ಒಂದು ಮನೆಯ ಮಹಿಳಾ ಮುಖ್ಯಸ್ಥರಿಗೆ 2000 ರೂಪಾಯಿಗಳ ಮೊತ್ತವನ್ನು ಪ್ರತಿ ತಿಂಗಳು ನೀಡುವ ಕರ್ನಾಟಕ ಸರ್ಕಾರದ ಗೃಹ ಲಕ್ಷ್ಮಿ ಯೋಜನೆ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿದೆ. ಈಗ ಆಗಸ್ಟ್ 20 ರ ಬದಲಿಗೆ ಆಗಸ್ಟ್ 27 ರಂದು ರಾಜ್ಯಾದ್ಯಂತ ಈ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.
ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಯೋಜನೆ ಅನುಷ್ಠಾನ ಕುರಿತು ಸಭೆ ನಡೆಸಿದ ನಂತರ ವಿಕಾಸಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, "ಇಲ್ಲಿಯವರೆಗೆ ಒಟ್ಟು 1.05 ಕೋಟಿ ಮಹಿಳೆಯರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಸಚಿವರುಗಳು ಸಲಹೆಗಳ ಆಧಾರದ ಮೇಲೆ, ಬಿಡುಗಡೆಯನ್ನು ಒಂದು ವಾರ ಮುಂದೂಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶವೂ ದೊರೆಯಲಿದೆ," ಎಂದು ತಿಳಿಸಿದ್ದಾರೆ.

ಯೋಜನೆ ಬಿಡುಗಡೆ ಸಮಾರಂಭ
ಬೆಳಗಾವಿಯಲ್ಲಿ ನಡೆಯಲಿರುವ ಯೋಜನೆ ಬಿಡುಗಡೆ ಸಮಾರಂಭದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮುಂತಾದ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಶಿವಕುಮಾರ್ ಪ್ರಕಾರ, ರಾಜ್ಯಾದ್ಯಂತ 11,000 ಸ್ಥಳಗಳಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗುವುದು. ಕಾರ್ಯಕ್ರಮದಲ್ಲಿ ಮಹಿಳಾ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲಾಗುವುದು. ಇನ್ನು ಈ ಯೋಜನೆಯಲ್ಲಿ ನೋಂದಣಿಯಾಗಿರುವ 1.05 ಕೋಟಿ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಹಣ ಖಾತೆಗೆ ಜಮೆ ಆಗಲಿದೆ ಎಂದು ಡಿಕೆಶಿ ಹೇಳಿದ್ದಾರೆ.
"ಬೆಳಗಾವಿಯಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ನೇರಪ್ರಸಾರವಾಗಲಿದೆ. ಪ್ರತಿ ಪಂಚಾಯಿತಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಪ್ರತಿ ವಾರ್ಡಿನಲ್ಲಿ ಸಂಭ್ರಮದಿಂದ ಆಚರಣೆ ಮಾಡುವಂತೆ ಸೂಚನೆ ನೀಡಿದ್ದೇವೆ. ಜೂಮ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ವ್ಯವಸ್ಥೆ ಮಾಡಿದ್ದೇವೆ," ಎಂದು ಕೂಡಾ ಡಿಕೆಶಿ ತಿಳಿಸಿದ್ದಾರೆ.
"ರಾಜ್ಯದ ನಾನಾ ಕಡೆ ಅನೇಕ ಹೆಣ್ಣು ಮಕ್ಕಳು ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರುವ ದಿನ ಮನೆಯ ಮುಂದೆ ರಂಗೋಲಿ ಹಾಕಿ ಸಂಭ್ರಮ ಆಚರಣೆ ಮಾಡುತ್ತೇವೆ. ಪಕ್ಷಾತೀತವಾಗಿ ಎಲ್ಲರೂ ಗೃಹಲಕ್ಷ್ಮಿಯನ್ನು ಆಹ್ವಾನ ಮಾಡಿಕೊಳ್ಳಬೇಕು," ಎಂದು ಹೇಳಿದರು.
