ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಹಲವಾರು ಧಾರ್ಮಿಕ ಪ್ರದೇಶಗಳಿಗೆ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಆರಂಭಿಸಿದೆ. ಹಾಗೆಯೇ ಪ್ರವಾಸಿತಾಣಗಳಿಗೂ ಪ್ಯಾಕೇಜ್ ನೀಡುತ್ತದೆ. ಅಂತಹುದ್ದೆ ಪ್ಯಾಕೇಜ್‌ನಲ್ಲಿ ಒಡಿಶಾಕ್ಕೆ ನಾವು ಪ್ರಯಾಣಿಸಬಹುದಾಗಿದೆ.
4 ದಿನಗಳ 3 ರಾತ್ರಿಗಳ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರವಾಸಿಗಳು ವಿಮಾನಯಾನವನ್ನು ಮಾಡಲಿದ್ದಾರೆ. ಇದು ಪ್ಯಾಕೇಜ್‌ನಲ್ಲೇ ಒಳಗೊಳ್ಳಲಿದೆ. ಅದು ಕೂಡಾ ಕಡಿಮೆ ದರದ ಪ್ಯಾಕೇಜ್ ಇದಾಗಿದೆ. ನೀವು 40-45 ಸಾವಿರ ರೂಪಾಯಿ ಇದ್ದರೆ ಪ್ರವಾಸ ಹೋಗಬಹುದಾಗಿದೆ. ಈ ಪ್ಯಾಕೇಜ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ...

ಪುರಿ ಪ್ಯಾಕೇಜ್‌ನ ಮಾಹಿತಿ
ಒಡಿಶಾದ ಕೆಲವು ಪ್ರದೇಶಗಳಿಗೆ ಪ್ರವಾಸ ಹೋಗಲು ಅವಕಾಶವನ್ನು ನೀಡುವ ಈ ಪ್ಯಾಕೇಜ್‌ನ ಡಿವೈನ್ ಪುರಿ ಟೂರ್ ಪ್ಯಾಕೇಜ್ ಎಂದಾಗಿದೆ. ಈ ಪ್ರವಾಸದಲ್ಲಿ ನೀವು ಮುಖ್ಯವಾಗಿ, ಭುವನೇಶ್ವರ, ಚಿಲ್ಕಾ, ಕೋನಾರ್ಕ್, ಪುರಿಗೆ ಭೇಟಿ ನೀಡಬಹುದಾಗಿದೆ. ನವೆಂಬರ್ 23, ಡಿಸೆಂಬರ್ 14, ಜನವರಿ 25, ಫೆಬ್ರವರಿ 17, ಮಾರ್ಚ್ 15 ರಂದು ಪ್ರವಾಸ ಆರಂಭವಾಗಲಿದೆ. ಮುಂಜಾನೆಯ ಉಪಾಹಾರ ಹಾಗೂ ರಾತ್ರಿಯ ಊಟ ಮಾತ್ರ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ. ಮಧ್ಯಾಹ್ನದ ಊಟದ ವ್ಯವಸ್ಥೆ ನೀವಾಗಿಯೇ ಮಾಡಿಕೊಳ್ಳಬೇಕಾಗುತ್ತದೆ.
ಪ್ಯಾಕೇಜ್ ದರ ಎಷ್ಟಿದೆ ನೋಡಿಕೊಳ್ಳಿ
ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಒಬ್ಬರೆ ಪ್ರಯಾಣ ಮಾಡುವುದಾದರೆ 40,900 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಇಬ್ಬರು ಜೊತೆಯಾಗಿ ಈ ಪ್ರವಾಸ ಪ್ಯಾಕೇಜ್ ಖರೀದಿ ಮಾಡುವುದಾದರೆ ಪ್ರತಿ ವ್ಯಕ್ತಿಗೆ 32,500 ರೂಪಾಯಿ ಅಂಡಮಾನ್ ಪ್ರವಾಸ ಪ್ಯಾಕೇಜ್ ದರವನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಮೂವರು ಪ್ರವಾಸ ಮಾಡುವುದಾದರೆ ಪ್ರತಿ ವ್ಯಕ್ತಿಗೆ 31,000 ರೂಪಾಯಿ ಪ್ಯಾಕೇಜ್ ದರವಾಗಿದೆ.
ನಿಮ್ಮ ಜೊತೆ 5 ರಿಂದ 11 ವರ್ಷದ ಮಗು ಇದ್ದರೆ ಬೆಡ್ ಸಹಿತ ಸಂಪೂರ್ಣ ಪ್ಯಾಕೇಜ್‌ಗೆ 28,000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ನಿಮ್ಮ ಜೊತೆ 5ರಿಂದ 11 ವರ್ಷದ ಮಗು ಇದ್ದರೆ ಬೆಡ್ ಇಲ್ಲದೆ ಸಂಪೂರ್ಣ ಪ್ಯಾಕೇಜ್‌ಗೆ 23,600 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. 2 ವರ್ಷದಿಂದ 4 ವರ್ಷದ ಮಗುವಿಗೆ ಬೆಡ್ ಇಲ್ಲದೆ 20,300 ರೂಪಾಯಿ ಪ್ಯಾಕೇಜ್ ದರವಾಗಿದೆ.
