ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್)ಯು ವೇತನದಾರರಿಗೆ ಲಭ್ಯವಿರುವ ನಿವೃತ್ತಿ ಅಂಚಿನ ಅನುಕೂಲಕರ ಯೋಜನೆಯಾಗಿದೆ. ಈ ಯೋಜನೆಯನ್ನು ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯು ನಿರ್ವಹಿಸುತ್ತಿದೆ. ಈ ಯೋಜನೆಗೆ ಉದೋಗಿಗಳು ಹಾಗೂ ಉದ್ಯೋಗದಾತರು ಸಮಾನವಾಗಿ ಹಣದ ಕೊಡುಗೆ ನೀಡುವ ಮೂಲಕ ಉದ್ಯೋಗಿಯು ತನ್ನ ನಿವೃತ್ತಿ ಸಮಯದಲ್ಲಿ ಬಡ್ಡಿ ಸೇರಿದಂತೆ ಒಂದು ನಿರ್ದಿಷ್ಟ ದೊಡ್ಡ ಮೊತ್ತವನ್ನು ಪಡೆಯುತ್ತಾರೆ.
ಇದರಲ್ಲಿ ಉದ್ಯೋಗಿಗಳ ಮೂಲ ವೇತನದ ಶೇ.12ರಷ್ಟು ಮೊತ್ತವನ್ನು ಕೊಡುಗೆಯಾಗಿ ಪರಿಗಣಿಸಲಾಗುತ್ತದೆ. 20ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಯಾವುದೇ ನೋಂದಾಯಿತ ಕಂಪೆನಿಯು ಕಡ್ಡಾಯವಾಗಿ ಇಪಿಎಫ್‌ಒನೊಂದಿಗೆ ನೋಂದಾಯಿಸಿಕೊಳ್ಳಬೇಕು. ಯಾವುದೇ ಕಂಪೆನಿಯಲ್ಲಿ ತಿಂಗಳಿಗೆ 15,000ರೂ.ವರೆಗೆ ಸಂಬಳ ಪಡೆಯುವ ಉದ್ಯೋಗಿಗಳ ಸಂಖ್ಯೆ 20 ಅಥವಾ ಅದಕ್ಕಿಂತ ಜಾಸ್ತಿಯಿದ್ದರೆ ಪಿಎಫ್ ಅನ್ನು ಕಡಿತಗೊಳಿಸುವುದು ಕಡ್ಡಾಯ ಎನ್ನುವುದು ಗಮನಾರ್ಹ.

ನಿವೃತ್ತಿ ವೇಳೆಗೆ ಹಣ ಉಳಿತಾಯ ಮಾಡುವಲ್ಲಿ ಇಪಿಎಫ್ ಯೋಜನೆಯು ಒಂದು ಅತ್ಯುತ್ತಮ ಮಾರ್ಗವಾಗಿದೆ. ಈ ನಡುವೆ ಯಾವುದೇ ತುರ್ತು ಸಂದರ್ಭಗಳಿದ್ದರೆ ಪಿಎಫ್ ಹಣವನ್ನು ವಿದ್‌ಡ್ರಾ ಮಾಡಿಕೊಳ್ಳಬಹುದಾಗಿದೆ. ಒಂದುವೇಳೆ ಉದ್ಯೋಗಿಯ ಆಧಾರ್ ಸಂಖ್ಯೆಯು ಯುಎಎನ್‌ಗೆ ಲಿಂಕ್ ಆಗಿದ್ದರೆ ಆನ್‌ಲೈನ್ ಮೂಲಕವೂ ಹಣವನ್ನು ಹಿಂಪಡೆದುಕೊಳ್ಳಬಹುದು. ಈ ಹಿಂದೆಯು ಹಣ ವಿದ್‌ಡ್ರಾ ಮಾಡಿಕೊಳ್ಳುವುದಕ್ಕೆ ಉದ್ಯೋಗದಾತರಿಂದ ದೃಢೀಕರಣ ಪಡೆಯುವುದು ಕಡ್ಡಾಯವಾಗಿತ್ತು. ಆದರೆ, ಇನ್ನುಮುಂದೆ ಇದರ ಅಗತ್ಯವೂ ಇಲ್ಲ.
