ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸುವ ಶಕ್ತಿ ಯೋಜನೆಯು ಕರ್ನಾಟಕದಲ್ಲಿ ಜುಲೈ 11 ರಂದು ಪ್ರಾರಂಭವಾಗಿದೆ. ಈ ಯೋಜನೆ ಆರಂಭವಾದ ಬಳಿಕ ನಿರಂತರವಾಗಿ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆಯು ಅಧಿಕವಾಗುತ್ತಾ ಸಾಗಿದೆ. ಅಂದರೆ ಇದೊಂದು ಯಶಸ್ವಿ ಯೋಜನೆ ಎಂದರೆ ತಪ್ಪಾಗಲಾರದು.
ಮಹಿಳೆಯರು ಮತ್ತು ಪುರುಷರು ಸೇರಿದಂತೆ ಬಸ್ ಪ್ರಯಾಣಿಕರ ಹೆಚ್ಚಳವು ಅಸ್ತಿತ್ವದಲ್ಲಿರುವ ಬಸ್ ಮೂಲಸೌಕರ್ಯವನ್ನು ಅತೀ ಕಡಿಮೆ ಎನಿಸಿದೆ. ಬಸ್ ನಿಲ್ದಾಣಗಳಲ್ಲಿ ಪ್ರಸ್ತುತ ನಿರಂತರವಾಗಿ ದಟ್ಟಣೆ ಕಾಣುತ್ತಿದೆ. ಇದು ಸರ್ಕಾರಕ್ಕೆ ಮತ್ತೊಂದು ಸವಾಲು ಎಂದರೂ ತಪ್ಪಾಗಲಾರದು.

ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ
ಶಕ್ತಿ ಯೋಜನೆಯು ಜಾರಿಯಾಗುವ ಮೊದಲು ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪ್ರತಿದಿನ ಸರಿಸುಮಾರು 84.5 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಯೋಜನೆಯನ್ನು ಪರಿಚಯಿಸಿದ ನಂತರ, ಈ ಸಂಖ್ಯೆಯು ದಿನಕ್ಕೆ ಸುಮಾರು 1.06 ಕೋಟಿ ಪ್ರಯಾಣಿಕರಿಗೆ ಏರಿದೆ. ಶೇಕಡ 55 ರಷ್ಟು ಮಹಿಳೆಯರು, ಶೇಕಡ 45 ರಷ್ಟು ಪುರುಷರು ಪ್ರತಿ ದಿನ ಬಸ್ ಬಳಸುತ್ತಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ, ಆದರೆ ಬಸ್‌ಗಳ ಸಂಖ್ಯೆ?
ಶಕ್ತಿ ಯೋಜನೆಯ ಪ್ರಭಾವದಿಂದಾಗಿ ಪ್ರಯಾಣಿಕರ ಸಂಖ್ಯೆಯೇನೋ ಅಧಿಕವಾಗಿದೆ. ಆದರೆ ಬಸ್‌ಗಳ ಸಂಖ್ಯೆ ಮಾತ್ರ ಅಧಿಕವಾಗಿಲ್ಲ. ಈ ಯೋಜನೆ ಆರಂಭವಾದ ಬಳಿಕ ಹೆಚ್ಚಿನ ಮಹಿಳೆಯರು ಧಾರ್ಮಿಕ ಕೇಂದ್ರಗಳು, ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ಇದು ಕುಟುಂಬ ಪ್ರವಾಸಗಳಿಗೂ ಕಾರಣವಾಗಿದೆ. ಮದುವೆ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳಿಗೆ ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಕಾರಣ ಪುರುಷರು ಕೂಡಾ ಬಸ್ ಪ್ರಯಾಣದ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಬಸ್‌ನಲ್ಲಿ ಮಹಿಳೆಯರ ಜೊತೆಗೆ ಪುರುಷರ ಪ್ರಯಾಣ ಪ್ರಮಾಣವು ಕೂಡಾ ಅಧಿಕವಾಗಿದೆ.
ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಈಗ ಬಸ್ ಪ್ರಯಾಣವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಗಾರ್ಮೆಂಟ್ಸ್ ಸೇರಿದಂತೆ ನಾನಾ ವಲಯಗಳಲ್ಲಿ ದುಡಿಯುತ್ತಿರುವ ಮಹಿಳೆಯರು ಇಂಧನ ವೆಚ್ಚ ಉಳಿಸುವ ಜೊತೆಗೆ ಉಚಿತವಾಗಿ ಪ್ರಯಾಣ ಮಾಡುವ ನಿಟ್ಟಿನಲ್ಲಿ ದ್ವಿಚಕ್ರ ವಾಹನ ಬಿಟ್ಟು ಬಸ್ ಪ್ರಯಾಣವನ್ನೇ ಆಯ್ಕೆ ಮಾಡಿದ್ದಾರೆ.
ಈ ಯೋಜನೆಯು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವಲ್ಲಿ ಯಶಸ್ವಿಯಾಗಿದ್ದರೂ, ಬಸ್‌ಗಳು ಮಾತ್ರ ಸಾಕಾಗುತ್ತಿಲ್ಲ. ಎಲ್ಲ ಬಸ್‌ಗಳಲ್ಲಿ ದಟ್ಟಣೆ ಅಧಿಕವಾಗುತ್ತಿದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯೂಕೆಆರ್‌ಟಿಸಿ) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಸಿಟಿ) ಒಟ್ಟಾಗಿ 24,352 ಬಸ್‌ಗಳನ್ನು ನಿರ್ವಹಿಸುತ್ತವೆ. ಆದರೆ, ಪ್ರಸ್ತುತ 22,017 ಬಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಒಟ್ಟು ಪ್ರಯಾಣಿಕರಲ್ಲಿ ಶೇಕಡ 30 ರಷ್ಟು ಹೆಚ್ಚಳವಾಗಿರುವ ಕಾರಣ ಇನ್ನು 3,000 ಬಸ್ಸುಗಳು ಬೇಕಾಗುತ್ತವೆ. ಬಸ್‌ಗಳ ಕೊರತೆಯಿಂದಾಗಿ ಬಸ್‌ಗಳು ಕಿಕ್ಕಿರಿದು ತುಂಬಿದ್ದು, ಸರ್ಕಾರಿ ನೌಕರರು, ವಿದ್ಯಾರ್ಥಿಗಳು ಮತ್ತು ಮಾಸಿಕ ಪಾಸ್ ಹೊಂದಿರುವವರ ಮೇಲೆ ಪರಿಣಾಮ ಬೀರಿದೆ. ಕೆಕೆಆರ್‌ಟಿಸಿಯಿಂದ 620 ಹೊಸ ಬಸ್‌ಗಳ ಸೇರ್ಪಡೆಯಾಗಿದ್ದರೂ ಸಂಚಾರ ದಟ್ಟಣೆ ಸವಾಲಾಗಿಯೇ ಉಳಿದಿದೆ.


Click it and Unblock the Notifications