ಭಾರತದ 75 ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡುವ ಸಂಭ್ರಮದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ದಿನಕ್ಕೆ ಇನ್ನು ಬರೀ ಒಂದು ವಾರ ಮಾತ್ರ ಉಳಿದಿದೆ. ಈ ವರ್ಷ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಿವಿದೆ. ಹೀಗಿರುವಾಗ ನೀವು ರಾಷ್ಟ್ರ ಧ್ವಜವನ್ನು ಮನೆಯಲ್ಲಿಯೇ ಆರೋಹಣ ಮಾಡುವ ಮೂಲಕ ಯಾಕೆ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಬಾರದು?
ನಮ್ಮ ದೇಶ ಪ್ರೇಮವನ್ನು ತೋರಿಸಲು ಇಂತಹುದ್ದೆ ದಿನ ಎಂಬುವುದು ಮುಖ್ಯವಲ್ಲ. ಆದರೆ ನಮ್ಮ ದೇಶ ಸ್ವತಂತ್ರವಾದ ದಿನವನ್ನು ನಾವು ಸ್ಮರಿಸುವುದು ಮುಖ್ಯವಾಗುತ್ತದೆ. ಹಾಗೆಯೇ ಈ ದಿನದ ಮಹತ್ವವನ್ನು ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ತಿಳಿಸುವುದು ಮುಖ್ಯವಾಗುತ್ತದೆ. ಹೀಗಿರುವಾಗ ನೀವು ಅಂಚೆ ಕಚೇರಿಯಿಂದ 25 ರೂಪಾಯಿಗೆ ತ್ರಿವರ್ಣ ಧ್ವಜವನ್ನು ಖರೀದಿಸಿ ನಿಮ್ಮ ಮಕ್ಕಳಿಗೆ ನೀಡಬಹುದು.

"ಸ್ವಾತಂತ್ರ್ಯದ ಅಮೃತ ಗಳಿಗೆಯಲ್ಲಿ ನಾವಿದ್ದೇವೆ, ಈ ಸಂದರ್ಭದಲ್ಲಿ ನಾವು ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಎಂಬ ಚಳವಳಿಯನ್ನು ಗಟ್ಟಿಗೊಳಿಸೋಣ. ಆಗಸ್ಟ್ 13ರಿಂದ 15 ತಾರೀಖಿನ ನಡುವೆ ನೀವು ನಿಮ್ಮ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಆರೋಹಣ ಮಾಡಿ ಅಥವಾ ಧ್ವಜವನ್ನು ಹಾರಿಸಿ. ಈ ಚಳವಳಿ ರಾಷ್ಟ್ರ ಧ್ವಜದೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಆಳಗೊಳಿಸುತ್ತದೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರತಿ ಮನೆಯಲ್ಲಿ ತ್ರಿವರ್ಣ ಬಾವುಟ
ಪ್ರಧಾನಿ ನರೇಂದ್ರ ಮೋದಿ ಕರೆಯಂತೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಎಂಬ ಆಂದೋಲನವು ನಡೆಯಲಿದೆ. ಈ ನಡುವೆ ಭಾರತದ ಅಂಚೆ ಕಚೇರಿಯು ರಾಷ್ಟ್ರ ಧ್ವಜವನ್ನು ಮಾರಾಟ ಮಾಡುತ್ತಿದೆ. 20 x 30 ಇಂಚು ಗಾತ್ರದ ರಾಷ್ಟ್ರ ಧ್ವಜವನ್ನು ನೀವು 25 ರೂಪಾಯಿಗೆ ಅಂಚೆ ಕಚೇರಿ ಮೂಲಕ ಖರೀದಿ ಮಾಡಬಹುದಾಗಿದೆ. ನೀವು ಒಂದು ಬಾರಿಗೆ ಗರಿಷ್ಠ 5 ಬಾವುಟವನ್ನು ಆರ್ಡರ್ ಮಾಡಬಹುದು. ನಿಮಗೆ ಡೆಲಿವರಿ ಚಾರ್ಜ್ ಅನ್ನು ವಿಧಿಸಲಾಗುತ್ತದೆ.
"ಮನೆ ಮನೆಯಲ್ಲಿ ತ್ರಿವರ್ಣವನ್ನು ಆಚರಿಸಲು ಇಂಡಿಯಾ ಪೋಸ್ಟ್ ಆಫೀಸ್ ರಾಷ್ಟ್ರ ಧ್ವಜವನ್ನು ತನ್ನ 1.60 ಲಕ್ಷ ಅಂಚೆ ಕಚೇರಿಯ ಮೂಲಕ ಮಾರಾಟ ಮಾಡಲಿದೆ. ಸರ್ಕಾರವು ಆಗಸ್ಟ್ 13ರಿಂದ 15ರವರೆಗೆ ಈ ಚಳವಳಿಯನ್ನು ನಡೆಸುತ್ತಿದೆ. ಇ-ಪೋಸ್ಟ್ ಆಫೀಸ್ ಮೂಲಕವು ಜನರು ರಾಷ್ಟ್ರ ಧ್ವಜವನ್ನು ಖರೀದಿ ಮಾಡಬಹುದಾಗಿದೆ," ಎಂದು ಇಂಡಿಯಾ ಪೋಸ್ಟ್ ಟ್ವೀಟ್ ಮಾಡಿದೆ.
