For Quick Alerts
ALLOW NOTIFICATIONS  
For Daily Alerts

Export- Import Business In India: ಭಾರತದಲ್ಲಿ ರಫ್ತು- ಆಮದು ವ್ಯವಹಾರ ಆರಂಭಿಸುವುದು ಹೇಗೆ?

|

ರಫ್ತು ವ್ಯವಹಾರವನ್ನು ಸರ್ಕಾರ ಯಾವಾಗಲೂ ಉತ್ತೇಜಿಸುತ್ತದೆ. ಕೊರೊನಾ ಎಂಬ ಜಾಗತಿಕ ಬಿಕ್ಕಟ್ಟು ಈಗ ಸಣ್ಣ ಉದ್ದಿಮೆದಾರರಿಗೂ ಅದ್ಭುತ ಅವಕಾಶಗಳನ್ನು ಸೃಷ್ಟಿಸಿದೆ. ದೊಡ್ಡ ನಗರಗಳಿಗೆ ತೆರಳದೆ, ತಾವಿರುವ ಸ್ಥಳಗಳಿಂದಲೇ ಹೊಸ ಉದ್ಯಮಗಳನ್ನು ಆರಂಭಿಸಬಹುದು. ಇಂಟರ್ ನೆಟ್ ಬಳಕೆ ವ್ಯಾಪಕ ಆಗುತ್ತಿದ್ದಂತೆ ಮಳಿಗೆಗಳ ಒಳಗೆ ಅವಕಾಶಗಳು ನಡೆದುಬರುತ್ತಿವೆ.

ಆಮದು ಹಾಗೂ ರಫ್ತು ಈಗ ಮುಂಚಿನಂತೆ ಕಷ್ಟದ್ದಲ್ಲ. ಇ ಕಾಮರ್ಸ್ ವ್ಯವಹಾರದ ಮೂಲಕ ಜಗತ್ತಿನ ಯಾವ ಮೂಲೆಯಾದರೂ ಮಾರಾಟಗಾರರು ತಲುಪಬಹುದು. ಈಗಾಗಲೇ ಪೂರೈಕೆ ಜಾಲವೂ ಸಿದ್ಧವಾಗಿದ್ದಲ್ಲಿ ಆಕಾಶಕ್ಕೆ ಮೂರೇ ಗೇಣು. ಆದರೂ ಭಾರತದಲ್ಲಿ ಸ್ವಂತವಾಗಿ ರಫ್ತು ಉದ್ಯಮ ಆರಂಭಿಸಬೇಕು ಎಂದಿದ್ದಲ್ಲಿ ಅದರ ಬಗ್ಗೆ ಮುಂಚಿತವಾಗಿ ಕೆಲವು ವಿಚಾರ ತಿಳಿದುಕೊಂಡಿರಬೇಕು.

ಅಮೆಜಾನ್‌ ಮೂಲಕ ಭಾರತದ ಎಂಎಸ್‌ಎಂಇಗಳ ರಫ್ತು ಪ್ರಮಾಣ ಹೆಚ್ಚಳ

 

ಒಂದು ವೇಳೆ ಬ್ಯಾಂಕ್ ನಲ್ಲಿ ಸಾಲ ಪಡೆಯುವುದಕ್ಕೋ ಅಥವಾ ಖಾತೆ ತೆರೆಯುವುದಕ್ಕೋ ತೆರಳುತ್ತಿದ್ದೀರಿ ಅಂದರೆ, ಅದಕ್ಕೆ ಮುನ್ನ ಈ ಅಂಶಗಳು ನಿಮ್ಮ ಗಮನದಲ್ಲಿ ಇರಲಿ.

