ಮಗ ಮತ್ತು ಮಗಳು ಸನ್ಯಾಸತ್ವ ಸ್ವೀಕರಿಸಿದ ಕೆಲ ವರ್ಷಗಳ ನಂತರ ಗುಜರಾತ್‌ನ ವಜ್ರದ ವ್ಯಾಪಾರಿ ದಂಪತಿಗಳು ತಮ್ಮ ಮಕ್ಕಳ ದಾರಿಯಲ್ಲೇ ಸಾಗಲು ನಿರ್ಧರಿಸಿದ್ದಾರೆ. ಐಷಾರಾಮಿ ಜೀವನ, ಲಾಭದಾಯಕ ವ್ಯವಹಾರ ಎಲ್ಲಾವನ್ನು ತ್ಯಜಿಸಿ ಸನ್ಯಾಸಿಗಳಂತೆ ಮುಂದಿನ ಜೀವನವನ್ನು ನಡೆಸಲು ತಯಾರಿ ನಡೆಸುತ್ತಿದ್ದಾರೆ.
ಗುಜರಾತ್ ಮೂಲದ ವಜ್ರದ ವ್ಯಾಪಾರಿ, ಜೈನ ಸಮುದಾಯದ ದೀಪೇಶ್ ಶಾ ಮತ್ತು ಪಿಕಾ ಶಾ ತಮ್ಮ ಸಂಪತ್ತು, ಲೌಕಿಕ ಜೀವನವನ್ನು ತ್ಯಜಿಸಿ ಆಧ್ಯಾತ್ಮಿಕ ಮಾರ್ಗ ಸಾಗುವ ಮೂಲಕ ಜೈನ ಸನ್ಯಾಸಿಗಳಾಗಿ ತಮ್ಮ ಮುಂದಿನ ಜೀವನವನ್ನು ಕಳೆಯಲು ನಿರ್ಧರಿಸಿದ್ದಾರೆ. ಐದು ವರ್ಷಗಳ ಹಿಂದೆ, ಅವರ 12 ವರ್ಷದ ಭವ್ಯ ಶಾ ಎಂದು ಕರೆಯಲ್ಪಡುತ್ತಿದ್ದ ಮಗ ಸನ್ಯಾಸತ್ವ ಸ್ವೀಕರಿಸಿ ಭಾಗ್ಯರತ್ನ ವಿಜಯ್ ಆಗಿ ಬದಲಾಗಿದ್ದರು.

ಶಾ ಅವರ ಮಗ ಭಾಗ್ಯರತ್ನ ಅವರು ಐಷಾರಾಮಿ ಜೀವನ ತ್ಯಜಿಸಿ ಸನ್ಯಾಸ ದೀಕ್ಷೆ ಪಡೆಯುವ ಸಮಾರಂಭಕ್ಕೆ ಫೆರಾರಿಯಲ್ಲಿ ತೆರಳಿದ್ದರು. ಅದರಂತೆಯೇ ದೀಪೇಶ್ ಶಾ ಮತ್ತು ಪಿಕಾ ಶಾ ದಂಪತಿಗಳು ಜಾಗ್ವಾರ್ ಮೂಲಕ ತೆರಳಿದ್ದರು. ಈ ದಂಪತಿಗಳ ಪುತ್ರ ಮಾತ್ರವಲ್ಲದೇ ಮಗಳೂ ಪರಾರ್ಥರೇಖಾ ಶ್ರೀ ಕೂಡಾ ಒಂದು ದಶಕದ ಹಿಂದೆ ಸನ್ಯಾಸಿ ಜೀವನಕ್ಕಾಗಿ ಸಂಪತ್ತನ್ನು ತ್ಯಜಿಸಿದ್ದರು ಎಂಬುವುದು ಗಮನಾರ್ಹ.
