ನಮ್ಮಲ್ಲಿ ಹೆಚ್ಚಿನವರಿಗೆ ಉತ್ತಮ ಸಂಬಳದ ಪ್ಯಾಕೇಜ್‌ನ ಉದ್ಯೋಗವನ್ನು ಬಿಟ್ಟು ಹೊಸದಾಗಿ ಏನನ್ನಾದರೂ ಪ್ರಾರಂಭಿಸುವುದು ಬಹಳ ಕಠಿಣ ಮತ್ತು ದೊಡ್ಡ ಸವಾಲಾಗಿರುತ್ತದೆ. ಏಕೆಂದರೆ ಒಂದು ಹಂತದಲ್ಲಿ ವ್ಯವಸ್ಥಿತವಾಗಿ ಸಾಗುವ ಜೀವನಕ್ಕೆ ಮತ್ತೊಂದು ರಿಸ್ಕ್ ಅನ್ನು ಉಂಟು ಮಾಡುತ್ತದೆ. ಆದರೆ ಕೆಲವೊಂದು ವ್ಯಕ್ತಿಗಳು ಔದ್ಯೋಗಿಕ ರಂಗದಲ್ಲಿ ಈ ರೀತಿಯ ಸವಾಲುಗಳನ್ನು ಎದುರಿಸುವುದಕ್ಕೆ ಹಿಂದೇಟು ಹಾಕುವುದಿಲ್ಲ. ಜತೆಗೆ ತಮ್ಮ ಜೀವನದಲ್ಲಿ ಏನಾದರೂ ಹೊಸತನ್ನು ಸೃಷ್ಟಿ ಮಾಡುತ್ತಾರೆ. ಅಂಥಹ ವ್ಯಕ್ತಿಗಳ ಸಾಲಿನಲ್ಲಿ ಯುವ ಉದ್ಯಮಿ ರೋಹಿತ್ ಮಾಂಗ್ಲಿಕ್ ಕೂಡ ಒಬ್ಬರು.
ರೋಹಿತ್ ಮಾಂಗ್ಲಿಕ್ ಕೈಯಲ್ಲಿದ್ದ ಉದ್ಯೋಗವನ್ನು ತೊರೆದು ಸ್ವಂತ ಸ್ಟಾರ್ಟಪ್ ಪ್ರಾರಂಭಿಸುವಾಗ ಅವರಿಗೆ ಇದ್ದ ವಾರ್ಷಿಕ ಪ್ಯಾಕೇಜ್ 42 ಲಕ್ಷ ರೂಪಾಯಿ ಆಗಿತ್ತು. ಈಗ ಮಾಂಗ್ಲಿಕ್ ಅವರ ಕಂಪೆನಿಯ ವಾರ್ಷಿಕ ವಹಿವಾಟು 10 ಕೋಟಿ ರೂಪಾಯಿಗೆ ಬೆಳೆದಿದೆ. ರೋಹಿತ್ ಮಾಂಗ್ಲಿಕ್ ತಮ್ಮ ಲಾಭದಾಯಕ ಕಾರ್ಪೋರೇಟ್ ಉದ್ಯೋಗವನ್ನು ತೊರೆದು 2020ರಲ್ಲಿ ಎಜ್ಯುಗೊರಿಲ್ಲಾ ಎಂಬ ಸ್ಟಾರ್ಟಪ್ ಅನ್ನು ಪ್ರಾರಂಭಿಸಿದರು. ಮೂರು ವರ್ಷಗಳಲ್ಲಿ ಈ ಸ್ಟಾರ್ಟಪ್ ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಎಜ್ಯುಗೊರಿಲ್ಲಾ ಕಂಪೆನಿಯಲ್ಲಿ 300 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.

32 ವರ್ಷದ ರೋಹಿತ್ ಮಾಂಗ್ಲಿಕ್ ಎಜ್ಯುಗೊರಿಲ್ಲಾ ಕಂಪೆನಿಯ ಸ್ಥಾಪಕರು ಹಾಗೂ ಸಿಇಒ ಆಗಿದ್ದಾರೆ. ಅವರು 2012ರಲ್ಲಿ ಎನ್‌ಐಟಿಯಿಂದ ಬಿಟೆಕ್ ಪದವಿಯನ್ನು ಪಡೆದುಕೊಂಡಿದ್ದಾರೆ. ಎಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ ರೋಹಿತ್ ಮಾಂಗ್ಲಿಕ್ ಅವರು ದೊಡ್ಡ ದೊಡ್ಡ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ. ರೋಹಿತ್ ಅವರು ಒರಾಕೆಲ್, ಮೋರ್ಗಾನ್ ಸ್ಟಾನ್ಲಿ, ಡಿಇ ಶಾ ಸೇರಿದಂತೆ ಸುಮಾರು 500 ಕಂಪೆನಿಗಳನ್ನು ಮೀರಿಸಿದ್ದಾರೆ. ದುಬೈನಲ್ಲಿ ನಡೆದ ವಿಶ್ವ ಶಿಕ್ಣ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅತ್ಯಂತ ಕಿರಿಯ ಶಿಕ್ಷಣ ತಜ್ಞ ಎಂಬ ಹೆಗ್ಗಳಿಕೆಯನ್ನು ಕೂಡ ಅವರು ಪಡೆದುಕೊಂಡಿದ್ದಾರೆ.
