ತಪ್ಪಾದ ಅಥವಾ ವಂಚನೆಯ ಬ್ಯಾಂಕ್ ವಹಿವಾಟಿನಿಂದ ದುಡ್ಡು ಹಿಂಪಡೆಯುವುದು ಹೇಗೆ?
ಬ್ಯಾಂಕಿಂಗ್ ವ್ಯವಹಾರ ನಡೆಸುವಾಗ ನಮ್ಮಿಂದ ಕೆಲ ಬಾರಿ ತಪ್ಪುಗಳಾಗುವುದುಂಟು. ಅಲ್ಲದೆ ಕೆಲ ಬಾರಿ ವಂಚಕರಿಂದಲೂ ಮೋಸ ಹೋಗಬಹುದು. ಪ್ರಸ್ತುತ ಮೊಬೈಲ್ ಆ್ಯಪ್ ಮೂಲಕ ಮಾಡಬಹುದಾದ ಯುಪಿಐ ವಹಿವಾಟುಗಳು ಹಾಗೂ ನೆಟ್ ಬ್ಯಾಂಕಿಂಗ್ ವ್ಯವಸ್ಥೆಗಳು ಒಟ್ಟಾರೆ ನಮ್ಮ ಬ್ಯಾಂಕಿಂಗ್ ವ್ಯವಹಾರವನ್ನು ಬಹಳೇ ಸುಲಭಗೊಳಿಸಿವೆ. ಆದರೆ, ಹೀಗೆ ಹಣ ವರ್ಗಾಯಿಸುವಾಗ ಅದು ತಪ್ಪಾದ ಖಾತೆಗೆ ವರ್ಗಾವಣೆಗೊಂಡಲ್ಲಿ ಏನು ಮಾಡುವುದು? ಇದಕ್ಕಾಗಿ ಒಂದು ಮಾರ್ಗವಿದೆ. ತಪ್ಪಾದ ಖಾತೆಗೆ ಜಮೆಯಾದ ಹಣವನ್ನು ಮರಳಿ ನಿಮ್ಮ ಖಾತೆಗೆ ನೀವು ಪಡೆಯಬಹುದು. ಇದಕ್ಕಾಗಿ ಒಂದು ಸರಳವಾದ ವಿಧಾನವಿದ್ದು, ಅದರ ಬಗ್ಗೆ ವಿಸ್ತೃತವಾಗಿ ಇಲ್ಲಿ ತಿಳಿಸಲಾಗಿದೆ ಓದಿ...
ಮೊದಲಿಗೆ ನಿಮ್ಮ ಬ್ಯಾಂಕಿಗೆ ಮಾಹಿತಿ ನೀಡಿ
ನೀವು ತಪ್ಪಾಗಿ ವ್ಯವಹಾರ ಮಾಡಿದ್ದರೆ ಅಥವಾ ಬೇರೆ ಯಾರೋ ನಿಮ್ಮ ಖಾತೆಯಲ್ಲಿ ಮೋಸದ ವ್ಯವಹಾರ ನಡೆಸಿದ್ದರೆ ಆ ಕುರಿತಾಗಿ ಮೊದಲಿಗೆ ನಿಮ್ಮ ನೋಂದಾಯಿತ ಬ್ಯಾಂಕಿಗೆ ಮಾಹಿತಿ ನೀಡಲೇಬೇಕು. ಇದಕ್ಕಾಗಿ ನೀವು ನೇರವಾಗಿ ಬ್ಯಾಂಕಿಗೆ ಹೋಗಬಹುದು ಅಥವಾ ಕಸ್ಟಮರ್ ಕೇರ್ ಗೆ ಕರೆ ಮಾಡಬಹುದು. ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯ ಸಂಖ್ಯೆ, ಸಮಯ, ದಿನಾಂಕ ಹಾಗೂ ಎದುರಾಗಿರುವ ಸಮಸ್ಯೆಯ ಬಗ್ಗೆ ಬ್ಯಾಂಕಿಗೆ ತಿಳಿಸಬೇಕು. ಇಂಥ ಸಂದರ್ಭಗಳಲ್ಲಿ ಹಣ ಪಡೆದುಕೊಂಡ ವ್ಯಕ್ತಿಯ ಖಾತೆಯಿಂದ ನಿಮ್ಮ ಖಾತೆಗೆ ಹಣವನ್ನು ಮರಳಿಸಲು ಬ್ಯಾಂಕ್ ಆ ಖಾತೆದಾರರ ಅನುಮತಿಯನ್ನು ಕೇಳುತ್ತದೆ. ಆದರೆ ಇಂಥದೊಂದು ಪ್ರಕ್ರಿಯೆ ದೀರ್ಘಾವಧಿಯ ಪ್ರಕ್ರಿಯೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಕ್ರಿಪ್ಟೋ ಕರೆನ್ಸಿ ವ್ಯಾಲೆಟ್ ಎಂದರೇನು? ಇದನ್ನು ಬಳಸುವುದು ಹೇಗೆ?
