ಆರ್ಥಿಕವಾಗಿ ದಿವಾಳಿಯಾದ ವಾಯುಯಾನ ಸಂಸ್ಥೆಯಾದ ಗೋ ಫಸ್ಟ್ ಏರ್‌ಲೈನ್ ತನ್ನ ವಿಮಾನಗಳನ್ನು ಈಗಾಗಲೇ ರದ್ದು ಮಾಡಿದೆ. ಆದರೆ ಮತ್ತೆ ವಿಮಾನಯಾನ ಆರಂಭವಾಗಲಿದೆ ಎನ್ನುವಷ್ಟರಲ್ಲಿ ಸಂಸ್ಥೆಯು ಈ ಗಡುವನ್ನು ವಿಸ್ತರಣೆ ಮಾಡುತ್ತಾ ಸಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ ಗೋ ಫಸ್ಟ್ ಏರ್‌ಲೈನ್ ಜುಲೈ 31, 2023ರವರೆಗೆ ರದ್ದಾಗಿದೆ. ಈ ಹಿಂದಿನಂತೆ ಕಾರ್ಯಾಚರಣೆಯ ಕಾರಣದಿಂದಾಗಿ ವಿಮಾನಯಾನ ರದ್ದು ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಗೋ ಫಸ್ಟ್ ಪ್ರಸ್ತುತ ಹಣಕಾಸು ಕೊರತೆಯನ್ನು ಎದುರಿಸುತ್ತಿದೆ. ದಿವಾಳಿತನದ ಪ್ರಕ್ರಿಯೆಗೆ ಒಳಗಾಗಲು ಗೋ ಫಸ್ಟ್ ಆಯ್ಕೆ ಮಾಡಿದ ನಂತರ ಈ ವರ್ಷದ ಮೇ ಆರಂಭದಿಂದ ಸಂಸ್ಥೆಯ ವಿಮಾನಗಳು ಹಾರಾಟ ಮಾಡುತ್ತಿಲ್ಲ. ಪ್ರಸ್ತುತ ಗೋ ಫಸ್ಟ್ ನಗದು ಕೊರತೆ ವಿರುದ್ಧ ಹೋರಾಟದಲ್ಲಿದೆ. ಇಷ್ಟು ಮಾತ್ರವಲ್ಲ ಬಿಡಿ ಭಾಗಗಳು ಮತ್ತು ಎಂಜಿನ್‌ಗಳ ಕೊರತೆಯು ಕೂಡಾ ಕಾಣಿಸಿಕೊಂಡಿದೆ.

ಮೇ ತಿಂಗಳಿನಲ್ಲಿಯೇ ಹಲವಾರು ಅಗತ್ಯ ಎಂಜಿನ್‌ಗಳ ಕೊರತೆಗೆ ವಿಮಾನಯಾನವು ಅಮೇರಿಕನ್ ಎಂಜಿನ್ ತಯಾರಕರಾದ ಪ್ರ್ಯಾಟ್ & ವಿಟ್ನಿ (P&W) ಅನ್ನು ದೂಷಿಸಿದೆ. ಈ ಬಗ್ಗೆ ಗೋ ಫಸ್ಟ್ ಟ್ವೀಟ್ ಮಾಡಿದ್ದು, "ಕಾರ್ಯಾಚರಣೆಯ ಕಾರಣಗಳಿಂದಾಗಿ, 31 ಜುಲೈ 2023 ರವರೆಗಿನ ಗೋ ಫಸ್ಟ್ ಫ್ಲೈಟ್‌ಗಳನ್ನು ರದ್ದುಗೊಳಿಸಲಾಗಿದೆ," ಎಂದು ಹೇಳಿದೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ.
ಅಲ್ಲದೆ, ವಿಮಾನ ರದ್ದತಿಯು ಪ್ರಯಾಣಿಕರ ಪ್ರಯಾಣಕ್ಕೆ ತೊಂದರೆ ಉಂಟು ಮಾಡಿರಬಹುದು ಎಂದು ಏರ್‌ಲೈನ್ ಒಪ್ಪಿಕೊಂಡಿದೆ. ಅದರಿಂದಾಗಿ ಎಲ್ಲ ಸಹಾಯವನ್ನು ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಘೋಷಣೆ ಮಾಡಿದೆ. "ನಿಮಗೆ ತಿಳಿದಂತೆ ಸಂಸ್ಥೆಯು ಮತ್ತೆ ಕಾರ್ಯಾಚರಣೆ ಆರಂಭಕ್ಕಾಗಿ ಅರ್ಜಿಯನ್ನು ಸಲ್ಲಿಸಿದೆ. ನಾವು ಶೀಘ್ರದಲ್ಲೇ ಬುಕಿಂಗ್ ಅನ್ನು ಪುನರಾರಂಭಿಸುತ್ತೇವೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು," ಎಂದು ಗೋ ಫಸ್ಟ್ ಟ್ವೀಟ್‌ನಲ್ಲಿ ಹೇಳಿದೆ.
