For Quick Alerts
ALLOW NOTIFICATIONS  
For Daily Alerts

ಹಣ ಹೂಡಿಕೆಯಲ್ಲಿ ಸೋತವರಿಂದಲೂ ಪಾಠ ಕಲಿಯಲು ಇಲ್ಲಿವೆ 4 ಕಾರಣ

By ಅನಿಲ್ ಆಚಾರ್
|

ಯಶೋಗಾಥೆ ಅಥವಾ ಗೆದ್ದವರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಅಪರಿಮಿತವಾದ ಆಸಕ್ತಿ ಇರುತ್ತದೆ. ರುಪಾಯಿ ರುಪಾಯಿ ಸೇರಿಸಿ, ಕೋಟಿ ರುಪಾಯಿ ಆಗಿದ್ದು ಹೇಗೆ ಅನ್ನೋದೇ ಸ್ಫೂರ್ತಿ- ಕಿಕ್ ಕೊಡೋದು ಅಂತ ನಮಗೆಲ್ಲ ಅನಿಸಿಬಿಟ್ಟಿದೆ. ಸೋಷಿಯಲ್ ಮೀಡಿಯಾಗಳ ತುಂಬ ಅಂಥದ್ದೇ ಸುದ್ದಿ, ವರದಿ, ಲೇಖನಗಳು. ಆ ಪೈಕಿ ಎಷ್ಟು ನಿಜವೋ ಗೊತ್ತಿಲ್ಲ.

 

ಹಣ ಕಳೆದುಕೊಳ್ಳುವುದು ಹೇಗೆ? ಎಂಬ ಹೆಡ್ಡಿಂಗ್ ಇರುವ ಲೇಖನವನ್ನು ಯಾರು ಕ್ಲಿಕ್ ಮಾಡ್ತಾರೆ, ಯಾರು ಇಷ್ಟ ಪಡ್ತಾರೆ? ಯಾರೆಲ್ಲ ಮಾರ್ಕೆಟ್ ಎಕ್ಸ್ ಪರ್ಟ್ ಅಂತ ಇವತ್ತಿಗೆ ಚಲಾವಣೆಯಲ್ಲಿ ಇದ್ದಾರಲ್ಲಾ, ಅವರಲ್ಲಿ ತಪ್ಪು ನಿರ್ಧಾರವೇ ಮಾಡದವರು ಯಾರಿದ್ದಾರೆ? ಅಥವಾ ಗೆರೆ ಕೊಯ್ದಂಗೆ ಇಂಥದ್ದರ ಮೇಲೆ ಹಣ ಹಾಕಿದರೆ ಲಕ್ಷಗಟ್ಟಲೆ ಲಾಭ ಪಕ್ಕಾ ಅಂತ ಹೇಳೋದು ಸಾಧ್ಯವಾ?

ವರ್ಷದಲ್ಲಿ 30%ಗೂ ಹೆಚ್ಚು ರಿಟರ್ನ್ಸ್ ನೀಡಿದ ಗೋಲ್ಡ್ ಇಟಿಎಫ್ ಗಳು

ಸೋತವರ ಬಗ್ಗೆಯೇ ಓದಿದರೆ, ಅವರೇ ಹೇಳಿಕೊಂಡ ವೈಫಲ್ಯಗಳ ಬಗ್ಗೆ ತಿಳಿದುಕೊಂಡರೆ, ನಿಮ್ಮ ತಪ್ಪುಗಳನ್ನು ಒಮ್ಮೆ ಪರಾಮರ್ಶೆ ಮಾಡಿಕೊಂಡರೆ ಖಂಡಿತಾ ಗೆಲುವಿನ ಕಡೆಗೊಂದು ಹೆಜ್ಜೆ ಇಡಲು ದೀವಟಿಗೆ ಸಿಕ್ಕಂತೆ. ಎಂಥ ಕತ್ತಲಲ್ಲೂ ಗಟ್ಟಿ ಜಾಗದಲ್ಲಿ ಕಾಲಿಡುವುದಕ್ಕೆ ಬೆಳಕು ಕಾಣಿಸುತ್ತದೆ. ಅಂದ ಹಾಗೆ ವೈಫಲ್ಯದ ಸಾಫಲ್ಯ ಏನು ಎಂದು ತಿಳಿದುಕೊಳ್ಳೋಣ ಬನ್ನಿ.