ದಿನ 1: ದೆಹಲಿ - ಭುವನೇಶ್ವರ - ಪುರಿ
ದೆಹಲಿಯಿಂದ 09:55 ಗಂಟೆಗೆ ನಿರ್ಗಮಿಸುತ್ತದೆ. 12:00 ಗಂಟೆಗೆ ಭುವನೇಶ್ವರಕ್ಕೆ ಆಗಮನ, ಅಲ್ಲಿಂದ ಪುರಿಗೆ ಪ್ರಯಾಣ. ಹೋಟೆಲ್‌ನಲ್ಲಿ ಚೆಕ್ ಇನ್. ಜಗ್ಗನಾಥ ದೇವಾಲಯಕ್ಕೆ ಸಂಜೆ ಭೇಟಿ. ಹೋಟೆಲ್‌ಗೆ ಹಿಂತಿರುಗಿ, ರಾತ್ರಿ ಭೋಜನ ಮಾಡಿ, ರಾತ್ರಿ ಪುರಿಯಲ್ಲೇ ತಂಗುವುದು.
ದಿನ 2: ಪುರಿ - ಚಿಲ್ಕಾ - ಪುರಿ
ಉಪಹಾರದ ನಂತರ, ಸತ್ಪಾದ (ಚಿಲ್ಕಾ) ಗೆ ಪ್ರವಾಸ. ಚಿಲ್ಕಾ ಸರೋವರದಲ್ಲಿ ದೋಣಿ ವಿಹಾರ (ಸ್ವಂತ ಖರ್ಚಿನಲ್ಲಿ). ಐಲ್ಯಾಂಡ್ಸ್ ಮತ್ತು ಐರಾವಡ್ಡಿ ಡಾಲ್ಫಿನ್ ಸೈಟ್‌ಗೆ ಭೇಟಿ. ಪುರಿಗೆ ಹಿಂತಿರುಗುವ ಮಾರ್ಗ ಮಧ್ಯದಲ್ಲಿ ಅಲ್ಲಾರನಾಥ ದೇವಾಲಯದ ದರ್ಶನ. ಸಂಜೆ ಮತ್ತೆ ಹೋಟೆಲ್‌ಗೆ ಭೇಟಿ ನೀಡಿ, ಭೋಜನ ಮಾಡಿ, ರಾತ್ರಿ ಪುರಿಯಲ್ಲೇ ತಂಗುವುದು.
ದಿನ 3: ಪುರಿ - ಕೋನಾರ್ಕ್ - ಪುರಿ
ಉಪಹಾರ ಮಾಡಿ, ಕೋನಾರ್ಕ್‌ಗೆ ಪ್ರಯಾಣ ಆರಂಭಿಸಿ. ಬಳಿಕ ಕೋನಾರ್ಕ್ ದೇವಾಲಯ, ಚಂದ್ರಭಾಗ ಬೀಚ್, ಗೋಲ್ಡನ್ ಸೀ ಬೀಚ್ ಮತ್ತು ಬೀಚ್ ಮಾರ್ಕೇಟ್‌ಗೆ ಭೇಟಿ ನೀಡಿ. ಪುರಿಗೆ ಹಿಂದಿರುಗಿ, ಭೋಜನ ಮಾಡಿ, ರಾತ್ರಿ ಪುರಿಯಲ್ಲೇ ತಂಗುವುದು.
ದಿನ 4: ಪುರಿ - ಭುವನೇಶ್ವರ
ಉಪಹಾರದ ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ, ಭುವನೇಶ್ವರಕ್ಕೆ ಪ್ರಯಾಣ ಮಾಡುವುದು. ಲಿಂಗರಾಜ ದೇವಸ್ಥಾನ, ಉದಯಗಿರಿ ಮತ್ತು ಖಂಡಗಿರಿ ಮತ್ತು ಮುಕ್ತೇಶ್ವರ ದೇವಸ್ಥಾನವನ್ನು ಭೇಟಿ ಮಾಡುವುದು. 18:40 (ಸಂಜೆ 6:40) ಗಂಟೆಗೆ ಭುವನೇಶ್ವರ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭ, ದೆಹಲಿ ವಿಮಾನ ನಿಲ್ದಾಣ 21:10 ಗಂಟೆಗೆ (ರಾತ್ರಿ 9:10) ಗಂಟೆಗೆ ತಲುಪುವುದು.


Click it and Unblock the Notifications