ಭಾರತದ ಅತೀ ದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಗೋ ಫಸ್ಟ್ ಈಗಲೂ ಆರ್ಥಿಕ ಅಪಾಯದಲ್ಲಿದೆ. ಹಲವಾರು ದಿನಗಳಿಂದ ಗೋ ಫಸ್ಟ್ ವಿಮಾನ ರದ್ದಾಗಿದೆ. ದಿವಾಳಿತನಕ್ಕೆ ಒಳಗಾಗುತ್ತಿರುವ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಏರ್‌ಲೈನ್ ಗೋ ಫಸ್ಟ್, ಹಲವಾರು ಸಮಸ್ಯೆಗಳಿಂದಾಗಿ ಮೇ 28 ರವರೆಗೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಶುಕ್ರವಾರ ತಿಳಿಸಿದೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಏರ್‌ಲೈನ್ ಸಂಸ್ಥೆ ಮಾಹಿತಿ ನೀಡಿದೆ. "ಕಾರ್ಯಾಚರಣೆಯ ಕಾರಣದಿಂದಾಗಿ ಮೇ 28, 2023ರವರೆಗೆ ಗೋ ಫಸ್ಟ್ ವಿಮಾನಗಳನ್ನು ರದ್ದು ಮಾಡಲಾಗುತ್ತದೆ. ಅನಾನುಕೂಲತೆಗಾಗಿ ನಾವು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ https://bit.ly/3MPFlwf ಗೆ ಭೇಟಿ ನೀಡುವಂತೆ ಗ್ರಾಹಕರಿಗೆ ನಾವು ಮನವಿ ಮಾಡುತ್ತೇವೆ. ಯಾವುದೇ ಸಮಸ್ಯೆ ಇದ್ದರೂ ಅಥವಾ ಗೊಂದಲವಿದ್ದರೂ ನಮ್ಮನ್ನು ಸಂಪರ್ಕ ಮಾಡಿ," ಎಂದು ತಿಳಿಸಿದೆ.

ಈ ಹಿಂದೆ ಮೇ 26ರವರೆಗೆ ವಿಮಾನವನ್ನು ಗೋ ಫಸ್ಟ್ ಸಂಸ್ಥೆಯು ರದ್ದು ಮಾಡಿದೆ. ಮೇ 2 ರಂದು ಸಂಸ್ಥೆಯು ದಿವಾಳಿತನವನ್ನು ಘೋಷಿಸಲು ಅರ್ಜಿ ಸಲ್ಲಿಸಿದೆ. ಅದಾದ ಬಳಿಕ ಮೇ 26 ರವರೆಗೆ ವಿಮಾನಯಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು. ಈ ನಿಟ್ಟಿನಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ವಿಮಾನಯಾನ ಸಂಸ್ಥೆಗೆ ಸಮಗ್ರ ಯೋಜನೆಯನ್ನು ಸಲ್ಲಿಸುವಂತೆ ಒತ್ತಾಯಿಸಿದೆ.
ಡಿಜಿಸಿಎ ತನ್ನ ಕಾರ್ಯಾಚರಣೆಗಳನ್ನು ಮತ್ತೆ ಆರಂಭ ಮಾಡುವುದಕ್ಕೆ ಸಂಬಂಧಿಸಿದ ಸಮಗ್ರ ಯೋಜನೆಯನ್ನು ನೀಡುವಂತೆ ಮತ್ತು 30 ದಿನಗಳೊಳಗೆ ಪುನರ್ ರಚನೆ ಯೋಜನೆಯನ್ನು ಸಲ್ಲಿಸಲು ಗೋ ಫಸ್ಟ್‌ಗೆ ವಿನಂತಿಸಿದೆ. ಇದರಲ್ಲಿ ವಿಮಾನ ಲಭ್ಯತೆ, ಪೈಲಟ್‌ಗಳು ಮತ್ತು ಸಿಬ್ಬಂದಿ, ನಿರ್ವಹಣೆ ವ್ಯವಸ್ಥೆಗಳು ಮತ್ತು ಧನಸಹಾಯ ಸೇರಿದಂತೆ ಎಲ್ಲ ಮಾಹಿತಿಯನ್ನು ನೀಡುವಂತೆಯೂ ತಿಳಿಸಿದೆ.