ವೈಫಲ್ಯಗಳು ಬುದ್ಧಿವಂತರನ್ನಾಗಿ ಮಾಡುತ್ತದೆ

ವೈಫಲ್ಯಗಳು ಬುದ್ಧಿವಂತರನ್ನಾಗಿ ಮಾಡುತ್ತದೆ

ಬಹಳ ಜನಕ್ಕೆ ಷೇರು ಮಾರ್ಕೆಟ್ ಅಂದರೆ ಭಯ. ಎಲ್ಲಿ ಸೋತುಹೋಗ್ತೀವೋ ಎಂಬ ಅಳುಕು. ಆ ಕಾರಣಕ್ಕೆ ಹತ್ತು- ಹದಿನೈದು ಪರ್ಸೆಂಟ್ ವೇತನ ಹೆಚ್ಚಳಕ್ಕೆ ತಮ್ಮ ಶ್ರಮವನ್ನೆಲ್ಲ ಬಸಿದು, ಬೆಂಡಾಗುತ್ತಾರೆ ವಿನಾ ತಮ್ಮ ಸದ್ಯದ ಗಳಿಕೆಯನ್ನು ಎಲ್ಲಿ ಹೂಡಿಕೆ ಮಾಡಬಹುದು ಎಂದು ಆಲೋಚಿಸುವುದೇ ಇಲ್ಲ. ಅಪಾಯವನ್ನು ಎದುರುಗೊಳ್ಳುವುದಕ್ಕೆ ಸಂಸಿದ್ಧರಾಗದ ಹೊರತು ಅದೇ ಎಸ್ ಬಿ ಅಕೌಂಟ್ ನ ಕಣ್ಣಿಗೂ ಕಾಣದ ಬಡ್ಡಿಯ ಮೇಲೆ ಅವಲಂಬಿಸಿರಬೇಕಾಗುತ್ತದೆ. ದೀರ್ಘಾವಧಿಯಲ್ಲಿ ಏರುವ ಬೆಲೆಗಳ ಕದನದಲ್ಲಿ ಕಾಲೂರಿ ನಿಲ್ಲುವುದಕ್ಕೆ ಸಾಧ್ಯವೇ ಆಗಲ್ಲ. ಹೂಡಿಕೆಯೇ ಮಾಡದಿದ್ದಲ್ಲಿ ಅದು ವೈಫಲ್ಯ. ಅರ್ಥಾತ್, ಅನಿಶ್ಚಿತ ಭವಿಷ್ಯದ ಹಣಕಾಸು ವೈಫಲ್ಯ ಎದುರಿಸುವುದಕ್ಕೇ ಸಿದ್ಧವಾಗದಿರುವುದು ಮತ್ತೂ ದೊಡ್ಡ ಸೋಲು. ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡವರನ್ನು ಮಾತನಾಡಿಸಿ ನೋಡಿ. ಕೌಶಲ ಕಲಿಯಲು ತಾವು ಕಟ್ಟಿದ ಶುಲ್ಕ ಆ ಮೊತ್ತ ಎನ್ನುತ್ತಾರೆ. ಅವರ ಆ ಶುಲ್ಕದ ಅನುಭವ ನಮಗೂ ಪಾಠವಾಗಬಹುದು. ಅವರ ಸೋಲಿನ ಕಾರಣ ಗೆಲುವಿನ ಹಾದಿ ತೋರಬಹುದು.

ಒಂದೇ ಬುಟ್ಟಿಯಲ್ಲಿ ಎಲ್ಲ ಮೊಟ್ಟೆ ಏಕಿಡಬಾರದು ಗೊತ್ತಾ?
 

ಒಂದೇ ಬುಟ್ಟಿಯಲ್ಲಿ ಎಲ್ಲ ಮೊಟ್ಟೆ ಏಕಿಡಬಾರದು ಗೊತ್ತಾ?

