ನೂತನ ಕರ್ನಾಟಕ ಸರ್ಕಾರ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಗೃಹ ಲಕ್ಷ್ಮೀ ಯೋಜನೆ ಮೂಲಕ ಮನೆಯ ಯಜಮಾನಿ ಮಾಸಿಕವಾಗಿ 2000 ರೂಪಾಯಿ ಪಡೆಯಲು ಸಾಧ್ಯವಾದರೆ, ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ವ್ಯಕ್ತಿಗೆ 170 ರೂಪಾಯಿಯಂತೆ ಪಡೆಯಬಹುದಾಗಿದೆ. ಇನ್ನು ಗೃಹಜ್ಯೋತಿ ಯೋಜನೆಯು ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದೆ. ಈ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯಿದೆ.
ಜೂನ್ 18ರಿಂದ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ಒಂದು ತಿಂಗಳು ಕಳೆದಿದೆ. ಮೊದಲ ದಿನವೇ ಸುಮಾರು 55 ಸಾವಿರ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ. ಆದರೆ ಈ ನಡುವೆ ನಕಲಿ ವೆಬ್‌ಸೈಟ್‌ಗಳ ಸುದ್ದಿ ಕೇಳಿ ಬರುತ್ತಿದೆ. ಆದ್ದರಿಂದಾಗಿ ಜನರು ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಅಗತ್ಯ. ಗೃಹಜ್ಯೋತಿ, ಗೃಹಲಕ್ಷ್ಮೀ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳಿದ್ದು, ಅದರ ಬಗ್ಗೆ ಎಚ್ಚರವಾಗಿರಿ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಈ ಯೋಜನೆ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಮುಂದೆ ಓದಿ...

ಏನಿದು ಗೃಹಜ್ಯೋತಿ ಯೋಜನೆ?
ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠವಾಗಿ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಅನ್ನು ನೀಡುವುದೇ ಗೃಹಜ್ಯೋತಿ ಯೋಜನೆಯಾಗಿದೆ. ಸರಾಸರಿ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಮಾಸಿಕವಾಗಿ 500ರಿಂದ 1200 ರೂಪಾಯಿ ವಿದ್ಯುತ್ ಬಿಲ್ ಬರುವವರಿಗೆ ಇದು ಲಾಭವಾಗಲಿದೆ. ಗೃಹ ಬಳಕೆಗೆ ಮಾತ್ರ ಬಳಕೆ ಮಾಡಲಾಗುವ ವಿದ್ಯುತ್ ಮಾತ್ರ ಉಚಿತವಾಗಿರುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ವಿದ್ಯುತ್ ಬಳಸಿರುವುದು ಗಮನಕ್ಕೆ ಬಂದರೆ ಪ್ರಯೋಜನವನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಲಾಗುತ್ತದೆ. ಈ ಬಗ್ಗೆ ಅರ್ಜಿ ಸಲ್ಲಿಸುವಾಗಲೇ ನಾವು ದೃಢೀಕರಿಸುವುದು ಮುಖ್ಯವಾಗಿದೆ.
ಯೋಜನೆಯಿಂದ ಹೇಗೆ, ಯಾರಿಗೆ ಲಾಭ?
ಸಾಮಾನ್ಯವಾಗಿ ಪ್ರತಿ ತಿಂಗಳು ಕೂಡಾ ನಾವು ವಿದ್ಯುತ್ ಬಿಲ್ ಅನ್ನು ಪಾವತಿ ಮಾಡಬೇಕಾಗುತ್ತದೆ. ತಿಂಗಳ ಎಲ್ಲ ಖರ್ಚುಗಳನ್ನು ನಿರ್ವಹಣೆ ಮಾಡಿಕೊಂಡು, ವಿದ್ಯುತ್ ಬಿಲ್ ಕಟ್ಟುವಾಗ ಅದೆಷ್ಟೋ ಮಂದಿ ಸಾಲ ಮಾಡಬೇಕಾದ ಸ್ಥಿತಿ ಈ ದುಬಾರಿ ಯುಗದಲ್ಲಿದೆ. ಈ ನಡುವೆ ರಾಜ್ಯ ಸರ್ಕಾರದ ಈ ಉಚಿತ ವಿದ್ಯುತ್ ಪ್ರಯೋಜನವು ಪ್ರತಿ ತಿಂಗಳಲ್ಲಿ 500-1200 ರೂಪಾಯಿ ಬಿಲ್ ಬರುವ ಎಲ್ಲ ಮನೆಗಳಿಗೂ ಲಾಭವಾಗಲಿದೆ.
