ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳಿದೆ. ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ವಿಶೇಷವಾಗಿ ಬೇರೆಯೇ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಅದರಲ್ಲಿ ಒಂದು ಮಡಿಲು ಕಿಟ್ ಯೋಜನೆಯಾಗಿದೆ. ಈ ಯೋಜನೆಯು 2007 ರಲ್ಲಿ ಪ್ರಾರಂಭವಾಗಿದೆ. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ನಿರ್ವಹಣೆಯನ್ನು ಮಾಡುತ್ತದೆ. ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವುದನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಈ ಮಡಿಲು ಕಿಟ್ ಯೋಜನೆ ಅಡಿಯಲ್ಲಿ ಕರ್ನಾಟಕ ಸರ್ಕಾರವು ಆಸ್ಪತ್ರೆಯಲ್ಲಿ ಮಗು ಜನಿಸಿದ ಬಳಿಕ ತಾಯಿಗೆ ವೆಲ್‌ನೆಸ್ ಕಿಟ್ ಅನ್ನು ನೀಡುತ್ತದೆ. ಹೆರಿಗೆ ನಂತರದ ಅವಧಿಯಲ್ಲಿ ಮಗು ಹಾಗೂ ತಾಯಿಗೆ ಅಗತ್ಯವಾದ ವಸ್ತುಗಳು ಈ ಕಿಟ್‌ನಲ್ಲಿ ಒಳಗೊಂಡಿರುತ್ತದೆ. ಈ ಮಡಿಲು ಕಿಟ್‌ನಲ್ಲಿ ಒಟ್ಟಾಗಿ 19 ದಿನ ಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ. ಮಡಿಲು ಕಿಟ್ ಸುಮಾರು 1500 ರೂಪಾಯಿ ಮೌಲ್ಯದ್ದಾಗಿರುತ್ತದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

ಮಡಿಲು ಕಿಟ್ ಬಗ್ಗೆ ಮಾಹಿತಿ
ಮಡಿಲು ಕಿಟ್ ಯೋಜನೆಯು ಪ್ರಮುಖವಾಗಿ ಬಿಪಿಎಲ್ ಕಾರ್ಡ್‌ದಾರರಿಗೆ, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದವರಿಗೆ ಪ್ರಯೋಜವನ್ನು ಕಲ್ಪಿಸುವ ಯೋಜನೆಯಾಗಿದೆ. ಪಿಎಚ್‌ಸಿ, ಸಿಎಚ್‌ಸಿ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಡೆಲಿವರಿಯಾದರೆ ಮಾತ್ರ ಈ ಯೋಜನೆಯ ಲಾಭ ಲಭ್ಯವಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಡೆಲಿವರಿಯಾದರೆ, ಮಡಿಲು ಕಿಟ್ ಬದಲಾಗಿ 1000 ರೂಪಾಯಿ ಲಭ್ಯವಾಗುತ್ತದೆ. ಇದು ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯ ಒಂದು ಭಾಗವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಡೆಲಿವರಿಯಾದ ಬಳಿಕ ಯಾವುದೇ ಅರ್ಜಿ ಇಲ್ಲದೆಯೇ ಕಿಟ್ ಲಭ್ಯವಾಗುತ್ತದೆ.
ಅರ್ಹತೆ ಏನಿದೆ ನೋಡಿ
* ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು
* ಗರ್ಭಿಣಿ ಮಹಿಳೆ
* ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆ
* ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ಮಹಿಳೆ
* ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಹೆತ್ತ ಮಹಿಳೆ
ಯೋಜನೆಯ ಪ್ರಯೋಜನ
* ಮಡಿಲು ಕಿಟ್ ಫಲಾನಭವಿಗಳಿಗೆ ಒಟ್ಟು 19 ದಿನಬಳಕೆಯ ವಸ್ತು ಲಭ್ಯವಾಗುತ್ತದೆ.
* ಪ್ರತಿ ಕಿಟ್‌ನ ದರವು 1500 ರೂಪಾಯಿ ಆಗಿರುತ್ತದೆ.
