ನಾವು ಮೆಟ್ರೋ ನಿಲ್ದಾಣದಿಂದ ಹೊರಬಂದು ಆಟೋದಲ್ಲಿ ಹೋಗುವುದೆಂದರೆ ತಲೆಬಿಸಿ ಆಗುವುದು ಕೂಡಾ ಇದೆ. ಕೆಲವೊಮ್ಮೆ ಆಟೋ ಇಲ್ಲದಿದ್ದರೆ, ಕೆಲವೊಮ್ಮೆ ಆಟೋ ಚಾಲಕರು ನಿಗದಿತ ದರಕ್ಕಿಂತ ಅಧಿಕ ಹಣವನ್ನು ಕೇಳುತ್ತಾರೆ. ಆದರೆ ಈಗ ಇಂತಹ ಸಮಸ್ಯೆಯಿಲ್ಲ.
ಈಗ, ನಮ್ಮ ಮೆಟ್ರೋ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಿಂದ ನಿರ್ಗಮಿಸುವಾಗ ತಮ್ಮ ಮುಂದಿನ ಪ್ರಯಾಣಕ್ಕಾಗಿ ಬೆಂಗಳೂರಿನಲ್ಲಿ ಎಲ್ಲಿಯಾದರೂ ಮೆಟ್ರೋ ಮಿತ್ರ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸುಲಭವಾಗಿ ಆಟೋರಿಕ್ಷಾಗಳನ್ನು ಬುಕ್ ಮಾಡಬಹುದು.

ಇದೀಗ ಆ್ಯಪ್ ಇಡೀ ನಗರದಲ್ಲಿರುವ ಆಟೋರಿಕ್ಷಾಗಳನ್ನು ಬುಕ್ ಮಾಡಲು ಪ್ರತ್ಯೇಕ ಆಪ್‌ನ ಅಗತ್ಯವನ್ನು ದೂರಮಾಡಿದೆ. ಜಯನಗರ ಮೆಟ್ರೊ ನಿಲ್ದಾಣದಲ್ಲಿ ಈ ಆ್ಯಪ್ ಅನ್ನು ಮೊದಲು ಬಿಡುಗಡೆ ಮಾಡಿದೆ. ಅಂದರೆ ಈಗ ನೀವು ಈ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಮಿತ್ರಾ ಆ್ಯಪ್ ಬಳಸಿ ಆಟೋ ಬುಕ್ ಮಾಡಬಹುದಾಗಿದೆ.
ಎಲ್ಲಾ ನಮ್ಮ ಮೆಟ್ರೋ ನಿಲ್ದಾಣಗಳಿಗೆ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದಿಂದ ಮೆಟ್ರೋ ಮಿತ್ರ ಅಪ್ಲಿಕೇಶನ್ ಅನ್ನು ಆರಂಭ ಮಾಡಲಾಗಿದೆ. ಅಪ್ಲಿಕೇಶನ್ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಮತ್ತು ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ (ಎಡಿಯು) ಜಂಟಿ ಉಪಕ್ರಮವಾಗಿದೆ.
ಏನಿದು ಮೆಟ್ರೋ ಮಿತ್ರ ಆ್ಯಪ್?
ಬೆಂಗಳೂರಿನ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ಎಆರ್‌ಡಿಯು), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಹಯೋಗದೊಂದಿಗೆ ವಿಶೇಷವಾಗಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಆಟೋ ರೈಡ್ ಬುಕ್ ಮಾಡಲು ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ಅಪ್ಲಿಕೇಶನ್, ಇತರ ಸೇವೆಗಳಿಗಿಂತ ಭಿನ್ನವಾಗಿ, ಮೆಟ್ರೋ ಬಳಕೆದಾರರನ್ನು ಪ್ರತ್ಯೇಕವಾಗಿ ಸೇವೆ ನೀಡಲು ಆರಂಭಿಸಲಾಗಿದೆ. ಎಲ್ಲಾ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಿಗೆ ಮತ್ತು ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.
ಅಪ್ಲಿಕೇಶನ್ ಕಟ್ಟುನಿಟ್ಟಾಗಿ ಸರ್ಕಾರ-ನಿಗದಿತ ಮಾರ್ಗಸೂಚಿಗಳಿಗೆ ಬದ್ಧವಾಗಿರುತ್ತದೆ. ಅಪ್ಲಿಕೇಶನ್ ಬಳಕೆದಾರರಿಗೆ ಮೆಟ್ರೋ ಪ್ರವೇಶ ಸುಗಮವಾಗಿದೆ. ಹಾಗೆಯೇ ಯಾವುದೇ ತೊಂದರೆಯಿಲ್ಲದೆಯೇ ಮೆಟ್ರೋ ಪ್ರಯಾಣವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮೆಟ್ರೋ ಮಿತ್ರ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು?
