ಕೇಂದ್ರ ಸರ್ಕಾರವು ತುಟ್ಟಿಭತ್ಯೆ (ಡಿಎ) ಅನ್ನು ಏರಿಕೆ ಮಾಡುವ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿಯನ್ನು ಶುಕ್ರವಾರ ನೀಡಿದೆ. ಹೌದು ಕೇಂದ್ರ ಸರ್ಕಾರವು ತುಟ್ಟಿ ಭತ್ಯೆ (ಡಿಎ) ಮತ್ತು ಡಿಯರೆನ್ಸ್ ರಿಲೀಫ್ (ಡಿಆರ್- ತುಟ್ಟಿಭತ್ಯೆ ಪರಿಹಾರ) ಶೇಕಡ 4ರಷ್ಟು ಏರಿಕೆ ಮಾಡಿದೆ. ಈ ಬಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಶುಕ್ರವಾರ (ಮಾರ್ಚ್ 24) ಮಾಹಿತಿ ನೀಡಿದರು. ಈ ಡಿಎ ಏರಿಕೆ ಬಳಿಕ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯು ಶೇಕಡ 42ಕ್ಕೆ ಏರಿಕೆಯಾಗಲಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರವು ಸುಮಾರು 47.58 ಲಕ್ಷ ಕೇಂದ್ರ ಸರ್ಕಾರದ ನೌಕರರಿಗೆ ಮತ್ತು ಸುಮಾರು 69.76 ಲಕ್ಷ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡಲಿದೆ ಎಂದು ಸಚಿವ ಅನುರಾಗ್ ಠಾಕೂರ್ ತಿಳಿಸಿದರು. ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಈ ನೂತನ ತುಟ್ಟಿ ಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೆಚ್ಚಳವು ಜನವರಿ 1, 2023ರಿಂದ ಅನ್ವಯವಾಗಲಿದೆ. ಈ ತುಟ್ಟಿಭತ್ಯೆ ಏರಿಕೆ ಬಳಿಕ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ ಲೆಕ್ಕಾಚಾರ ನೋಡೋಣ ಮುಂದೆ ಓದಿ...

"ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆತಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಕೇಂದ್ರ ಪಿಂಚಣಿದಾರರಿಗೆ ಡಿಎ ಹಾಗೂ ಡಿಆರ್ ಏರಿಕೆ ಮಾಡುವ ನಿರ್ಧಾರವನ್ನು ಅನುಮೋದಿಸಲಾಗಿದೆ. ಈ ನೂತನ ಕ್ರಮವು ಜನವರಿ 1, 2023ರಿಂದ ಅನ್ವಯವಾಗಲಿದೆ. ಅಧಿಕವಾಗಿ ಶೇಕಡ 4ರಷ್ಟು ಬಡ್ಡಿದರವನ್ನು ಏರಿಕೆ ಮಾಡಲಾಗಿದೆ. ಪ್ರಸ್ತುತ ಡಿಎ ಶೇಕಡ 38 ಆಗಿದೆ, ಇದು ಶೇಕಡ 4ರಷ್ಟು ಹೆಚ್ಚಳವಾಗಲಿದೆ," ಎಂದು ಸರ್ಕಾರವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಹಣದುಬ್ಬರದ ಪರಿಣಾಮವನ್ನು ತಗ್ಗಿಸಲು, ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಹೆಚ್ಚಿಸುತ್ತದೆ. ಡಿಎ ಅನ್ನು ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಜನವರಿ ಮತ್ತು ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಿಸಲಾಗುತ್ತದೆ. ಕೈಗಾರಿಕಾ ಕಾರ್ಮಿಕರ ಇತ್ತೀಚಿನ ಗ್ರಾಹಕ ಬೆಲೆ ಸೂಚ್ಯಂಕ (CPI-IW) ಆಧರಿಸಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಕಳೆದ ಬಾರಿ ಡಿಎಯನ್ನು ಜುಲೈ 1, 2022ರಂದು ಶೇಕಡ 38ಕ್ಕೆ ಹೆಚ್ಚಳ ಮಾಡಲಾಗಿತ್ತು.
ಡಿಎ ಏರಿಕೆ ಬಳಿಕ ವೇತನ ಎಷ್ಟಾಗಲಿದೆ?
