ಭಾರತದ ಅತೀ ದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಗೋ ಫಸ್ಟ್ ಪ್ರಸ್ತುತ ಆರ್ಥಿಕ ಅಪಾಯದಲ್ಲಿದೆ. ಭಾರತೀಯ ವಿಮಾನಯಾನ ಸಂಸ್ಥೆ ಗೋ ಫಸ್ಟ್ ಏರ್‌ವೇಸ್ ದಿವಾಳಿಯಾಗುವ ಬಗ್ಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ಮಾಹಿತಿ ನೀಡಿದೆ. ಮೇ 3, ಮೇ 4 ಮತ್ತು ಮೇ 5 ರಂದು ಎಲ್ಲಾ ಏರ್‌ಲೈನ್‌ನ ವಿಮಾನಗಳು ರದ್ದಾಗಲಿವೆ ಎಂದು ಗೋ ಫಸ್ಟ್ ಏರ್‌ವೇಸ್ ಮಂಗಳವಾರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
"ಕಾರ್ಯಚರಣೆಯ ಕಾರಣದಿಂದಾಗಿ ಮೇ 3, ಮೇ 4 ಮತ್ತು ಮೇ 5 ರಂದು ನಿಗದಿಪಡಿಸಿದ್ದ ನಮ್ಮ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗುತ್ತದೆ ಎಂದು ನಾವು ನಿಮ್ಮಲ್ಲಿ ತಿಳಿಸಲು ವಿಷಾದಿಸುತ್ತೇವೆ. ವಿಮಾನ ರದ್ದತಿಯಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ," ಎಂದು ಗೋ ಫಸ್ಟ್ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಹಾಗೆಯೇ ಈ ಮೇಲೆ ತಿಳಿಸಿದ ದಿನಾಂಕಗಳಿಗೆ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರು ಸಂಪೂರ್ಣ ಮರುಪಾವತಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಏರ್‌ಲೈನ್ ಘೋಷಣೆ ಮಾಡಿದೆ. ಅದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ರಿಫಂಡ್ ವಿಚರದಲ್ಲಿ ಭಾರೀ ಚರ್ಚೆ ನಡೆದಿದೆ. ಮೊದಲೇ ಯಾವುದೇ ನೋಟಿಸ್ ನೀಡದೆ ಟಿಕೆಟ್ ರದ್ದು ಮಾಡಲಾಗಿದೆ. ರಿಫಂಡ್ ನೀಡಲಾಗಿಲ್ಲ ಎಂದು ಆರೋಪ ಕೇಳಿಬಂದಿತ್ತು. ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಲಾಗಿದೆ.
"ಶೀಘ್ರವೇ ಸಂಪೂರ್ಣ ರಿಫಂಡ್ ಅನ್ನು ನೀಡಲಾಗುತ್ತದೆ. ವಿಮಾನವನ್ನು ರದ್ದು ಮಾಡಿರುವುದಕ್ಕೆ ನಾವು ಕ್ಷಮೆಯಾಚಿಸುತ್ತೇವೆ. ನಮ್ಮಿಂದ ಸಾಧ್ಯವಾದಷ್ಟು ಎಲ್ಲ ಸಹಾಯವನ್ನು ನಾವು ಮಾಡುತ್ತೇವೆ," ಎಂದು ವಿಮಾನಯಾನ ಸಂಸ್ಥೆಯು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದೆ. ರಿಫಂಡ್ ಅನ್ನು ಪಡೆಯುವುದು ಹೇಗೆ ಎಂಬ ಬಗ್ಗೆಯೂ ವಿಮಾನಯಾನ ಸಂಸ್ಥೆ ವಿವರಿಸಿದೆ. ಆದರೆ ಪೇಜ್ ಮಾತ್ರ 404 error ಎಂದು ಕಾಣಿಸುತ್ತಿದೆ.