* ಖಾಸಗಿ ಆಸ್ಪತ್ರೆಯಲ್ಲಿ ಡೆಲಿವರಿಯಾದರೆ 1000 ರೂಪಾಯಿ ಲಭ್ಯವಾಗುತ್ತದೆ.
ಮಡಿಲು ಕಿಟ್‌ನಲ್ಲಿ ಲಭ್ಯವಾಗುವ 19 ವಸ್ತುಗಳು
1. ಸೊಳ್ಳೆ ಪರದೆ 1
2. ಹತ್ತಿಯ ಕಾರ್ಪೆಟ್ (ಕಾಟನ್) 1
3. ತಾಯಿಗೆ ಕಾಟನ್ ಹೊದಿಕೆ 1
4. ಬೆಡ್ ಶೀಟ್ 1
5. ತಾಯಿಗೆ ಸ್ನಾನದ ಸೋಪು 2
6. ಬಟ್ಟೆ ಒಗೆಯುವ ಸೋಪು 4
7. ಹೊಟ್ಟೆಗೆ ಕಟ್ಟಲು ಬಟ್ಟೆ 1
8. ಸ್ಯಾನಟರಿ ಪ್ಯಾಡ್ 4
9. ತೆಂಗಿನ ಎಣ್ಣೆ ತಲಾ 1
10. ತಾಯಿಗೆ ಟವೆಲ್ 2
11. ಟೂತ್ ಪೇಸ್ಟ್ ಮತ್ತು ಬ್ರಷ್ ತಲಾ 1
12. ಮಗುವಿಗೆ ಬೆಡ್ ಶೀಟ್ 2
13. ಮಗುವಿಗೆ ಹೊದಿಕೆ 1
14. ಮಗುವಿಗೆ ಸೋಪ್ 2
15. ಮಗುವಿಗೆ ರಬ್ಬರ್ ಶೀಟ್ 1
16. ಮಗುವಿಗೆ ಡೈಪರ್ 6
17. ಮಗುವಿಗೆ ಬಟ್ಟೆ 3
18. ಮಗುವಿಗೆ ವುಲಾನ್ ಸ್ವೆಟರ್, ಕ್ಯಾಪ್, ಸಾಕ್ಟ್ ತಲಾ 1
19. ಎಲ್ಲ ಐಟಮ್‌ಗಳನ್ನು ಇಡಲು ಬ್ಯಾಗ್ 1
ಬೇಕಾದ ದಾಖಲೆಗಳು ಯಾವುದು?
* ಕರ್ನಾಟಕದ ನಿವಾಸಿ ಎಂದು ಖಚಿತ ಪಡಿಸುವು ಪುರಾವೆ (ಆಧಾರ್, ವೋಟರ್ ಐಡಿ)
* ಬಿಪಿಎಲ್ ರೇಷನ್ ಕಾರ್ಡ್
* ಜನನ ಪ್ರಮಾಣಪತ್ರ
* ಆಧಾರ್ ಕಾರ್ಡ್
* ಎಎನ್‌ಸಿ ರಿಜಿಸ್ಟ್ರೇಷನ್ ನಂಬರ್ (ತಾಯಿ ಭಾಗ್ಯದಲ್ಲಿ ಆಶಾ ಕಾರ್ಯಕರ್ತರು ನೀಡುವ ಕಾರ್ಡ್ ಸಂಖ್ಯೆ)
* ಮೊಬೈಲ್ ನಂಬರ್
ಅರ್ಜಿ ಸಲ್ಲಿಸುವುದು ಹೇಗೆ?
ಗರ್ಭಿಣಿಯರು ಈ ಯೋಜನೆಗಾಗಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದಾಗ ನಿಮಗೆ ಈ ಕಿಟ್ ಅನ್ನು ನೀಡಲಾಗುತ್ತದೆ. ಫಲಾನುಭವಿಗಳು ತಮ್ಮ ಯೋಜನೆಯ ಲಾಭ ಪಡೆಯಲು ಆಶಾ ಕಾರ್ಯಕರ್ತರನ್ನು ಸಂಪರ್ಕ ಮಾಡಿದರೆ ಸಾಕಾಗುತ್ತದೆ.


Click it and Unblock the Notifications