ಮ್ಯಾಗಿ ನೂಡಲ್ಸ್ ಅನ್ನೋದು ಈಗ ಭಾರತದಲ್ಲಿ ಮನೆ ಮನೆಯ ಮಾತು. ಅಡುಗೆ ಅಂದರೆ ಏನೇನೂ ಗೊತ್ತಿಲ್ಲದವರೂ ಮಾಡಬಹುದಾದದ್ದು ಮ್ಯಾಗಿ ನೂಡಲ್ಸ್. ಅಂದ ಹಾಗೆ ನಿಮಗೆ ಮ್ಯಾಗಿಯ ಇತಿಹಾಸ ಗೊತ್ತಾ ಹಾಗೂ ಆ ಹೆಸರು ಬಂದದ್ದು ಹೇಗೆ ಎಂಬ ಸಂಗತಿ ಗೊತ್ತಾ? ಹುಡುಕುತ್ತಾ ಹೋದರೆ ಶತಮಾನಗಳಿಗೂ ಹಿಂದಿನ ಇತಿಹಾಸ ತೆರೆದುಕೊಳ್ಳುತ್ತದೆ.
ಆದರೆ, ಭಾರತದಲ್ಲಿ ಮ್ಯಾಗಿ ಮೊದಲಿಗೆ ಬಂದದ್ದು 1982ರಲ್ಲಿ. ಅದಕ್ಕೂ ಮುನ್ನ ಅದು ವಿದೇಶಗಳಲ್ಲಿ ಪರಿಚಯವಾಯಿತು. ಹಾಗೆ ಮೊದಲಿಗೆ ಪರಿಚಯವಾದದ್ದು ಜರ್ಮನಿಯಲ್ಲಿ; 1897ರಲ್ಲಿ. ಇದನ್ನು ಸಿದ್ಧಪಡಿಸಿದವರು ಜೂಲಿಯಸ್ ಮ್ಯಾಗಿ, ಸ್ವಿಟ್ಜರ್ ಲೆಂಡ್ ನಲ್ಲಿ. ಅವರಿಗೆ ಹೇಗೆ ಈ ಆಲೋಚನೆ ಮೂಡಿತು ಎಂಬುದು ಕೂಡ ಇಂಟರೆಸ್ಟಿಂಗ್.
1886ರಲ್ಲಿ ಇನ್ ಸ್ಟಂಟ್ ಫುಡ್ ತಯಾರಿಸುವ ಐಡಿಯಾ
1884ರಲ್ಲಿ ಜೂಲಿಯಸ್ ಮ್ಯಾಗಿ ಅವರು ಹಿಟ್ಟಿನಿಂದ ತಯಾರಾದ ಉತ್ಪನ್ನಗಳ ಮಾರಾಟ ಆರಂಭಿಸುತ್ತಾರೆ. ಆದರೆ ಆ ವ್ಯವಹಾರ ಕೈ ಹಿಡಿಯುವುದಿಲ್ಲ. ಆ ನಂತರ 1886ರಲ್ಲಿ ಇನ್ ಸ್ಟಂಟ್ ಫುಡ್ ತಯಾರಿಸುವ ಬಗ್ಗೆ ಐಡಿಯಾ ಬರುತ್ತದೆ. ಹಾಗೆ ಶುರುವಾದದ್ದೇ ಮ್ಯಾಗಿ ನೂಡಲ್ಸ್. ನಿಧಾನಕ್ಕೆ ಮಾರ್ಕೆಟ್ ನಲ್ಲಿ ಹೆಜ್ಜೆ ಊರಲು ಆರಂಭಿಸಿತು ಮ್ಯಾಗಿ ನೂಡಲ್ಸ್.
ಮ್ಯಾಗಿ ನೂಡಲ್ಸ್ ಜತೆಗೆ ಇನ್ನೂ ಹಲವು ಉತ್ಪನ್ನ
ಆಗಿನ ಸಮಯದಲ್ಲಿ ಸ್ವಿಟ್ಜರ್ ಲೆಂಡ್ ಸರ್ಕಾರ ಕೂಡ ಈ ಕೆಲಸಕ್ಕೆ ಸಹಾಯ ಮಾಡಿದೆ. ಮ್ಯಾಗಿ ಜತೆಗೆ ಜೂಲಿಯಸ್ ಅವರು ಹಲವು ಸ್ವಾದದ ಸೂಪ್ ಗಳನ್ನು ಸಹ ಪರಿಚಯಿಸಿದರು. ಮುಂದೆ ಮಾರ್ಕೆಟ್ ನಲ್ಲಿ ಅವುಗಳು ಸಹ ಸೂಪರ್ ಡೂಪರ್ ಹಿಟ್ ಗಳಾದವು. ಜನರು ಸಹ ದೊಡ್ಡ ಮಟ್ಟದಲ್ಲಿ ಖರೀದಿಸಲು ಆರಂಭಿಸಿದರು.
1947ರಲ್ಲಿ ನೆಸ್ಟ್ಲೆಯಿಂದ ಮ್ಯಾಗಿ ನೂಡಲ್ಸ್ ಖರೀದಿ
1912ರಲ್ಲಿ ಜೂಲಿಯಸ್ ಮ್ಯಾಗಿ ತಯಾರಿಸಿದ ಉತ್ಪನ್ನಗಳು ಅಮೆರಿಕ ಮತ್ತು ಫ್ರಾನ್ಸ್ ನಂಥ ದೇಶಗಳಲ್ಲಿ ಮಾರಾಟ ಆರಂಭಿಸಿದವು. ಆ ನಂತರ 1947ರಲ್ಲಿ ನೆಸ್ಟ್ಲೆಯಿಂದ ಮ್ಯಾಗಿ ನೂಡಲ್ಸ್ ಖರೀದಿ ಮಾಡಲಾಯಿತು. ಅದಾದ ಮೇಲಿನದು ಇತಿಹಾಸ. ಇದು ಭಾರತದಲ್ಲಿ ಪರಿಚಯವಾದ ಮೇಲಂತೂ ಮನೆಮನೆಯಲ್ಲೂ ಹೆಸರಾಯಿತು.


Click it and Unblock the Notifications