ಯಾವುದು ರಫ್ತು ಮಾಡಬಹುದು ಎಂಬುದು ತಿಳಿದುಕೊಳ್ಳಿ

ಯಾವುದು ರಫ್ತು ಮಾಡಬಹುದು ಎಂಬುದು ತಿಳಿದುಕೊಳ್ಳಿ

ಯಾವುದೆಲ್ಲ ವಸ್ತುಗಳನ್ನು ರಫ್ತು ಮಾಡಬಹುದು ಅಂತ ನೋಡಿದರೆ, ಆ ಪಟ್ಟಿ ಬಹಳ ದೊಡ್ಡದಿದೆ. ಆ ಪೈಕಿ ಕೆಲವು ಉತ್ಪನ್ನಗಳನ್ನು ರಫ್ತು ಮಾಡುವಂತಿಲ್ಲ. ಆ ಪಟ್ಟಿಯಲ್ಲಿ ನಿಮ್ಮ ವಸ್ತು ಇದೆಯಾ ಎಂಬುದನ್ನು ನೋಡಿಕೊಳ್ಳಿ. ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವುದರಲ್ಲಿ ಭಾರತ ಹೆಸರುವಾಸಿ. ನೀವು ಇರುವ ಸ್ಥಳದಲ್ಲೇ ಸಿಗಬಹುದಾದ ಮೂಲಗಳನ್ನು ಹುಡುಕಿ ಹಾಗೂ ರಫ್ತು ಮಾಡಿ. ಭವಿಷ್ಯದಲ್ಲಿ ಗ್ರಾಹಕರಿಂದ ಇನ್ನಷ್ಟು ಆರ್ಡರ್ ಹಾಗೂ ಉತ್ತಮ ಪ್ರತಿಕ್ರಿಯೆ ಬರಬೇಕಿದ್ದಲ್ಲಿ ಗುಣಮಟ್ಟ ಬಹಳ ಮುಖ್ಯ ಎಂಬುದು ನೆನಪಿನಲ್ಲಿರಲಿ. ವಿದೇಶಿ ಮಾರುಕಟ್ಟೆ ಆರಿಸಿಕೊಳ್ಳುವಾಗ ಮಾರುಕಟ್ಟೆ ಗಾತ್ರ, ಸ್ಪರ್ಧೆ, ಗುಣಮಟ್ಟದ ಅಗತ್ಯ, ಪಾವತಿ ವಿಧಾನ ಇತ್ಯಾದಿಗಳ ಬಗ್ಗೆ ಸಂಶೋಧನೆ ನಡೆಸಿ. ಫಾರಿನ್ ಟ್ರೇಡ್ ಪಾಲಿಸಿ ಅಡಿಯಲ್ಲಿ ಕೆಲವು ದೇಶಗಳಲ್ಲಿ ಸಿಗುವ ರಫ್ತು ಅನುಕೂಲಗಳ ಕಡೆಗೂ ನೋಡಬಹುದು. ಆರಂಭದಲ್ಲಿ ಮಾರ್ಕೆಟ್ ಗುರುತಿಸಲು ರಫ್ತು ಉತ್ತೇಜನಾ ಸಂಸ್ಥೆಗಳ ನೆರವು ಪಡೆಯಬಹುದು.

ನೋಂದಣಿ ಮತ್ತಿತರ ಪ್ರಕ್ರಿಯೆ
 

ನೋಂದಣಿ ಮತ್ತಿತರ ಪ್ರಕ್ರಿಯೆ

ನೋಂದಣಿಗೆ ಹಾಗೂ ಖರೀದಿದಾರರನ್ನು ಹುಡುಕುವ ಮುನ್ನ ವ್ಯವಹಾರಕ್ಕೆ ಒಂದು ಹೆಸರು ಹಾಗೂ ಲೋಗೋ ಆಯ್ಕೆ ಮಾಡಿಕೊಳ್ಳಬೇಕು. ಭಾರತದಲ್ಲಿನ ಯಾವುದೇ ಕಾನೂನುಬದ್ಧ ವ್ಯವಹಾರದಂತೆಯೇ ಇದನ್ನೂ ನೋಂದಣಿ ಮಾಡಿಸಬೇಕು. ಏಕ ವ್ಯಕ್ತಿ ವ್ಯಾಪಾರ ಸಂಸ್ಥೆ ಅಥವಾ ಪಾರ್ಟನರ್ ಷಿಪ್ ಅಥವಾ ಪ್ರೈವೇಟ್ ಕಂಪೆನಿಯಾಗಿ ನೋಂದಣಿ ಮಾಡಿಸಬಹುದು. ಉದ್ಯಮದ ನೋಂದಣಿಯ ಕಾನೂನು ವ್ಯವಹಾರಗಳನ್ನು ನೋಡಿಕೊಳ್ಳಲು ವಕೀಲರೊಬ್ಬರನ್ನು ನೇಮಿಸಿಕೊಳ್ಳಬೇಕು. ಆದಾಯ ತೆರಿಗೆ ಇಲಾಖೆಯಿಂದ ಪರ್ಮನೆಂಟ್ ಅಕೌಂಟ್ ನಂಬರ್ (PAN) ಕಡ್ಡಾಯ. ವಿದೇಶಿ ವಿನಿಮಯ ವ್ಯವಹಾರ ಮಾಡುವುದಕ್ಕೆ ವಾಣಿಜ್ಯ ಬ್ಯಾಂಕ್ ವೊಂದರಲ್ಲಿ ಖಾತೆ ತೆರೆಯಬೇಕು. ಭಾರತದಲ್ಲಿ ರಫ್ತು/ಆಮದುದಾರರು ಫಾರಿನ್ ಟ್ರೇಡ್ ಪಾಲಿಸಿ ಪ್ರಕಾರ ಐಇಸಿ ಸಂಖ್ಯೆ ಪಡೆಯಬೇಕು. ಇದು ವ್ಯವಹಾರದ ಗುರುತಿನ ಸಂಖ್ಯೆ. www.dgft.gov.inನಲ್ಲಿ ಆನ್ ಲೈನ್ ಮೂಲಕವೇ ಅರ್ಜಿ ಹಾಕಬಹುದು. ಜಿಎಸ್ ಟಿ ಜಾರಿಯಾದ ಮೇಲೆ ಸಂಸ್ಥೆಯ PAN ಸಂಖ್ಯೆಯೇ IEC ಸಂಖ್ಯೆ ಆಗುತ್ತದೆ.

