ನವದೆಹಲಿಯಲ್ಲಿ ಜಿ20 ಶೃಂಗಸಭೆಯ ಬಳಿಕ ಭಾರತವು ಜಾಗತಿಕ ಹೂಡಿಕೆದಾರರ ಹಾಟ್‌ಸ್ಪಾಟ್ ಎಂದು ಪರಿಗಣಿಸಲ್ಪಡುತ್ತದೆ. ಆದರೆ ನಮ್ಮ ದೇಶದಲ್ಲಿಯೇ ಅದೆಷ್ಟೋ ಶ್ರೀಮಂತರು ಇದ್ದಾರೆ. ಫೋರ್ಬ್ಸ್ ಭಾರತದ ಸುಮಾರು 100 ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಸಾಮಾನ್ಯವಾಗಿಯೇ ಮುಕೇಶ್ ಅಂಬಾನಿ ಟಾಪ್‌ನಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿ ಏಕೈಕ ಮಹಿಳೆ ಕಾಣಿಸಿಕೊಂಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ 2023 ರಲ್ಲಿ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನವನ್ನು ಪಡೆದು, ಅದಾನಿಯನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ಹುರುನ್ ಪಟ್ಟಿಯೂ ಕೂಡಾ ಇದನ್ನೇ ಹೇಳಿದೆ. ಮುಕೇಶ್ ಅಂಬಾನಿ ನಿವ್ವಳ ಆದಾಯವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 4 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, 92 ಬಿಲಿಯನ್ ಡಾಲರ್‌ಗೆ ತಲುಪಿದೆ.

ದೇಶದ ಅತೀ ಶ್ರೀಮಂತ ಮಹಿಳೆಯಿವರು
ಇನ್ನು ಫೋರ್ಬ್ಸ್ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಸಾಮಾನ್ಯವಾಗಿಯೇ ಎರಡನೇ ಸ್ಥಾನದಲ್ಲಿ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಕಾಣಿಸಿಕೊಂಡಿದ್ದಾರೆ. ಅದಾನಿ ನಿವ್ವಳ ಆದಾಯ 68 ಬಿಲಿಯನ್ ಡಾಲರ್ ಆಗಿದೆ. ಇನ್ನು ಮೂರನೇ ಸ್ಥಾನದಲ್ಲಿ ಎಚ್‌ಸಿಎಲ್ ಟೆಕ್‌ನ ಶಿವ ನಾಡರ್ ಕಾಣಿಸಿಕೊಂಡಿದ್ದು, ನಿವ್ವಳ ಆದಾಯ 29.3 ಬಿಲಿಯನ್ ಡಾಲರ್ ಆಗಿದೆ. ಈ ನಡುವೆ ಜಿಂದಾಲ್ ಗ್ರೂಪ್‌ನ ಸಾವಿತ್ರಿ ಜಿಂದಾಲ್ ಟಾಪ್ 10, ಟಾಪ್ 5 ಪಟ್ಟಿಯಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ. ಹಾಗೆಯೇ ದೇಶದ ಅತೀ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
ಒಪಿ ಜಿಂದಾಲ್ ಗ್ರೂಪ್‌ನ ಸಾವಿತ್ರಿ ಜಿಂದಾಲ್ ಆದಾಯವು 24 ಬಿಲಿಯನ್ ಡಾಲರ್ ಆಗಿದೆ. ಐದನೇ ಸ್ಥಾನದಲ್ಲಿರುವ ಅವೆನ್ಯೂ ಸೂಪರ್‌ಮಾರ್ಟ್ಸ್‌ನ ರಾಧಾಕಿಶನ್ ದಮಾನಿ ಆದಾಯವು 23 ಬಿಲಿಯನ್ ಡಾಲರ್ ಆಗಿದೆ. ಇನ್ನು ಇತ್ತೀಚಿನ ಫೋರ್ಬ್ಸ್ ಪಟ್ಟಿಯ ಪ್ರಕಾರ ಸಾವಿತ್ರಿ ಜಿಂದಾಲ್ ಭಾರತದ ಅತೀ ಶ್ರೀಮಂತ ಮಹಿಳೆಯಾಗಿದ್ದಾರೆ.