ಈ ನಡುವೆ ವಿಮಾನ ರದ್ಧತಿಯಿಂದಾಗಿ ತೊಂದರೆಗೊಳಗಾದ ಪ್ರಯಾಣಿಕರಿಗೆ ರಿಫಂಡ್ ಮಾಡಲು ಮತ್ತು ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸುವಂತೆ ಡಿಜಿಸಿಎ ವಿಮಾನಯಾನ ಸಂಸ್ಥೆಗೆ ತಿಳಿಸಿದೆ. ಇನ್ನು ಈ ಹಿಂದಿನ ವರದಿಯ ಪ್ರಕಾರ ಗೋ ಫಸ್ಟ್ ಸಂಸ್ಥೆಯು ವಿಮಾನವನ್ನು ಆರಂಭ ಮಾಡುವುದಕ್ಕೂ ಮುನ್ನ ಡಿಜಿಸಿಎ ಆಡಿಟ್ ಅನ್ನು ನಡೆಸುತ್ತಿದೆ.
ಗೋ ಫಸ್ಟ್ ವಿಮಾನ ರದ್ದು: ಟಿಕೆಟ್ ರಿಫಂಡ್ ಪಡೆಯುವುದು ಹೇಗೆ?
ಹಂತ 1: ಪ್ರಯಾಣಿಕರು ಮೊದಲು ಅಧಿಕೃತ ವೆಬ್‌ಸೈಟ್ gofirstclaims.in/claims ಗೆ ಲಾಗ್ ಇನ್ ಆಗಬೇಕಾಗುತ್ತದೆ.
ಹಂತ 2: ನಂತರ ಪ್ರಯಾಣಿಕರು ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ.
ಹಂತ 3: ಇದರ ನಂತರ, ತಮ್ಮ ಮರುಪಾವತಿಯನ್ನು ಯಾವಾಗ ಮತ್ತು ಯಾವ ವಿಧಾನದಿಂದ ಪಾವತಿ ಮಾಡಲಾಗುತ್ತದೆ ಎಂಬುದರ ಕುರಿತು ಗೋ ಫಸ್ಟ್‌ನಿಂದ ಮಾಹಿತಿ ಲಭ್ಯವಾಗಲಿದೆ.
ಈ ಹಿಂದೆ ಆರಂಭಿಕವಾಗಿ ಎರಡು ದಿನಗಳ ಕಾಲ ಗೋ ಫಸ್ಟ್ ವಿಮಾನಗಳನ್ನು ರದ್ದು ಮಾಡಲಾಗಿದೆ. ಮೇ 3 ಮತ್ತು ಮೇ 4ರಂದು ನಿಗದಿಪಡಿಸಿದ್ದ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗಿದೆ. ಹಾಗೆಯೆ ಇಂಜಿನ್‌ಗಳನ್ನು ಸರಬರಾಜು ಮಾಡದಿರುವ ಬಗ್ಗೆ ಏರ್‌ಲೈನ್ಸ್ ವಿಮಾನ ಎಂಜಿನ್ ತಯಾರಕರಾದ ಪ್ರಾಟ್ ಮತ್ತು ವಿಟ್ನಿ ವಿರುದ್ಧ ಮಂಗಳವಾರ, ಮೇ 2 ರಂದು, ಯುಎಸ್ ನ್ಯಾಯಾಲಯದಲ್ಲಿ ತುರ್ತು ಅರ್ಜಿಯನ್ನು ಸಲ್ಲಿಸಿದೆ.
ಯುಎಸ್ ಮೂಲದ ಜೆಟ್ ಇಂಜಿನ್ ಉತ್ಪಾದಕರಾದ ಪ್ರಾಟ್ ಮತ್ತು ವಿಟ್ನಿ ಇಂಜಿನ್‌ಗಳನ್ನು ಸರಬರಾಜು ಮಾಡದ ಕಾರಣದಿಂದಾಗಿ ವಿಮಾನಗಳನ್ನು ರದ್ದು ಮಾಡಲಾಗುತ್ತಿದೆ ಎಂದು ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ತಿಳಿಸಿದೆ. "ಯುಎಸ್ ಮೂಲದ ಜೆಟ್ ಇಂಜಿನ್ ಉತ್ಪಾದಕರಾದ ಪ್ರಾಟ್ ಮತ್ತು ವಿಟ್ನಿ (P&W) ಇಂಜಿನ್‌ಗಳನ್ನು ಸರಬರಾಜು ಮಾಡದ ಕಾರಣ ಆರ್ಥಿಕ ಮುಗ್ಗಟ್ಟು ಉಂಟಾಗಿದೆ. ಇದರಿಂದಾಗಿ 50ಕ್ಕೂ ಅಧಿಕ ವಿಮಾನಗಳನ್ನು ರದ್ದು ಮಾಡಬೇಕಾಗಿದೆ," ಎಂದು ಸುದ್ದಿ ಸಂಸ್ಥೆಗೆ ಗೋ ಫಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications