ಇಎಂಐ (ಈಕ್ವೇಟೆಡ್ ಮಂತ್ಲಿ ಇನ್‌ಸ್ಟಾಲ್‌ಮೆಂಟ್) ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಈಗ ನಾವು ಯಾವುದೇ ವಸ್ತುವನ್ನು ಖರೀದಿ ಮಾಡುವುದಾದರೂ ನಮಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇಎಂಐ ಆಯ್ಕೆ ಲಭ್ಯವಿರುತ್ತದೆ. ತಮ್ಮ ಮಾಸಿಕ ದಿನಸಿಗಳನ್ನು ಕೂಡಾ ಇಎಂಐ ಆಯ್ಕೆಯ ಮೂಲಕ ಖರೀದಿ ಮಾಡುವವರು ಇದ್ದಾರೆ. ಸಾಮಾನ್ಯವಾಗಿ ಇಎಂಐ ಎಂಬುವುದು ನಮ್ಮ ನೆನಪಿಗೆ ಬರುವುದು ಸಾಲ ಮತ್ತು ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ. ಆದರೆ ಪುಣೆಯ ಒಬ್ಬ ವ್ಯಕ್ತಿಯು ಮಾವಿನ ಹಣ್ಣನ್ನು ಇಎಂಐ ಮೂಲಕ ಮಾರಾಟ ಮಾಡುತ್ತಿದ್ದಾರೆ!
ಒಬ್ಬ ವ್ಯಕ್ತಿಯು ಸಾಲವನ್ನು ಪಡೆದ ಬಳಿಕ ಸಾಲ ನೀಡಿರುವವರಿಗೆ ಬಡ್ಡಿದರ ಸೇರಿದಂತೆ ನಿಗದಿತ ಅವಧಿಯಲ್ಲಿ ಮಾಸಿಕವಾಗಿ ನಿಗದಿತ ಮೊತ್ತವನ್ನು ಪಾವತಿ ಮಾಡುವುದೇ ಇಎಂಐ ಆಗಿದೆ. ಸಾಮಾನ್ಯವಾಗಿ ಮನೆ, ಕಾರು ಖರೀದಿ ಮಾಡುವಾಗ ಸಾಲವನ್ನು ಪಡೆದು ಅದರ ಮರುಪಾವತಿಯನ್ನು ಇಎಂಐ ಮೂಲಕ ಪಾವತಿ ಮಾಡಲಾಗುತ್ತದೆ. ಶೈಕ್ಷಣಿಕ ಸಾಲವನ್ನು ಪಡೆದಾಗಲೂ ಇಎಂಐ ಮೂಲಕ ಸಾಲ ಮರುಪಾವತಿ ಮಾಡಲಾಗುತ್ತದೆ. ಅದನ್ನು ಹೊರತುಪಡಿಸಿ ಇತರೆ ವಸ್ತುಗಳನ್ನು ಖರೀದಿ ಮಾಡುವಾಗಲೂ ಇಎಂಐ ಮೂಲಕ ಹಣವನ್ನು ಪಾವತಿ ಮಾಡಲಾಗುತ್ತದೆ.

ಮಾವಿನ ಹಣ್ಣಿಗೂ ಇಎಂಐ ಇದೆ ನೋಡಿ!
ಹಣ್ಣುಗಳ ರಾಜ ಎಂದು ಕರೆಯಲಾಗುವ ಮಾವಿನ ಹಣ್ಣಿನಲ್ಲಿ ಬೇರೆ ಬೇರೆ ತಳಿ ಇದೆ. ಕಡಿಮೆ ದರದ ಮಾವಿನ ಹಣ್ಣು ಲಭ್ಯವಾಗುತ್ತದೆ. ಹಾಗೆಯೇ ಅತೀ ದುಬಾರಿಯಾದ ಮಾವಿನ ಹಣ್ಣು ಕೂಡಾ ಇದೆ. ಈ ಪೈಕಿ ಆಲ್ಫಾನ್ಸೋ ಮಾವಿನ ಹಣ್ಣು ಅತೀ ದುಬಾರಿಯಾಗಿದೆ. ಅದನ್ನು ತಿನ್ನಬೇಕಾದರೆ ನಾವು ಅಧಿಕ ಹಣವನ್ನು ತೆರಬೇಕಾಗುತ್ತದೆ. ಕೆಲವು ತಳಿಗೆ ಎರಡು ಸಾವಿರಕ್ಕೂ ಅಧಿಕ ಮೊತ್ತವಿದೆ. ಆದರೆ ನಾವು ಈ ಮಾವಿನ ಹಣ್ಣನ್ನು ನಾವು ಇಎಂಐ ಮೂಲಕ ಖರೀದಿ ಮಾಡುವ ಆಫರ್ ಅನ್ನು ಮಹಾರಾಷ್ಟ್ರದ ವ್ಯಕ್ತಿ ನೀಡಿದ್ದಾರೆ.
ನಾವು ಸಾಮಾನ್ಯವಾಗಿ ಏರ್ ಕಂಡಿಷನರ್ (ಎಸಿ) ಮತ್ತು ರೆಫ್ರೀಜರೇಟರ್, ಟಿವಿ ಮೊದಲಾದವುಗಳನ್ನು ಇನ್‌ಸ್ಟಾಲ್‌ಮೆಂಟ್‌ನಲ್ಲಿ ಖರೀದಿ ಮಾಡುತ್ತೇವೆ ಎಂದಾದರೆ ಮಾವಿನ ಹಣ್ಣನ್ನು ಯಾಕೆ ಇನ್‌ಸ್ಟಾಲ್‌ಮೆಂಟ್‌ನಲ್ಲಿ ಖರೀದಿ ಮಾಡಬಾರದು ಎಂದು ಹೇಳುತ್ತಾರೆ ಮಹಾರಾಷ್ಟ್ರದ ಪುಣೆ ಮೂಲದ ಗುರುಕೃಪಾ ಟ್ರೇಡರ್ಸ್ ಆಂಡ್ ಫ್ರೂಟ್ಸ್ ಪ್ರೊಡೆಕ್ಟ್ಸ್‌ನ ಟ್ರೇಡರ್ ಗೌರವ್ ಸನಾನ್ ಹೇಳಿದ್ದಾರೆ.
ರಾಜ್ಯದ ಕೊಂಕಣ ಭಾಗದ ದೇವಗಢ ಮತ್ತು ರತ್ನಗಿರಿಯಲ್ಲಿನ ಆಲ್ಫಾನ್ಸೋ ಅಥವಾ ಹಾಪೋಸ್ ಮಾವಿನ ಹಣ್ಣು ಮಾವಿನ ಹಣ್ಣುಗಳ ಪೈಕಿ ಅತೀ ಉತ್ತಮವಾದ ಮಾವಿನ ಹಣ್ಣು ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಡಜನ್‌ಗೆ ರಿಟೇಲ್ ದರ 800 ರೂಪಾಯಿಯಿಂದ 1300 ರೂಪಾಯಿವರೆಗೆ ಇದೆ. ಹೀಗಿರುವಾಗ ಈ ಮಾವಿನ ಹಣ್ಣನ್ನು ಇಎಂಐ ಮೂಲಕ ಮಾರಾಟ ಮಾಡುವ ನಿರ್ಧಾರವನ್ನು ಟ್ರೇಡರ್ ಗೌರವ್ ಸನಾನ್ ಮಾಡಿದ್ದಾರೆ. ಇಡೀ ದೇಶದಲ್ಲಿಯೇ ಮಾವಿನ ಹಣ್ಣನ್ನು ಇಎಂಐ ರೂಪದಲ್ಲಿ ಮಾರಾಟ ಮಾಡುವುದು ನಮ್ಮ ಕುಟುಂಬವಾಗಿದೆ ಎಂದು ಗೌರವ್ ಸನಾನ್ ಹೇಳಿಕೊಂಡಿದ್ದಾರೆ.
"ಸೀಸನ್‌ನ ಆರಂಭದಲ್ಲಿ ಮಾವಿನ ಹಣ್ಣಿನ ದರವು ಎಂದಿಗೂ ಕೂಡಾ ಅತೀ ಹೆಚ್ಚಾಗಿ ಇರುತ್ತದೆ. ರೆಫ್ರಿಜರೇಟರ್, ಎಸಿ ಹಾಗೂ ಇತರೆ ವಸ್ತುಗಳನ್ನು ನಾವು ಇಎಂಐ ಮೂಲಕ ಖರೀದಿ ಮಾಡಬಹುದು ಎಂದಾದರೆ, ನಾವು ಮಾವಿನ ಹಣ್ಣುಗಳನ್ನು ಇಎಂಐ ಮೂಲಕ ಯಾಕೆ ಖರೀದಿ ಮಾಡಬಾರದು. ಅದರಿಂದಾಗಿ ಎಲ್ಲರೂ ಕೂಡಾ ಮಾವಿನ ಹಣ್ಣನ್ನು ತಿನ್ನಲು ಸಾಧ್ಯವಾಗುತ್ತದೆ," ಎಂದು ಗೌರವ್ ಸನಾನ್ ಅಭಿಪ್ರಾಯಿಸಿದ್ದಾರೆ.
ಗೌರವ್ ಸನಾನ್ ಔಟ್‌ಲೇಟ್‌ನ್ಲಲಿ ಮಾವಿನ ಹಣ್ಣುಗಳನ್ನು ಇಎಂಐ ಮೂಲಕ ಖರೀದಿ ಮಾಡುವ ವಿಧಾನವು ಮೊಬೈಲ್ ಫೋನ್‌ಗಳನ್ನು ಕಂತುಗಳಲ್ಲಿ ಖರೀದಿ ಮಾಡಿದಂತೆಯೇ ಆಗಿದೆ. ಅದಕ್ಕಾಗಿ ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ಬಳಸಬೇಕಾಗುತ್ತದೆ. ಹಾಗೆಯೇ ಮೂರು, ಆರು ಅಥವಾ 12 ತಿಂಗಳ ಇಎಂಐಗಳ ಮೂಲಕ ಈ ಮಾವಿನ ಹಣ್ಣು ಖರೀದಿಸಿದ ಮೊತ್ತವನ್ನು ಮರುಪಾವತಿ ಮಾಡಬಹುದಾಗಿದೆ. "ಆದರೆ ಕನಿಷ್ಠ 5000 ರೂಪಾಯಿ ಮೊತ್ತದ ಮಾವಿನ ಹಣ್ಣನ್ನು ಖರೀದಿ ಮಾಡಿದರೆ ಮಾತ್ರ ಇಎಂಐ ಅನ್ವಯವಾಗುತ್ತದೆ. ಈಗಾಗಲೇ ನಾಲ್ಕು ಗ್ರಾಹಕರು ಮಾವಿನ ಹಣ್ಣನ್ನು ಇಎಂಐ ಮೂಲಕ ಖರೀದಿಸಿದ್ದಾರೆ," ಎಂದು ಗೌರವ್ ಸನಾನ್ ಮಾಹಿತಿ ನೀಡಿದ್ದಾರೆ.


Click it and Unblock the Notifications