ಟಾಪ್ 10 ಬಿಲಿಯನೇರ್‌ಗಳ ಪಟ್ಟಿ
1. ಮುಕೇಶ್ ಅಂಬಾನಿ: 92 ಬಿಲಿಯನ್ ಡಾಲರ್
2. ಗೌತಮ್ ಅದಾನಿ: 68 ಬಿಲಿಯನ್ ಡಾಲರ್
3. ಶಿವ ನಾಡರ್: 29.3 ಬಿಲಿಯನ್ ಡಾಲರ್
4. ಸಾವಿತ್ರಿ ಜಿಂದಾಲ್: 24 ಬಿಲಿಯನ್ ಡಾಲರ್
5. ರಾಧಾಕಿಶನ್ ದಮಾನಿ: 68 ಬಿಲಿಯನ್ ಡಾಲರ್
6. ಸೈರಸ್ ಪೂನಾವಾಲಾ: 20.7 ಬಿಲಿಯನ್ ಡಾಲರ್
7. ಹಿಂದುಜಾ ಕುಟುಂಬ: 20 ಬಿಲಿಯನ್ ಡಾಲರ್
8. ದಿಲೀಪ್ ಶಾಂಘ್ವಿ: 19 ಬಿಲಿಯನ್ ಡಾಲರ್
9. ಕುಮಾರ್ ಬಿರ್ಲಾ: 17.5 ಬಿಲಿಯನ್ ಡಾಲರ್
10. ಶಪೂರ್ ಮಿಸ್ತ್ರಿ ಮತ್ತು ಕುಟುಂಬ: 16.9 ಬಿಲಿಯನ್ ಡಾಲರ್
ಶ್ರೀಮಂತರ ಪಟ್ಟಿಗೆ ಮತ್ತೆ 7 ಮಂದಿ ಸೇರ್ಪಡೆಯಾಗಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಂಟು ಶ್ರೀಮಂತರು ಪಟ್ಟಿಯಿಂದ ಹೊರಕ್ಕೆ ಉಳಿದಿದ್ದಾರೆ. ಇದರಲ್ಲಿ ಬೈಜು ರವೀಂದ್ರನ್ ಮತ್ತು ದಿವ್ಯಾ ಗೋಕುಲನಾಥ್ ದಂಪತಿ ಸೇರಿದ್ದಾರೆ. ಕೇವಲ ಮೂರು ಮಂದಿ ಹೊಸದಾಗಿ ಪಟ್ಟಿಗೆ ಸೇರಿದ್ದಾರೆ.
ದುಬೈ ಪ್ರಧಾನ ಕಚೇರಿಯ ರಿಟೇಲ್ ವ್ಯಾಪಾರದ ದೈತ್ಯ ಲ್ಯಾಂಡ್‌ಮಾರ್ಕ್ ಗ್ರೂಪ್‌ನ ಅಧ್ಯಕ್ಷೆ ರೇಣುಕಾ ಜಗ್ತಿಯಾನಿ, ಮೇ ತಿಂಗಳಲ್ಲಿ ನಿಧನರಾದ ತನ್ನ ಪತಿ ಮಿಕ್ಕಿ ಜಗ್ತಿಯಾನಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಏಷ್ಯನ್ ಪೇಂಟ್ಸ್‌ನ ದಾನಿ ಕುಟುಂಬ ಮತ್ತು ಮೂರನೆಯದಾಗಿ ಗಾರ್ಮೆಂಟ್ ರಫ್ತುದಾರ ಕೆ.ಪಿ. ರಾಮಸಾಮಿ.
ಝೆರೋಧಾದ ನಿಖಿಲ್ ಕಾಮತ್ 37 ನೇ ವಯಸ್ಸಿನಲ್ಲಿ ಅತ್ಯಂತ ಕಿರಿಯ ಬಿಲಿಯನೇರ್ ಆಗಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ 40 ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್‌ನ ಇತ್ತೀಚಿನ ಪಟ್ಟಿಯ ಪ್ರಕಾರ, ಸಹೋದರರಾದ ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಒಟ್ಟು ನಿವ್ವಳ ಮೌಲ್ಯವು ಪ್ರಸ್ತುತ 5.5 ಬಿಲಿಯನ್ ಡಾಲರ್ ಆಗಿದೆ.
ಟಾಪ್ 10 ಪಟ್ಟಿಯಲ್ಲಿ ಅದಾನಿ, ರಾಧಾಕಿಶನ್ ದಮಾನಿ, ಸೈರಸ್ ಪೂನಾವಾಲಾ ಆದಾಯವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಇಳಿಕೆಯಾಗಿದೆ. ಉಳಿದ ಎಲ್ಲ ಟಾಪ್ 10 ಶ್ರೀಮಂತರ ಆದಾಯವು ಏರಿಕೆಯಾಗಿದೆ.


Click it and Unblock the Notifications