ಮುಂಬೈ ಮೂಲದ ಕ್ವಿಕ್ ಕಾಮರ್ಸ್ ಕಂಪನಿ ಜೆಪ್ಟೊಗೆ ಹೊಸ ಹೂಡಿಕೆ ಹರಿದುಬಂದಿದ್ದು 1.4 ಬಿಲಿಯನ್ ಡಾಲರ್ (11,573 ಕೋಟಿ ರೂಪಾಯಿ) ಮೌಲ್ಯದಲ್ಲಿ 200 ಮಿಲಿಯನ್ ಡಾಲರ್ (1653 ಕೋಟಿ ರೂ.) ಸಂಗ್ರಹಿಸಿದೆ. ಜೆಪ್ಟೊ (Zepto) ಸ್ಟಾರ್ಟ್‌ಅಪ್ ಮೇ 2022 ರಲ್ಲಿ 900 ಮಿಲಿಯನ್ ಡಾಲರ್‌ಗಳ ಮೌಲ್ಯದಲ್ಲಿ 200 ಮಿಲಿಯನ್ ಡಾಲರ್‌ಗಳನ್ನು ಸಂಗ್ರಹಿಸಿತ್ತು.
ಆದಿತ್ ಪಲಿಚಾ ಮತ್ತು ಕೈವಲ್ಯ ವೋಹ್ರಾ ಅವರು 2021 ರಲ್ಲಿ ಜೆಪ್ಟೊ ಕಂಪನಿಯನ್ನು ಸ್ಥಾಪಿಸಿದ್ದು, ಝೆಪ್ಟೊ ಈಗ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಗ್ರೋಸರಿ ಕಂಪೆನಿಯಾಗಿದೆ. ಸಂಸ್ಥೆ ಹುಟ್ಟಿಕೊಂಡಿರುವ ಕೇವಲ ಎರಡು ವರ್ಷಗಳಲ್ಲಿ ಕಂಪನಿಯ ಮೌಲ್ಯ 11,573 ಕೋಟಿ ರೂಪಾಯಿಗೆ ತಲುಪಿದೆ. ಈಗ ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳಲ್ಲಿ ತನ್ನ ಅಸ್ತಿತ್ವವನ್ನು ಜೆಪ್ಟೊ ವಿಸ್ತರಿಸಲು ಯೋಜಿಸುತ್ತಿದೆ.

ಜೆಪ್ಟೊಗೆ ಹೂಡಿಕೆ ಹರಿದು ಬಂದ ಕಾರಣ ಕಂಪನಿಯ ಮೌಲ್ಯ ಹೆಚ್ಚಾಗಿದ್ದು ಹೀಗಾಗಿ 2023 ರ ಮೊದಲ ಯುನಿಕಾರ್ನ್ ಎಂಬ ಹೆಗ್ಗಳಿಕೆಗೆ ಜೆಪ್ಟೊ ಪಾತ್ರವಾಗಿದೆ. ಕಂಪನಿಯು ಮುಂದಿನ 24 ತಿಂಗಳುಗಳಲ್ಲಿ ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸುವ ಇರಾದೆಯನ್ನು ಹೊಂದಿದೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಡ್ರಾಪೌಟ್‌ಗಳಾದ ಆದಿತ್ ಪಲಿಚಾ ಮತ್ತು ಕೈವಲ್ಯ ವೋಹ್ರಾ ಅವರು ಈ ಸ್ಟಾರ್ಟ್‌ಅಪ್ ಸ್ಥಾಪಕರಾಗಿದ್ದಾರೆ.
ಕೈವಲ್ಯ ವೋಹ್ರಾ ಯಾರು?
ಕೈವಲ್ಯ ವೋಹ್ರಾ ಅವರು ಭಾರತೀಯ ಗ್ರೋಸರಿ ಕಂಪನಿ ಜೆಪ್ಟೊದ ಸಹ- ಸಂಸ್ಥಾಪಕರು. ಅವರು ಭಾರತದ ಅತ್ಯಂತ ಕಿರಿಯ ಮಿಲಿಯನೇರ್ ಆಗಿದ್ದು ಇದೀಗ ಯುನಿಕಾರ್ನ್‌ನ ಅತ್ಯಂತ ಕಿರಿಯ ಸಂಸ್ಥಾಪಕರೆಂಬ ಎಂಬ ಹೆಗ್ಗಳಿಕೆಯೂ ಅವರಿಗೆ ಸಂದಿದೆ. ಕೈವಲ್ಯ ಅವರು ಜೆಪ್ಟೊ ಸಿಟಿಒ ಆಗಿದ್ದರೆ ಆದಿತ್ ಪಲಿಚಾ ಸಿಇಒ ಆಗಿದ್ದಾರೆ. ಇಬ್ಬರೂ ಜೊತೆ ಸೇರಿ 2021 ರಲ್ಲಿ ಮುಂಬೈನಲ್ಲಿ ಜೆಪ್ಟೊ ಅನ್ನು ಸ್ಥಾಪಿಸಿದ್ದಾರೆ.
ಬೆಂಗಳೂರಿನಲ್ಲಿ ಹುಟ್ಟಿ ದುಬೈನಲ್ಲಿ ಬೆಳೆದಿರುವ ಕೈವಲ್ಯ ವೋಹ್ರಾ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರು ನಗರದಲ್ಲೇ ಮುಗಿಸಿದ್ದಾರೆ. ಕೈವಲ್ಯ ವೋಹ್ರಾ ಅವರು 2003ರ ಮಾರ್ಚ್ 15ರಂದು ಕರ್ನಾಟಕದಲ್ಲಿ ಜನಿಸಿದ್ದಾರೆ. ಕೈವಲ್ಯ ವೋಹ್ರಾ ಅವರು ಹಿಂದಿ, ಇಂಗ್ಲೀಷ್ ಹಾಗೂ ಫ್ರೆಂಚ್ ಭಾಷೆಯನ್ನು ಬಲ್ಲವರಾಗಿದ್ದಾರೆ.
ಆದಿತ್ ಪಲಿಚಾ ಮತ್ತು ಕೈವಲ್ಯ ವೋಹ್ರಾ ಇಬ್ಬರೂ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದರು. ಓದು ಅರ್ಧಕ್ಕೆ ನಿಲ್ಲಿಸಿದ ಇಬ್ಬರೂ ಸ್ಟಾರ್ಟಪ್ ಆರಂಭಿಸಿದರು. ಅವರು ಕಿರಾನಕಾರ್ಟ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು.
ಇಲ್ಲಿ ಅವರು ಆರ್ಡನ್ ನೀಡಿದ 45 ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ತಲುಪಿಸುವುದಾಗಿ ಭರವಸೆ ನೀಡಿದರು. ಈ ಸ್ಟಾರ್ಟ್‌ಅಪ್ ಮುಚ್ಚಿದ ಬಳಿಕ ಜೆಪ್ಟೊ ಅನ್ನು ಪ್ರಾರಂಭಿಸಿದರು. 2022 ರಲ್ಲಿ, ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರ ಪ್ರಕಾರ, ವೋಹ್ರಾ ಅವರ ನಿವ್ವಳ ಮೌಲ್ಯವು 1000 ಕೋಟಿ ರೂಪಾಯಿಗಳಾಗಿದ್ದರೆ, ಪಾಲಿಚಾ ಅವರ ನಿವ್ವಳ ಮೌಲ್ಯವು 1200 ಕೋಟಿ ರೂಪಾಯಿ ಆಗಿದೆ.


Click it and Unblock the Notifications