ರಫ್ತು ಸಾಲ ವ್ಯವಹಾರಕ್ಕೆ ಇನ್ಷೂರೆನ್ಸ್

ರಫ್ತು ಸಾಲ ವ್ಯವಹಾರಕ್ಕೆ ಇನ್ಷೂರೆನ್ಸ್

ಎಕ್ಸ್ ಪೋರ್ಟ್ ಪ್ರಮೋಷನಲ್ ಕೌನ್ಸಿಲ್ (ಇಪಿಸಿ) ಅಥವಾ ಕಮ್ಯಾಡಿಟಿ ಬೋರ್ಡ್ ಆಫ್ ಇಂಡಿಯಾ ನೀಡುವ ಐದು ವರ್ಷದ ಅವಧಿಯ ನೋಂದಣಿ-ಕಂ-ಸದಸ್ಯತ್ವ ಪ್ರಮಾಣಪತ್ರ (RCMC) ಪಡೆಯಬೇಕು. ನಿಮ್ಮ ವ್ಯವಹಾರ ಕೌನ್ಸಿಲ್/ಬೋರ್ಡ್ ನಲ್ಲಿ ನೋಂದಣಿ ಆಗಿದೆ ಎಂಬುದಕ್ಕೆ ಅದೇ ಸಾಕ್ಷ್ಯ. ಈ ಮೂಲಕ ಫಾರಿನ್ ಟ್ರೇಡ್ ಪಾಲಿಸಿ ಅಡಿಯಲ್ಲಿ ವಿನಾಯಿತಿಗಳನ್ನು ಪಡೆಯುವುದಕ್ಕೆ ಅರ್ಹತೆ ದೊರೆಯುತ್ತದೆ. ಇನ್ನು ವಿದೇಶಿ ವ್ಯವಹಾರ ಅಂದರೆ ಆ ಖರೀದಿದಾರ ಅಥವಾ ದೇಶ ದಿವಾಳಿ ಆಗುವ ಅಪಾಯ ಇರುತ್ತದೆ. ಪಾವತಿ ಅಪಾಯದ ಕವರೇಜ್ ಅನ್ನು ಇಸಿಜಿಸಿ ಲಿಮಿಟೆಡ್ ಮಾಡುತ್ತದೆ (ಈ ಹಿಂದೆ ಎಕ್ಸ್ ಪೋರ್ಟ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್). ಇದರ ಸಂಪೂರ್ಣ ಮಾಲೀಕತ್ವ ಕೇಂದ್ರ ಸರ್ಕಾರದ್ದು. ಭಾರತದ ರಫ್ತುದಾರರಿಗೆ ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ರಫ್ತು ವ್ಯವಹಾರದ ಸಾಲ ನೀಡಿಕೆಗೆ ಇನ್ಷೂರೆನ್ಸ್ ಬೆಂಬಲ ನೀಡುತ್ತದೆ.