ಆನ್‌ಲೈನ್‌ನಲ್ಲಿ ತ್ರಿವರ್ಣ ಧ್ವಜ ಖರೀದಿಸುವುದು ಹೇಗೆ?
ಹಂತ 1: ಇಂಡಿಯಾ ಪೋಸ್ಟ್ ವೆಬ್‌ಸೈಟ್ epostoffice.gov.in ಗೆ ಭೇಟಿ ನೀಡಿ, ಲಾಗಿನ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟಾರ್ ಲಿಂಕ್ ಮೇಲೆ ಕ್ಲಿಕ್ ಮಾಡಿ
ಹಂತ 2: ನಿಮ್ಮ ಎಲ್ಲ ಮಾಹಿತಿಯನ್ನು ಹಾಕಿ, ಖಾತೆಯನ್ನು ರಚನೆ ಮಾಡಿಕೊಳ್ಳಿ
ಹಂತ 3: ನಿಮ್ಮ ಖಾತೆಗೆ ಲಾಗಿನ್ ಆಗಿ, Products ಮೇಲೆ ಕ್ಲಿಕ್ ಮಾಡಿ
ಹಂತ 4: National Flag ಮೇಲೆ ಕ್ಲಿಕ್ ಮಾಡಿ, ಅದನ್ನು ನಿಮ್ಮ ಕಾರ್ಟ್‌ಗೆ ಆಡ್ ಮಾಡಿಕೊಳ್ಳಿ
ಹಂತ 5: Buy Now ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
ಹಂತ 6: ನಿಮ್ಮ ಮೊಬೈಲ್‌ಗೆ ಕಳುಹಿಸಲಾಗುವ ಒಟಿಪಿಯನ್ನು ನಮೂದಿಸಿ.
ಹಂತ 7: Proceed to Payment ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ರಾಷ್ಟ್ರ ಧ್ವಜ ಖರೀದಿ ಮಾಡುವ ಪ್ರಕ್ರಿಯೆ ಪೂರ್ಣವಾಗಲಿದೆ.
ಅಂಚೆ ಕಚೇರಿಯಲ್ಲಿ ರಾಷ್ಟ್ರ ಧ್ವಜ ಖರೀದಿಸುವುದು ಹೇಗೆ?
ನೀವು ನಿಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ರಾಷ್ಟ್ರ ಧ್ವಜವನ್ನು ಖರೀದಿ ಮಾಡಬಹುದಾಗಿದೆ. ಪ್ರತಿ ಧ್ವಜಕ್ಕೆ ನೀವು 25 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಫ್ಲ್ಯಾಗ್ ಕೋಡ್ ಆಫ್ ಇಂಡಿಯಾದ ಬಗ್ಗೆ ತಿಳಿದಿರಿ
ಭಾರತ ದೇಶದ ಯಾವುದೇ ವ್ಯಕ್ತಿಯಾದರೂ ಕೂಡಾ ಭಾರತದ ಧ್ವಜ ಸಂಹಿತೆಯನ್ನು ತಿಳಿದಿರುವುದು ಅತೀ ಮುಖ್ಯವಾಗುತ್ತದೆ. ನೀವು ಧ್ವಜವನ್ನು ಖರೀದಿ ಮಾಡಿದ ಬಳಿಕ ಅದನ್ನು ಎಲ್ಲಿ ಆರೋಹಣ ಮಾಡುವುದು ಎಂದು ಸ್ಥಳವನ್ನು ಆಯ್ಕೆ ಮಾಡಬೇಕಾಗುತ್ತದೆ. ರಾಷ್ಟ್ರ ಧ್ವಜವನ್ನು ಎಂದಿಗೂ ಕೂಡಾ ಪ್ರಮುಖವಾದ ಸ್ಥಳದಲ್ಲಿ ಆರೋಹಣ ಮಾಡಬೇಕು. ಉದಾಹರಣೆಗೆ ಮನೆಗಳಲ್ಲಿ, ಮನೆಯ ಗಾರ್ಡನ್‌ಗಳಲ್ಲಿ ಮೊದಲಾದ ಪ್ರದೇಶಗಳಲ್ಲಿ. ಧ್ವಜವನ್ನು ನಾವು ತಲೆ ಎತ್ತಿ ನೋಡಲು ಸಾಧ್ಯವಾಗುವಂತೆ ಹಾರಿಸಬೇಕು.


Click it and Unblock the Notifications