6,521 ಕೋಟಿ ರೂಪಾಯಿ ಸಾಲದಲ್ಲಿರುವ ಸಂಸ್ಥೆ
ಗೋ ಫಸ್ಟ್ ಮೇ 3 ರಿಂದ ತನ್ನ ವಿಮಾನಗಳನ್ನು ರದ್ದುಗೊಳಿಸಲು ಪ್ರಾರಂಭಿಸಿದೆ. ಅದಾದ ನಂತರ ಸತತವಾಗಿ ವಿಸ್ತರಣೆ ಮಾಡುತ್ತಾ ಸಾಗಿದೆ. ಆದರೆ ಮೇ 10 ರಂದು ಗೋ ಫಸ್ಟ್ ದಿವಾಳಿತನ ಪರಿಹಾರ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದೆ. ಪ್ರಸ್ತುತ, ವಿಮಾನಯಾನ ಸಂಸ್ಥೆಯು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಡಾಯ್ಚ ಬ್ಯಾಂಕ್ ಎಜಿಯಿಂದ 6,521 ಕೋಟಿ ರೂಪಾಯಿ ಸಾಲದಲ್ಲಿದೆ.
ರಿಫಂಡ್ ಪಡೆಯುವುದು ಹೇಗೆ?
ಹಂತ 1: ವೆಬ್‌ಸೈಟ್‌ಗೆ ಭೇಟಿ ನೀಡಿ: https://www.gofirstclaims.in/claims/
ಹಂತ 2: "Create account" ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಹೊಸ ಖಾತೆಯನ್ನು ರಚಿಸಿ (ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ)
ಹಂತ 3: ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಫಾರ್ಮ್ ಬಿ ಆಯ್ಕೆಮಾಡಿ
ಹಂತ 4: ಗೌಪ್ಯತೆ ನೀತಿ ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳುವುದಾಗಿ ಕ್ಲಿಕ್ ಮಾಡಿ, ಸೈನ್ ಅಪ್ ಬಟನ್ ಕ್ಲಿಕ್ ಮಾಡಿ
ಹಂತ 5: ಖಾತೆಯನ್ನು ರಚಿಸಿದ ನಂತರ, ಲಾಗಿನ್ ಮಾಡಲು ಎಲ್ಲ ಅಗತ್ಯ ಮಾಹಿತಿ ನಮೂದಿಸಿ
ಹಂತ 6: ಬ್ಯಾಂಕ್ ಖಾತೆ ವಿವರಗಳು ಸೇರಿದಂತೆ ಎಲ್ಲಾ ವಿವರಗಳನ್ನು ಫಾರ್ಮ್‌ನಲ್ಲಿ ಭರ್ತಿ ಮಾಡಿ
ಹಂತ 7: ಕ್ಲೈಮ್‌ನ ಎಲ್ಲ ಮಾಹಿತಿ ಸಾಬೀತುಪಡಿಸಲು ಎಲ್ಲಾ ಪುರಾವೆ ದಾಖಲೆಗಳನ್ನು ಲಗತ್ತಿಸಿ, ಕ್ಲೈಮ್ ಪುರಾವೆಯನ್ನು ದೃಢೀಕರಿಸಲು ನೀವು 1 ಕ್ಕಿಂತ ಹೆಚ್ಚು ಡಾಕ್ಯುಮೆಂಟ್ ಅನ್ನು ಲಗತ್ತಿಸಬಹುದು
ಹಂತ 8: ಫಾರ್ಮ್ ಅನ್ನು ಮುದ್ರಿಸಿ ಮತ್ತು ನಿಮ್ಮ ಸಹಿಯನ್ನು ಹಾಕಿ
ಹಂತ 9: ಅದೇ ಪೇಜ್‌ನಲ್ಲಿ ಸರಿಯಾಗಿ ಸಹಿ ಮಾಡಿದ ಫಾರ್ಮ್ ಅನ್ನು ಅಪ್ಲೋಡ್ ಮಾಡಿ
ಹಂತ 10: "Submit" ಮೇಲೆ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣವಾಗಲಿದೆ.
ಎರಡನೇ ವಿಧಾನ: ನಿಮ್ಮ ಮರುಪಾವತಿಯನ್ನು ಕ್ಲೈಮ್ ಮಾಡಲು, ಪ್ರಯಾಣಿಕರು ಕ್ಲೈಮ್ ಫಾರ್ಮ್ ಬಿಯ ಪ್ರತಿಯನ್ನು ರೆಸಲ್ಯೂಶನ್ ಪ್ರೊಫೆಷನಲ್‌ಗೆ ಕಳುಹಿಸಬಹುದು. ಅವರ ವಿಳಾಸ ಶೈಲೇಂದ್ರ ಅಜ್ಮೇರಾ, ರೆಸಲ್ಯೂಶನ್ ಪ್ರೊಫೆಷನಲ್, ಅಂಧೇರಿ ಈಸ್ಟ್, ಮುಂಬೈ ಆಗಿದೆ. ಟ್ರಾವೆಲ್ ಏಜೆಂಟ್‌ಗಳು ಅಥವಾ ಅಗ್ರಿಗೇಟರ್ ವೆಬ್‌ಸೈಟ್‌ಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ ಗೋ ಫಸ್ಟ್‌ಗೆ ಕ್ಲೈಮ್‌ಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಏರ್‌ಲೈನ್ ನಿರ್ದೇಶಿಸಿದೆ. ಟ್ರಾವೆಲ್ ಏಜೆಂಟ್‌ಗಳು ಮತ್ತು ಅಗ್ರಿಗೇಟರ್ ವೆಬ್‌ಸೈಟ್‌ಗಳು ಈ ಕ್ಲೈಮ್ ಅರ್ಜಿ ಸಲ್ಲಿಸಬೇಕಾಗುತ್ತದೆ.


Click it and Unblock the Notifications