ರಿಸರ್ವ್ ಬ್ಯಾಂಕ್ ಗೈಡ್ಲೈನ್ ಏನಿದೆ?
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ವಂಚನೆಯ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಆರ್ಬಿಐ ಕೂಡ ಈ ಬಗ್ಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ಇವೇ ಮುನ್ನೆಚ್ಚರಿಕಾ ಕ್ರಮಗಳ ಭಾಗವಾಗಿ ಆರ್ಬಿಐ ಹೊಸ ವ್ಯವಸ್ಥೆಯೊಂದನ್ನು ಪರಿಚಯಿಸುತ್ತಿದೆ. ಏಟಿಎಂ ಅಥವಾ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ನೀವು ವ್ಯವಹಾರವೊಂದನ್ನು ಪೂರ್ಣಗೊಳಿಸಿದಾಗ ನಿಮ್ಮ ಮೊಬೈಲಿಗೆ ಒಂದು ಎಸ್ಸೆಮ್ಮೆಸ್ ಬರುತ್ತದೆ.

"ನೀವು ನಡೆಸಿದ ವ್ಯವಹಾರ ತಪ್ಪಾಗಿದ್ದರೆ ದಯವಿಟ್ಟು ಈ ಮೆಸೇಜನ್ನು ಈ ನಂಬರಿಗೆ ಕಳುಹಿಸಿ."
ಎಂಬ ಮೆಸೇಜನ್ನು ನೀವು ಪಡೆಯುವಿರಿ. ಒಂದೊಮ್ಮೆ ನೀವು ತಪ್ಪಾಗಿ ವ್ಯವಹಾರ ಮಾಡಿದ್ದರೆ ಅಥವಾ ಯಾವುದೋ ವಂಚನೆಯಿಂದ ವ್ಯವಹಾರ ನಡೆದಿರುವುದು ನಿಮ್ಮ ಗಮನಕ್ಕೆ ಬಂದರೆ ಈ ಆಯ್ಕೆಯನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ವ್ಯವಹಾರ ತಪ್ಪಾಗಿದೆ ಎಂದು ಅಥವಾ ವ್ಯವಹಾರ ವಂಚನೆಯಿಂದ ನಡೆದಿದೆ ಎಂದು ನೀವು ಮೆಸೇಜು ಕಳುಹಿಸಬಹುದು. ನೀವು ಒಂದು ವೇಳೆ ಅಚಾತುರ್ಯದಿಂದ ತಪ್ಪಾಗಿ ವಹಿವಾಟು ನಡೆಸಿದ್ದರೆ, ವರ್ಗಾವಣೆಯಾದ ಹಣವನ್ನು ಆದಷ್ಟೂ ಶೀಘ್ರವಾಗಿ ನಿಮ್ಮ ಖಾತೆಗೆ ಮರಳಿಸುವಂತೆ ನಿಮ್ಮ ಬ್ಯಾಂಕ್ ಕ್ರಮ ಕೈಗೊಳ್ಳಬೇಕೆಂದು ಆರ್ಬಿಐ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕಾನೂನಿನ ಮೊರೆ ಹೋಗಬಹುದು
ಒಂದು ವೇಳೆ ನೀವು ತಪ್ಪಾದ ವ್ಯವಹಾರ ನಡೆಸಿದ್ದರೆ ಹಾಗೂ ಹಣ ಪಡೆದುಕೊಂಡ ವ್ಯಕ್ತಿಯು ನಿಮ್ಮ ಹಣವನ್ನು ಮರಳಿಸಲು ನಿರಾಕರಿಸುತ್ತಿದ್ದರೆ ನೀವು ಕಾನೂನಿನ ಮೊರೆ ಹೋಗಬಹುದು. ಏನೇ ಆದರೂ ಕೋರ್ಟು ಕಚೇರಿ ವಿಷಯಗಳು ಬಗೆಹರಿಯಲು ದೀರ್ಘಾವಧಿ ತೆಗೆದುಕೊಳ್ಳುತ್ತವೆ ಎಂಬುದು ಗೊತ್ತಿರಲಿ.
