ಫೋರ್ಬ್ಸ್ ತನ್ನ ವಾರ್ಷಿಕ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಲ್ಕು ಭಾರತೀಯರು 2023 ರ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಟ್ಟಿಯಲ್ಲಿ ಅತಿ ಮೇಲಿನ ಸ್ಥಾನದಲ್ಲಿರುವ ಭಾರತೀಯ ಮಹಿಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಿದ್ದಾರೆ.
ಹೌದು, ನಮ್ಮ ವಿತ್ತ ಸಚಿವೆ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಟೇಲರ್ ಸ್ವಿಫ್ಟ್ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಂತಹ ವ್ಯಕ್ತಿಗಳು ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಫೋರ್ಬ್ಸ್ ಪಟ್ಟಿಯಲ್ಲಿ ಇದ್ದಾರೆ. ಈ ಪಟ್ಟಿಯಲ್ಲಿ ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಮೂವರು ಭಾರತೀಯ ಉದ್ಯಮಿಗಳು ಇದ್ದಾರೆ. ಈ ಬಗ್ಗೆ ಇಲ್ಲಿದೆ ಮುಂದೆ ಓದಿ....

ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಭಾರತೀಯರಿವರು!
ಫೋರ್ಬ್ಸ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 32 ನೇ ಸ್ಥಾನದಲ್ಲಿದ್ದಾರೆ. ಇನ್ನು ಎಚ್‌ಸಿಎಲ್ ಕಾರ್ಪೊರೇಷನ್ ಸಿಇಒ ರೋಶ್ನಿ ನಾಡರ್ ಮಲ್ಹೋತ್ರಾ 60ನೇ ಶ್ರೇಯಾಂಕದಲ್ಲಿದ್ದಾರೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷೆ ಸೋಮಾ ಮೊಂಡಲ್ 70ನೇ ಶ್ರೇಯಾಂಕದಲ್ಲಿದ್ದಾರೆ. ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ 76ನೇ ಶ್ರೇಯಾಂಕದಲ್ಲಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು 2019 ರಲ್ಲಿ ಭಾರತದ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಾಗೆಯೇ ನಿರ್ಮಲಾ ಸೀತಾರಾಮನ್ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಹುದ್ದೆಯನ್ನೂ ಹೊಂದಿದ್ದಾರೆ. ಇದಕ್ಕೂ ಮೊದಲು, ಸೀತಾರಾಮನ್ ಅವರು ಭಾರತದ 28 ನೇ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ಎರಡೂ ಸಚಿವಾಲಯಗಳನ್ನು ಹೊಂದಿರುವ ದೇಶದ ಎರಡನೇ ಮಹಿಳೆಯಾಗಿದ್ದಾರೆ.
ಕಳೆದ ವರ್ಷ, ಹಣಕಾಸು ಸಚಿವರು 2022 ರ ಫೋರ್ಬ್ಸ್ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ 36 ನೇ ಸ್ಥಾನದಲ್ಲಿದ್ದರು. ಫಾರ್ಚೂನ್ ಭಾರತದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ವರ್ಷ ಅಂದರೆ 2023ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ 32 ನೇ ಸ್ಥಾನದಲ್ಲಿದ್ದಾರೆ.
ಪಟ್ಟಿಯಲ್ಲಿ ಎರಡನೇ ಅತಿ ಹೆಚ್ಚು ಶ್ರೇಯಾಂಕದ ಭಾರತೀಯ ಮಹಿಳೆ ರೋಶ್ನಿ ನಾಡಾರ್, ಉದ್ಯಮಿ ಶಿವ ನಾಡಾರ್ ಅವರ ಬಿಲಿಯನೇರ್ ಪುತ್ರಿ ಆಗಿದ್ದಾರೆ. ಜುಲೈ 2020 ರಲ್ಲಿ ಎಚ್‌ಸಿಎಲ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಂಪನಿಯ ಎಲ್ಲಾ ಕಾರ್ಯತಂತ್ರದ ನಿರ್ಧಾರಗಳ ಉಸ್ತುವಾರಿ ವಹಿಸಿದ್ದಾರೆ.
ಫೋರ್ಬ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿ 2023
ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅತ್ಯಂತ ಶಕ್ತಿಶಾಲಿ ಮಹಿಳೆ ಯುರೋಪಿಯನ್ ಕಮಿಷನ್ ಮುಖ್ಯಸ್ಥೆ ಉರ್ಸುಲಾ ವಾನ್ ಡೆರ್ ಲೇಯೆನ್ ಇದ್ದಾರೆ. ನಂತರ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಕ್ರಿಸ್ಟಿನ್ ಲಗಾರ್ಡೆ ಎರಡನೇ ಸ್ಥಾನದಲ್ಲಿದ್ದಾರೆ. ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಪ್ರಮುಖ ಮಹಿಳಾ ವ್ಯಕ್ತಿಗಳಾದ ಬೆಯೋನ್ಸ್ (36 ನೇ ಶ್ರೇಯಾಂಕ), ರಿಹಾನ್ನಾ (74 ನೇ ಶ್ರೇಯಾಂಕ) ಮತ್ತು ಡೊನ್ನಾ ಲ್ಯಾಂಗ್ಲೆ (54 ನೇ ಶ್ರೇಯಾಂಕ) ಗಿಂತ ಉನ್ನತ ಸ್ಥಾನದಲ್ಲಿದ್ದಾರೆ. ಟಾಪ್ 10 ಪಟ್ಟಿಯಲ್ಲಿರುವ ಇತರ ಮಹಿಳೆಯರಲ್ಲಿ ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ, ಮೆಲಿಂಡಾ ಗೇಟ್ಸ್ ಮತ್ತು ಜೇನ್ ಫ್ರೇಸರ್ ಸೇರಿದ್ದಾರೆ.


Click it and Unblock the Notifications