ಬೆಂಗಳೂರಿನಲ್ಲಿ ಮಳೆ ಬಂದ್ರೆ ಆಟೋ ಪ್ರಯಾಣ ಬಲು ದುಬಾರಿಯಾಗುತ್ತದೆ.. ಪೀಕ್ ಟೈಮ್ ಅಲ್ಲಿ ಅಂತೂ ಪಾಕೆಟ್ ಖಾಲಿ ಆಗಿಬಿಡುತ್ತೆ. ಸದ್ಯ ಇದೆಲ್ಲ ಸಮಸ್ಯೆಗೆ ಖುದ್ದು ಸಾರಿಗೆ ಇಲಾಖೆಯೇ ಇತಿಶ್ರೀ ಹಾಡಲು ಮುಂದಾಗಿದೆ. ಸಾರಿಗೆ ಇಲಾಖೆಯ ಮಾಸ್ಟರ್ ಪ್ಲಾನ್ ಇಂದ ಸಿಟಿ ಜನ ದುಬಾರಿ ರೇಟ್ ಇಂದ ಗ್ರೇಟ್ ಎಸ್ಕೇಪ್ ಆಗಬಹುದು. ಅಷ್ಟಕ್ಕೂ ಇಲಾಖೆಯ ಪ್ಲಾನ್ ಏನಪ್ಪಾ ಅಂದ್ರೆ ನೂತನ ಆಪ್..
ಜನರ ಹಾಗೂ ಆಟೋ ಸರತಿಗಳ ಸಮಸ್ಯೆ ಅರಿತು ಸಾರಿಗೆ ಇಲಾಖೆಯಿಂದ ಸೊಲ್ಯುಷನ್ ಕಂಡು ಹಿಡಿಯಲಾಗಿದೆ. ಓಲಾ, ಉಬರ್ ನಂತಹ ಅಗ್ರಿಗೇಟರ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಸರ್ಕಾರ ಮುಂದಾಗಿದೆ. ಸಾರಿಗೆ ಇಲಾಖೆಯಿಂದಲೇ ಸರ್ಕಾರದ ಆ್ಯಪ್ ತಯಾರಾಗಲಿದೆ. ಅಗ್ರಿಗೇಟರ್ ಕಂಪನಿಗಳಂತೆ ಕಾರ್ಯ ನಿರ್ವಹಿಸಲಿದೆ ಈ ನೂತನ ನಮ್ಮ ಆ್ಯಪ್.

ಇನ್ನೆರಡು ತಿಂಗಳಲ್ಲಿ ನಮ್ಮ ಆ್ಯಪ್ ಲಾಂಚ್ ಗೆ ಸಾರಿಗೆ ಇಲಾಖೆಯಿಂದ ಚಿಂತನೆ ಕೂಡ ನಡೆಸಲಾಗಿದ್ದು ಈಗಾಗಲೇ ಸಾರಿಗೆ ಇಲಾಖೆ ಆಯುಕ್ತರು ಹಾಗೂ ಅಧಿಕಾರಿಗಳ ಜೊತೆ ಸಾರಿಗೆ ಸಚಿವರು ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಆಟೋ ಹಾಗೂ ಕ್ಯಾಬ್ ಚಾಲಕರ ಬೇಡಿಕೆ ಮೇರೆಗೆ ಆ್ಯಪ್ ರೆಡಿ ಮಾಡಲು ಈಗ ಇಲಾಖೆ ನಿರ್ಧಾರ ಮಾಡಿದೆ. ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.
ಈ ಆ್ಯಪ್ ವಿಶೇಷತೆ ಏನು?