ಗೃಹ ಲಕ್ಷ್ಮಿ ಯೋಜನೆಯು ಈ ವರ್ಷದ ಚುನಾವಣೆಗೆ ಮುಂಚಿತವಾಗಿ ಸರ್ಕಾರ ನೀಡಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಯೋಜನೆಗೆ ಅಂದಾಜು 30,000 ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗುವ ನಿರೀಕ್ಷೆಯಿದೆ. ಒಂದು ಕುಟುಂಬದ ಎಲ್ಲಾ ಮಹಿಳಾ ಮುಖ್ಯಸ್ಥರು ಈ ಯೋಜನೆಯ ಲಾಭ ಪಡೆಯುತ್ತಾರೆ ಎಂದು ಕಾಂಗ್ರೆಸ್ ಆರಂಭದಲ್ಲಿ ಘೋಷಿಸಿದ್ದರೂ, ಆದರೆ ಬಳಿಕ ಪತಿ ಅಥವಾ ತಾವು ಆದಾಯ ತೆರಿಗೆ ಪಾವತಿಸದಿದ್ದರೆ ಮಾತ್ರ ಯೋಜನೆಯ ಸಹಾಯ ಪಡೆಯಲು ಸಾಧ್ಯವೆಂದು ನಿಯಮ ಬದಲಾಯಿಸಲಾಗಿದೆ.
ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಹಂತ 1: ಸೇವಾ ಸಿಂಧು ಪೋರ್ಟರ್ ಅಥವಾ ಆಪ್‌ಗೆ ಲಾಗಿನ್ ಆಗಿ
ಹಂತ 2: ಗೃಹಲಕ್ಷ್ಮೀ ಎಂದು ನಮೂದಿಸಲಾಗಿರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ
ಹಂತ 3: ಗೃಹ ಲಕ್ಷ್ಮೀ ಯೋಜನೆಗೆ ಆನ್‌ಲೈನ್ ಅರ್ಜಿ ಲಭ್ಯವಾಗುತ್ತದೆ.
ಹಂತ 4: ಅರ್ಜಿಯನ್ನು ಭರ್ತಿ ಮಾಡಿ.
ಹಂತ 5: I agree ಎಂಬುವುದನ್ನು ಕ್ಲಿಕ್ ಮಾಡಿ
ಹಂತ 6: word verification ಎಂದು ಇರುವಲ್ಲಿ ಕಾಣುವ ಸಂಖ್ಯೆಗಳನ್ನು ಬಾಕ್ಸ್‌ನಲ್ಲಿ ನಮೂದಿಸಿ submit ಕ್ಲಿಕ್ ಮಾಡಿ.
ವಾಟ್ಸಾಪ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ
ಚಾಟ್‌ಬಾಟ್ ಲಿಂಕ್ ಆಗಿರುವ ವಾಟ್ಸಾಪ್ ಸಂಖ್ಯೆ 8147500500 ಅನ್ನು ಸರ್ಕಾರ ಒದಗಿಸಿದೆ. ವಾಟ್ಸಾಪ್ ಬಳಕೆದಾರರು ತಮ್ಮ ವಿವರಗಳನ್ನು ಈ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಚಾಟ್‌ಬಾಟ್ ಅರ್ಜಿ ಸಲ್ಲಿಸಲು ಬಳಕೆದಾರರಿಗೆ ಸಹಾಯ ಮಾಡಲಿದೆ ಮತ್ತು ಮಾರ್ಗದರ್ಶನ ನೀಡಲಿದೆ.
ಚಾಟ್‌ಬಾಟ್ ಈ ಅರ್ಜಿಯನ್ನು ಬೆಂಗಳೂರುಒನ್, ಕರ್ನಾಟಕ ಒನ್ ಮತ್ತು ಗ್ರಾಮಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ಎಲ್ಲ ಪರಿಶೀಲನೆ ನಡೆಯಲಿದೆ. ಮಾಧ್ಯಮ ವರದಿಗಳ ಪ್ರಕಾರ, ವಾಟ್ಸಾಪ್ ಚಾಟ್‌ಬಾಟ್ ಸೇವೆಗಳಿಂದ ಏಳು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ.
ಅರ್ಜಿದಾರರು ತಮ್ಮ ಆಧಾರ್ ಕಾರ್ಡ್ ಜೊತೆಗೆ ತಮ್ಮ ಪಡಿತರ ಚೀಟಿಯಾದ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಅನ್ನು ಒದಗಿಸಬೇಕಾಗುತ್ತದೆ. ಇನ್ನು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಲ್ಲದಿದ್ದರೆ, ಆಧಾರ್ ಕಾರ್ಡ್ ಮಾಹಿತಿ ಜೊತೆಗೆ ಪಾಸ್‌ಬುಕ್ ಅನ್ನು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications