ಕಳೆದ ಕೆಲವು ದಿನಗಳಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪೋರ್ಟಲ್‌ನಲ್ಲಿ ಕೆಲವು ಸಮಸ್ಯೆಗಳು ಇದೆ. ಸರ್ವಿಸ್ ಡೌನ್ ಇರುವ ಕಾರಣದಿಂದಾಗಿ ಇಪಿಎಫ್ ಸದಸ್ಯರು ಇ-ಪಾಸ್‌ಬುಕ್ ಅಥವಾ ಪಿಎಫ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಇಪಿಎಫ್‌ಒ ಸದಸ್ಯರುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.
ಪಿಎಫ್ ಖಾತೆಯಲ್ಲಿನ ಮೊತ್ತ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿದಾಗ page 404 ಎಂದು ಬರುವುದಾಗಿ ನೆಟ್ಟಿಗರು ತಿಳಿಸಿದ್ದಾರೆ. ಇದರಿಂದಾಗಿ ಹಲವಾರು ಮಂದಿಗೆ ಇ- ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ನೀವು ಪಿಎಫ್ ಮೊತ್ತವನ್ನು ಚೆಕ್ ಮಾಡಲು ಬೇರೆ ಪರ್ಯಾಯ ವಿಧಾನವನ್ನು ಕೂಡಾ ಬಳಸಬಹುದಾಗಿದೆ, ಇಲ್ಲಿದೆ ವಿವರ ಮುಂದೆ ಓದಿ...

ಪೋರ್ಟಲ್‌ನಲ್ಲಿ ಇ-ಪಾಸ್‌ಬುಕ್ ಲಭ್ಯವಾಗದ ಬಗ್ಗೆ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಇಪಿಎಫ್‌ಒ, "ಆತ್ಮೀಯ ಸದಸ್ಯರೇ, ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ. ಈ ಬಗ್ಗೆ ಸಂಬಂಧಪಟ್ಟ ತಂಡ ಪರಿಶೀಲನೆ ನಡೆಸುತ್ತಿದೆ. ದಯವಿಟ್ಟು ಸ್ವಲ್ಪ ಸಮಯ ಕಾಯಿರಿ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ," ಎಂದು ಹೇಳಿದ್ದಾರೆ. ಇಪಿಎಫ್‌ಒ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ.
ಉಮಾಂಗ್ ಆಪ್‌ನಲ್ಲಿ ನಿಮ್ಮ ಇಪಿಎಫ್‌ಒ ಪಾಸ್‌ಬುಕ್ ಚೆಕ್ ಮಾಡಿ
ಹಂತ 1: ಉಮಾಂಗ್ ಪೋರ್ಟಲ್‌ಗೆ ಲಾಗಿನ್ ಆಗಿ
ಹಂತ 2: ಇಪಿಎಫ್‌ಒ ಸರ್ಚ್ ಮಾಡಿ, view passbook ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಇಪಿಎಫ್ ಖಾತೆಯ ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ಅನ್ನು ನಮೂದಿಸಿ
ಹಂತ 4: get OTP ಮೇಲೆ ಕ್ಲಿಕ್ ಮಾಡಿ ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ
ಹಂತ 5: ಮೆಂಬರ್ ಐಡಿಯನ್ನು ಆಯ್ಕೆ ಮಾಡಿ ಇ-ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಿ
ಎಸ್‌ಎಂಎಸ್ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ
ಯುಎಎನ್ ಸಂಖ್ಯೆಯನ್ನು ತಿಳಿದಿರುವವ ಪಿಎಫ್ ಸದಸ್ಯರು ತಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಇಂಟರ್‌ನೆಟ್ ಇಲ್ಲದೆ ಎಸ್‌ಎಂಎಸ್ ಮೂಲಕವೇ ತಿಳಿಯಬಹುದಾಗಿದೆ. ಪಿಎಫ್‌ನಲ್ಲಿ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ 7738299899ಗೆ ಎಸ್‌ಎಂಎಸ್ ಮಾಡುವ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ನೀವು ಚೆಕ್ ಮಾಡಬಹುದು.
ಈ ಸಂಖ್ಯೆಗೆ EPFOHO UAN (ಯುಎಎನ್ ಇದ್ದಲ್ಲಿ ನಿಮ್ಮ ಯುಎಎನ್ ಸಂಖ್ಯೆ) ಎಂದು ಎಸ್‌ಎಂಎಸ್ ಕಳುಹಿಸಬೇಕಾಗುತ್ತದೆ. ಈ ಸೌಲಭ್ಯವು ಇಂಗ್ಲೀಷ್, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬೆಂಗಾಳಿಯಲ್ಲಿ ಲಭ್ಯವಿದೆ.
ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ
ಯುಎಎನ್ ಪೋರ್ಟಲ್‌ನಲ್ಲಿ ರಿಜಿಸ್ಟಾರ್ ಆದ ಸದಸ್ಯರು ಮಿಸ್ಡ್‌ಕಾಲ್ ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯಿಂದ 9966044425ಕ್ಕೆ ಮಿಸ್ಡ್‌ಕಾಲ್ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಎರಡು ರಿಂಗ್‌ಗಳಲ್ಲೇ ಈ ಕರೆ ಕಟ್ ಆಗುತ್ತದೆ.
ಈ ಕರೆ ಮಾಡುವುದಕ್ಕೆ ಯಾವುದೇ ಶುಲ್ಕವಿಲ್ಲ. ನಿಮ್ಮ ಯುಎಎನ್ ಸಂಖ್ಯೆಯು ಬ್ಯಾಂಕ್ ಖಾತೆ, ಆಧಾರ್, ಪ್ಯಾನ್‌ಗೆ ಲಿಂಕ್ ಆಗಿದ್ದರೆ, ಮಿಸ್ಡ್ ಕಾಲ್ ನೀಡಿದ ಬಳಿಕ ನಿಮಗೆ ಪಿಎಫ್ ಬ್ಯಾಲೆನ್ಸ್ ಹಾಗೂ ಪ್ರತಿ ತಿಂಗಳು ಮಾಡುವ ಹೂಡಿಕೆ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಫೆಬ್ರವರಿಯಲ್ಲಿ ಇಪಿಎಫ್‌ಒಗೆ ಹೊಸದಾಗಿ 13.96 ಲಕ್ಷ ಮಂದಿ ಸೇರ್ಪಡೆಯಾಗಿದ್ದಾರೆ. ಈ ಪೈಕಿ 7.38 ಮಂದಿ ಹೊಸದಾಗಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ. 18ರಿಂದ 21 ವರ್ಷದವರು ಅಧಿಕವಾಗಿ ಹೊಸದಾಗಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ. 2.17 ಲಕ್ಷ 18ರಿಂದ 21 ವರ್ಷದವರು ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ. ಇನ್ನು 22-25 ವರ್ಷದವರು 1.91 ಲಕ್ಷ ಮಂದಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ.


Click it and Unblock the Notifications