ಭಾರತ ಸರ್ಕಾರವು ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲ ವಯೋಮಾನದವರಿಗೆ ಜೀವನದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವುದಕ್ಕೆ ನಾನಾ ರೀತಿಯ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಆ ಪೈಕಿ ಎರಡು ಮಹತ್ವದ ಹಾಗೂ ಜನಪ್ರಿಯ ಉಳಿತಾಯ ಯೋಜನೆಗಳೆಂದರೆ ಹಿರಿಯ ನಾಗರಿಕರ ಉಳಿತಾಯ ಯೋಜನೆ(ಎಸ್‌ಸಿಎಸ್‌ಎಸ್) ಹಾಗೂ ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಯೋಜನೆ(ಎಂಎಸ್‌ಎಸ್‌ಸಿ).
ಈ ಎರಡು ಯೋಜನೆಯನ್ನು ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗಾಗಿ ಪರಿಚಯಿಸಲಾಗಿದೆ. ಅದರಲ್ಲಿಯೂ ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಯೋಜನೆಯು ಸಣ್ಣ ಮೊತ್ತದ ಉಳಿತಾಯ ಯೋಜನೆಯಾಗಿದ್ದು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಆರ್ಥಿಕ ಸಬಲೀಕರಣ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ.

ಇನ್ನು ಹಿರಿಯ ನಾಗರಿಕರ ಉಳಿತಾಯ ಯೋಜನೆಯು ನಿಗದಿತ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ 60 ವರ್ಷದ ಬಳಿಕ ನಿರಂತರ ಆದಾಯ ಗಳಿಸುವ ಉದ್ದೇಶದಡಿ ಪ್ರಾರಂಭಿಸಲಾಗಿದ್ದು, ಆ ಮೂಲಕ ಈ ವಯೋಮಾನದವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸಲಾಗುತ್ತಿದೆ. ಎಂಎಸ್‌ಎಸ್‌ಸಿ ಖಾತೆಯನ್ನು ತೆರೆಯುವುದಕ್ಕೆ ಮಹಿಳೆಯರು ಹಾಗೂ ಅಪ್ರಾಪ್ತ ಹೆಣ್ಣು ಮಕ್ಕಳ ಪೋಷಕರು ಅರ್ಹರಾಗಿದ್ದಾರೆ.
ಅದೇ ರೀತಿ 55 ವರ್ಷ ಪೂರ್ಣಗೊಳಿಸಿದವರು ಎಸ್‌ಸಿಎಸ್‌ಸಿ ಖಾತೆಯನ್ನು ತೆರೆಯಬಹುದು. ಆದರೆ ಈ ಎರಡು ಯೋಜನೆ ಫಲಾನುಭವಿಗಳಾಗುವುದಕ್ಕೆ ಇರುವ ಮಾನದಂಡಗಳು ಬೇರೆ-ಬೇರೆಯಾಗಿವೆ. ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಹಾಗೂ ಹಿರಿಯ ನಾಗರಿಕರ ಉಳಿತಾಯ ಯೋಜನೆ ಖಾತೆಗಳನ್ನು ಆಫ್‌ಲೈನ್ ಹಾಗೂ ಆನ್‌ಲೈನ್ ಮೂಲಕ ಪ್ರಾರಂಭಿಸಬಹುದು.
ಹಾಗಾದರೆ ಮಹಿಳಾ ಸಮ್ಮಾನ್ ಹಾಗೂ ಎಸ್‌ಸಿಎಸ್‌ಎಸ್ ಖಾತೆ ತೆರೆಯುವುದು ಹೇಗೆ?
ಈ ಹಿಂದೆ ಆನ್‌ಲೈನ್ ಮೂಲಕ ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ ಖಾತೆ ತೆರೆಯುವ ವ್ಯವಸ್ಥೆ ಇರಲಿಲ್ಲ. ಆದರೆ, ಈಗ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂಚೆ ಇಲಾಖೆಯು ಹೊರಡಿಸಿರುವ ಇತ್ತೀಚಿನ ಸುತ್ತೋಲೆಯಲ್ಲಿ, ಹೂಡಿಕೆದಾರರು ಎಸ್‌ಸಿಎಸ್‌ಎಸ್ ಹಾಗೂ ಎಂಎಸ್‌ಎಸ್‌ಸಿ ಖಾತೆಗಳನ್ನು ಇಲಾಖೆಯ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಮಾಡಬಹುದು ಎಂದು ಹೇಳಿದೆ.
ಖಾತೆ ತೆರೆಯುವ ಹಂತಗಳು ಹೀಗಿವೆ
1. ಅಂಚೆ ಇಲಾಖೆ ಉಳಿತಾಯ ಖಾತೆದಾರರು ಇಲಾಖೆಯ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
2. ಹೋಮ್‌ಪೇಜ್‌ನಲ್ಲಿರುವ ಜನರಲ್ ಸರ್ವೀಸಸ್ ಟ್ಯಾಬ್ ಕ್ಲಿಕ್ ಮಾಡಬೇಕು.
3. ಸರ್ವೀಸ್ ರಿಕ್ವೆಸ್ಟ್ ಆಪ್ಶನ್ ಆಯ್ಕೆ ಮಾಡಿಕೊಳ್ಳಬೇಕು.
4. ನಂತರ ನ್ಯೂ ರಿಕ್ವೆಸ್ಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಒಕೆ ಕೊಡಬೇಕು.
5. ನಂತರ ಎಸ್‌ಸಿಎಸ್‌ಎಸ್ ಖಾತೆಯನ್ನು ಕ್ಲಿಕ್ ಮಾಡಬೇಕು. ಅಲ್ಲಿ ಎಸ್‌ಸಿಎಸ್‌ಎಸ್ ಅಕೌಂಟ್ ಅಥವಾ ಒಪನ್ ಎಂಎಸ್‌ಎಸ್‌ಸಿ ಅಕೌಂಟ್ ಎಂದಿರುತ್ತದೆ.
6. ಅಲ್ಲಿ ನಿಮ್ಮ ಡೆಪಾಸಿಟ್ ಮೊತ್ತವನ್ನು ನಮೂದಿಸಿ ನಂತರ ಆ ಹಣವನ್ನು ಜಮೆ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಬೇಕು.
7. ಮುಂದೆ ಚೆಕ್ ಬಾಕ್ಸ್ ಕ್ಲಿಕ್ ಮಾಡಿ ಷರತ್ತುಗಳಿಗೆ ಒಪ್ಪಿಗೆಯನ್ನು ಸೂಚಿಸಬೇಕು.
8. ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು ಹಾಗೂ ಅದಕ್ಕೂ ಮೊದಲು ಇನ್ನೇನಾದರೂ ಹೆಚ್ಚುವರಿ ಮಾಹಿತಿ ಅಗತ್ಯವಿದ್ದರೆ ಭರ್ತಿ ಮಾಡಬೇಕು.
ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಒಪ್ಪಿಗೆಯನ್ನು ಸೂಚಿಸುವುದರೊಂದಿಗೆ ಎಸ್‌ಸಿಎಸ್‌ಎಸ್ ಹಾಗೂ ಎಂಎಸ್‌ಎಸ್‌ಸಿ ಖಾತೆಗಳನ್ನು ತೆರೆಯಲಾಗುತ್ತದೆ.


Click it and Unblock the Notifications