ವೈದ್ಯಕೀಯ ತುರ್ತು ವೇಳೆ ಅಥವಾ ಮಕ್ಕಳ ಶಿಕ್ಷಣದ ಖರ್ಚಿನ ಸಂದರ್ಭವನ್ನು ಹೊಂದಿಕೊಂಡಂತೆ ಭಾಗಶಃ ಶೇ.75ರಷ್ಟು ಪಿಎಫ್ ಹಣವನ್ನು ವಿದ್‌ಡ್ರಾ ಮಾಡಿಕೊಳ್ಳಬಹುದು. ಆದರೆ ಈ ಹಣ ವಿದ್‌ಡ್ರಾವು ಷರತ್ತುಗಳಿಗೆ ಒಳಪಟ್ಟಿದ್ದು, ಉದ್ಯೋಗಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಈ ಷರತ್ತುಗಳಿಗೆ ಒಳಪಟ್ಟಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಉದ್ಯೋಗಿಗಳು ಇಪಿಎಫ್ ಹಣವನ್ನು ವಿದ್‌ಡ್ರಾ ಮಾಡಬಯಸುವುದಾದರೆ, ತಮ್ಮ ಯೂನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ಆಕ್ಟಿವೇಟ್ ಆಗಿದೆಯೇ ಎಂಬುದನ್ನು ತಪ್ಪದೆ ಪರಿಶೀಲಿಸಬೇಕು. ಜತೆಗೆ ಅದಕ್ಕೆ ತಮ್ಮ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು.
ಉದ್ಯೋಗಿಗಳು ಇಪಿಎಫ್‌ಒ ನ ಇ-ಸೇವಾ ಪೋರ್ಟಲ್‌ಗೆ ಲಾಗಿನ್ ಆಗಿ ತಮ್ಮ ಯುಎಎನ್ ಹಾಗೂ ಪಾಸ್‌ವರ್ಡ್‌ನ್ನು ಬಳಸಿಕೊಂಡು ಆನ್‌ಲೈನ್ ಸರ್ವೀಸಸ್ ಮೆನುವಿನಲ್ಲಿ ಕಾಣಿಸುವ ಆನ್‌ಲೈನ್ ಫಾರಂ "ಕ್ಲೈಮ್(ಫಾರಂ-31, 19, 10C & 10D)"ನ್ನು ಭರ್ತಿ ಮಾಡಬೇಕು. ಬಳಿಕ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ "ಸರ್ಟಿಫಿಕೇಟ್ ಆಫ್ ಅಂಡರ್‌ಟೇಕಿಂಗ್" ಅಥವಾ ವಹಿವಾಟಿನ ನಿಯಮ ಮತ್ತು ಷರತ್ತುಗಳಿಗೆ ಒಪ್ಪಿಗೆ ಸೂಚಿಸಬೇಕು.
ಮುಂದಿನ ಹಂತವು ಕೆಲವು ಪ್ರಶ್ನೆಗಳಿದ್ದು, ಅವುಗಳಿಗೆ ಉತ್ತರಿಸುವ ಜತೆಗೆ ಪ್ರೀಮೆಚುರ್ ಆಗಿದ್ದರೆ ಹಣ ವಿದ್‌ಡ್ರಾ ಉದ್ದೇಶಗಳಿಗೆ ಸಂಬಂಧಿಸಿದಂತೆ ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಸಲ್ಲಿಸಬೇಕು. ಅಗತ್ಯ ಮೊತ್ತವನ್ನು ನಮೂದಿಸಿದ ಬಳಿಕ ಆಧಾರ್‌ಗೆ ನೋಂದಣಿಯಾಗಿರುವ ಮೊಬೈಲ್‌ಗೆ ಒಟಿಪಿ ಬರಲಿದ್ದು, ತಮ್ಮ ಕೋರಿಕೆಯನ್ನು ಸಲ್ಲಿಸುವುದಕ್ಕೆ ಆ ಮೂಲಕ ಕಡ್ಡಾಯವಾಗಿ ದೃಢೀಕರಿಸಿಕೊಳ್ಳಬೇಕು.
ನಂತರ ಪೋರ್ಟಲ್‌ನಲ್ಲಿ ಕ್ಲೈಮ್‌ನ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಸಾಮಾನ್ಯವಾಗಿ ಅರ್ಜಿ ಕೋರಿಕೆಯು ಅನುಮೋದನೆ ಪಡೆಯಲು 2ರಿಂದ 3 ವಾರಗಳನ್ನು ತೆಗೆದುಕೊಳ್ಳುವ ಮೂಲಕ ಹಣವು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.


Click it and Unblock the Notifications