ಪ್ರಸ್ತುತ ನಾವು ಎಲ್ಲ ಖರ್ಚು ವೆಚ್ಚಗಳನ್ನು ಮಾಡುವ ಜೊತೆಗೆ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಅತೀ ಮುಖ್ಯವಾಗುತ್ತದೆ. ಯಾವ ಸಂದರ್ಭದಲ್ಲಿಯಾದರೂ ಆರೋಗ್ಯ ತುರ್ತು ಸ್ಥಿತಿ ಉಂಟಾಗಬಹುದು. ಆ ಸಂದರ್ಭಕ್ಕಾಗಿ ನಾವು ಮಾಸಿಕವಾಗಿ ಉಳಿತಾಯ ಮಾಡುವುದು ಅತೀ ಅಗತ್ಯವಾಗಿದೆ. ಆದರೆ ಪ್ರಸ್ತುತ ಎಲ್ಲವೂ ದುಬಾರಿಯಾಗಿರುವಾಗ ಉಳಿತಾಯ ಬಿಡಿ ಖರ್ಚು ನಿಭಾಯಿಸುವುದೇ ಕಷ್ಟ. ಹೀಗಿರುವಾಗ ವಿದ್ಯುತ್ ಬಿಲ್‌ನ ಖರ್ಚು ಉಳಿದರೆ ಖಂಡಿತವಾಗಿ ಒಂದು ಮಧ್ಯಮ, ಬಡ ವರ್ಗದ ಕುಟುಂಬಕ್ಕೆ ಸಹಾಯವಾಗಲಿದೆ.
ಅರ್ಜಿ ಸಲ್ಲಿಕೆ, ಕೊನೆಯ ದಿನಾಂಕ ಮಾಹಿತಿ
ಆರಂಭಿಕವಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭದ ದಿನವನ್ನು ಘೋಷಣೆ ಮಾಡಲಾಗಿದ್ದರೂ ಕೊನೆಯ ದಿನಾಂಕವನ್ನು ಘೋಷಣೆ ಮಾಡಿರಲಿಲ್ಲ. ಆದರೆ ಇತ್ತೀಚೆಗೆ ಸರ್ಕಾರವು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಘೋಷಣೆ ಮಾಡಿದೆ. ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಜುಲೈ 27 ಅಂತಿಮ ದಿನಾಂಕವಾಗಿದೆ. ಅಂದರೆ ನೀವು ಅರ್ಜಿ ಸಲ್ಲಿಸಲು ಇನ್ನು 10 ದಿನಗಳು ಮಾತ್ರ ಬಾಕಿ ಇದೆ. ಶೀಘ್ರವೇ ಅರ್ಜಿ ಸಲ್ಲಿಸಿ.
ಈ ಯೋಜನೆಗೆ ನೋಂದಾಯಿಸಿಕೊಳ್ಳಲು https://sevasindhugs.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಸೇವಾ ಸಿಂಧು ಆಪ್‌ನಲ್ಲಿ ಎಸ್ಕಾಂ ಹೆಸರು, ಖಾತೆ ಸಂಖ್ಯೆ, ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ, ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ, ಎಸ್ಕಾಂ ಹೆಸರು1, ಬಳಕೆದಾರರ ವಿಧ (ಇಲ್ಲಿ ಎರಡು ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು) ಎಂದಿದೆ, ಆಧಾರ್ ಸಂಖ್ಯೆ, ಅರ್ಜಿದಾರರ ಹೆಸರು, ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ಮೊದಲಾದವುಗಳನ್ನು ನಮೂದಿಸಬೇಕಾಗುತ್ತದೆ. ಉಳಿದಂತೆ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ ಒಟಿಪಿಯನ್ನು ನಮೂದಿಸಬೇಕಾಗುತ್ತದೆ.
ಇನ್ನು ನೀವು ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದರೆ ನಿಮಗೆ ಆಗಸ್ಟ್‌ನಿಂದ ಉಚಿತ ವಿದ್ಯುತ್ ಲಭ್ಯವಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಉಚಿತವಾಗಿದೆ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಮಂಗಳೂರುಒನ್, ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ಅರ್ಜಿಯನ್ನು ನೋಂದಣಿ ಮಾಡಲಾಗುತ್ತಿದೆ. ಇತ್ತೀಚೆಗೆ ಗ್ರಾಮೀಣ ಪ್ರದೇಶದ ಜನರು ಯೋಜನೆ ಫಲಾನುಭವಿಗಳು ಗ್ರಾಮ ಪಂಚಾಯತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆದರೆ ಈ ಕೇಂದ್ರದಲ್ಲಿ ಅರ್ಜಿಗಳನ್ನು ಸಲ್ಲಿಸಲು ಪ್ರತಿ ಅರ್ಜಿಗೆ 20 ರೂಪಾಯಿಗಳ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ತಿಳಿಯಿರಿ
ಹಂತ 1: https://sevasindhugs.karnataka.gov.in/ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಹಂತ 2: 'ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ' ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: Track Your Application Status ಎಂದು ಕಾಣಲಿದೆ
ಹಂತ 4: ನಿಮ್ಮ ಎಸ್ಕಾಂ ಯಾವುದು ಎನ್ನುವ ಆಯ್ಕೆ ಕಾಣಿಸುತ್ತದೆ ಅಲ್ಲಿ ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಳ್ಳಿ.
ಹಂತ 5: ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಸಂಖ್ಯೆ ಅಥವಾ ಅಕೌಂಟ್ ಐಡಿಯನ್ನು ನಮೂದಿಸಿ
ಹಂತ 6: Check Status ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಪ್ರಕ್ರಿಯೆ ಸಂಪೂರ್ಣವಾಗಲಿದೆ.


Click it and Unblock the Notifications