ಎಲ್ಲ ಹಣವನ್ನೂ ಒಂದೇ ಕಡೆ ಹೂಡಿಕೆ ಮಾಡಬೇಡಿ ಅನ್ನೋದು ತಜ್ಞರ ಅಭಿಮತ. ಸ್ಟಾಕ್ ಗಳ ಮೇಲೆ ಎಷ್ಟು ಪರ್ಸೆಂಟ್ ಹೂಡಿಕೆ ಮಾಡಬೇಕು ಅನ್ನೋದಕ್ಕೆ ಒಂದು ಸೂತ್ರ ಇದೆ. ‍X= 120- ನಿಮ್ಮ ವಯಸ್ಸು. ಆದ್ದರಿಂದ ಸಣ್ಣ ವಯಸ್ಸಿನಲ್ಲಿ ಹೆಚ್ಚಿನ ರಿಸ್ಕ್ ತೆಗೆದುಕೊಂಡು ಸ್ಟಾಕ್ ಗಳ ಮೇಲೆ ಹಣ ಹೂಡಬಹುದು. ಮಿಕ್ಕಿದ್ದು ರಿಯಲ್ ಎಸ್ಟೇಟ್, ಚಿನ್ನ, ಸರ್ಕಾರದ ಯೋಜನೆಗಳು ಅಥವಾ ಇನ್ನಷ್ಟು ಸಂಕೀರ್ಣವಾದ ಹೂಡಿಕೆಗಳು ಮತ್ತು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಹಣ ಹಾಕಬಹುದು. ಹೂಡಿಕೆಯನ್ನು ಎಲ್ಲೆಲ್ಲಿ ಹಂಚುತ್ತೀರೋ ಅಷ್ಟರ ಮಟ್ಟಿಗೆ ಅಪಾಯ ಕಡಿಮೆ. ಕೊರೊನಾದಂಥ ಸನ್ನಿವೇಶದಲ್ಲಿ ಉಳಿತಾಯ, ಎಫ್ ಡಿ ಖಾತೆ ಮೇಲೆ ಬಡ್ಡಿ ನೆಲ ಕಚ್ಚಿದೆ. ಚಿನ್ನ ಮೇಲೇರಿದೆ. ಷೇರು ಮಾರ್ಕೆಟ್ ನಲ್ಲಿ ಏರಿಳಿತ ಇದೆ. ಹೀಗೆ ಯಾವುದೇ ಸನ್ನಿವೇಶದಲ್ಲಿ ಯಾವುದಾದರೊಂದು ಹೂಡಿಕೆ ಕೈ ಹಿಡಿಯುತ್ತದೆ. ಆ ಕಾರಣಕ್ಕೆ ಮೊಟ್ಟೆಗಳೆಲ್ಲ ಒಂದು ಬುಟ್ಟಿಯಲ್ಲಿ ಇಡಬಾರದು ಅನ್ನೋದು.

ಹಣಕಾಸು ನಿರ್ಧಾರಗಳ ಮೇಲೆ ಭಾವನೆಗಳ ಸವಾರಿ ಬೇಡ

ಹಣಕಾಸು ನಿರ್ಧಾರಗಳ ಮೇಲೆ ಭಾವನೆಗಳ ಸವಾರಿ ಬೇಡ

ಯಾವುದೇ ಹಣಕಾಸು ನಿರ್ಧಾರವನ್ನು ಭಾವನಾತ್ಮಕ ಕಾರಣಗಳಿಗೆ ತೆಗೆದುಕೊಳ್ಳಬೇಡಿ ಅನ್ನೋದನ್ನು ಜಗತ್ತಿನ ಎಲ್ಲ ಅತ್ಯುತ್ತಮ ಹೂಡಿಕೆದಾರರೂ ಹೇಳಿದ್ದಾರೆ. ಸ್ನೇಹಿತರು, ಸಂಬಂಧಿಕರು ಅಥವಾ ಸಹೋದ್ಯೋಗಿಗಳು ಹೂಡಿಕೆ ಮಾಡಿದ್ದು ಎಂಬ ಕಾರಣಕ್ಕೆ ಅಲ್ಲೇ ಹಣ ಹಾಕುವುದು ಹಾಗೂ ಅಂಥಲ್ಲೇ ಚಿಟ್ ಫಂಡ್ ಗಳಿಗೆ ಹಣ ಹಾಕುವುದು... ಇವೆಲ್ಲ ದುಬಾರಿಯಾಗಿ ಪರಿಣಮಿಸುತ್ತವೆ. ಹಣ ಹೂಡಿಕೆ ಮಾಡುತ್ತಿದ್ದೀರಿ ಅಂದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ. ಏನೆಲ್ಲ ಅಪಾಯಗಳು ಎದುರಾಗಬಹುದು ಎಂದು ಅಳೆದು- ತೂಗಿ ನೋಡಿ. ನಿಮ್ಮ ಹತ್ತಿರ ಹಣ ಇದೆ ಎಂಬ ಏಕೈಕ ಕಾರಣಕ್ಕೆ ದುಬಾರಿ ವಸ್ತುಗಳನ್ನು ಖರೀದಿಸಬೇಡಿ. - ಈ ಮಾತುಗಳನ್ನು ಹೇಳಿರುವವರು ಯಾರು ಗೊತ್ತಾ? ತಮ್ಮ ತಪ್ಪುಗಳಿಂದ ಪಾಠ ಕಲಿತವರು.

ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳಿ

ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳಿ

ನಿಮಗೆ ಯಾವುದೇ ಹೂಡಿಕೆಯಲ್ಲಿ ಆಗಬಹುದಾದ ಗರಿಷ್ಠ ನಷ್ಟ ಎಷ್ಟು ಎಂಬುದನ್ನು ಮೊದಲೇ ಲೆಕ್ಕ ಹಾಕಿಕೊಂಡು ಬಿಡಿ. ಒಂದು ತಪ್ಪು ನಿರ್ಧಾರದಿಂದ ನಷ್ಟ ಆಗುವ ಸಾಧ್ಯತೆ ಖಂಡಿತಾ ಇರುತ್ತದೆ. ಆದರೆ ಅದ್ಯಾವ ಪ್ರಮಾಣದ್ದು ಎಂದು ಲೆಕ್ಕ ಹಾಕಿ, ಮುಂದಕ್ಕೆ ಹೆಜ್ಜೆ ಇಡುವುದೇ ಕ್ಯಾಲ್ಕುಲೇಟೆಡ್ ರಿಸ್ಕ್. ಹಣ ಹಾಕುವಾಗ ಅದರಿಂದ ಲಾಭ ಬರಬಹುದು ಅಂದುಕೊಂಡೇ ಹೂಡಿಕೆ ಮಾಡಿರುತ್ತೇವೆ. ಅದರಿಂದ ನಷ್ಟ ಆದರೂ ಅದು ಈ ಹಂತಕ್ಕೆ ನಿಲ್ಲಬೇಕು ಅಂತಲೂ ಒಂದು ಗೆರೆ ಹಾಕಿಕೊಳ್ಳಬೇಕು. ಅದಕ್ಕಾಗಿ ಆ ಹೂಡಿಕೆ ಬಗ್ಗೆ ಸಂಪೂರ್ಣ ಮಾಹಿತಿ ಇರಬೇಕು. ಕೆಟ್ಟ ಕಂಪೆನಿಯ ಷೇರಿನಲ್ಲಿ ಅತ್ಯಂತ ಆಶಾಭಾವನೆ ಇಟ್ಟುಕೊಂಡು ಹೂಡಿಕೆ ಮಾಡುತ್ತಲೇ ಮುಂದುವರಿಯುವುದು ಅದ್ಯಾವ ಪರಿ ಅಪಾಯಕಾರಿ ಎಂಬುದನ್ನು ಈ ಹಿಂದಿನ ಅನುಭವಗಳಿಂದ ತಿಳಿದುಕೊಳ್ಳಿ. ನನ್ನ ನಿರ್ಧಾರ ತಪ್ಪಾಯಿತೇ ಎಂದು ಅದನ್ನು ಅಲ್ಲೇ ಸರಿಪಡಿಸಬೇಕು ಎಂಬ ಹಠ ಹಿಡಿಯಬೇಡಿ. ಇವೆಲ್ಲವೂ ಇತರರ ವೈಫಲ್ಯ ಕಲಿಸಿರುವ ಪಾಠಗಳು.

English summary

Investment Failure Stories Are Also Important: Here Is The 4 Reasons

Why investment failure stories are important? Here is the 4 reasons must know by every investor.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X