ವಾರ್ಷಿಕ 15 ಕೋಟಿ ರೂಪಾಯಿ ವಹಿವಾಟು ಹೊಂದಿರುವ ಸಂಸ್ಥೆ
ದೀಪೇಶ್ ಶಾ ಸೂರತ್‌ನ ಅತ್ಯಂತ ಯಶಸ್ವಿ ವಜ್ರದ ವ್ಯಾಪಾರಿಗಳಲ್ಲಿ ಓರ್ವರಾಗಿದ್ದು ಅವರ ಸಂಸ್ಥೆಯೂ ವಾರ್ಷಿಕ 15 ಕೋಟಿ ರೂಪಾಯಿ ವಹಿವಾಟು ಹೊಂದಿದೆ. ಇದೀಗ ಈ ಸಿರಿವಂತ ದಂಪತಿಗಳು ತಮ್ಮ ಲಾಭದಾಯಕ ವ್ಯವಹಾರವನ್ನು ಕೊನೆಗೊಳಿಸಿ ಸನ್ಯಾಸತ್ವದತ್ತ ಹೆಜ್ಜೆ ಹಾಕಿದ್ದಾರೆ. ತಮ್ಮ ಸಿರಿವಂತಿಕೆ ಮತ್ತು ಐಷಾರಾಮಿ ಜೀವನಶೈಲಿಯನ್ನು ತೊರೆದಿರುವ, ಸನ್ಯಾಸತ್ವ ತಯಾರಿಯಲ್ಲಿ ತೊಡಗಿದ್ದು ಇಂದ್ರಿಯನಿಗ್ರಹಕ್ಕಾಗಿ ಸನ್ಯಾಸಿಗಳ ಜೊತೆಯಲ್ಲಿ ಮೈಲುಗಟ್ಟಲೆ ನಡೆನಡೆದಿದ್ದಾರೆ.
ದಿನೇಶ್ ಶಾ ಅವರು ಸನ್ಯಾಸಿತ್ವದ ತಯಾರಿಯಲ್ಲಿ ಈಗಾಗಲೇ 350 ಕಿಮೀ ನಡೆದಿದ್ದು, ಪಿಕಾ ಅವರು ಮಹಿಳಾ ಸನ್ಯಾಸಿಗಳೊಂದಿಗೆ 500 ಕಿಮೀ ದೂರವನ್ನು ಕ್ರಮಿಸಿದ್ದಾರೆ. ಇತ್ತೀಚೆಗೆ ತಮ್ಮ ಹಿರಿಯ ಮಗನ ಮದುವೆ ನೆರವೇರಿದ್ದು, ತಮ್ಮ ಕರ್ತವ್ಯ ನೆರವೇರಿದ ನಂತರ ದಂಪತಿಗಳು ಸನ್ಯಾಸಿಯಾಗಲು ನಿರ್ಧರಿಸಿದರು.
ವರದಿಯೊಂದರ ಪ್ರಕಾರ, "ನನ್ನ ಮಗಳು ದೀಕ್ಷೆ ತೆಗೆದುಕೊಂಡಾಗ ನಾವೂ ಆಕೆಯ ಹಾದಿಯಲ್ಲಿ ನಡೆಯಬೇಕೆಂದು ಬಯಸಿದ್ದೆವು. ನಾವೆಷ್ಟೇ ಸಂಪತ್ತು , ಯಶಸ್ಸು ಗಳಿಸಿದ್ದರೂ ಶಾಂತಿ ಮತ್ತು ಸಂತೋಷದ ಹುಡುಕಾಟವು ಎಂದಿಗೂ ಕೊನೆಗೊಂಡಿರಲಿಲ್ಲ," ಎಂದು ದೀಪೇಶ್ ಶಾ ಹೇಳಿದ್ದಾರೆ.
ದೀಪೇಶ್ ಶಾ ಅವರ ಕುಟುಂಬದಲ್ಲಿಹಿಂದಿನಿಂದಲೂ ಆಧ್ಯಾತ್ಮಿಕ ನಂಬಿಕೆ ಆಳವಾಗಿ ಬೇರೂರಿದೆ. ಯಾಕೆಂದರೆ ಬೆಲ್ಲ ಮತ್ತು ಸಕ್ಕರೆ ವ್ಯಾಪಾರವನ್ನು ಹೊಂದಿದ್ದ ದೀಪೇಶ್ ಅವರ ತಂದೆ ಪ್ರವೀಣ್ ಅವರು ಕೂಡಾ ಜೈನ ಸನ್ಯಾಸಿಗಳ ಒಡನಾಟಕ್ಕಾಗಿ ಸೂರತ್ ಸ್ಥಳಾಂತರವಾಗಿದ್ದರು.


Click it and Unblock the Notifications