ಡಿಎ ಅನ್ನು ಬೇಸಿಕ್ ಸ್ಯಾಲರಿ ಅಥವಾ ಮೂಲ ವೇತನದ ಒಂದು ಭಾಗವಾಗಿ ಲೆಕ್ಕಾಚಾರ ಮಾಡಲಾಗುತ್ತದೆ. ಎಲ್ಲ ಕೇಂದ್ರ ಸರ್ಕಾರದ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿಆರ್ ಲಭ್ಯವಾಗುತ್ತದೆ. ಈ ಡಿಎ ಏರಿಕೆಯು ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಮತ್ತು ಕುಟುಂಬ ಪಿಂಚಣಿದಾರರಿಗೆ ಅನ್ವಯವಾಗುತ್ತದೆ. ಕೇಂದ್ರ ಸರ್ಕಾರಿಗ ನೌಕರರಿಗೆ ಡಿಎ ಏರಿಕೆ ಎಂದರೆ ಅದು ನೌಕರರಿಗೆ ಲಭ್ಯವಾಗುವ ವೇತನವಾಗಿದೆ.
ಉದಾಹರಣೆಯೊಂದಿಗೆ ವೇತನ ಹೆಚ್ಚಳ ನೋಡಿ
ಉದಾಹರಣೆಗೆ ಕೇಂದ್ರ ಸರ್ಕಾರಿ ಉದ್ಯೋಗಿಗೆ ಮಾಸಿಕವಾಗಿ 23,500 ರೂಪಾಯಿ ಮೂಲ ವೇತನ ಇದೆ ಎಂದುಕೊಳ್ಳಿ. ಶೇಕಡ 38 ತುಟ್ಟಿಭತ್ಯೆಯಾದ ಉದ್ಯೋಗಿಯ ತುಟ್ಟಿಭತ್ಯೆ ಮೊತ್ತ 8,930 ರೂಪಾಯಿ ಆಗಲಿದೆ. ಈಗ ಸರ್ಕಾರಿ ಡಿಎ ಪರಿಷ್ಕರಣೆ ಮಾಡಿದ ಬಳಿಕ ಡಿಎ ಶೇಕಡ 42ಕ್ಕೆ ಹೆಚ್ಚಾಗಲಿದ್ದು, ಡಿಎ 9,870 ರೂಪಾಯಿಗೆ ತಲುಪಲಿದೆ. ಅಂದರೆ ಈ ನೂತನ ಡಿಎ ಏರಿಕೆ ಬಳಿಕ ವೇತನವು 9,870 ರೂಪಾಯಿ - 8,930 ರೂಪಾಯಿ = 940 ರೂಪಾಯಿ ಆಗಲಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗುವ ಡಿಎಗೆ ಸಮಾನವಾದ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರದ ಪಿಂಚಣಿದಾರರು ಪಡೆಯುತ್ತಾರೆ. ತುಟ್ಟಿಭತ್ಯೆ ಪರಿಹಾರ ಕೂಡಾ ಶೇಕಡ 4ರಷ್ಟು ಹೆಚ್ಚಳವಾಗಿದೆ. ಡಿಆರ್ ಹೆಚ್ಚಳದಿಂದ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ಮಾಸಿಕ ಪಿಂಚಣಿಯೂ ಹೆಚ್ಚಾಗಲಿದೆ. ಉದಾಹರಣೆಗೆ, ಕೇಂದ್ರ ಸರ್ಕಾರದ ಪಿಂಚಣಿದಾರರು ತಿಂಗಳಿಗೆ 40,100 ರೂ ಮೂಲ ಪಿಂಚಣಿ ಪಡೆಯುತ್ತಾರೆ ಅಂದುಕೊಳ್ಳಿ. ತುಟ್ಟಿಭತ್ಯೆಯು ಶೇಕಡ 38ರಷ್ಟು ಇದ್ದಾಗ ಪಿಂಚಣಿದಾರರಿಗೆ ಈಗ 15,238 ರೂಪಾಯಿ ಪಿಂಚಣಿ ಲಭ್ಯವಾಗುತ್ತದೆ. ಡಿಆರ್ ಶೇಕಡ 42ಕ್ಕೆ ಏರಿಕೆಯಾದಾಗ ಪ್ರತಿ ತಿಂಗಳು 16,842 ರೂಪಾಯಿ ಪಿಂಚಣಿ ಲಭ್ಯವಾಗಲಿದೆ. ಅಂದರೆ ಪಿಂಚಣಿಯು ಮಾಸಿಕವಾಗಿ 1,604 ರೂಪಾಯಿ ಅಧಿಕವಾಗಲಿದೆ.


Click it and Unblock the Notifications