ಹೀಗೆ ಕಾನೂನು ಪ್ರಕಾರ ಪ್ರಕರಣ ದಾಖಲಿಸಿದಾಗ ಕೋರ್ಟ್ ಹಾಗೂ ಬ್ಯಾಂಕ್ ನಿಮ್ಮ ವಹಿವಾಟಿನ ಬಗ್ಗೆ ಸೂಕ್ಷ್ಮವಾಗಿ ವಿಚಾರಣೆ ನಡೆಸುತ್ತವೆ. ನೀವು ತಪ್ಪಾಗಿ ವಹಿವಾಟು ನಡೆಸಿದ್ದರೆ ಹಣ ವರ್ಗಾವಣೆಗೊಂಡ ಬ್ಯಾಂಕ್ ಖಾತೆಯ ನಿಖರವಾದ ಮಾಹಿತಿಯನ್ನು ನೀವೇ ನಿಮ್ಮ ಬ್ಯಾಂಕಿಗೆ ನೀಡಬೇಕಾಗುತ್ತದೆ ಎಂದು ಆರ್ಬಿಐ ಮಾರ್ಗಸೂಚಿ ಹೇಳುತ್ತದೆ. ನಿಮ್ಮ ತಪ್ಪಿಗೆ ಬ್ಯಾಂಕ್ ಹೊಣೆಗಾರನಾಗಿರುವುದಿಲ್ಲ ಎಂದೂ ಆರ್ಬಿಐ ಮಾರ್ಗಸೂಚಿ ಹೇಳುತ್ತದೆ.
ಚಾಲನೆಯಲ್ಲಿಲ್ಲದ ಖಾತೆಯಾಗಿದ್ದರೆ.....
ಒಂದು ವೇಳೆ ನೀವು ಹಣ ವರ್ಗಾವಣೆ ಮಾಡುವಾಗ ಚಾಲ್ತಿಯಲ್ಲಿಲ್ಲದ ಅಥವಾ ಅಮಾನ್ಯವಾದ ಖಾತೆಯ ಸಂಖ್ಯೆಯನ್ನು ನಮೂದಿಸಿದ್ದರೆ, ನಿಮ್ಮ ಖಾತೆಯಿಂದ ಹೊರಗೆ ಹೋದ ಮೊತ್ತವು ಸ್ವಯಂಚಾಲಿತವಾಗಿ ಮರಳಿ ನಿಮ್ಮ ಖಾತೆಗೆ ಜಮೆಯಾಗುತ್ತದೆ. ಸಾಮಾನ್ಯವಾಗಿ ಯುಪಿಐ ವ್ಯವಹಾರಗಳಲ್ಲಿ ಚಾಲ್ತಿಯಲ್ಲಿಲ್ಲದ ಖಾತೆಯನ್ನು ನಮೂದಿಸಿದರೆ ನಿಮ್ಮ ಖಾತೆಯಿಂದ ಹಣ ಡೆಬಿಟ್ ಆಗುವುದಿಲ್ಲ.