ರದ್ದಾದ ಗೋ ಫಸ್ಟ್ ವಿಮಾನ ಟಿಕೆಟ್‌ಗೆ ರಿಫಂಡ್ ಪಡೆಯುವುದು ಹೇಗೆ?: ಸಂಸ್ಥೆಯಲ್ಲಿನ ಕಾರ್ಯಾತ್ಮಕ ಸಮಸ್ಯೆಗಳಿಂದಾಗಿ ವಿಮಾನವನ್ನು ರದ್ದು ಮಾಡಲಾಗಿದ್ದರೆ, ರಿಫಂಡ್ ಪಡೆಯಬಹುದಾಗಿದೆ. ಮರುಪಾವತಿಯನ್ನು ಸೂಕ್ತ ಪಾವತಿ ವಿಧಾನಗಳಿಗೆ ಕಳುಹಿಸಲಾಗುತ್ತದೆ.
ಗೋ ಫಸ್ಟ್ ಟಿಕೆಟ್ ವರ್ಗಾಯಿಸಬಹುದೇ, ಬೇರೆ ಸಂಸ್ಥೆಗೆ ಬದಲಾಯಿಸಬಹುದೆ?
ಗೋ ಫಸ್ಟ್ ವಿಮಾನಯಾನ ಸಂಸ್ಥೆಯ ಪ್ರಕಾರ ಬೇರೆ ವಿಮಾನಯಾನ ಸಂಸ್ಥೆಗಳಿಗೆ ಗೋ ಫಸ್ಟ್ ವಿಮಾನದ ಟಿಕೆಟ್ ಅನ್ನು ವರ್ಗಾಯಿಸಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. "ಗೋ ಫಸ್ಟ್ ವಿಮಾನ ಪ್ರಯಾಣಿಕರೇ, ವಿಮಾನ ರದ್ದಿನಿಂದಾಗಿ ನಿಮಗೆ ಆದ ತೊಂದರೆಗೆ ನಾವು ಕ್ಷಮೆ ಕೇಳುತ್ತೇವೆ. ನಾವು ಈ ವಿಮಾನ ಟಿಕೆಟ್ ಅನ್ನು ವರ್ಗಾಯಿಸಲು, ಮರುನಿಗದಿ ಮಾಡಲು ಸಾಧ್ಯವಿಲ್ಲವೆಂದು ವಿಷಾಧಿಸುತ್ತೇವೆ," ಎಂದು ತಿಳಿಸಿದ್ದಾರೆ.
ಆನ್‌ಲೈನ್ ಏಜೆಂಟ್ ಮೂಲಕ ಟಿಕೆಟ್ ಬುಕ್ ಮಾಡಿದ್ದು, ಈಗ ಅವರು ಗೋ ಫಸ್ಟ್ ಅನ್ನು ಸಂಪರ್ಕಿಸುವಂತೆ ಹೇಳುತ್ತಿದ್ದರೆ, ನಾವು ಎಲ್ಲಿಂದ ರಿಫಂಡ್ ಪಡೆಯವುದು?
ಅನಿರೀಕ್ಷಿತ ಕಾರ್ಯಾಚರಣೆಯ ಸಮಸ್ಯೆಗಳಿಂದ ವಿಮಾನವನ್ನು ರದ್ದುಗೊಳಿಸಿದರೆ ಮೂಲ ಪಾವತಿ ವಿಧಾನಗಳನ್ನು ಬಳಸಿಕೊಂಡು ಮರುಪಾವತಿಯನ್ನು ಮಾಡಲಾಗುತ್ತದೆ. ಬೆಳವಣಿಗೆಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ನಿಮ್ಮ ತಾಳ್ಮೆಯನ್ನು ನಾನು ಪ್ರಶಂಸಿಸುತ್ತೇವೆ ಎಂದು ಗೋ ಫಸ್ಟ್ ವಿಮಾನಯಾನ ಸಂಸ್ಥೆಯು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದೆ.


Click it and Unblock the Notifications