ಈ ಆ್ಯಪ್ ವಿಶೇಷತೆ ಏನೆಂದರೆ ಮಳೆ ಬಂದರೂ ಸಂಜೆ ಟೈಮಲ್ಲೂ ಎಂತಹ ಸಮಯದಲ್ಲಿ ಕೂಡ ರೇಟ್ ಜಾಸ್ತಿ ಮಾಡುವ ಪ್ರಮೇಯ ಇಲ್ಲ, ನೋ ಲಾಸ್ ನೋ ಪ್ರಾಫಿಟ್ ಪರಿಕಲ್ಪನೆಯಲ್ಲಿ ಮೂಡಿ ಬರುವ ಸರ್ಕಾರಿ ಆ್ಯಪ್ ಇದು. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸಚಿವ ರಾಮಲಿಂಗರೆಡ್ಡಿ ನೀಡಿದ್ದು, ಆ್ಯಪ್ ಗೆ ಟೆಕ್ನಾಲಜಿ ರೆಡಿಯಾಗುತ್ತಿದೆ. ಈಗ ಓಲಾ, ಉಬರ್ ಬಂದ ನಂತರ ಒಂದು ಆ್ಯಪ್ ಮಾಡಿಕೊಂಡು ಎಲ್ಲೆಲ್ಲಿ ಕರೆ ಬರುತ್ತೆ ಅಲ್ಲಿಗೆ ಹೋಗುತ್ತಿದ್ದಾರೆ. ಬಿಎಂಟಿಸಿ ಕೆಎಸ್ಆರ್ಟಿಸಿಯಲ್ಲೂ ಆ್ಯಪ್ ಇದೆ. ಯಾವ ಬಸ್ಸು ಯಾವ ಸಮಯಕ್ಕೆ ಬರುತ್ತೆ ಎನ್ನುವ ಮಾಹಿತಿ ಆ ಆ್ಯಪ್ ನಲ್ಲಿ ಗೊತ್ತಾಗುತ್ತೆ. 4-5 ವರ್ಷದಿಂದ ಆಟೋದವರು ಸರ್ಕಾರದದಿಂದಲೇ ಒಂದು ಆ್ಯಪ್ ಮಾಡಿ ಅಂತ ಕೇಳುತ್ತಾ ಇದ್ದರು.
ಮಿಡಲ್ ಮ್ಯಾನ್ ಗಳು ಕಮಿಷನ್ ಹೊಡೆಯಬಾರದು
ಇನ್ನು ಸಚಿವರು ಆಟೋ ಸಂಘಟನೆ ಜೊತೆ ಸಭೆ ಕರೆದಾಗಲೂ ಸರ್ಕಾರವೇ ಒಂದು ಆ್ಯಪ್ ಮಾಡಿ, ನಮಗೆ ತೊಂದರೆಯಾಗುತ್ತಿದೆ ಎಂದು ಆಟೋ ಸಂಘಟನೆಯವರು ಕೂಡ ಮನವಿ ಮಾಡಿಕೊಂಡಿದ್ದರು. "ಮಿಡಲ್ ಮ್ಯಾನ್ ಗಳು ಕಮಿಷನ್ ಹೊಡೆಯಬಾರದು ಅಂತ ಅಧಿಕಾರಿಗಳ ಬಳಿ ಚರ್ಚೆ ಮಾಡಿ ಆ್ಯಪ್ ಮಾಡಲು ಒಪ್ಪಿಗೆ ಕೊಟ್ಟಿದ್ದೇನೆ" ಅಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸರ್ಕಾರದ ಆ್ಯಪ್ ನಲ್ಲಿ ಆಟೋ ಟ್ಯಾಕ್ಸಿ ಕೂಡ
"ಈ ಸರ್ಕಾರದ ಆ್ಯಪ್ ನಲ್ಲಿ ಆಟೋ ಟ್ಯಾಕ್ಸಿ ಕೂಡ ಸೇರಿರುತ್ತೆ. ಅಗ್ರಿಗೇಟರ್ ಕಂಪನಿಗಳು ಹೆಚ್ಚು ಹಣ ಪಡೆಯುತ್ತಾರೆ, ಆದರೆ ಸರ್ಕಾರದ ಆ್ಯಪ್ ನಲ್ಲಿ ಆ ರೀತಿ ತೆಗೆದುಕೊಳ್ಳಲ್ಲ ನೋ ಲಾಸ್ ನೋ ಪ್ರಾಫಿಟ್ ರೀತಿಯಲ್ಲಿ ಆ್ಯಪ್ ಮೂಡಿ ಬರುವ ವಿಶ್ವಾಸವಿದೆ" ಎಂದು ಸಚಿವರು ಹೇಳಿದ್ದಾರೆ.
ಒಟ್ಟಿನಲ್ಲಿ ಸರ್ಕಾರದ ವತಿಯಿಂದ ಈ ಆ್ಯಪ್ ಲಾಂಚ್ ಆದರೆ ಬಹುತೇಕ ಪ್ರಾಮಾಣಿಕ ಆಟೋ ಡ್ರೈವರ್ಸ್ ಗಳಿಗೂ ಹಾಗೇ ಪ್ರಯಾಣಿಕರಿಗೂ ಕೂಡ ಅನುಕೂಲಕರ ಆಗಲಿದೆ. ಒನ್ ಟು ಡಬಲ್ ರೇಟ್ ತೆಗೆದು ಕೊಳ್ಳುವ ಕೆಲ ಅಗ್ರಿಗೆಟರ್ ಕಂಪನಿಗಳಿಗೆ ಸೆಡ್ಡು ಹೊಡೆದ ಹಾಗಾಗುತ್ತೆ ಎನ್ನುವುದು ಬೆಂಗಳೂರಿಗರ ಅಭಿಪ್ರಾಯ.


Click it and Unblock the Notifications