ಅವರು ಆ ಪ್ರತಿಷ್ಟಿತ ಸಮ್ಮೇಳನದಲ್ಲಿ ಹಲವಾರು ವಿಷಯಗಳ ಕುರಿತು ಮಾತನಾಡಿದ್ದಾರೆ. ಅವರ ಸಂದರ್ಶನವು ಸುಮಾರು 70ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮದಲ್ಲಿ ಪ್ರಸಾರಗೊಂಡಿವೆ. ರೋಹಿತ್ ಅವರು ತಮ್ಮ ನೂತನ ಎಜ್ಯುಗೊರಿಲ್ಲಾದೊಂದಿಗೆ ಶೈಕ್ಷಣಿಕ ಕ್ರಾಂತಿಯನ್ನೇ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ 2017ರಲ್ಲಿ ಉದ್ಯೋಗವನ್ನು ತೊರೆದು ಫರೂಕಾಬಾದ್‌ಗೆ ವಾಪಾಸ್ಸಾಗಿದ್ದರು.
ರೋಹಿತ್ ಮಾಂಗ್ಲಿಕ್ ಅವರು ಉದ್ಯೋಗವನ್ನು ತೊರೆದು ಕೇವಲ ಏಳು ಮಂದಿ ಉದ್ಯೋಗಿಗಳೊಂದಿಗೆ ಕೆರಿಯರ್ ಕೌನ್ಸಿಲಿಂಗ್ ಅನ್ನು ಪ್ರಾರಂಭಿಸಿದ್ದರು. ಅವರು ಸಣ್ಣ ಪಟ್ಟಣದಲ್ಲಿ ಹಲವಾರು ರೀತಿಯ ಸವಾಲುಗಳನ್ನು ಎದುರಿಸಿದ್ದರು. ಅಂತಿಮವಾಗಿ ಅವರ ಯೋಜನೆ ಕೂಡ ಒಂದು ಹಂತದಲ್ಲಿ ವಿಫಲಗೊಂಡಿತ್ತು. ಆ ಬಳಿಕ ಅವರು ಲಕ್ನೋಗೆ ತೆರಳಿದ್ದು, ಅಲ್ಲಿ ಮಾಂಗ್ಲಿಕ್ ಅವರು ಕಚೇರಿಯೊಂದನ್ನು ಪ್ರಾರಂಭಿಸಿದ್ದರು. ಆದರೆ ಅದು ಕೂಡ ಫೈಲ್ ಆಗಿತ್ತು.
ರೋಹಿತ್ ಮಾಂಗ್ಲಿಕ್ ಅವರು ತಮ್ಮ ಎರಡು ವೈಫಲ್ಯಗಳನ್ನು ಅನುಭವಿಸಿದ ಬಳಿಕ ಕೌನ್ಸಿಲಿಂಗ್ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡರು. ಆದರೆ ಹೊಸತನವನ್ನು ಸೃಷ್ಟಿ ಮಾಡಬೇಕೆಂಬ ಅವರ ಛಲ ಮಾತ್ರ ಅದೇರೀತಿ ಮುಂದುವರಿದಿತ್ತು. ಹೀಗಾಗಿ, ಎರಡು ಸೋಲಿನ ಬಳಿಕ ಮಾಂಗ್ಲಿಕ್ ಅವರು ವಿದ್ಯಾರ್ಥಿಗಳ ಬಳಿಗೇ ತೆರಳಿ ಅವರ ನೈಜ ಅಗತ್ಯಗಳನ್ನು ಅರ್ಥಮಾಡಿಕೊಂಡರು. 2020ರಲ್ಲಿ ಮಾಂಗ್ಲಿಕ್ ಅವರು ಎಜ್ಯುಗೊರಿಲ್ಲಾ ಹೆಸರಿನ ಅಪ್ಲಿಕೇಷನ್ ಅನ್ನು ಸಿದ್ಧಪಡಿಸಿದರು. ಈ ಅಪ್ಲಿಕೇಷನ್ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸುತ್ತದೆ.


Click it and Unblock the Notifications