ಆನ್ ಲೈನ್ ವ್ಯವಹಾರದ ಅನುಕೂಲ

ಆನ್ ಲೈನ್ ವ್ಯವಹಾರದ ಅನುಕೂಲ

ಯಾವ ಉತ್ಪನ್ನಗಳನ್ನು ಮಾರಾಟ ಮಾಡುತ್ತೀರಿ ಎಂಬ ಕ್ಯಾಟಲಾಗ್, ದರ ಪಟ್ಟಿ, ಪಾವತಿ ವಿಧಾನ ಮತ್ತಿತರ ಸಂಬಂಧ ಪಟ್ಟ ಮಾಹಿತಿಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು. ಇವೆಲ್ಲ ಕಂಪೆನಿ ವೆಬ್ ಸೈಟ್ ನಲ್ಲಿ ಸಿಗಬೇಕು. ಈ ಮಾಹಿತಿಗಳನ್ನು ಒಳಗೊಂಡ ಕ್ಯಾಟಲಾಗ್ ಪ್ರಿಂಟ್ ಔಟ್ ಕೂಡ ಖರೀದಿದಾರರಿಗೆ ನೀಡಬಹುದು. ರಫ್ತು ವ್ಯವಹಾರದಲ್ಲಿ ಖರೀದಿದಾರರು ವಿದೇಶದಲ್ಲಿ ಇರುತ್ತಾರಾದ್ದರಿಂದ ವೆಬ್ ಸೈಟ್ ಬಹು ಭಾಷೆಯಲ್ಲಿ ಇದ್ದರೆ ಉತ್ತಮ. ಜತೆಗೆ ವ್ಯವಹಾರದಲ್ಲಿ ತೊಡಗಿಕೊಂಡಿರುವವರ ಬಗ್ಗೆ ಕಿರು ಪರಿಚಯ ಒಳಗೊಂಡಿರಬೇಕು. ಇದರಿಂದ ರಫ್ತು ಮಾಡುವವರ ಬಗ್ಗೆ ಹಾಗೂ ಅವರನ್ನು ತಲುಪುವ ಬಗ್ಗೆ ಖರೀದಿದಾರರಿಗೆ ಸ್ಪಷ್ಟತೆ ಸಿಗುತ್ತದೆ. ಆನ್ ಲೈನ್ ನಲ್ಲೇ ಆರ್ಡರ್ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದಲ್ಲಿ ಉತ್ತಮ. ಜತೆಗೆ ಇಮೇಲ್ ವಿಳಾಸ, ಪ್ರತಿಕ್ರಿಯೆ ನೀಡಲು ವೇದಿಕೆ ಇರಬೇಕು. ಸಾಧ್ಯವಾದ ಎಲ್ಲ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲೂ ಇರಬೇಕು. ಇನ್ನು ದೇಶಿಯ, ಅಂತರರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಾಪಾರ ವೃದ್ಧಿಗೆ ಅವಕಾಶ ಸಿಗುತ್ತದೆ. ಅಮೆಜಾನ್ ಸೇರಿದಂತೆ ಇತರ ಆನ್ ಲೈನ್ ಪೋರ್ಟಲ್ ಗಳಲ್ಲಿ ನೋಂದಣಿ ಮಾಡಿಸುವುದರಿಂದ ಸಹಾಯ ಆಗುತ್ತದೆ.

ಇನ್ನಷ್ಟು ಮಾಹಿತಿ ಸಂಗ್ರಹಣೆ

ಇನ್ನಷ್ಟು ಮಾಹಿತಿ ಸಂಗ್ರಹಣೆ

ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ ಎಂದಲ್ಲ. ರಫ್ತು ಮಾಡುವ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಕೆಲವು ನಿಯಮಾವಳಿಗಳು ಇವೆ. ಗುಣಮಟ್ಟ, ವೇರ್ ಹೌಸ್, ಪ್ಯಾಕೇಜಿಂಗ್, ಶಿಪ್ ಮೆಂಟ್ ಮುಂಚಿನ ಹಾಗೂ ನಂತರದ ಬ್ಯಾಂಕ್ ಹಣಕಾಸು ನೆರವು, ಮರೀನ್ ಇನ್ಷೂರೆನ್ಸ್, ಕಸ್ಟಮ್ಸ್ ನಿಯಮಾವಳಿ, ದಾಖಲಾತಿಗಳು ಇತ್ಯಾದಿಯನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಈ ಲೇಖನವು ಮಾರ್ಗದರ್ಶನವನ್ನು ಮಾತ್ರ ಮಾಡುತ್ತದೆ. ಈ ಬಗ್ಗೆ ಇನ್ನಷ್ಟು ವಿಷಯ- ಮಾಹಿತಿಯನ್ನು ಸಂಗ್ರಹಿಸಿ, ಮುಂದುವರಿಯಬೇಕಾಗುತ್ತದೆ.

English summary

How To Start Export And Import Business In India in kannada?

What are the procedure to follow start export and import business in India? Here is an explainer.
Company Search
COVID-19