ಎಲ್ಲಾ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ, ಯಾವುದೇ ಪ್ರವೇಶ ದ್ವಾರಗಳ ಬಳಿ ಸ್ಟ್ಯಾಂಡಿಯಲ್ಲಿ ಕ್ಯೂಆರ್ ಕೋಡ್ ಅನ್ನು ಇರಿಸಲಾಗಿರುತ್ತದೆ. ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿಕೊಂಡು ಪ್ರಯಾಣಿಕರು ತಮ್ಮ ಮುಂದಿನ ಪ್ರಯಾಣಕ್ಕಾಗಿ ಆಟೋ-ರಿಕ್ಷಾಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.
ಪ್ರಯಾಣಿಕರು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ಆ ಮೆಟ್ರೋ ನಿಲ್ದಾಣವನ್ನು ಪಿಕ್-ಅಪ್ ಪಾಯಿಂಟ್ ಉಲ್ಲೇಖಿಸಬೇಕಾಗುತ್ತದೆ. ಇದಲ್ಲದೇ, ಬಿಎಂಆರ್‌ಸಿಎಲ್ ಅಪ್ಲಿಕೇಶನ್ ಅಥವಾ ಅದರ ವಾಟ್ಸಾಪ್ ಚಾಟ್‌ಬಾಟ್ ಫೀಚರ್ ಮೂಲಕ ಮೆಟ್ರೋ ಟಿಕೆಟ್ ಖರೀದಿಸುವಾಗಲೇ ಆಟೋವನ್ನು ಬುಕ್ ಮಾಡಿಕೊಳ್ಳಬಹುದಾಗಿದೆ.
ನೀವು ತಲುಪಬೇಕಾದ ಸ್ಟೇಷನ್‌ಗೆ ತಲುಪಿದ ಬಳಿಕ ಅಂದಾಜು ದರವನ್ನು ಅಪ್ಲಿಕೇಶನ್‌ನಲ್ಲಿ ತೋರಿಸಲಾಗುತ್ತದೆ. ಬುಕಿಂಗ್ ಖಚಿತವಾದ ಬಳಿಕ, ಪ್ರಯಾಣಿಕರು ಒಟಿಪಿ ಮತ್ತು ರೈಡ್ ವಿವರಗಳನ್ನು ಪಡೆಯುತ್ತಾರೆ. ಇದರ ನಂತರ, ಪ್ರಯಾಣಿಕರಿಗೆ ಗೊತ್ತುಪಡಿಸಿದ ಮೆಟ್ರೋ ಮಿತ್ರ ವಲಯವನ್ನು ನಿಯೋಜಿಸಲಾಗುತ್ತದೆ.
ಮೆಟ್ರೋ ಮಿತ್ರ ಅಪ್ಲಿಕೇಶನ್‌ನೊಂದಿಗೆ ನಿಯೋಜಿಸಲಾದ ಆಟೋಗಳು ಸುಲಭವಾಗಿ ಗುರುತಿಸಲು ತಮ್ಮ ವಾಹನಗಳ ಮೇಲೆ ವಿಭಿನ್ನ ಸ್ಟಿಕ್ಕರ್‌ಗಳನ್ನು ಪ್ರದರ್ಶಿಸಬೇಕಾಗುತ್ತದೆ. ಸ್ಟಿಕ್ಕರ್‌ಗಳು ಕ್ಯೂಆರ್ ಕೋಡ್ ಅನ್ನು ಹೊಂದಿದ್ದು, ಇದು ಪ್ರಯಾಣಿಕರಿಗೆ ಚಾಲಕರ ಮಾಹಿತಿ ಪಡೆಯಲು, ಸವಾರಿಯ ಅನುಭವದ ಬಗ್ಗೆ ಪ್ರತಿಕ್ರಿಯೆ ನೀಡಲು ಅವಕಾಶ ನೀಡುತ್ತದೆ.
ಮೆಟ್ರೋ ಮಿತ್ರ ಬಳಸಿಕೊಂಡು ಆಟೋ ಬುಕ್ ಮಾಡುವುದು ಹೇಗೆ?
ಹಂತ 1: ಮೆಟ್ರೋ ನಿಲ್ದಾಣಗಳ ನಿರ್ಗಮನದಲ್ಲಿ ಸ್ಟ್ಯಾಂಡಿಯಲ್ಲಿ ನಿಮ್ಮ ಫೋನ್‌ನಿಂದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.
ಹಂತ 2: ವೆಬ್‌ಸೈಟ್‌ನ ಡ್ರಾಪ್-ಡೌನ್ ಮೆನುವಿನಿಂದ ಡ್ರಾಪ್-ಆಫ್ ಸ್ಥಳವನ್ನು ಆಯ್ಕೆಮಾಡಿ.
ಹಂತ 3: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು book an auto ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ಆಟೋ ಚಾಲಕರಿಗೆ ಒಟಿಪಿಯನ್ನು ನೀಡಿ, ಆಟೋ ಸವಾರಿ ಆರಂಭ ಮಾಡಿ.


Click it and Unblock the Notifications