರೂಪಿಸಿರುವ ದೇಶ ಭಾರತವಾಗಿದೆ. ಯುಎಸ್ ಸುಮಾರು 25 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ಚೀನಾ 8.4 ಬಿಲಿಯನ್ ಡಾಲರ್ ವೆಚ್ಚ ಮಾಡಿದೆ. ರಷ್ಯಾ 1996ರಲ್ಲಿ 20 ಬಿಲಿಯನ್ ಡಾಲರ್ ಖರ್ಚು ಮಾಡಿದೆ.
ಇಸ್ರೋ ವೆಚ್ಚ ನಿರ್ವಹಣೆ ಮಾಡಿದ್ದು ಹೇಗೆ?
ಕಾರ್ಮಿಕರ ವೆಚ್ಚ ಹಾಗೂ ಸೌಕರ್ಯ ವೆಚ್ಚ: ನಾಸಾ ಹಾಗೂ ಇತರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿಗಳಿಗೆ ನಾವು ಹೋಲಿಕೆ ಮಾಡಿದಾಗ, ಇಸ್ರೋ ಕಡಿಮೆ ವೆಚ್ಚದಲ್ಲಿ ನೇಮಕಾತಿ ನಡೆಸುತ್ತದೆ, ಈ ಮೂಲಕ ಖರ್ಚನ್ನು ನಿರ್ವಹಣೆ ಮಾಡುತ್ತದೆ.
ಕಡಿಮೆ ಬೆಲೆಗೆ ಖಾಸಗಿ ಏರೋಸ್ಪೇಸ್ ಕಂಪನಿಗಳಿಂದ ವಸ್ತುಗಳ ಪೂರೈಕೆ: ಮುಂಬೈ ಮೂಲದ ಖಾಸಗಿ ಕಂಪನಿ ಗಾಡ್ರೇಜ್ ಏರೋಸ್ಪೇಸ್ ಇಸ್ರೋಗೆ ಬೇಕಾದ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಗೆ ಪೂರೈಕೆ ಮಾಡಿದೆ. ಈ ಸಂಸ್ಥೆ ಚಂದ್ರಯಾನ 1, ಚಂದ್ರಯಾನ 2, ಮತ್ತು ಮಂಗಳಯಾನಕ್ಕೂ ಪ್ರಮುಖ ಕೊಡುಗೆಯನ್ನು ನೀಡಿದೆ. ವಿಕಾಸ್ ಇಂಜಿನ್, ಸಾಟೆಲೈಟ್ ಡ್ರಸ್ಟರ್‌ಗಳು ಮೊದಲಾದವುಗಳನ್ನು ಪೂರೈಸಿದೆ.
ನಾಸಾ, ಇತರೆ ಸಂಸ್ಥೆಗಳೊಂದಿಗೆ ಅಂತಾರಾಷ್ಟ್ರೀಯ ಸಹಯೋಗ: ಇಸ್ರೋ ಸಂಸ್ಥೆಯು ನಾಸಾ ಸೇರಿದಂತೆ ಇತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗಳೊಂದಿಗೆ ಸಹಯೋಗವನ್ನು ನಡೆಸಿದೆ. ಇಸ್ರೋ ಹಾಗೂ ನಾಸಾ ಜೊತೆಯಾಗಿ ಸೇರಿ ನಿಸಾರ್ ಎಂಬ ಸಾಟೆಲೈಟ್ ಮಿಷನ್ ಅನ್ನು ಆರಂಭಿಸಿದೆ.
ವಾಣಿಜ್ಯ ವ್ಯಾಪಾರ: ವಾಣಿಜ್ಯ ವ್ಯಾಪಾರದ ಮೂಲಕ ಕಳೆದ ಕೆಲವು ವರ್ಷಗಳಿಂದ ಇಸ್ರೋ ಆದಾಯವನ್ನು ಗಳಿಸುತ್ತಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ನೀಡಿದ ಮಾಹಿತಿ ಪ್ರಕಾರ ಇಸ್ರೋ ಹಲವಾರು ಖಾಸಗಿ ಮತ್ತು ವಿದೇಶಿ ಏಜೆನ್ಸಿಗಳಿಗೆ ಮಿಷನ್ ಅನ್ನು ಪ್ರಾರಂಭಿಸಿದೆ. ಈ ಮೂಲಕ 2019 ಮತ್ತು 2021 ರ ನಡುವೆ ಸುಮಾರು 288 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ.


Click it and Unblock the Notifications